Fact Check| ಮಾಲ್ಡೀವ್ಸ್ ತನ್ನ 28 ದ್ವೀಪಗಳನ್ನು ಭಾರತಕ್ಕೆ ಮಾರಾಟ ಮಾಡಿಲ್ಲ

ವಿದೇಶಾಂಗ ಸಚಿವ ಜೈಶಂಕರ್‌ರವರ ಮೂರು ದಿನಗಳ ಮಾಲ್ಡೀವ್ಸ್ ಪ್ರವಾಸದ ಚಿತ್ರಗಳು ವೈರಲ್ ಆದ ಬೆನ್ನಲ್ಲೇ “ಮಾಲ್ಡೀವ್ಸ್ ತನ್ನ 28 ದ್ವೀಪಗಳನ್ನು ಭಾರತಕ್ಕೆ ಮಾರಾಟ ಮಾಡಿದೆ” ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವಿವಿಧ ಆಯಾಮಗಳಲ್ಲಿ ಚರ್ಚೆಯಾಗುತ್ತಿದೆ.

ಚೀನಾ ವಿರುದ್ಧ ಮೋದಿ ಸರಕಾರಕ್ಕೆ ರಾಜತಾಂತ್ರಿಕ ಗೆಲುವು. 28 ದ್ವೀಪಗಳನ್ನು ಭಾರತಕ್ಕೆ ಬಿಟ್ಟುಕೊಟ್ಟ ಮಾಲ್ಡೀವ್ಸ್  ಎಂಬ ಶೀರ್ಷಿಕೆಯಲ್ಲಿ  ಪೋಸ್ಟ್ ಕಾರ್ಡ್ ಸುಳ್ಳು ಮಾಹಿತಿಯನ್ನು ಹರಿಬಿಡುತ್ತಿದೆ‌.

ಇದರಂತೆಯೇ ಸಾಮಾಜಿಕ ಜಾಲತಾಣ ಎಕ್ಸ್‌ನ ಕೆಲವು ಅಧಿಕೃತ ಖಾತೆಗಳಲ್ಲಿ “ಭಾರತ ಮಾಲ್ಡೀವ್ಸ್‌‌ನ 28 ದ್ವೀಪಗಳನ್ನು ಖರೀದಿಸಿದೆ‌. ಸ್ವತಃ ಮಾಲ್ಡೀವ್ಸ್ ಅಧ್ಯಕ್ಷ ಮುಯಿಜ್ಜು ಈ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.” ಎಂದು ಟ್ವೀಟ್ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಇದರ ಮಾಸ್ಟರ್ ಸ್ಟ್ರೋಕ್ ಎಂದು ವ್ಯಾಪಕವಾಗಿ ಹಂಚಿಕೊಂಡಿದ್ದಾರೆ.

ಫ್ಯಾಕ್ಟ್ ಚೆಕ್:

ಭಾರತ ಮಾಲ್ಡೀವ್ಸ್‌ನ 28 ದ್ವೀಪಗಳನ್ನು ಖರೀದಿಸಿಲ್ಲ. ವಿದೇಶಾಂಗ ಸಚಿವ ಜೈಶಂಕರ್‌ರವರು ಮಾಲ್ಡೀವ್ಸ್‌ಗೆ ಸಯಮಾರು 923ಕೋಟಿ ರೂಪಾಯಿ(110 ಮಿಲಿಯನ್ ಡಾಲರ್) ಮೌಲ್ಯದ ಬೃಹತ್ ನೀರು ಮತ್ತು ನೈರ್ಮಲ್ಯ ಯೋಜನೆಯನ್ನು 28 ದ್ವೀಪಗಳಿಗೆ ಭಾರತದಿಂದ ಹಸ್ತಾಂತರಿಸಿದ್ದಾರೆ. ಈ ಯೋಜನೆಗೆ ಭಾರತ ಸರ್ಕಾರವು, ಎಕ್ಸಿಮ್ ಬ್ಯಾಂಕ್ ಆಫ್ ಇಂಡಿಯಾ‌ ಮೂಲಕ ಲೈನ್ ಆಫ್ ಕ್ರೆಡಿಟ್(ಎಲ್‌ಓಸಿ) ಸೌಲಭ್ಯದ ಮೂಲಕ ಹಣಕಾಸು ನೆರವನ್ನು ಮಾಲ್ಡೀವ್ಸ್‌ಗೆ ನೀಡಿದೆ‌.

ಆಗಸ್ಟ್ 10ರಂದು ಮಾಲ್ಡೀವ್ಸ್ ಅಧ್ಯಕ್ಷ ಡಾ. ಮುಹಮ್ಮದ್ ಮುಯಿಜ್ಜು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿದ್ದು,


“ಇಂದು ಡಾ.ಜೈಶಂಕರ್‌ರವರೊಂದಿಗೆ ಭೇಟಿಯಾಗಿ ಅವರೊಂದಿಗೆ ಜೊತೆಗೂಡಿ ಮಾಲ್ಡೀವ್ಸ್‌ನ 28 ದ್ವೀಪಗಳಿಗೆ ನೀರು ಮತ್ತು ನೈರ್ಮಲ್ಯ ಯೋಜನೆಯನ್ನು ಹಸ್ತಾಂತರಿಸಲು ಸಂತೋಷವಾಯ್ತು. ಇದಕ್ಕಾಗಿ ನಾನು ಭಾರತ ಸರ್ಕಾರಕ್ಕೆ ಧನ್ಯವಾದ ಅರ್ಪಿಸುತ್ತೇನೆ. ಅದರಲ್ಲಿಯೂ ಮುಖ್ಯವಾಗಿ ಪ್ರಧಾನಿ ನರೇಂದ್ರ ಮೋದಿಯವರು ಮಾಲ್ಡೀವ್ಸ್‌ಗೆ ನೀಡುತ್ತಿರುವ ನೆರವಿಗೆ ನಾನು ಅಭಾರಿಯಾಗಿದ್ದೇನೆ‌. ಭದ್ರತೆ, ಅಭಿವೃದ್ಧಿ ಮತ್ತು ಸಾಂಸ್ಕೃತಿಕ ವಿನಿಮಯದಲ್ಲಿ ಸಹಕಾರ ನೀಡುವ ಮೂಲಕ ನಮ್ಮ ರಾಷ್ಟ್ರಗಳು ಪರಸ್ಪರ ಹತ್ತಿರವಾಗಿದ್ದು, ನಮ್ಮ ನಿರಂತರ ಪಾಲುದಾರಿಕೆಯು ಬಲಗೊಳ್ಳುತ್ತಲೇ ಇದೆ. ಜೊತೆಗೂಡಿ ನಾವು ಪ್ರದೇಶಕ್ಕೆ ಉಜ್ವಲ ಭವಿಷ್ಯವನ್ನು ನಿರ್ಮಿಸೋಣಾ” ಎಂದು ಮಾಲ್ಡೀವ್ಸ್ ಅಧ್ಯಕ್ಷ ಮುಯಿಜ್ಜು ಟ್ವೀಟ್ ಮಾಡಿದ್ದಾರೆ.

ಇದಲ್ಲದೇ, ವಿದೇಶಾಂಗ ಸಚಿವ ಜೈಶಂಕರ್‌ರವರ ಮಾಲ್ಡೀವ್ಸ್ ಭೇಟಿಯ ಕುರಿತು ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಕುರಿತು ಪ್ರಕಟಣೆಯನ್ನು ನೀಡಿದೆ‌.


ಒಟ್ಟಾರೆಯಾಗಿ ಮಾಲ್ಡೀವ್ಸ್‌ ತನ್ನ 28 ದ್ವೀಪಗಳನ್ನು ಭಾರತಕ್ಕೆ ಕೇವಲ ಅಭಿವೃದ್ದಿ ಕಾರ್ಯಗಳಿಗೆ ಮಾತ್ರ ಬಿಟ್ಟು ಕೊಟ್ಟಿದೆಯೇ ಹೊರತು ಶಾಶ್ವತವಾಗಿ ಭಾರತಕ್ಕೆ ಅವುಗಳನ್ನು ಮಾರಾಟ ಮಾಡಿಲ್ಲ. ದ್ವೀಪಗಳಲ್ಲಿ ನೀರು, ನೈರ್ಮಲ್ಯ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಜವಾಬ್ದಾರಿಯನ್ನು ಭಾರತ ವಹಿಸಿಕೊಂಡಿದೆ.


ಇದನ್ನು ಓದಿ: Fact Check| ಕ್ಯಾಡ್‌ಬರಿಸ್ ಚಾಕೊಲೇಟ್‌ನಲ್ಲಿ ದನದ ಮಾಂಸ ಬೆರೆಸಲಾಗುತ್ತಿದೆ ಎಂಬುದು ಸುಳ್ಳು!


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *