ಇತ್ತೀಚೆಗೆ ಇರಾನಿ ಗ್ಯಾಂಗ್ ಹೆಸರಿನ ದರೋಡೆಕೋರ ಗುಂಪೊಂದು ಬೆಡ್‌ಶೀಟ್ ಮಾರುವ ನೆಪದಲ್ಲಿ ಮನೆಗಳನ್ನು ಲೂಟಿ ಮಾಡುತ್ತಿದೆ ಎಂಬ ಸಂದೇಶವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.
ವೈರಲ್ ಸಂದೇಶದಲ್ಲಿ “ಇವರು ಬೀದರ್ ಮತ್ತು ಗುಲ್ಬರ್ಗಾ ಇರಾನಿ ಜನರು, ಇವರು ಬೆಡ್‌ಶೀಟ್ ಮಾರಾಟಗಾರರಂತೆ ನಟಿಸುತ್ತಿದ್ದಾರೆ, ಅವರೆಲ್ಲರೂ ದರೋಡೆಕೋರರು ದಯವಿಟ್ಟು ಗಮನಿಸಿ. ಗ್ಯಾಂಗ್‌ನ ಸದಸ್ಯರು ಹಗಲಿನಲ್ಲಿ ಕಂಬಳಿ ಮಾರಾಟ ಮಾಡುವವರಾಗಿ ಸಾರ್ವಜನಿಕರನ್ನು ಸಂಪರ್ಕಿಸುತ್ತಾರೆ, ಮನೆ ಸಮೀಕ್ಷೆ ಮಾಡಿ ನಂತರ ಮನೆಯನ್ನು ಲೂಟಿ ಮಾಡುತ್ತಾರೆ ಎಂದು ಹೇಳಲಾಗುತ್ತದೆ, ಆದ್ದರಿಂದ ಎಲ್ಲರೂ ತಮ್ಮ ತಮ್ಮ ಬೀಟ್ ಗ್ರೂಪ್ ಗಳಿಗೆ ಶೇರ್ ಮಾಡಿ.” ಎಂದು ಅನೇಕ ಜನರ ಪೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಈ ಪೋಟೋದಲ್ಲಿರುವ ವ್ಯಕ್ತಿಗಳನ್ನು ಇರಾನಿ ಗುಂಪಿನ ಆರೋಪಿಗಳು ಎನ್ನಲಾಗುತ್ತಿದೆ.
ಈ ಸಂದೇಶವನ್ನು ಪೇಸ್‌ಬುಕ್ ಮತ್ತು ವಾಟ್ಸಾಪ್‌ಗಳಲ್ಲಿ ಹಂಚಿಕೊಳ್ಳಲಾಗಿದೆ. ಅಂತಹ ಪೋಸ್ಟ್‌ಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಫ್ಯಾಕ್ಟ್ ಚೆಕ್:
ವೈರಲ್ ಪೋಟೋವನ್ನು ಪರಿಶೀಲಿಸಲು ನಾವು ರಿವರ್ಸ್ ಇಮೇಜ್ ಸರ್ಚ್ ನಲ್ಲಿ ಹುಡುಕಿದಾಗ ಇದೇ ಪೋಟೋವನ್ನು ಅನೇಕರು ಇತರ ರಾಜ್ಯಗಳಲ್ಲಿ ಹಂಚಿಕೊಂಡಿರುವುದು ಕಂಡು ಬಂದಿದೆ. ಮಹಾರಾಷ್ಟ್ರ, ಪಂಜಾಬ್ ಮತ್ತು ಕರ್ನಾಟಕದಲ್ಲಿ ಇರಾನಿ ಗ್ಯಾಂಗ್ ಗೆ ಸಂಬಂಧಿಸಿದ ಅನೇಕ ಪ್ರಕರಣಗಳು ಜರುಗಿರುವುದು ಕಂಡು ಬಂದಿದೆ. ಮತ್ತು ಇದೇ ಪೋಟೋವನ್ನು ಈ ರಾಜ್ಯಗಳಲ್ಲಿಯೂ ಹಂಚಿಕೊಳ್ಳಲಾಗಿದೆ.
ಇತ್ತೀಚೆಗಷ್ಟೇ ಮಹಾರಾಷ್ಟ್ರದ ಇರಾನಿನ ಗ್ಯಾಂಗ್ ಗಳ ಬಗ್ಗೆ ಜಾಗರೂಕರಾಗಿರಿ ಎಂದು ಲಖಾನಿ ಪೊಲೀಸರಿಗೆ ಸಂದೇಶವಿದೆ ಎಂದು ಹೇಳುವ ಫೋಟೋ ವೈರಲ್ ಆಗಿತ್ತು. ಇದು ಬೆಡ್‌ಶೀಟ್‌ಗಳ ಮಾರಾಟ ಮಾಡುವ ನೆಪದಲ್ಲಿ ಹಲವಾರು ಆರೋಪಿಗಳು ಮನೆಗಳನ್ನು ಲೂಟಿ ಮಾಡುತ್ತಿದ್ದಾರೆ ಎಂದು ಇದೇ ರೀತಿಯಲ್ಲಿ ಹಂಚಿಕೊಳ್ಳಲಾಗಿದೆ.
ಇರಾನಿ ಗ್ಯಾಂಗ್ ಕುರಿತು ಗೂಗಲ್‌ನಲ್ಲಿ ಹುಡುಕಿದಾಗ ಮಂಗಳೂರು, ಉಡುಪಿ, ಬೆಂಗಳೂರು, ಕೋಲಾರ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಈ ಗುಂಪು ನಡೆಸಿದ ಅನೇಕ ದರೋಡೆ ಮತ್ತು ಕಳ್ಳತನ ಪ್ರಕರಣಗಳು ವರದಿಯಾಗಿವೆ. ಅಂತಹ ಸುದ್ದಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಲೋಕಮತ್ ನ್ಯೂಸ್ ನವರು ವೈರಲ್ ಸಂದೇಶದ ಕುರಿತು ವರದಿ ಮಾಡಿದ್ದು ಮಂಗಲ್ವೇಧಾ ಪೋಲೀಸ್ ಠಾಣೆ ಇನ್ಪೆಕ್ಟರ್ ಜ್ಯೋತಿರಾಮ್ ಗುಂಜ್ವಾಟೆ ಅವರು ಈ ರೀತಿಯ ಎಚ್ಚರಿಕೆ ಸಂದೇಶವನ್ನು ತಮ್ಮ ಠಾಣೆಯಿಂದ ಹೊರಡಿಸಿಲ್ಲ. ಇಂತಹ ಸಂದೇಶಗಳನ್ನು ಹರಡುವುದು ಸೈಬರ್ ಅಪರಾಧವಾಗುತ್ತದೆ ಎಂದು ಹೇಳಿದ್ದಾರೆ.
“ಬೆಂಗಳುರು ಮಿರರ್ ಜುಲೈ 31, 2019 ರಂದು ವರದಿಯೊಂದನ್ನು ಪ್ರಕಟಿಸಿದ್ದು, ಅದರಲ್ಲಿ ಪೊಲೀಸರು ಕಂಬಳಿ ಗ್ಯಾಂಗ್‌ಗಳ ಬಗ್ಗೆ ಜಾಗರೂಕರಾಗಿರಲು ನಾಗರಿಕರಿಗೆ ಸೂಚನೆ ನೀಡಿದ್ದಾರೆ.
ಆದ್ದರಿಂದ ಇರಾನಿ ಗ್ಯಾಂಗ್ ಕಂಬಳಿ ಮಾರುವ ನೆಪದಲ್ಲಿ ಅಥವಾ ಪೋಲಿಸರು ಎಂಬ ನೆಪದಲ್ಲಿ ಕಳ್ಳತನ ಮಾಡುವ, ದರೋಡೆ ಮಾಡುವ ಕೃತ್ಯಗಳು ವರದಿಯಾಗಿದ್ದು ಜನರು ಎಚ್ಚರಿಕೆ ಇಂದಿರುವ ಅಗತ್ಯವಿದೆ. ವೈರಲ್ ಪೋಟೋದಲ್ಲಿರುವ ವ್ಯಕ್ತಿಗಳೇ ಇರಾನಿ ಗ್ಯಾಂಗಿನ ಸದಸ್ಯರು ಎಂದು ನಮಗೆ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಆದರೆ ದೇಶದಾದ್ಯಂತ ಈ ಇರಾನಿ ಗ್ಯಾಂಗ್‌ನ ಅಪರಾಧದ ಪ್ರಕರಣಗಳು ದಾಖಲಾಗಿದ್ದು. ಜನರು ಆದಷ್ಟು ಎಚ್ಚರಿಕೆಯಿಂದ ಇರುವುದು ಅಗತ್ಯವಿದೆ, ಮತ್ತು ಅನುಮಾನಸ್ಪದ ವ್ಯಕ್ತಿಗಳು ಕಂಡು ಬಂದರೆ ಅವರಿಂದ ಅಂತರ ಕಾಯ್ದುಕೊಳ್ಳಿ ಅಥವಾ ಪೋಲೀಸರಿಗೆ ಸುದ್ದಿ ಮುಟ್ಟಿಸಿ.
ಇದನ್ನು ಓದಿ: ರಾಹುಲ್ ಗಾಂಧಿ ಮುಂದೆ ಉದ್ಧವ್ ಠಾಕ್ರೆ ನಮಸ್ಕರಿಸುತ್ತಿರುವ ಫೋಟೋ ಎಡಿಟ್ ಮಾಡಲಾಗಿದೆ
ನಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ