“ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಒತ್ತೆಯಾಳಾಗಿ ಇರಿಸಿಕೊಂಡು ಬಲವಂತವಾಗಿ ಇಸ್ಲಾಂಗೆ ಮತಾಂತರ ಮಾಡಲಾಗುತ್ತಿದೆ. ಇದರ ವಿಡಿಯೋವನ್ನು ನೋಡಿ, ಹೇಗೆ ಇಸ್ಲಾಂಗೆ ಮತಾಂತರಗೊಳ್ಳದವರನ್ನು ರಹಸ್ಯವಾಗಿ ಕೊಂದು ಹಾಕಲಾಗುತ್ತಿದೆ? ಈ ಬಗ್ಗೆ ಭಾರತದಲ್ಲಿನ ಹಿಂದೂಗಳು ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಎದುರಾಗುವ ಅಪಾಯಗಳಿಗೆ ತಲೆಬಾಗಲು ಸಿದ್ಧರಾಗಬೇಕಾಗುತ್ತದೆ!” ಎಂಬ ಟಿಪ್ಪಣಿಯೊಂದಿಗೆ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
बांग्लादेश में किस तरह हिन्दुओं को बन्धक बनाकर मुसलमान बनाय जा रहा हैं। pic.twitter.com/6owf8CcMGk
— बिजेंद्र सिंह चौधरी 💚मोदी का परिवार❤️🕉️ (@Krishna__Bhakt_) August 11, 2024
ಈ ವಿಡಿಯೋದಲ್ಲಿ ಜನ ಸಾಮಾನ್ಯರು ನಮಾಜ಼್ ಮಾಡುತ್ತಿರುವ ರೀತಿಯಲ್ಲಿ ಕಾಣಿಸುತ್ತಿರುವುದರಿಂದ, ಹಲವರು ಈ ವಿಡಿಯೋವನ್ನು ನಿಜವೆಂದು ಭಾವಿಸಿದ್ದಾರೆ. ಹೀಗಾಗಿ ಬಾಂಗ್ಲಾದೇಶದಲ್ಲಿ ನಿಜವಾಗಿಯೂ ಒತ್ತಾಯಪೂರ್ವಕವಾಗಿ ಹಿಂದೂಗಳನ್ನು ಮತಾಂತರ ಮಾಡಲಾಗುತ್ತಿದೆ ಎಂದು ಹಲವರು ನಂಬಿಕೊಂಡಿದ್ದಾರೆ. ಹೀಗಾಗಿ ಸಾಕಷ್ಟು ಮಂದಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬಾಂಗ್ಲಾದೇಶದ ಮುಸಲ್ಮಾನರ ವಿರುದ್ಧ ನಿಂದಿಸಿ ಪೋಸ್ಟ್ ಕೂಡ ಮಾಡುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋವಿನ ಅಸಲಿಯತ್ತು ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ವೈರಲ್ ವಿಡಿಯೋವಿನ ವಿವಿಧ ಕೀ ಫ್ರೇಮ್‌ಗಳನ್ನು ಬಳಸಿ ನಾವು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಪರಿಶೀಲನೆಯನ್ನು ನಡೆಸಿದೆವು. ಈ ವೇಳೆ ನಮಗೆ 16 ಜುಲೈ 2024 ರಂದು ‘SOMOY TV ಬುಲೆಟಿನ್‘ ಎಂಬ ಬಾಂಗ್ಲಾದೇಶದ ಮಾಧ್ಯಮದ ಮೂಲಕ YouTube ನಲ್ಲಿ ಅಪ್‌ಲೋಡ್ ಮಾಡಲಾದ ವೈರಲ್ ವೀಡಿಯೊದ ವಿಸ್ತೃತ ಆವೃತ್ತಿಯನ್ನು ಪತ್ತೆ ಹಚ್ಚಿದೆವು.
ಅದರಲ್ಲಿ ವೀಡಿಯೊದ ಶೀರ್ಷಿಕೆಯು “ಪ್ರತಿಭಟನೆ ನಡೆಸುವ ವಿದ್ಯಾರ್ಥಿಗಳು ತಮ್ಮ ಝುಹ್ರ್ ಪ್ರಾರ್ಥನೆ ಮಾಡಿದ್ದಾರೆ” ಎಂದು ಉಲ್ಲೇಖಿಸಲಾಗಿತ್ತು. ಈ ವರದಿಯಲ್ಲಿ ಬಾಂಗ್ಲಾದೇಶದ ಢಾಕಾದಲ್ಲಿ 16 ಜುಲೈ 2024 ರಂದು ಮೀಸಲಾತಿ ಆಂದೋಲನದ ಸಮಯದಲ್ಲಿ ವಿದ್ಯಾರ್ಥಿಗಳು ರಸ್ತೆಗಳಲ್ಲಿ ಝುಹ್ರ್ ನಮಾಜ಼್ ಮಾಡುತ್ತಿರುವುದು ಕಂಡು ಬಂದಿದೆ ಎಂದು ವಿಡಿಯೋದಲ್ಲಿ ಉಲ್ಲೇಖಿಸಲಾಗಿತ್ತು. ಇದಕ್ಕೆ ಪೂರಕವಾಗಿ ಕೆಲವೊಂದು ವಿಡಿಯೋಗಳು ಕೂಡ ಕಂಡು ಬಂದಿವೆ.
ಇದರಿಂದ ಮಾಹಿತಿಯನ್ನು ಪಡೆದುಕೊಂಡು ನಾವು ವಿವಿಧ ಕೀ ವರ್ಡ್‌ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಿದೆವು. 16 ಜುಲೈ 2024 ರಂದು ಏಷಿಯನ್ ಟೆಲಿವಿಷನ್ ವರದಿಯೊಂದು ಕಂಡು ಬಂದಿದೆ. ವರದಿಯ ಪ್ರಕಾರ ವಿವಿಧ ಖಾಸಗಿ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ರಾಜಧಾನಿ ಢಾಕಾದ ಬಶುಂಧರಾ ಗೇಟ್‌ನ ಮುಂಭಾಗದ ರಸ್ತೆಯನ್ನು ತಡೆದು ಪ್ರತಿಭಟಿಸಿದ್ದರು. 16 ಜುಲೈ 2024 ರಂದು ಒಂದು ಗಂಟೆ ಕಾಲ ಪ್ರತಿಭಟನೆ ನಡೆಸಿದ ನಂತರ ಕೆಲವು ವಿದ್ಯಾರ್ಥಿಗಳು ಸಾಲಾಗಿ ಕುಳಿತು ಝುಹರ್ ನಮಾಜ಼್ ಮಾಡಿದರು, ಆದರೆ ಹತ್ತಿರ ನಿಂತ ಉಳಿದ ವಿದ್ಯಾರ್ಥಿಗಳು ಘೋಷಣೆ ಮತ್ತು ಪ್ರತಿಭಟನೆಯನ್ನು ಮುಂದುವರೆಸಿದರು ಎಂದು ಉಲ್ಲೇಖಿಸಲಾಗಿತ್ತು.
ಆದರೆ ಯಾವುದೇ ವರದಿಗಳಲ್ಲಿ ಬಾಂಗ್ಲಾದೇಶದ ಹಿಂದೂಗಳನ್ನು ಬಲವಂತವಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿರುವು ಕುರಿತು ಮಾಹಿತಿಗಳು ಕಂಡು ಬಂದಿಲ್ಲ. ಇನ್ನು ಢಾಕಾ ಪ್ರೆಸ್‌ನ ವರದಿಯಂತೆ 16 ಜುಲೈ 2024 ರಂದು ಪ್ರೊಬಶಿರ್ದಿಗಂತ ಮತ್ತು ಬಾಂಗ್ಲಾದೇಶ ಮೂಮೆಂಟ್ ವರದಿಗಳು ಕೂಡ ಬಾಂಗ್ಲಾದೇಶ ದಢಾಕಾದ ಬಶುಂಧರಾ ಗೇಟ್‌ನ ಮುಂದೆ ರಸ್ತೆಯನ್ನು ತಡೆದು ಪ್ರತಿಭಟಿಸಿದ ವಿದ್ಯಾರ್ಥಿಗಳು ನಾಮಾಝ್ ಮಾಡಿದ್ದರು ಎಂದು ಉಲ್ಲೇಖಿಸಲಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ಗಳ ಪ್ರಕಾರ ಬಾಂಗ್ಲಾದೇಶದಲ್ಲಿ ಮುಸಲ್ಮಾನರು ಹಿಂದೂಗಳನ್ನು ಬಲವಂತವಾಗಿ ಮತಾಂತರ ಮಾಡುತ್ತಿದ್ದಾರೆ ಎಂಬುದು ಸುಳ್ಳು. ಇದಕ್ಕೆ ಯಾವುದೇ ಪುರಾವೆಗಳು ಕೂಡ ಇಲ್ಲ. ಇನ್ನು ವೈರಲ್ ವಿಡಿಯೋದಲ್ಲಿ ವಿದ್ಯಾರ್ಥಿಗಳು ಅಲ್ಲಿನ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ, ಬಳಿಕ ರಸ್ತೆಯ ಬದಿಯಲ್ಲಿ ನಮಾಜ಼್ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ವೈರಲ್ ಪೋಸ್ಟ್ ಸಂಪೂರ್ಣವಾಗಿ ಸುಳ್ಳಿನಿಂದ ಕೂಡಿದೆ.
ಇದನ್ನೂ ಓದಿ : Fact Check: ಹಸೀನಾ ಸರ್ಕಾರದ ವಿರುದ್ಧ ಬಾಂಗ್ಲಾದೇಶದ ನಟಿಯ ಪ್ರತಿಭಟನೆಯ ವೀಡಿಯೊವನ್ನು ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.