Fact Check | ರಾಹುಲ್ ಗಾಂಧಿ ಮುಂದೆ ಉದ್ಧವ್ ಠಾಕ್ರೆ ನಮಸ್ಕರಿಸುತ್ತಿರುವ ಫೋಟೋ ಎಡಿಟ್ ಮಾಡಲಾಗಿದೆ

“ಈ ಫೋಟೋವನ್ನು ನೋಡಿ.. ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಮುಂದೆ ನಮಸ್ಕರಿಸುತ್ತಿದ್ದಾರೆ. ಈ ಕುರ್ಚಿಯ ದುರಾಸೆ ಒಬ್ಬ ವ್ಯಕ್ತಿಯನ್ನು ಏನು ಬೇಕಾದರೂ ಮಾಡಿಸ ಬಲ್ಲದು. ಭಾರತೀಯರೇ ಇನ್ನಾದರೂ ಎಚ್ಚೆತ್ತುಕೊಳ್ಳಿ ಇಂಡಿಯಾ ಮೈತ್ರಿಕೂಟ ಖುರ್ಚಿಗಾಗಿ ಹೋರಾಡುತ್ತಿದೆ ಎಂಬುದನ್ನು ಮರೆಯದಿರಿ.” ಎಂದು ಫೋಟೋವೊಂದನ್ನು ಅಂತರ್ಜಾಲದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಈ ಫೋಟೋ ನೋಡಿದ ಹಲವು ಮಂದಿ ಉದ್ಧವ್ ಠಾಕ್ರೆ‌ ಅವರು ನಿಜಕ್ಕೂ ರಾಹುಲ್‌ ಗಾಂಧಿ ಅವರಿಗೆ ನಮಸ್ಕರಿಸಿದ್ದಾರೆ ಎಂದು ಭಾವಿಸಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹೀಗಾಗಿ ಈ ಪೋಸ್ಟ್‌ ಸಾಕಷ್ಟು ಜನರನ್ನು ದಾರಿ ತಪ್ಪಿಸುತ್ತಿದ್ದು, ಸಾಮಾನ್ಯ ಜನರಲ್ಲಿ ರಾಜಕೀಯವಾಗಿ ತಪ್ಪು ಮಾಹಿತಿ ತಲುಪುವಂತೆ ಮಾಡಲಾಗುತ್ತಿದೆ. ಹೀಗಾಗಿ ವ್ಯಾಪಕವಾಗಿ ವೈರಲ್‌ ಆಗುತ್ತಿರುವ ಈ ಫೋಟೋ ಕುರಿತು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಈ ಫೋಟೋ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ವೈರಲ್‌ ಆಗುತ್ತಿರುವ ಫೋಟೋವನ್ನು ನಾವು ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲನೆ ನಡೆಸಿದೆವು. ಈ ವೇಳೆ ನಮಗೆ ಟೈಮ್ಸ್ ನೌ ನ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಪ್ರಕಟವಾದ ಹಲವು ಫೋಟೋಗಳು ಕಂಡು ಬಂದಿವೆ. ಪೋಸ್ಟ್ ಅನ್ನು ಆಗಸ್ಟ್ 7 ರಂದು ಹಂಚಿಕೊಳ್ಳಲಾಗಿದೆ ಮತ್ತು ಉದ್ಧವ್ ಠಾಕ್ರೆ‌, ರಾಹುಲ್ ಗಾಂಧಿಯ ಪಕ್ಕದಲ್ಲಿ ನಿಂತಿರುವುದು ಕಂಡು ಬಂದಿದೆ.

ಇನ್ನು ಹೆಚ್ಚಿನ ಮಾಹಿತಿಗಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಶೀಲನೆ ನಡೆಸಿದಾಗ 7 ಆಗಸ್ಟ್‌ 2024ರಂದು ಅಪ್‌ಲೋಡ್‌ ಮಾಡಿರುವುದು ಕಂಡು ಬಂದಿದೆ. ವೈರಲ್ ಚಿತ್ರದಲ್ಲಿ ಕಂಡು ಬಂದ ಫೋಟೋಗೆ ಹೋಲಿಸಿದರೆ ಈ ಫೋಟೋದಲ್ಲಿ ಠಾಕ್ರೆ ಅವರ ಉಡುಪಿನ ಬಣ್ಣ ವಿಭಿನ್ನವಾಗಿರುವುದು ಕಂಡು ಬಂದಿದೆ. ಇನ್ನು ಈ ಫೋಟೋವು ಹಲವು ಗೊಂದಲಗಳನ್ನು ಮೂಡಿಸುತ್ತಿರುವುದರಿಂದ  ಠಾಕ್ರೆ ಅವರ ಫೋಟೋವನ್ನು ಪ್ರತ್ಯೇಕಿಸಿ ಅದರ ಮೇಲೆ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಈ ವೇಳೆ ನಮಗೆ Rediff ನಲ್ಲಿ ಪ್ರಕಟಿಸಿದ ವರದಿಯೊಂದು ಕಂಡು ಬಂದಿದೆ.

ಈ ವರದಿಯಲ್ಲಿ ” When Uddhav Met Kejriwal’s Parents” ಎಂಬ ಶೀರ್ಷಿಕೆಯನ್ನು ನೀಡಲಾಗಿದ್ದು, ಅದರಲ್ಲಿ  “ಉದ್ಧವ್ ಠಾಕ್ರೆ ಅವರು ಅರವಿಂದ್ ಕೇಜ್ರಿವಾಲ್ ಅವರ ಪೋಷಕರಾದ ಗೀತಾ ದೇವಿ ಮತ್ತು ಗೋಬಿಂದ್ ರಾಮ್ ಕೇಜ್ರಿವಾಲ್ ಅವರನ್ನು ಭೇಟಿಯಾಗಿದ್ದಾರೆ” ಎಂದು ಉಲ್ಲೇಖಿಸಲಾಗಿದೆ. ಇದೇ ಚಿತ್ರವನ್ನು ಆಗಸ್ಟ್ 8 ರಂದು ಶಿವಸೇನೆಯ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಅಧಿಕೃತ X ಹ್ಯಾಂಡಲ್‌ನಲ್ಲಿ ಪ್ರಕಟಿಸಲಾಗಿದೆ .ಈ ಫೋಟೋದಲ್ಲಿ ಠಾಕ್ರೆ ಅವರು ಬಾಗಿ ನಮಸ್ಕರಿಸುತ್ತಿರುವುದು ವೈರಲ್‌ ವಿಡಿಯೋಗೆ ಹೋಲಿಕೆಯಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವ ಫೋಟೋ ಎರಡು ಫೋಟೋಗಳ ಕೊಲಾಜ್‌ ಮಾಡಲಾಗಿದ್ದು, ಇದನ್ನೇ ನಿಜವೆಂದು ಹಂಚಿಕೊಳ್ಳಲಾಗುತ್ತಿದೆ. ನಿಜವಾದ ಫೋಟೋದಲ್ಲಿ ಠಾಕ್ರೆ ಅವರ ಉಡುಪಿನ ಬಣ್ಣ ಬೇರೆಯಾಗಿದ್ದು, ಅವರು ರಾಹುಲ್‌ ಗಾಂಧಿ ಅವರೊಂದಿಗೆ ನಿಂತಿರುವುದನ್ನು ನೋಡಬಹುದಾಗಿದೆ. ಇನ್ನು ಉದ್ಧವ್‌ ಠಾಕ್ರೆ ಅವರ ಫೋಟೋವನ್ನು ಅರವಿಂದ್‌ ಕೇಜ್ರಿವಾಲ್‌ ಅವರ ಪೋಷಕರನ್ನು ಭೇಟಿಯಾದಗ ಸಮಸ್ಕರಿಸುವ ಸಂದರ್ಭದ್ದಾಗಿದ್ದು, ಆ ಫೋಟೋವನ್ನು ತೆಗೆದು ರಾಹುಲ್‌ ಗಾಂಧಿ ಅವರಿಗೆ ನಮಸ್ಕರಿಸುವ ರೀತಿಯಲ್ಲಿ ಎಡಿಟ್‌ ಮಾಡಲಾಗಿದೆ. ಹಾಗಾಗಿ ಇದೊಂದು ಸುಳ್ಳು ನಿರೂಪಣೆಯಿಂದ ಕೂಡಿದ ಫೋಟೋವಾಗಿದೆ.


ಇದನ್ನೂ ಓದಿ : Fact Check | ಕ್ಯಾಡ್‌ಬರಿಸ್ ಚಾಕೊಲೇಟ್‌ನಲ್ಲಿ ದನದ ಮಾಂಸ ಬೆರೆಸಲಾಗುತ್ತಿದೆ ಎಂಬುದು ಸುಳ್ಳು.!


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *