ಇದೇ ಆಗಸ್ಟ್ 15ರ ಸ್ವಾತಂತ್ರ್ಯೋತ್ಸವದ ವೇಳೆ ಕೇರಳದ ಒಂದು ಪ್ರದೇಶದಲ್ಲಿ ನಡೆದ ತ್ರಿವರ್ಣ ಧ್ವಜಾರೋಹಣದ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಧ್ವಜವನ್ನು ಮೇಲೆ ಏರಿಸಿ ಹಾರಿಸುವಾಗ ಧ್ವಜಸ್ತಂಭದ ತುದಿ ಭಾಗದಲ್ಲಿ ಸಿಲುಕಿಕೊಂಡಿದೆ. ಕೆಳಗಿನಿಂದ ಎಷ್ಟೇ ಹಗ್ಗ ಜಗ್ಗಾಡಿದರೂ ಅದು ತೆರೆದುಕೊಂಡಿಲ್ಲ. ಆಗ ಒಂದು ಬದಿಯಿಂದ ಅಚಾನಕ್ಕಾಗಿ ಹಾರಿ ಬಂದ ಹಕ್ಕಿಯೊಂದು ರಾಷ್ಟ್ರಧ್ವಜದ ಕಗ್ಗಂಟನ್ನು ಬಿಡಿಸಿದೆ. ಆಗ ಧ್ವಜ ಹಾರಾಡಿದ್ದು, ಬಳಿಕ ಆ ಹಕ್ಕಿ ಹಾರಿ ಹೋಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.
Kerala – National Flag got stuck at the top while hoisting. A bird came from nowhere and unfurled it!! ✨ pic.twitter.com/lRFR2TeShK
— Shilpa (@shilpa_cn) August 16, 2024
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದ್ದು, ಈ ವಿಡಿಯೋ ನೋಡಿದ ಹಲವರು ವಿಡಿಯೋ ಕುರಿತು ಯಾವುದೇ ಸ್ಪಷ್ಟನೆಯನ್ನು ಪಡೆಯದೆ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಕನ್ನಡದಲ್ಲಿ ಟಿವಿ ವಿಕ್ರಮ ಸೇರಿದಂತೆ ಕೆಲವೊಂದು ಡಿಜಿಟಲ್ ಸುದ್ದಿ ಸಂಸ್ಥೆಗಳು ಕೂಡ ವಿಡಿಯೋವಿನ ಸತ್ಯಾಸತ್ಯತೆಯನ್ನು ಅರಿಯದೆ ಶೇರ್ ಮಾಡಿವೆ. ಹೀಗೆ ವೈರಲ್ ಆಗುತ್ತಿರುವ ವಿಡಿಯೋವಿನ ಅಸಲಿಯತ್ತು ಏನು ಎಂಬುದನ್ನು ನಾವು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.
ಕೇರಳದಲ್ಲಿ ನಮ್ಮ ರಾಷ್ಟ್ರ ಧ್ವಜ ತೆರೆಯದೆ ಸಿಕ್ಕಿಕೊಂಡಾಗ ಎಲ್ಲಿಂದಲೋ ಬಂದ ಹಕ್ಕಿಯೊಂದು ಧ್ವಜವನ್ನು ಬಿಡಿಸಿದ ಅತ್ಯಪರೂಪದ
ಘಟನೆ… pic.twitter.com/kqdkL0bnjz— TV Vikrama (@tv_vikrama) August 17, 2024
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿರುವ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ವೈರಲ್ ವಿಡಿಯೋವಿನ ವಿವಿಧ ಕೀ ಫ್ರೇಮ್‌ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಪರಿಶೀಲನೆ ನಡೆಸಲಾಯಿತು. ಈ ವೇಳೆ ನಮಗೆ ಕರುನಾಡಿನ ಮಿನುಗುವ ನಕ್ಷತ್ರ ಎಂಬ ಎಕ್ಸ್ ಖಾತೆಯಲ್ಲಿ ಇದೇ ಘಟನೆಯ ಮತ್ತೊಂದು ಅಯಾಮದ ವಿಡಿಯೊ ಕಂಡು ಬಂದಿದ್ದು ಅದರಲ್ಲಿ ನಿಜವಾಗಿ ನಡೆದದ್ದು ಏನು ಎಂಬುದು ಕಂಡು ಬಂದಿದೆ. ಈ ಪೋಸ್ಟ್‌ಗೆ “ಕೇರಳ : ಹಕ್ಕಿ & ದ್ವಜದ ಕಥೆಯ ನೈಜ ವಿಡಿಯೋ.” ಎಂದು ಶೀರ್ಷಿಕೆಯನ್ನು ನೀಡಲಾಗಿದೆ.
ಕೇರಳ : ಹಕ್ಕಿ & ದ್ವಜದ ಕಥೆಯ ನೈಜ ವಿಡಿಯೋ. pic.twitter.com/VV8LJ5OzQC
— ಕರುನಾಡಿನ ಮಿನುಗುವ ನಕ್ಷತ್ರ💛❤️ (@NaadaPremiSha) August 17, 2024
ಈ ಕುರಿತು ಇನ್ನಷ್ಟು ಮಾಹಿತಿಗಾಗಿ ನಾವು ಎರಡೂ ವಿಡಿಯೋಗಳನ್ನು ಕೊಲಾಜ್ ಮಾಡಿ ಪರಿಶೀಲನೆ ನಡೆಸಿದೆವು. ಮೊದಲಿನ ವಿಡಿಯೋ ಹಾಗೂ ಈಗಿನ ವಿಡಿಯೋ ಒಂದೇ ಆಗಿದ್ದು ಆದರೆ ಎರಡೂ ಕೂಡ ಬೇರೆ ಬೇರೆ ಆಯಾಮಗಳಿಂದ ಚಿತ್ರಿಸಲಾಗಿದೆ. ಮೊದಲ ವಿಡಿಯೋದಲ್ಲಿ ಹಕ್ಕಿಯೇ ಬಂದು ರಾಷ್ಟ್ರಧ್ವಜವನ್ನು ಸರಿಪಡಿಸುವ ರೀತಿಯಲ್ಲಿ ಕಾಣಿಸುತ್ತದೆ, ಮತ್ತೊಂದು ವಿಡಿಯೋದಲ್ಲಿ ಧ್ವಜಾರೋಹಣ ನಡೆಯುವ ವೇಳೆ ರಾಷ್ಟ್ರಧ್ವಜ ತೆರೆಯಲು ಸ್ವಲ್ಪ ಹೊತ್ತು ಸಮಯ ತೆಗೆದುಕೊಂಡಿದೆ. ಆ ಸಂದರ್ಭದಲ್ಲಿ ಹಕ್ಕಿಯೊಂದು ಹಾರಿ ಬಂದು ಅಲ್ಲೇ ಇರುವ ತೆಂಗಿನ ಮರದ ಮೇಲೆ ಕುಳಿತಿರುತ್ತದೆ. ಅದೇ ವೇಳೆಗೆ ದ್ವಜವು ತೆರೆದುಕೊಂಡಿದೆ. ಬಾವುಟ ಹಾರುತಿದ್ದಂತೆ ಹಕ್ಕಿಯು ತೆಂಗಿನ ಗರಿಯಿಂದ ಹಾರಿ ನಿರ್ಗಮಿಸಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಇನ್ನು ಈ ಕುರಿತು ಹಲವು ಮಾಧ್ಯಮ ವರದಿಗಳು ಕೂಡ ಕಂಡುಬಂದಿದ್ದು, ಅವುಗಳು ಕೂಡ ಇದನ್ನೇ ಉಲ್ಲೇಖಿಸಿವೆ.
ಒಟ್ಟಾರೆಯಾಗಿ ಹೇಳುವುದಾದರೆ ಹಕ್ಕಿಯೊಂದು ರಾಷ್ಟ್ರಧ್ವಜ ಸರಿಯಾಗಿ ಹಾರಿದಿದ್ದಾಗ ಅದನ್ನು ಬಿಡಿಸಿ ತನ್ನ ಪಾಡಿಗೆ ಹಾರಿಹೋಗಿದೆ ಎಂಬುದು ಸುಳ್ಳು. ಈ ಘಟನೆಯ ಮತ್ತೊಂದು ವಿಡಿಯೋವನ್ನು ಗಮನಿಸಿದಾಗ ಹಕ್ಕಿಗೂ ದ್ವಜ ತೆರೆದುಕೊಳ್ಳುವುದಕ್ಕೂ ಯಾವುದೇ ರೀತಿಯಾದಂತಹ ಸಂಬಂಧವಿಲ್ಲ ಎಂಬುದು ಸಾಬೀತಾಗಿದೆ. ಹಾಗಾಗಿ ಇಂತಹ ವೈರಲ್ ವಿಡಿಯೋಗಳನ್ನು ಹಂಚಿಕೊಳ್ಳುವ ಮುನ್ನ ಒಮ್ಮೆ ಪರಿಶೀಲಿಸುವುದು ಉತ್ತಮ.
ಇದನ್ನೂ ಓದಿ : Fact Check | ಉದ್ಧವ್ ಠಾಕ್ರೆಯನ್ನು ನಕಲಿ ಸಂತಾನ ಎಂದು ಕೇಜ್ರಿವಾಲ್ ನಿಂದಿಸಿಲ್ಲ. ಅದು ಎಡಿಟೆಡ್ ವಿಡಿಯೋ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.