ಅನೇಕ ಸಾಮಾಜಿಕ ಜಾಲತಾಣದ ಬಳಕೆದಾರರು 29 ಸೆಕೆಂಡುಗಳ ವೀಡಿಯೊ ಕ್ಲಿಪ್ ಅನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ, ಈ ವಿಡಿಯೋ ಮೂಲಕ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರದಿಂದಾಗಿ ಅಲ್ಲಿನ ಹಿಂದೂಗಳು ದೋಣಿಗಳಲ್ಲಿ ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿದೆ. ವಿಡಿಯೋದಲ್ಲಿ ಕೂಡ ಹಲವು ದೋಣಿಗಳು ಸಂಚರಿಸುತ್ತಿರುವುದನ್ನು ನೋಡಬಹುದಾಗಿದ್ದು, ಇದು ಇತ್ತೀಚೆಗಿನ ವಿಡಿಯೋ ಎಂದು ಪ್ರತಿಪಾದಿಸಿ ಹಂಚಿಕೊಳ್ಳಲಾಗುತ್ತಿದೆ.
الهندوس يفرون هرباً من بنجلادش بعد تعرض الكثير منهم الى جرائم بشعة على يد المسلمين!
……
— Majda Al-haddad (@meMajda) August 11, 2024
ಹೀಗೆ ವಿಡಿಯೋ ನೋಡಿದ ಹಲವರು ಇದು ನಿಜವಿರಬಹುದು ಎಂದು ಭಾವಿಸಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಕೂಡ ಹಂಚಿಕೊಳ್ಳುತ್ತಿದ್ದಾರೆ. ಹಲವು ಮಂದಿ “ಬಾಂಗ್ಲಾದೇಶ ಇಸ್ಲಾಮಿಗಳ ಹತ್ಯಾಕಾಂಡದಿಂದಾಗಿ ಸಾವಿರಾರು ಹಿಂದೂಗಳು ತಮ್ಮ ತಾಯ್ನಾಡಿನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ” ಎಂದು ಕೋಮು ಬಣ್ಣವನ್ನು ಕೂಡ ಬಳಿದು, ಇಡೀ ಮುಸ್ಲಿಂ ಸಮುದಾಯವೇ ಹತ್ಯಾಕಾಂಡ ನಡೆಸುತ್ತಿದೆ ಎಂದು ಬಿಂಬಿಸುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋವಿನ ಅಸಲಿಯತ್ತು ಏನು ಎಂಬುದನ್ನು ನಾವು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ವೈರಲ್ ವಿಡಿಯೋವಿನ ವಿವಿಧ ಕೀ ಫ್ರೇಮ್‌ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಲಾಯಿತು. ಈ ವೇಳೆ ನಮಗೆ 29 ಏಪ್ರಿಲ್ 2024 ರಂದು ‘ಎಕ್ಸ್‌ಟ್ರೀಮ್ ಲಾಂಚ್ ಲವರ್’ ಎಂಬ ಬಳಕೆದಾರರಿಂದ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ವೈರಲ್ ಕ್ಲಿಪ್‌ನ ದೀರ್ಘ ಆವೃತ್ತಿಯ ವಿಡಿಯೋ ಕಂಡು ಬಂದಿದೆ.
ಇದಕ್ಕೆ “ಛಾವಣಿಯ ಮೇಲೆ ಸಾವಿರಾರು ಪ್ರಯಾಣಿಕರೊಂದಿಗೆ ಹೊರಟ ಲಾಂಚ್‌ಗಳು ( ದೋಣಿಗಳು)” ಎಂದು ಉಲ್ಲೇಖಿಸಲಾಗಿತ್ತು. ಇದರಿಂದ ಮಾಹಿತಿ ಪಡೆದ ನಮ್ಮ ತಂಡ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಅಂತರ್ಜಾದಲ್ಲಿ ಹುಡುಕಾಟವನ್ನು ನಡೆಸಿದೆ. ಈ ವೇಳೆ ನಮಗೆ ಬಾಂಗ್ಲಾದೇಶದಲ್ಲಿ ಮೀಸಲಾತಿ ಹೋರಾಟ ಹಿಂಸಾತ್ಮಕ ರೂಪ ಪಡೆಯುವುದಕ್ಕಿಂತ ಮುಂಚಿತವಾಗಿಯೇ ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದು ಕಂಡು ಬಂದಿದೆ. ಕೆಲವೊಂದು ಫೇಸ್‌ಬುಕ್ ಪೇಜ್‌ಗಳಲ್ಲಿ 8 ಏಪ್ರಿಲ್ 2024ರಿಂದಲೂ ಈ ವಿಡಿಯೊ ಕಂಡು ಬಂದಿವೆ. ಹೀಗಾಗಿ ವೈರಲ್ ಕ್ಲಿಪ್‌ನಲ್ಲಿ ಹೇಳಿದಂತೆ ಬಾಂಗ್ಲಾದೇಶದ ಹಿಂದೂಗಳು ದೇಶ ಬಿಟ್ಟು ದೋಣಿಯಲ್ಲಿ ಪಲಾಯನ ಮಾಡುತ್ತಿದ್ದಾರೆ ಎಂಬ ಸುದ್ದಿಗೆ ಯಾವುದೇ ಸಾಕ್ಷಿಗಳು ಲಭ್ಯವಾಗಿಲ್ಲ.
ಒಟ್ಟಾರೆಯಾಗಿ ಹೇಳುವುದಾದರೆ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ವೈರಲ್ ವಿಡಿಯೋದಲ್ಲಿ ಹೇಳಿದಂತೆ ಬಾಂಗ್ಲಾದೇಶದ ಹಿಂದೂಗಳು ಅಲ್ಲಿಂದ ಪಲಾಯನ ಮಾಡಲು ದೋಣಿಗಳಲ್ಲಿ ಕಿಕ್ಕಿರಿದು ಸೇರುತ್ತಿದ್ದಾರೆ ಎಂಬುದು ಸುಳ್ಳು. ವೈರಲ್ ವಿಡಿಯೋ ಬಾಂಗ್ಲಾದೇಶದಲ್ಲಿನ ಮೀಸಲಾತಿ ವಿರೋಧಿ ಪ್ರತಿಭಟನೆಗೂ ಹಿಂದಿನದ್ದು. ಹೀಗಾಗಿ ವೈರಲ್ ವಿಡಿಯೋ ಸುಳ್ಳು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗುತ್ತಿರುವುದು ಸಾಬೀತಾಗಿದೆ. ಹಾಗಾಗಿ ಇಂತಹ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ನಿಮಗೆ ಕಂಡು ಬಂದರೆ ಒಮ್ಮೆ ಪರಿಶೀಲಿಸಿಕೊಳ್ಳಿ.
ಇದನ್ನೂ ಓದಿ : ಡಾ. ಬಿ.ಆರ್ ಅಂಬೇಡ್ಕರ್ ಅವರ “ಪಾಕಿಸ್ತಾನ ಅಥವಾ ಭಾರತದ ವಿಭಜನೆ” ಕೃತಿಯ ಕುರಿತು ಸುಳ್ಳು ಹಂಚಿಕೊಳ್ಳಲಾಗುತ್ತಿದೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.