“ಬಾಂಗ್ಲಾದೇಶದಲ್ಲಿ ಪ್ರತಿದಿನವೂ ಪರಿಸ್ಥಿತಿ ಕೈ ಮೀರುತ್ತಿದೆ. ಅಲ್ಲಿನ ಹಿಂದುಗಳ ದೌರ್ಜನ್ಯ ದರ್ಪಗಳು ಹೆಚ್ಚಾಗುತ್ತಿದ್ದು, ಬಾಂಗ್ಲಾದೇಶದ ಮುಸಲ್ಮಾನರು ಅಮಾಯಕ ಹಿಂದುಗಳ ನೆತ್ತರು ಹರಿಸುತ್ತಿದ್ದಾರೆ. ಈ ವಿಡಿಯೋ ನೋಡಿ ಇಲ್ಲಿ ಸತ್ತು ಬಿದ್ದಿರುವವರೆಲ್ಲರೂ ಹಿಂದೂ ಹೆಣ್ಣುಮಕ್ಕಳು. ಇವರನ್ನು ಕಂಡ ಕಂಡಲ್ಲಿ ಬಾಂಗ್ಲಾದ ಮುಸಲ್ಮಾನರು ಕೊಂದು ಹಾಕಿದ್ದಾರೆ.” ಎಂದು ಬರಹದೊಂದಿಗೆ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತದೆ.
ಈ ವಿಡಿಯೋದಲ್ಲಿ ಹಲವು ಹೆಂಗಸರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಮತ್ತು ಅವರ ಸುತ್ತಮುತ್ತಲಿರುವವರು ಜೋರಾಗಿ ಅಳುತ್ತಿರುವುದನ್ನು ನೋಡಬಹುದಾಗಿದೆ. ವೈರಲ್ ವಿಡಿಯೋದಲ್ಲಿನ ಬರಹವನ್ನು ನೋಡಿ ಹಲವು ಮಂದಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿ ಮುಸಲ್ಮಾನ ಸಮುದಾಯದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಶೇರ್ ಮಾಡಲಾಗುತ್ತಿರುವ ವಿಡಿಯೋ ಕುರಿತು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿರುವ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ವೈರಲ್ ವಿಡಿಯೋವಿನ ವಿವಿಧ ಕೀ ಫ್ರೇಮ್ ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜಿನಲ್ಲಿ ಪರಿಶೀಲನೆ ನಡೆಸಲಾಯಿತು. ಈ ವೇಳೆ ಬಾಂಗ್ಲಾದೇಶದ ಸುದ್ದಿ ವಾಹಿನಿಯಾದ ಢಾಕಾ ಬಿಡಿ ನ್ಯೂಸ್ 24 ಎಂಬ ಸುದ್ದಿ ವಾಹಿನಿಯು 7 ಜುಲೈ 2024 ರಂದು ಪ್ರಕಟಿಸಿದ ವರದಿಯೊಂದು ಕಂಡು ಬಂದಿದೆ. ಈ ವರದಿಯ ಪ್ರಕಾರ ವೈರಲ್ ವಿಡಿಯೋದಲ್ಲಿನ ಘಟನೆ ಬಾಂಗ್ಲಾದೇಶಕ್ಕೆ ಸಂಬಂಧಿಸಿದಲ್ಲ ಭಾರತದ್ದು ಎಂದು ತಿಳಿದುಬಂದಿದೆ.
ಢಾಕಾ ಬಿಡಿ ನ್ಯೂಸ್ 24 ನ ಸಂಪೂರ್ಣ ವರದಿಯನ್ನು ಪರಿಶೀಲನೆ ನಡೆಸಿದಾಗ, ಉತ್ತರ ಪ್ರದೇಶದ ಬೋಗುರಾದಲ್ಲಿ ಮಧ್ಯಾಹ್ನದ ಜಗನ್ನಾಥ ರಥ ಯಾತ್ರೆಯ ವೇಳೆ ಜನಸಮುಹದ ಮೇಲೆ ವಿದ್ಯುತ್ ಸ್ಪರ್ಶ ಸಂಭವಿಸಿದ್ದು, ಈ ಘಟನೆಯಲ್ಲಿ ಸುಮಾರು ಐದು ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಇನ್ನು ವರದಿಯ ಪ್ರಕಾರ ಮೃತರನ್ನು ಅಲೋಕ್, ಅಟಾಶಿ, ರಂಜಿತಾ, ನರೇಶ್ ಮತ್ತು ಸಬಿತ ಎಂದು ಗುರುತಿಸಲಾಗಿದೆ ಎಂಬುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಕುರಿತು ಇನ್ನಷ್ಟು ಪರಿಶೀಲನೆ ನಡೆಸಿದಾಗ ಇದೇ ರೀತಿಯ ಹಲವು ವರದಿಗಳು ಪತ್ತೆ ಆಗಿರುವುದರಿಂದ ವೈರಲ್ ವಿಡಿಯೋದಲ್ಲಿನ ಆಪಾದನೆ ದಾರಿ ತಪ್ಪಿಸುವಂತಿದೆ ಎಂಬುದು ಸಾಬೀತಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ ಪತ್ತೆಯಾಗಿರುವ ಎಲ್ಲಾ ವರದಿಗಳಲ್ಲೂ ಈ ಘಟನೆ ಉತ್ತರ ಪ್ರದೇಶಕ್ಕೆ ಸಂಬಂಧಿಸಿದಾಗಿದೆ ಎಂದು ಉಲ್ಲೇಖಿಸಲಾಗಿದೆ ಮತ್ತು ಬಾಂಗ್ಲಾದೇಶದಲ್ಲಿ ಹಿಂದೂ ಹೆಣ್ಣು ಮಕ್ಕಳ ಹತ್ಯೆ ನಡೆದಿದೆ ಎಂದು ವೈರಲ್ ವಿಡಿಯೋದಲ್ಲಿ ಹೇಳಿಕೊಂಡಂತೆ ಯಾವುದೇ ಘಟನೆಯ ವರದಿಗಳು ಕಂಡುಬಂದಿಲ್ಲ. ಹಾಗಾಗಿ ವೈರಲ್ ವಿಡಿಯೋದೊಂದಿಗೆ ಹಂಚಿಕೊಳ್ಳಲಾಗುತ್ತಿರುವ ಟಿಪ್ಪಣಿ ಸಂಪೂರ್ಣವಾಗಿ ಸುಳ್ಳಿನಿಂದ ಕೂಡಿದೆ. ಹಾಗಾಗಿ ಇಂತಹ ಸುದ್ದಿಗಳು ನಿಮಗೆ ಕಂಡು ಬಂದರೆ ಒಮ್ಮೆ ಪರಿಶೀಲಿಸುವುದು ಉತ್ತಮ.
ಇದನ್ನೂ ಓದಿ : Fact Check: ಬಾಂಗ್ಲಾದೇಶದಲ್ಲಿ ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸುವುದಾಗಿ ಹೇಳುವ ಹಳೆಯ ವೀಡಿಯೋವನ್ನು ಮತ್ತೆ ವೈರಲ್ ಮಾಡಲಾಗಿದೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.