Fact Check| ಬೌದ್ಧರ ಮೇಲೆ ದಾಳಿ ಎಂದು 2012ರ ಕಾಕ್ಸ್ ಬಜಾರ್ ಹಿಂಸಾಚಾರದ ಫೋಟೋ ಹಂಚಿಕೊಂಡ ಬಲಪಂಥೀಯರು

ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ಹಾಗೂ ಪಲಾಯನದ ಬಳಿಕ ದೇಶದಲ್ಲಿ ಪ್ರತಿಭಟನಾಕಾರರಿಂದ ಅವಾಮೀ ಲೀಗ್ ನಾಯಕರ ಮೇಲೆ ದಾಳಿ ಭುಗಿಲೆದಿದ್ದು, ಹಲವೆಡೆ ಹಿಂಸಾಚಾರದ ಘಟನೆಗಳು ವರದಿಯಾಗುತ್ತಿವೆ.

ಈ ನಡುವೆ ಬಾಂಗ್ಲದೇಶದಲ್ಲಿರುವ ಅಲ್ಪಸಂಖ್ಯಾತ ಬೌದ್ಧ ಧರ್ಮೀಯರ ಮೇಲೆ ಬಹುಸಂಖ್ಯಾತ ಮುಸ್ಲಿಮರಿಂದ ಹಿಂಸಾಚಾರ ನಡೆಯುತ್ತಿದೆ ಎಂದು ಬುದ್ಧ ಪ್ರತಿಮೆಗಳನ್ನು ಧ್ವಂಸಗೊಳಿಸಿ, ವಿಹಾರಕ್ಕೆ ಬೆಂಕಿ ಹಚ್ಚಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬಲಪಂಥೀಯರು ಹಂಚಿಕೊಳ್ಳುತ್ತಿದ್ದಾರೆ.

ಆದರೆ, ಈ ಚಿತ್ರಗಳು 2012ರಲ್ಲಿ ನಡೆದ ಕಾಕ್ಸ್ ಬಜಾರ್ ಹಿಂಸಾಚಾರಕ್ಕೆ ಸಂಬಂಧಿಸಿದ್ದು ಎಂಬ ವಿಷಯ ಬಹಿರಂಗವಾಗಿದೆ‌.

ಸುಳ್ಳು ಸುದ್ದಿಯಲ್ಲಿ ಏನಿದೆ?

“ಬಾಂಗ್ಲಾದೇಶದಲ್ಲಿ ದಲಿತರು ನಿರ್ಮಿಸಿದ್ದ ಏಕೈಕ ಬೌದ್ಧ ವಿಹಾರವನ್ನು ಬಾಂಗ್ಲಾದೇಶದ ತಬ್ಲೀಗ್ ಜಮಾತ್ ಹಾಗೂ ಜಮಾಅತೆ ಇಸ್ಲಾಮೀ ನೇತಾರರು ಬುಡಮೇಲುಗೊಳಿಸಿದ್ದಾರೆ. ಗೌತಮ ಬುದ್ಧನ ಮೂರ್ತಿಗಳನ್ನು ಧ್ವಂಸಗೊಳಿಸಿದ್ದಾರೆ” ಎಂದು ಎಕ್ಸ್‌ ಬಳಕೆದಾರ ಜಿತೇಂದ್ರ ಪ್ರತಾಪ್ ಸಿಂಗ್ ಆಗಸ್ಟ್ 6ರಂದು ಟ್ವೀಟ್ ಮಾಡಿದ್ದಾರೆ.

ಹಂಚಿಕೊಳ್ಳಲಾದ ಫೋಟೋಗಳಲ್ಲಿ, ಬುದ್ಧ ಪ್ರತಿಮೆಗಳ ಶಿರ ಬೇರ್ಪಡಿಸಿರುವ ಚಿತ್ರ, ವಿಹಾರವನ್ನು ಸುಟ್ಟಹಾಕಲಾದ ಸ್ಥಳದಲ್ಲಿ ಮಹಿಳೆಯು ರೋಧಿಸುತ್ತಿರುವ, ಇನ್ನೊಂದು ಚಿತ್ರದಲ್ಲಿ ವ್ಯಕ್ತಿಯೊಬ್ಬ ಬುದ್ಧ ಪ್ರತಿಮೆಯನ್ನು ಧ್ವಂಸಗೊಳಿಸುತ್ತಿರುವ ಚಿತ್ತ ಹಾಗೂ ಬೌದ್ಧ ಧರ್ಮದ ಬಗ್ಗೆ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು/ ಬಿಕ್ಕುಗಳು ಬೆಂಕಿಗೆ ಆಹುತಿಯಾದ ಸ್ಥಳವನ್ನು ನೋಡುತ್ತಾ ನಿಂತಿರುವ ಚಿತ್ರವನ್ನು ಹಂಚಿಕೊಳ್ಳಲಾಗಿದೆ.

ಸತ್ಯಾಂಶ ಏನು ಗೊತ್ತಾ?

ಗೂಗಲ್ ರಿವರ್ಸ್ ಸರ್ಚ್ ಮಾಡಿದಾಗ 2020ರ ಜುಲೈ 17ರಂದು ಇದೇ ಚಿತ್ರಗಳನ್ನು ‌ಸೌರೀಶ್ ಮುಖರ್ಜಿ ಎಂಬವರು ಹಂಚಿಕೊಂಡಿದ್ದು, “ಬಾಂಗ್ಲಾದೇಶದಲ್ಲಿ ಬೌದ್ಧರ ಪರಿಸ್ಥಿತಿ. ಇಂತಹ ಕೃತ್ಯಕ್ಕೆ ನೀವೇನು ಹೇಳುತ್ತೀರಿ? ಇದು ಮಾನವೀಯತೆಯೇ?” ಎಂದು ಟ್ವೀಟ್ ಮಾಡಿದ್ದಾರೆ.

ಈ ಚಿತ್ರಗಳ ಬಗ್ಗೆ ಹೆಚ್ಚಿನ ಪರಿಶೀಲನೆ ನಡೆಸಿದಾಗ ಲಂಕಾ ಟ್ರೂ ಎಂಬ ಬ್ಲಾಗ್‌‌ವೊಂದರಲ್ಲಿ ಮಾಹಿತಿ ಲಭಿಸಿದ್ದು, ಇವುಗಳು 2012ರಲ್ಲಿ ನಡೆದ ಕಾಕ್ಸ್ ಬಜಾರ್ ಹಿಂಸಾಚಾರದ ಚಿತ್ರಗಳು ಎಂದು ತಿಳಿದು ಬಂದಿದೆ.

ಕುರ್‌ಆನ್ ಪ್ರತಿಯನ್ನು ಸುಟ್ಟುಹಾಕಿದ ಬಗ್ಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಂಚಿಕೊಂಡ ಬೆನ್ನಲ್ಲೇ ಭುಗಿಲೆದ್ದ ಹಿಂಸಾಚಾರದಲ್ಲಿ ಬೌದ್ಧ ವಿಹಾರದ ಮೇಲೆ ದಾಳಿ ನಡೆದಿದ್ದು, ಈ ವೇಳೆ ಬುದ್ಧ ಪ್ರತಿಮೆಗಳು ಹಾಗೂ ವಿಹಾರ ಸೇರಿದಂತೆ ಮನೆಗಳನ್ನು ಧ್ವಂಸಗೊಳಿಸಲಾಗಿತ್ತು.

ಬಾಂಗ್ಲಾದೇಶ ಅಂದಿನ ಗೃಹ ಸಚಿವ ಮೊಹಿವುದ್ದಿನ್ ಖಾನ್ ಆಲಂಗೀರ್‌ರವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, “ಇದು ಅಲ್ಪಸಂಖ್ಯಾತರ ಮೇಲೆ ನಡೆದ ಪೂರ್ವಯೋಜಿತ ಹಾಗೂ ಉದ್ದೇಶಪೂರ್ವಕ ಕೋಮು ಹಿಂಸಾಚಾರ ಕೃತ್ಯ” ಎಂದು ಹೇಳಿದ್ದರು. ಹಿಂಸಾಚಾರದ ಬಳಿಕ ಸೇನಾಪಡೆಯು ಸಂತ್ರಸ್ತರಿಗೆ ಆಹಾರ ಒದಗಿಸಿದ್ದು, ಸರ್ಕಾರದಿಂದ ಬಿಗಿ ಭದ್ರತೆ ಹಾಗೂ ಪುನರ್ವಸತಿ ಸೌಕರ್ಯ ಒದಗಿಸಲಾಗಿತ್ತು.

ಒಟ್ಟರೆಯಾಗಿ ಈಗ ಹಂಚಿಕೊಳ್ಳುತ್ತಿರುವ ಈ ಚಿತ್ರಗಳು ದಶಕಗಳಿಗೂ ಹಿಂದಿನದ್ದಾಗಿದ್ದು, ಬಾಂಗ್ಲಾದೇಶದಲ್ಲಿ ಪ್ರಚಲಿತವಾಗಿ ನಡೆಯುತ್ತಿರುವ ಪ್ರತಿಭಟನೆಗಳ ಭಾಗವಾಗಿ ಅಲ್ಪಸಂಖ್ಯಾತ ಬೌದ್ಧರ ಮೇಲೆ ಯಾವುದೇ ಹಿಂಸಾಚಾರ ನಡೆದಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.


ಇದನ್ನೂ ಓದಿ:Fact Check | ಹಿಂದೂಗಳು ಬಾಂಗ್ಲಾದೇಶದಿಂದ ದೋಣಿಗಳಲ್ಲಿ ಪಲಾಯನ ಮಾಡುತ್ತಿದ್ದಾರೆ ಎಂದು ಸಂಬಂಧವಿಲ್ಲದ ಫೋಟೋ ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *