ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಕುರಿತು ವಿರೋಧ ಪಕ್ಷದ ಬಿಜೆಪಿ ನಾಯಕರು ಮತ್ತು ಬಲಪಂಥೀಯ ಬೆಂಬಲಿಗರು ಪ್ರತಿದಿನವೂ ಒಂದಿಲ್ಲೊಂದು ಆರೋಪಗಳನ್ನು ಮಾಡುತ್ತಾ ಬರುತ್ತಿದ್ದಾರೆ. ಹಾಗೆಯೇ ಜವಹರಲಾಲ್ ನೆಹರೂ ಅವರ ಕುಟುಂಬದ ಎಲ್ಲಾ ಸದಸ್ಯರ ಮೇಲೂ ಸಹ ನಿರಂತರವಾದ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಅವರ ತೇಜೋವದೆಯನ್ನು ಮಾಡಲಾಗುತ್ತಿದೆ. ಈ ಹಿಂದೆ ನೆಹರೂ ಅವರ ಕುಟುಂಬ ಮೂಲತಃ ಮುಸ್ಲಿಂ ಕುಟುಂಬ. ಅವರ ತಂದೆಯ ಹೆಸರು ಮುಬಾರಕ್ ಅಲಿ ಎಂದು ತಾಯಿಯ ಹೆಸರು ತುಸು ರೆಹಮಾನ್ ಬಾಯಿ ಎಂದು ಎಂಬ ಸುಳ್ಳನ್ನು ಹರಿಬಿಟ್ಟಿದ್ದಾರೆ. ಇದು ಇಂದಿಗೂ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದ್ದು. ಅನೇಕರು ನಿಜವೆಂದು ನಂಬಿದ್ದಾರೆ.
ಈಗ, ಕ್ಯಾಪಿಟಲ್ ಟಿವಿ ಮುಖ್ಯಸ್ಥ ಡಾ. ಮನೀಶ್ ಕುಮಾರ್ ಎಂಬುವವರು ರಾಹುಲ್ ಗಾಂಧಿಯವರ ಕುರಿತು ಅನೇಕ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಮನೀಶ್ ಕುಮಾರ್ ಅವರು “ರಾಹುಲ್ ಗಾಂಧಿ ವೈಯಕ್ತಿಕ ಜೀವನದ ಮೇಲೆ ಪತ್ರಕರ್ತರಿಂದ ಗಂಭೀರ ಆರೋಪ!” ಎಂಬ ಶೀರ್ಷಿಕೆಯೊಂದಿಗೆ ತಮ್ಮ ಯೂಟೂಬ್ ಚಾನೆಲ್‌ನಲ್ಲಿ ವೀಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.
ಈ ವೀಡಿಯೋದಲ್ಲಿ “ರಾಹುಲ್ ಗಾಂಧಿಯವರಿಗೆ ಹಿಂದೂಯೇತರ ಹುಡುಗಿಯರನ್ನು ಕಂಡರೆ ಹೆಚ್ಚು ಆಕರ್ಷಣೆಗೆ ಒಳಗಾಗುತ್ತಾರೆ. ಅವರಿಗೆ ಇರುವ ಹೆಚ್ಚು ಜನ ಗರ್ಲ್‌ಫ್ರೆಂಡ್ಸ್‌ಗಳು ಕ್ರಿಶ್ಚಿಯನ್ ಮತ್ತು ಮುಸ್ಲಿಮರು. ಅಫ್ಘಾನಿಸ್ತಾನದ ನೊವಲ್ ಜಹರ್ ಎಂಬ ರಾಜಮನೆತನದ ಯುವತಿಯೊಬ್ಬಳ ಜೊತೆಗೆ ಮೊದಲ ಅನೈತಿಕ ಸಂಬಂಧ ಹೊಂದಿದ್ದರು. ನಂತರ ನೋವಲ್ ಜಹರ್ ಅವರು ಮುಸ್ಲಿಂ ಧರ್ಮ ತೊರೆದು ರೋಮನ್ ಕ್ಯಾಥೋಲಿಕ್‌ಗೆ ಮತಾಂತರ ಆದರು. ಈ ಲೇಖನದಲ್ಲಿ ಹೇಳಲಾಗುತ್ತದೆ, ಇಟಲಿಯಲ್ಲಿರುವ ಸೋನಿಯಾ ಗಾಂಧಿಯವರ ಮನೆಯೊಳಗೆ ಒಂದು ಚಾಪೆಲ್ ಇದೆ ಅಲ್ಲಿಗೆ ಹೋಗಿ ಬರುತ್ತಾ ಅವರಿಬ್ಬರು ಪ್ರೀತಿಸುತ್ತಿದ್ದರು ಎಂದು. ಲೇಖನದಲ್ಲಿ ಇವರಿಬ್ಬರು ದೂರ ಹೇಗಾದರೂ ಎಂಬುದಕ್ಕೆ ಕಾರಣ ಆಕೆ ಪ್ರೆಗ್ನೆಂಟ್ ಆದಳು ರಾಹುಲ್ ಬಾಬಾ ಆಕೆಯ ಮಗುವನ್ನು ಅಬರ್ಷನ್ ಮಾಡಿಸಿಲು ಹೇಳಿದ ಆದರೆ ಆಕೆ ಒಪ್ಪಲಿಲ್ಲ. ನಂತರ ಸಂಬಂಧ ಮುರಿದು ಬಿತ್ತು. ಈಗ ನೊವಲ್ ಜಹರ್ ಈಜಿಪ್ಟಿನ ರಾಜನ ಜೊತೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ.
ರಾಹುಲ್ ಗಾಂಧಿಗೆ ಮಕ್ಕಳು ಸಹ ಇದ್ದಾರೆ. ಇಬ್ಬರು ಮಕ್ಕಳು ಇದ್ದಾರೆ. ಬಾಲಕ 19 ವರ್ಷದವನಾಗಿದ್ದಾನೆ ಅವನ ಹೆಸರು ನ್ಯಾಕ್ ವಿಲ್ಸಿ, ಮತ್ತು ಮಗಳು 15 ವರ್ಷದವಳಾಗಿದ್ದು ಆಕೆಯ ಹೆಸರು ಮಿನಿಕ್ ವಿನ್ಸಿ. ಆತ ಇನ್ನೂ ಮದುವೆ ಆಗಿಲ್ಲ ಆದರೆ ಇಬ್ಬರು ಮಕ್ಕಳಿದ್ದಾರೆ. ವಿನ್ಸಿ ಹೆಸರು ಏಕೆಂದರೆ ಈ ಲೇಖನ ಹೇಳುತ್ತದೆ ವಿನ್ಸಿ ಎಂಬುದು ರಾಹುಲ್ ಗಾಂಧಿಯವರ ಹೊರಗಿನ ಹೆಸರು ಎಂದು. ಈಗ ಈ ಮಕ್ಕಳು ಕೊಲಂಬಿಯಾದ ಡ್ರಗ್ ಡೀಲರ್ ಒಬ್ಬರ ಮಗಳ ಜೊತೆಗೆ ವಾಸಿಸುತ್ತಿದ್ದಾರೆ.” ಎಂದು ಸೇರಿದಂತೆ ವೀಡಿಯೋ ಉದ್ದಕ್ಕೂ ಇದೇ ರೀತಿಯ ಆರೋಪಗಳನ್ನು ಮಾಡಿದ್ದಾರೆ.
ಈ ವೀಡಿಯೋವನ್ನು 3 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ ಮತ್ತು 17 ಸಾವಿರಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ. ಈ ವೀಡಿಯೋಗೆ ಕಮೆಂಟ್ ಮಾಡಿರುವ ಅನೇಕರು ಸಹ ಈ ವರದಿ ನಿಜ ಎಂದು ನಂಬಿ ಪ್ರತಿಕ್ರಯಿಸಿರುವುದು ಕಂಡು ಬಂದಿದೆ.
ಫ್ಯಾಕ್ಟ್ ಚೆಕ್:
ರಾಹುಲ್ ಗಾಂಧಿಯವರು ಅಫ್ಘಾನಿಸ್ತಾನದ ಯುವತಿಯ ಜೊತೆಗೆ ಸಂಬಂಧ ಹೊಂದಿದ್ದ ಕುರಿತು ಮತ್ತು ಅವರಿಗೆ ಇಬ್ಬರು ಮಕ್ಕಳು ಇರುವ ಕುರಿತು ಹುಡುಕಿದಾಗ ಈ ಹೇಳಿಕೆಯನ್ನು ಬೆಂಬಲಿಸುವ ಯಾವುದೇ ವರದಿಗಳು ನಮಗೆ ಲಭ್ಯವಾಗಿಲ್ಲ.
ಕ್ಯಾಪಿಟಲ್ ಟಿವಿಯ ಮುಖ್ಯಸ್ಥ ಡಾ. ಮನೀಶ್ ಕುಮಾರ್ ಅವರು ಬಾಂಗ್ಲಾದೇಶದ BLITZ ಎಂಬ ಸುದ್ದಿ ಮಾಧ್ಯಮದ ಸಂಪಾದಕ ಸಲಾಹ್ ಉದ್ದೀನ್ ಶೋಯೆಬ್ ಚೌಧರಿ ಅವರು ಬರೆದ ಲೇಖನವನ್ನು ಆಧಾರವಾಗಿಟ್ಟುಕೊಂಡು ವೀಡಿಯೋ ಮಾಡಿರುವುದು ಖಚಿತವಾಗಿದೆ.
ಸಲಾಹ್ ಉದ್ದೀನ್ ಶೋಯೆಬ್ ಚೌಧರಿ ಅವರು “ರಾಹುಲ್ ಗಾಂಧಿ: ಐಎನ್‌ಸಿ ಉತ್ತರಾಧಿಕಾರಿಯ ಹಿಂದೆ ಆಘಾತಕಾರಿ ಕರಾಳ ರಹಸ್ಯಗಳ ಅನಾವರಣ” ಎಂಬ ಲೇಖನದಲ್ಲಿ ಈ ರೀತಿ ಅನೇಕ ಸುಳ್ಳು ಆರೋಪಗಳನ್ನು ಆಧಾರರಹಿತವಾಗಿ ಮಾಡಿದ್ದಾರೆ. ರಾಹುಲ್ ಗಾಂಧಿ ಜೊತೆಗೆ ಪೋಟೋ ಹೊಂದಿರುವ ಮಹಿಳೆಯರ ಪೋಟೋಗಳನ್ನು ಬಳಸಿಕೊಂಡು ಶೋಯೆಬ್ ಚೌಧರಿಯವರು ಈ ರೀತಿಯ ಆರೋಪಗಳನ್ನು ಮಾಡಿದ್ದಾರೆ.
ನಾವು ಗೂಗಲ್ ರಿವರ್ಸ್ ಇಮೇಜ್ ಮೂಲಕ ಲೇಖನದಲ್ಲಿ ರಾಹುಲ್ ಗಾಂಧಿಯವರ ಜೊತೆಗೆ ಇರುವ ಯುವತಿಯರನ್ನು ಗುರುತಿಸಲು ಪ್ರಯತ್ನಿಸಿದಾಗ ಸಲಾಹ್ ಉದ್ದೀನ್ ಶೋಯೆಬ್ ಚೌಧರಿ ಅವರು ಹಂಚಿಕೊಂಡಿರುವ ಸ್ಪಾನಿಷ್ ನಟಿಯ ಜೊತೆಗೆ ರಾಹುಲ್ ಗಾಂಧಿ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿ ಪೋಟೋ ಕುರಿತು ಮೊದಲು ಹುಡುಕಿದಾಗ. ಶೋಯೆಬ್ ಚೌಧರಿ ಅವರ ಆರೋಪ ಸುಳ್ಳಾಗಿರುವುದು ಕಂಡು ಬಂದಿದೆ.
ರಾಹುಲ್ ಗಾಂಧಿಯವರು 2017ರ ಅಮೇರಿಕಾ ಪ್ರವಾಸದ ವೇಳೆ ಸ್ಪೇನ್ ನಟಿ ನಥಾಲಿಯಾ ರಾಮೋಸ್ ಅವರು ರಾಹುಲ್ ಗಾಂಧೀಯವರನ್ನು ಭೇಟಿ ಆಗಿರುವ ಪೋಟೋವನ್ನು ತಮ್ಮ ಇನ್ಸಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಆ ಬಳಿಕ ರಾಹುಲ್ ಗಾಂಧಿ ಮತ್ತು ನಥಾಲಿಯಾ ರಾಮೋಸ್ ಅವರು ಪ್ರೀತಿಯಲ್ಲಿದ್ದಾರೆ ಎಂದು ವದಂತಿಗಳನ್ನು ಹಬ್ಬಿಸಲಾಗಿತ್ತು. ಈ ಕುರಿತು ಕ್ವಿಂಟ್, ಫ್ಯಾಕ್ಟ್ಲಿ, ಬೂಮ್ ಮತ್ತು ಆಲ್ಟ್‌ನ್ಯೂಸ್ ಸೇರಿದಂತೆ ಅನೇಕ ಸತ್ಯಶೋಧನ ಮಾಧ್ಯಮಗಳು ಈ ವೈರಲ್ ಪೋಟೋದ ಸತ್ಯಾಸತ್ಯೆಯನ್ನು ವರದಿ ಮಾಡಿದ್ದರು.
ಇನ್ನೂ ರಾಹುಲ್ ಗಾಂಧಿಯವರ ಜೊತೆಗೆ ನಗುತ್ತಾ ಮಾತನಾಡುತ್ತಿರುವ ಮಹಿಳೆ ಬಾಲಿವುಡ್‌ನ ಪ್ರಸಿದ್ಧ ನಟ ಶಾರುಕ್ ಖಾನ್ ಅವರ ಧರ್ಮಪತ್ನಿ ಮತ್ತು ನಿರ್ಮಾಪಕಿ ಗೌರಿ ಖಾನ್‌ರದ್ದಾಗಿದೆ. ಮತ್ತು ಎಡಭಾಗದಲ್ಲಿ ಕುಳಿತಿರುವ ಮಹಿಳೆಯನ್ನು ರಾಹುಲ್ ಜೊತೆಗೆ ಸಂಬಂಧ ಹೊಂದಿರುವ ಕೊಲಂಬಿಯಾದ ಜ್ವನೀತಾ ಎಂದು ವೈರಲ್ ಮಾಡಲಾಗಿತ್ತು. ಆದರೆ ಆಕೆಗೂ ರಾಹುಲ್ ಗಾಂಧಿಯವರಿಗೂ ಯಾವುದೇ ಸಂಬಂಧವಿಲ್ಲ ಮತ್ತು ಆಕೆಯ ಹೆಸರು ವೆರೋನಿಕ್ ಎಂದು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ರಾಹುಲ್ ಗಾಂಧಿಯವರು ತಿಳಿಸಿದ್ದರು ಎಂದು ಫ್ಯಾಕ್ಟ್ಲಿ ವರದಿ ಮಾಡಿದೆ.
2008ರ ಐಪಿಲ್ ಪಂದ್ಯವನ್ನು ವೀಕ್ಷಿಸಲು ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ವಾದ್ರಾ ಗಾಂಧಿ ಭೇಟಿ ನೀಡಿದ ಸಂದರ್ಭದಲ್ಲಿ ಗೌರಿ ಖಾನ್ ಅವರ ಜೊತೆಗೆ ಕ್ರಿಕೆಟ್ ವೀಕ್ಷಿಸಿದ ಸಂದರ್ಭದ ಪೋಟೋ ಇದಾಗಿದೆ. ಮೂಲ ಚಿತ್ರದಲ್ಲಿ ಪ್ರಿಯಂಕಾ ಗಾಂಧಿ ಇರುವುದನ್ನು ಸಹ ನೀವು ನೋಡಬಹುದು.
ಇನ್ನೂ ಶೋಯೆಬ್ ಚೌಧರಿ ತಮ್ಮ ಲೇಖನದಲ್ಲಿ ಹಂಚಿಕೊಂಡಿರುವ ನಟಿ ಟಟಿಯಾನಾ ರಾಮೋಸ್ ಪೋಟೋವನ್ನು “ಸ್ಪ್ಯಾನಿಷ್ ನಟಿ ನಥಿಯಾನಾ ರಾಮೋಸ್ ಅವರು “ರಾಜಕೀಯ ಶಕ್ತಿ ಕೇಂದ್ರ” ಆಗಿ ಮಾರ್ಪಟ್ಟಿದ್ದಾರೆ, ಯುಎಸ್ ಕ್ಯಾಪಿಟಲ್ ಮತ್ತು ಇತರೆಡೆಗಳಲ್ಲಿ ಪ್ರಭಾವಿ ವ್ಯಕ್ತಿಗಳೊಂದಿಗೆ ಮತ್ತು ಮಾಧ್ಯಮ ಸಂಸ್ಥೆಗಳೊಂದಿಗೆ ನೆಟ್‌ವರ್ಕಿಂಗ್ ಮಾಡಲು ರಾಹುಲ್ ಗಾಂಧಿಯವರ “ಪರಿಣಾಮಕಾರಿ ಸಾಧನ” ವಾಗಿಯೂ ಕೆಲಸ ಮಾಡುತ್ತಾರೆ.” ಎಂದು ಆರೋಪಿಸಿದ್ದಾರೆ.
ನಾವು ರಿವರ್ಸ್ ಇಮೇಜ್‌ನಲ್ಲಿ ಈ ನಟಿಯ ಪೋಟೋವನ್ನು ಹುಡುಕಿದಾಗ ಟಟಿಯಾನಾ ರಾಮೋಸ್ ಎಂಬ ಮಾಡೆಲ್ ಪೋಟೋ ಇದು ಎಂದು ತಿಳಿದು ಬಂದಿದೆ. ಇವರಿಗೂ ರಾಹುಲ್ ಗಾಂಧಿಗೂ ಯಾವುದೇ ರೀತಿಯ ಸಂಬಂಧ ಇಲ್ಲದಿರುವುದು ತಿಳಿದು ಬಂದುದೆ.
ಇನ್ನೂ ಸಲಾಹ್ ಉದ್ದೀನ್ ಶೋಯೆಬ್ ಚೌಧರಿ ಅವರ ಎಕ್ಸ್ ಖಾತೆಯಲ್ಲಿ ವೀಕ್ಷಿಸಿದರೆ ಇವರು ಉದ್ದೇಶಪೂರ್ವಕವಾಗಿ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಸೇರಿದಂತೆ ನೆಹರು ಕುಟುಂಬದ ಕುರಿತು ಇಂತಹ ಸಾಕಷ್ಟು ಸುಳ್ಳು ಸುದ್ಧಿಗಳನ್ನು ನಿರಂತರವಾಗಿ ಹಂಚಿಕೊಂಡಿರುವುದು ಕಂಡು ಬಂದಿದೆ.
ಆದ್ದರಿಂದ ರಾಹುಲ್ ಗಾಂಧಿಯವರು ಅನೇಕ ಯುವತಿಯರ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದಾರೆ ಮತ್ತು ಅವರಿಗೆ ಇಬ್ಬರು ಮಕ್ಕಳಿದ್ದಾರೆ ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ. ಇಂತಹ ಸುಳ್ಳು ವರದಿಗಳನ್ನು ಓದುವಾಗ ಅವರು ತಮ್ಮ ಹೇಳಿಕೆಯನ್ನು ಸಮರ್ತಿಸಿಕೊಳ್ಳಲು ಯಾವ ರೀತಿಯ ಆಧಾರವನ್ನು ನೀಡಿದ್ದಾರೆ ಮತ್ತು ಅದು ಎಷ್ಟು ಸತ್ಯವಿದೆ ಎಂದು ಖಚಿತಪಡಿಸಿಕೊಳ್ಳಿ. ಈ ಹಿಂದೆಯೂ ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಈ ವಿಷಯದ ಕುರಿತು ಸತ್ಯಶೋಧನೆ ನಡೆಸಿ ಸತ್ಯವನ್ನು ತಿಳಿಸಿತ್ತು. ಆ ವರದಿಯನ್ನು ನೀವು ಇಲ್ಲಿ ಓದಬಹುದು.
ಇದನ್ನು ಓದಿ: ಸರ್ಕಾರಿ ಕೆಲಸ ತೊರೆಯುವಂತೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ