Fact Check | ಪಾಕಿಸ್ತಾನದಲ್ಲಿ ಬೆಲ್ಜಿಯಂ ಮಹಿಳೆಯ ಮೇಲೆ ಅತ್ಯಾಚಾರ ಎಂದು ಮತ್ತೊಂದು ಪ್ರಕರಣದ‌ ಫೋಟೋ ಹಂಚಿಕೆ

“ಈ ಬೆಲ್ಜಿಯಂ ಮಹಿಳೆ ಪಾಕಿಸ್ತಾನಕ್ಕೆ ಪ್ರವಾಸಕ್ಕಾಗಿ ಬಂದಿದ್ದರು. ಪಾಕಿಸ್ತಾನಿ ಮುಸ್ಲಿಮರು ಅವರನ್ನು ಅಪಹರಿಸಿ 5 ದಿನಗಳ ಕಾಲ ಅತ್ಯಾಚಾರ ಮಾಡಿ, ನಂತರ ಅವರ ಕೈಗಳನ್ನು ಕಟ್ಟಿ ನಿರ್ಜನ ರಸ್ತೆಯಲ್ಲಿ ಬಿಟ್ಟು ಓಡಿಹೋದರು. ಇದನ್ನು ಕಂಡ ಅಪರಿಚಿತ ವ್ಯಕ್ತಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದು, ಬಳಿಕ ಆಕೆಯನ್ನು ರಕ್ಷಿಸಲಾಗಿದೆ. ದೇಶವನ್ನು ಲೆಕ್ಕಿಸದೆ, ರಾಕ್ಷಸರು ಒಂದೇ ಆಲೋಚನೆಯನ್ನು ಹೊಂದಿದ್ದಾರೆ. ಏಕೆಂದರೆ ಅವರೆಲ್ಲರೂ ಒಂದೇ ಸಿದ್ಧಾಂತವನ್ನು ನಂಬುತ್ತಾರೆ.” ಎಂದು ಪೋಸ್ಟ್‌ವೊಂದನ್ನು ಹಂಚಿಕೊಳ್ಳಲಾಗಿದೆ.

ಈ ಪೋಸ್ಟ್ ನೋಡಿದ ಹಲವರು ಇದು ನಿಜವಾದ ಘಟನೆ ಎಂದು ಭಾವಿಸಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಇದೇ ಪೋಸ್ಟ್ ಅನ್ನು ಹಂಚಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಇಸ್ಲಾಂ ಸಮುದಾಯದ ವಿರುದ್ಧ ವ್ಯಾಪಕವಾಗಿ ಆಕ್ರೋಶವನ್ನು ಕೂಡ ಹೊರ ಹಾಕುತ್ತಿದ್ದಾರೆ. ಹೀಗೆ ವೈರಲ್ ಆಗಿರುವ ಪೋಸ್ಟ್‌ನ ಅಸಲಿಯತ್ತು ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿರುವ ಪೋಸ್ಟ್ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ವೈರಲ್ ಪೋಸ್ಟ್ ‌ಗೆ ಸಂಬಂಧಿಸಿದಂತೆ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಲಾಯಿತು. ಈ ವೇಳೆ ನಮಗೆ ಇದೇ ಆಗಸ್ಟ್‌ 14 ಮತ್ತು 15ರಂದು ವಿವಿಧ ಮಾಧ್ಯಮಗಳಲ್ಲಿ ಪ್ರಕಟವಾದ ಹಲವು ವರದಿಗಳು ಕಂಡು ಬಂದಿವೆ.

ಈ ವರದಿಗಳಲ್ಲಿ 28 ವರ್ಷದ ಮಹಿಳೆಯನ್ನು  ಐದು ದಿನಗಳ ಕಾಲ ಅತ್ಯಾಚಾರ ನಡೆಸಿ, ನಂತರ ಇಸ್ಲಾಮಾಬಾದ್‌ನ ಜಿ -6 ಪ್ರದೇಶದಲ್ಲಿ ಕಟ್ಟಿಹಾಕಲಾಗಿದೆ. ಆಕೆಯ ಹೇಳಿಕೆ ಆಧರಿಸಿ ಅಬ್ಬಾರ ಪೊಲೀಸರು ತಮೀಜುದ್ದೀನ್ ಎಂಬಾತನನ್ನು ಬಂಧಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಬಳಿಕ ಆಗಸ್ಟ್ 15 ರಂದು ಇಸ್ಲಾಮಾಬಾದ್ ಪೊಲೀಸರು ಟ್ವಿಟರ್ ಮೂಲಕ ಸಂತ್ರಸ್ತೆ ಫರ್ವಾ ಕಯಾನಿ ರಾವಲ್ಪಿಂಡಿ ನಿವಾಸಿ ಎಂದು ಸ್ಪಷ್ಟಪಡಿಸಿದ್ದಾರೆ. ಹೆಚ್ಚುವರಿಯಾಗಿ, ಸಂತ್ರಸ್ತೆ ಬೆಲ್ಜಿಯಂ ಪ್ರಜೆಯಲ್ಲ ಎಂದು ಇಸ್ಲಾಮಾಬಾದ್‌ನಲ್ಲಿರುವ ಬೆಲ್ಜಿಯಂ ರಾಯಭಾರ ಕಚೇರಿ ದೃಢಪಡಿಸಿದೆ.

ಹೀಗಾಗಿ ವೈರಲ್ ಆಗುತ್ತಿರುವ ಪೋಸ್ಟ್‌ನಲ್ಲಿರುವ ಫೋಟೋವನ್ನು ನಾವು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ಸಂದರ್ಭದಲ್ಲಿ ವೈರಲ್ ಫೋಟೋವು 2019 ರಿಂದ ಹಂಚಿಕೊಳ್ಳಲಾಗುತ್ತಿದೆ ಎಂದು ನಾವು ಕಂಡುಕೊಂಡಿದ್ದೇವೆ. ಇನ್ನು ಇದು ಮೂಲತಃ ಬೇರೆ ಪ್ರಕರಣಕ್ಕೆ ಸಂಬಂಧಿಸಿದ ಹಲವಾರು ಮಾಧ್ಯಮ ವರದಿಗಳಲ್ಲಿ ಈ ಫೋಟೋ ಪ್ರಕಟಿಸಲಾಗಿದೆ. ಮಾರ್ಚ್ 21, 2019 ರ ದಿನಾಂಕದ ದಿ ಡಾನ್ ವರದಿಯ ಪ್ರಕಾರ , ಚಿತ್ರದಲ್ಲಿನ ಮಹಿಳೆ ಟೆರೇಜಾ ಹಲುಸ್ಕೋವಾ, ಜೆಕ್ ರಿಪಬ್ಲಿಕ್ ಮಾಡೆಲ್ ಆಗಿದ್ದು, ಆಕೆಗೆ ಮಾದಕವಸ್ತು ಕಳ್ಳಸಾಗಣೆಯಿಂದಾಗಿ ಪಾಕಿಸ್ತಾನಿ ನ್ಯಾಯಾಲಯವು ಎಂಟು ವರ್ಷ ಮತ್ತು ಎಂಟು ತಿಂಗಳ ಜೈಲು ಶಿಕ್ಷೆ ವಿಧಿಸಿದ್ದರ ಕುರಿತು ವರದಿಯನ್ನು ಪ್ರಕಟಿಸಲಾಗಿದೆ ಎಂಬುದು ತಿಳಿದು ಬಂದಿದೆ. ಇನ್ನು ಈ ಕುರಿತು ಪಾಕಿಸ್ತಾನದ ಬೆಲ್ಜಿಯಂ ರಾಯಭಾರಿ ಕಚೇರಿ ಕೂಡ ಈ ಬಗ್ಗೆ ಎಕ್ಸ್ ಪೋಸ್ಟ್‌ನಲ್ಲಿ ಸ್ಪಷ್ಟನೆ ಮಾಡಿದ್ದು ಕಂಡು ಬಂದಿದೆ

ಒಟ್ಟಾರೆಯಾಗಿ ಹೇಳುವುದಾದರೆ ವೈರಲ್ ಫೋಟೋ 2019ರದ್ದಾಗಿದ್ದು , ಅದರಲ್ಲಿ ಕಂಡು ಬರುವ ಮಹಿಳೆ ಮಾದಕ ವಸ್ತು ಸಾಗಾಣೆ ಆರೋಪವನ್ನು ಹೊತ್ತು ಜೈಲು ಸೇರಿದ್ದಾಳೆ. ವೈರಲ್ ಪೋಸ್ಟ್ ನಲ್ಲಿ ಹೇಳಲಾದ ಘಟನೆ ಆಗಸ್ಟ್ 15 ರಂದು ನಡೆದಿದ್ದು ಆಕೆ ಬೆಲ್ಜಿಯಂ ಪ್ರಜೆ ಎನ್ನುವುದು ಸುಳ್ಳು ಆಕೆ ರಾವಲ್ಪಿಂಡಿ ನಿವಾಸಿ ಎಂಬುದನ್ನು ಇಸ್ಲಾಮಾಬಾದ್ ಪೊಲೀಸರು ಸ್ಪಷ್ಟ ಪಡಿಸಿದ್ದಾರೆ. ಹೀಗಾಗಿ ಬೇರೆ ಘಟನೆಗೆ ಬೇರೆಯದ್ದೇ ಫೋಟೋ ಹಂಚಿಕೊಂಡು ಸುಳ್ಳು ನಿರೂಪಣೆಯೊಂದಿಗೆ ಶೇರ್ ಮಾಡಲಾಗುತ್ತಿದೆ. ಇಂತಹ ಪೋಸ್ಟ್‌ ‌ಗಳನ್ನು ಹಂಚಿಕೊಳ್ಳುವುದು ಅಪರಾಧವಾಗಿದೆ.


ಇದನ್ನೂ ಓದಿ : Fact Check: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಮೂಲತಃ ಮುಸ್ಲಿಂ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *