Fact Check| ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ-ಕೊಲೆ ಪ್ರಕರಣದ ಆರೋಪಿ ಟಿಎಂಸಿ ನಾಯಕನ ಮಗನಲ್ಲ

ಕೋಲ್ಕತ್ತಾ ಆರ್ ಜಿ ಕರ್ ಆಸ್ಪತ್ರೆಯಲ್ಲಿ ಆಗಸ್ಟ್ 9ರಂದು ನಡೆದ ವೈದ್ಯಕೀಯ ವಿದ್ಯಾರ್ಥಿನಿಯ ಕೊಲೆ ಹಾಗೂ ಅತ್ಯಾಚಾರ ಪ್ರಕರಣದಲ್ಲಿ ಪಶ್ಚಿಮ ಬಂಗಾಳ ಮಾಜಿ ಸಚಿವ ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಶಾಸಕ ಸೌಮೆನ್ ಮಹಾಪಾತ್ರ ಅವರ ಪುತ್ರ ಡಾ. ಸುಭ್‌ದೀಪ್ ಸಿಂಗ್ ಮಹಾಪಾತ್ರ‌ ಅವರ ಕೈವಾಡವಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಲವಾರು ಪೋಸ್ಟ್‌ಗಳು ಹರಿದಾಡುತ್ತಿವೆ.

“ಈತ ಟಿಎಂಸಿ ಶಾಸಕನ ಪುತ್ರ. ವೈದ್ಯಕೀಯ ವಿದ್ಯಾರ್ಥಿನಿಯ ಕೊಲೆ ಪ್ರಕರಣದಲ್ಲಿ ಈತನಿಗೆ ನಂಟಿದೆ. ಈಗ ಈತ ತಲೆ ಮರೆಸಿಕೊಂಡಿದ್ದಾನೆ‌. ಬಂಧನಕ್ಕೊಳಗಾದ ವ್ಯಕ್ತಿ ನೈಜ ಆರೋಪಿಯಲ್ಲ. ಆತ ಬಲಿಪಶು” ಎಂಬ ಒಕ್ಕಣೆಯೊಂದಿಗೆ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದಲ್ಲದೇ ಇಂತಹದ್ದೇ ಬಂಗಾಳಿ ಭಾಷೆಯಲ್ಲಿ ಬರೆಯಲಾದ ಸಂದೇಶಗಳು ಹರಿದಾಡುತ್ತಿವೆ.

ಫ್ಯಾಕ್ಟ್‌ಚೆಕ್

ಫೋಟೋದಲ್ಲಿ ಹೇಳಿದಂತೆ ಆರ್‌ಜಿ ಕರ್ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ವಿದ್ಯಾರ್ಥಿಯಾಗಿರುವ ಈತನ ಹೆಸರು ಸುಭದೀಪ್ ಸಿಂಗ್ ಮಹಾಪಾತ್ರ ಆಗಿದ್ದು, ಈತನ ತಂದೆ ಪ್ರಬೀರ್ ಸಿಂಗ್ ಮಹಾಪಾತ್ರ ಶಾಲಾ ಶಿಕ್ಷಕರಾಗಿದ್ದಾರೆ. ಇವರು ಬರ್ಕೂರ ನಿವಾಸಿ. ತಮ್ಮ ಮಗನ ಫೋಟೋ ಬಳಸಿ ಟಿಎಂಸಿ ನಾಯಕ ಪುತ್ರ ಎಂದು ಹರಡಲಾಗುತ್ತಿರುವ ಸುಳ್ಳು ಸುದ್ದಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ಪ್ರಬೀರ್ ಸಿಂಗ್ “ತಮ್ಮ ಮಗ ಆರ್‌ಜಿ ಕರ್ ವೈದ್ಯಕೀಯ ಶಾಲೆಯ ವಿದ್ಯಾರ್ಥಿ. ಆದರೆ, ಆತ ಟಿಎಂಸಿ ನಾಯಕನ ಪುತ್ರನಲ್ಲ‌. ಆತನಿಗೆ ಈ ಪ್ರಕರಣದಲ್ಲಿ ಯಾವುದೇ ರೀತಿಯಲ್ಲಿ ನಂಟಿಲ್ಲ. ಘಟನೆ ನಡೆದ ದಿನದಿಂದ ಆತ ಕಾಲೇಜಿನಲ್ಲಿಯೇ ಇದ್ದು, ತಲೆ ಮರೆಸಿಕೊಂಡಿದ್ದಾನೆ ಎಂದು ಹರಡಲಾಗುತ್ತಿರುವ ಸುದ್ದಿ ಸಂಪೂರ್ಣ ಸುಳ್ಳು” ಎಂದು ಸ್ಪಷ್ಟನೆ ನೀಡಿದ್ದಾರೆ‌. ಅಲ್ಲದೇ ತಮ್ಮ‌ ಮಗನ ಫೊಟೋ ಬಳಸಿ ಸುಳ್ಳು ಸುದ್ದಿ ಹರಡುತ್ತಿರುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಇದಲ್ಲದೇ, ಟಿಎಂಸಿ ಶಾಸಕ ಸೌಮೇನ್ ಮಹಾಪಾತ್ರ ಹಾಗೂ ಅವರ ಪತ್ನಿ ಸುಮನ್ ಮಹಾಪಾತ್ರ‌ ಅವರು ಜಂಟಿ ಪತ್ರಿಕಾ ಹೇಳಿಕೆ ನೀಡಿದ್ದು, “ನಮ್ಮ ಮಗನ ಹೆಸರು ಬೋಧಿಸತ್ವ ಮಹಾಪಾತ್ರ. 2017ರಲ್ಲಿ ತನ್ನ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ್ದಾನೆ. ಆತನಿಗೆ ಶಿಕ್ಷಣ-ಉದ್ಯೋಗ ಸೇರಿದಂತೆ ಯಾವುದೇ ಆಯಾಮಗಳಲ್ಲಿ ಆರ್‌ಜಿ ಕರ್ ಜೊತೆಗೆ ನಂಟಿಲ್ಲ. ಪ್ರಸ್ತುತ ಆತ ಪಿತ್ಪುರ ಬ್ಲಾಕ್‌ನ ಪನ್ಸಕೂರ-1ರಲ್ಲಿರುವ
ಬ್ಲಾಕ್ ಹೆಲ್ತ್ ಸೆಂಟರ್‌ನಲ್ಲಿ ಬ್ಲಾಕ್ ಮೆಡಿಕಲ್ ಆಫೀಸರ್ ಆಫ್ ಹೆಲ್ತ್(BMOH) ಆಗಿ ಕೆಲಸ ಮಾಡುತ್ತಿದ್ದಾನೆ. ಘಟನೆ ನಡೆದ ದಿನ ಆತ ತನ್ನ ಗರ್ಭಿಣಿ ಪತ್ನಿಯೊಂದಿಗೆ ಸ್ಕ್ಯಾನಿಂಗ್‌ಗೆ ತೆರಳಿದ್ದನು. ಆತನಿಗೂ ಈ ಪ್ರಕರಣಕ್ಕೂ ಯಾವುದೇ ನಂಟಿಲ್ಲ. ಈ ಸುಳ್ಳು ಸುದ್ದಿಗಳ ಕುರಿತು ತನಿಖೆ ನಡೆಸಬೇಕು” ಎಂದು ಆಗ್ರಹಿಸಿದ್ದಾರೆ.

ಒಟ್ಟಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ಫೋಟೋಗಳು ಓರ್ವ ಶಿಕ್ಷಕನ ಪುತ್ರ, ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ವಿದ್ಯಾರ್ಥಿಯ ಫೋಟೋಗಳಾಗಿವೆ ಎಂಬುದು ಸಾಬೀತಾಗಿದ್ದು, ಟಿಎಂಸಿ ನಾಯಕನ ಪುತ್ರ ಅಲ್ಲ ಎಂಬುದು ಇದರಿಂದ ಸ್ಪಷ್ಟವಾಗಿದೆ.


ಇದನ್ನು ಓದಿದ್ದೀರಾ? Fact Check | ಕೋಲ್ಕತ್ತಾ ಪ್ರಕರಣದ ವಿರುದ್ಧ ಪ್ರತಿಭಟಿಸಿದ ವಿದ್ಯಾರ್ಥಿನಿಯನ್ನು ಅತ್ಯಾಚಾರವೆಸಗಿ ಕೊಲೆಗೈಯ್ಯಲಾಗಿದೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *