Fact Check | ಕ್ಯಾಡ್‌ಬರಿಸ್ ಚಾಕೊಲೇಟ್‌ನಲ್ಲಿ ದನದ ಮಾಂಸ ಬೆರೆಸಲಾಗುತ್ತಿದೆ ಎಂಬುದು ಸುಳ್ಳು.!

“ಹಿಂದೂಗಳೇ ಎಚ್ಚರ ನೀವು ತಿನ್ನುವ ಕ್ಯಾಡ್‌ಬರೀಸ್‌ನ ಚಾಕೊಲೇಟ್‌ಗಳಲ್ಲಿ (ಡೈರಿ ಮಿಲ್ಕ್, ಫೈವ್ ಸ್ಟಾರ್ ಇತ್ಯಾದಿ) ದನದ ಮಾಂಸವನ್ನು ಬೆರೆಸಲಾಗುತ್ತಿದೆ. ಇದನ್ನು ಸ್ವತಃ ಕ್ಯಾಡ್‌ಬರೀಸ್‌ ಕಂಪನಿಯೇ ಒಪ್ಪಿಕೊಂಡಿದೆ. ಇಷ್ಟು ಮಾತ್ರವಲ್ಲದೆ ಕ್ಯಾಡ್‌ಬರೀಸ್‌ನ ಯಾವುದೇ ಚಾಕೊಲೇಟ್‌ ರ್ಯಾಪರ್‌ಗಳನ್ನು ಗಮನಿಸಿ ಅದರಲ್ಲಿ ಹಸಿರು ಬಣ್ಣದ ಗುರುತು ಇರುತ್ತದೆ, ಇದು ಹಲಾಲ್‌ ಬೀಫ್‌ ಬೆರೆಸಿರುವ ಸೂಚನೆ. ಇನ್ನು ಈ ಕುರಿತು ಕ್ಯಾಡ್‌ಬರೀಸ್‌ ತನ್ನ ಅಧಿಕೃತವಾಗಿ ವೆಬ್‌ಸೈಟನಲ್ಲಿ ಕೂಡ ಉಲ್ಲಖಿಸಲಾಗಿದೆ” ಎಂದು ಸ್ಕ್ರೀನ್‌ಶಾಟ್‌ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಸ್ಕ್ರೀನ್‌ಶಾಟ್‌ ನೋಡಿದ ಹಲವರು ಕ್ಯಾಡ್‌ಬರಿಸ್‌ ಸಂಸ್ಥೆಯ ವಿರುದ್ದ ವ್ಯಾಪಕವಾಗಿ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದು, ಹಲವರು ಕ್ಯಾಡ್‌ಬರಿಸ್‌ ಚಾಕೊಲೇಟ್‌ ಅನ್ನು ತ್ಯಜಿಸಿ ಎಂದು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಪೋಸ್ಟ್‌ ಮಾಡುತ್ತಿದ್ದಾರೆ. ಇದು ಜನ ಸಾಮಾನ್ಯರಿಗೆ ತಪ್ಪು ಸಂದೇಶವನ್ನು ರವಾನಿಸುವುದರ ಜೊತೆಗೆ ಗೊಂದಲಕ್ಕೆ ದೂಡಿದೆ. ಹೀಗಾಗಿ ವೈರಲ್‌ ಆಗುತ್ತಿರುವ ಸ್ಕ್ರೀನ್‌ ಶಾಟ್‌ ಹಾಗೂ ಪ್ರತಿಪಾದನೆಯ ಕುರಿತು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿರುವ ಪೋಸ್ಟ್‌ಗಳ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಪರಿಶೀಲನೆಯನ್ನು ನಡೆಸಲಾಯಿತು. ಈ ವೇಳೆ ನಮಗೆ  ಆಸ್ಟ್ರೇಲಿಯಾದ ಕ್ಯಾಡ್‌ಬರಿಸ್‌ ವೆಬ್‌ಸೈಟ್ ಪತ್ತೆಯಾಗಿದ್ದು, ಈ ವೆಬ್‌ಸೈಟ್‌ನಲ್ಲಿನ ಉತ್ಪನ್ನಗಳನ್ನು ಕೇವಲ ಆಸ್ಟ್ರೇಲಿಯಾದಲ್ಲಿ ಮಾತ್ರ ಮಾರಾಟ ಮಾಡಲಾಗುತ್ತದೆ. ಇದರಲ್ಲಿ ನೀಡಲಾದ ಹಲಾಲ್ ಸಂಬಂಧಿತ ಮಾಹಿತಿಯ ಪ್ರಕಾರ. ಆಸ್ಟ್ರೇಲಿಯಾದ ನಾಗರಿಕರಿಗೆ ಹಲಾಲ್ ಪ್ರಮಾಣೀಕರಿಸಲ್ಪಟ್ಟಿದೆ ಉತ್ಪನ್ನವನ್ನು ನೀಡಲಾಗುತ್ತಿದೆ ಮತ್ತು ಅದರಲ್ಲಿ ಗೋಮಾಂಸವಿದೆ ಎಂಬುದು ತಿಳಿದು ಬಂದಿದೆ. ಹೀಗಾಗಿ ಈ ವೆಬ್‌ಸೈಟ್‌ಗೂ ಭಾರತಕ್ಕೂ ಯಾವುದೇ ರೀತಿಯಾದ ಸಂಬಂಧವಿಲ್ಲ.

ಇನ್ನೂ ಹೆಚ್ಚಿನ ಮಾಹಿತಿಗಾಗಿ ಹುಡುಕಾಟವನ್ನು ನಡೆಸಿದಾಗ ಕ್ಯಾಡ್‌ಬರಿ ಡೈರಿ ಮಿಲ್ಕ್‌ನ ಟ್ವಿಟರ್ ಖಾತೆಯಿಂದ 18 ಜುಲೈ 2021ರಂದು ತನ್ನ  ಬಳಕೆದಾರರಿಗೆ ನೀಡಿದ ಪ್ರತ್ಯುತ್ತರವನ್ನು ನಾವು ಕಂಡುಕೊಂಡಿದ್ದೇವೆ, ಅದರಲ್ಲಿ ಅವರು “ವೈರಲ್ ಸ್ಕ್ರೀನ್‌ಶಾಟ್ ಭಾರತದಲ್ಲಿ ತಯಾರಿಸಿದ ಮೊಂಡೆಲೆಜ್ ಉತ್ಪನ್ನವಲ್ಲ. ಭಾರತದಲ್ಲಿ ತಯಾರಿಸಿದ ಮತ್ತು ಮಾರಾಟವಾಗುವ ಎಲ್ಲಾ ಉತ್ಪನ್ನಗಳು 100 ಪ್ರತಿಶತ ಸಸ್ಯಾಹಾರಿಗಳಾಗಿವೆ. ಹೊದಿಕೆಯ ಮೇಲಿನ ಹಸಿರು ಚುಕ್ಕೆ ಇದರ ಸಂಕೇತವಾಗಿದೆ.” ಎಂದು ಹೇಳಿರುವುದು ಪತ್ತೆಯಾಗಿದೆ. ಹಾಗಾಗಿ ವೈರಲ್‌ ಪೋಸ್ಟ್‌ 3 ವರ್ಷಗಳಷ್ಟು ಹಿಂದಿನದ್ದು ಎಂದು ತಿಳಿದು ಬಂದಿದೆ.

ಯಾವಾಗ ಸಾಮಾಜಿಕ ಜಾಲತಾಣದಲ್ಲಿ ಇದೇ ರೀತಿಯ ಸುಳ್ಳು ಸುದ್ದಿಗಳನ್ನು ಹೆಚ್ಚಾಗಿ ಹಂಚಿಕೊಳ್ಳಲು ಪ್ರಾರಂಭಿಸಲಾಯಿತೋ, ಆಗ 18 ಜುಲೈ 2021ರಂದು ಸ್ವತಃ ಕ್ಯಾಡ್‌ಬರಿಸ್‌ ಸಂಸ್ಥೆ ಎಕ್ಸ್‌ನಲ್ಲಿ ಪೋಸ್ಟರ್‌ವೊಂದನ್ನು ಪೋಸ್ಟ್‌ ಮಾಡಿ ಸ್ಪಷ್ಟನೆಯನ್ನು ನೀಡಿತ್ತು. ಅದರಲ್ಲಿ “ಟ್ವೀಟ್‌ನಲ್ಲಿ ಹಂಚಿಕೊಂಡ ಸ್ಕ್ರೀನ್‌ಶಾಟ್ ಭಾರತದಲ್ಲಿ ತಯಾರಾದ Mondelez/Cadbury ಉತ್ಪನ್ನಗಳಿಗೆ ಸಂಬಂಧಿಲ್ಲ. ಭಾರತದಲ್ಲಿ ತಯಾರಿಸಿದ ಮತ್ತು ಮಾರಾಟವಾಗುವ ಎಲ್ಲಾ ಉತ್ಪನ್ನಗಳು 100% ಸಸ್ಯಹಾರಿಗಳಾಗಿವೆ. ಚಾಕಲೇಟ್ ಕವರ್ ಮೇಲಿನ ಹಸಿರು ಚುಕ್ಕೆ ಅದನ್ನೇ ಸೂಚಿಸುತ್ತದೆ.:”

ಮುಂದುವರೆದು  “ಈ ರೀತಿಯ ನಕಾರಾತ್ಮಕ ಪೋಸ್ಟ್‌ಗಳು ನಮ್ಮ ಗೌರವಾನ್ವಿತ ಮತ್ತು ಪ್ರೀತಿಪಾತ್ರ ಬ್ರಾಂಡ್ ಗಳಲ್ಲಿ ಗ್ರಾಹಕರ ವಿಶ್ವಾಸವನ್ನು ಹಾನಿಗೊಳಿಸುತ್ತವೆ ನಮ್ಮ ಉತ್ಪನ್ನಗಳಿಗೆ ಸಂಬಂಧಿಸಿದ ಸಂಗತಿಗಳನ್ನು ಮತ್ತಷ್ಟು ಹಂಚಿಕೊಳ್ಳುವ ಮೊದಲು ಪರಿಶೀಲಿಸಲು ನಾವು ನಮ್ಮ ಗ್ರಾಹಕರನ್ನು ವಿನಂತಿಸುತ್ತೇವೆ. ನಾವು ನಿಮ್ಮ ಅನುಮಾನಗಳಿಗೆ ಸ್ಪಷ್ಟನೆಯನ್ನು ನೀಡಿದ್ದೇವೆ ಎಂದು ಭಾವಿಸುತ್ತೇವೆ. ಯಾವುದೇ ಹೆಚ್ಚಿನ ಪ್ರಶ್ನೆಗಳಿಗೆ ದಯವಿಟ್ಟು ನಮಗೆ suggestions @mdlzindia.com ನಲ್ಲಿ ಬರೆಯಿರಿ. ನಿಮ್ಮ ನಿರಂತರ ಪ್ರೋತ್ಸಾಹಕ್ಕಾಗಿ ನಾವು ಎದುರು ನೋಡುತ್ತೇವೆ.” ಎಂದು ಕ್ಯಾಡ್‌ಬರಿ ಸಂಸ್ಥೆ ತನ್ನ ಎಕ್ಸ್‌ ಪೋಸ್ಟ್‌ ಪ್ರಕಟಣೆಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವುದು ಸುಳ್ಳು ಸುದ್ದಿ ಎಂದು ಸ್ಪಷ್ಟನೆಯನ್ನು ನೀಡಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಭಾರತದಲ್ಲಿ ಮೊಂಡೆಲೆಜ್ ಇಂಡಿಯಾ ಫುಡ್ಸ್ ಪ್ರೈವೇಟ್ ಲಿಮಿಟೆಡ್ ಉತ್ಪಾದಿಸಿದ ಕ್ಯಾಡ್‌ಬರಿಯ ಉತ್ಪನ್ನಗಳು ಸಸ್ಯಹಾರಿಗಳಾಗಿವೆ. ಇದನ್ನು ಸ್ವತಃ ಕಂಪನಿಯೇ ಸ್ಪಷ್ಟ ಪಡಿಸಿದೆ. ವೈರಲ್‌ ಸ್ಕ್ರೀನ್‌ಶಾಟ್‌ಗಳಲ್ಲಿ ಹಂಚಿಕೊಳ್ಳಲಾದ ವೆಬ್‌ಸೈಟ್‌ ಪುಟವು ಅಸ್ಟ್ರೇಲಿಯಾದ್ದಾಗಿದ್ದು, ಅದಕ್ಕೂ ಭಾರತಕ್ಕೂ ಯಾವುದೇ ರೀತಿಯಾದ ಸಂಬಂಧವಿಲ್ಲ. ಹಾಗಾಗಿ ಇಂತಹ ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳುವ ಮುನ್ನ ಪರಿಶೀಲಿಸಿ.


ಇದನ್ನೂ ಓದಿ : Fact Check| ಬೌದ್ಧರ ಮೇಲೆ ದಾಳಿ ಎಂದು 2012ರ ಕಾಕ್ಸ್ ಬಜಾರ್ ಹಿಂಸಾಚಾರದ ಫೋಟೋ ಹಂಚಿಕೊಂಡ ಬಲಪಂಥೀಯರು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *