Fact Check | ಸರ್ಕಾರಿ ಕೆಲಸ ತೊರೆಯುವಂತೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂಬುದು ಸುಳ್ಳು

“ಬಾಂಗ್ಲಾದೇಶದಲ್ಲಿ ಸದ್ಯದ ಮಟ್ಟಿಗೆ ಮಧ್ಯಂತರ ಸರ್ಕಾರ ರಚನೆಯಾದರೂ ಅಲ್ಲಿನ ಹಿಂದೂಗಳ ಪರಿಸ್ಥಿತಿ ಇಂದಿಗೂ ಶೋಚನೀಯವಾಗಿದೆ. ಅದರಲ್ಲೂ ಹಲವು ದುರುಳರು ಹಿಂದೂಗಳ ಮೇಲೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕಿರುಕುಳವನ್ನು ನೀಡುತ್ತಿದ್ದಾರೆ. ಈಗ ಬಾಂಗ್ಲಾದೇಶದ ಸರ್ಕಾರಿ ಹುದ್ದೆಯಲ್ಲಿರುವ ಹಿಂದೂಗಳಿಗೆ ರಾಜೀನಾಮೆಯನ್ನು ನೀಡುವಂತೆ ಬೆದರಿಕೆ ಹಾಕುತ್ತಿದ್ದಾರೆ. ಈ ಬಗ್ಗೆ ಯಾಕೆ ಯಾರು ಮಾತನಾಡುತ್ತಿಲ್ಲ ಎಂಬುದು ಅರ್ಥವಾಗುತ್ತಿಲ್ಲ” ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಅನ್ನು ಹಂಚಿಕೊಳ್ಳಲಾಗುತ್ತಿದೆ.

ಇನ್ನು ಕೆಲವರು “ಬಾಂಗ್ಲಾದೇಶದಲ್ಲಿ ಮುಸ್ಲಿಮರು ಹಿಂದೂಗಳನ್ನು ಸರ್ಕಾರಿ ಕೆಲಸದಿಂದ ಒತ್ತಾಯಪೂರ್ವಕವಾಗಿ ರಾಜೀನಾಮೆ ಕೊಡಿಸುತ್ತಿದ್ದಾರೆ” ಎಂದು ಆಕ್ರೋಶವನ್ನು ಹೊರ ಹಾಕುವುದರ ಜೊತೆಗೆ, ಮುಸಲ್ಮಾನ ಸಮುದಾಯದ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಹೀಗೆ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ಗಳನ್ನು ಸಾಕಷ್ಟು ಮಂದಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಶೇರ್ ಕೂಡ ಮಾಡುತ್ತಿದ್ದಾರೆ. ವೈರಲ್ ಆಗಿರುವ ಈ ವಿಡಿಯೋ ಎಷ್ಟರಮಟ್ಟಿಗೆ ನೈಜ ಅಂಶಗಳನ್ನು ಹೊಂದಿದೆ ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ..

ಫ್ಯಾಕ್ಟ್‌ಚೆಕ್

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿರುವ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ವೈರಲ್ ವಿಡಿಯೋವಿನ ವಿವಿಧ ಕೀ ಫ್ರೇಮ್‌ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಾಟ ನಡೆಸಲಾಯಿತು. ಈ ವೇಳೆ ನಮಗೆ ಹಲವಾರು ವರದಿಗಳು ಪತ್ತೆಯಾಗಿದ್ದು, ಅವುಗಳಲ್ಲಿ ಈ ಘಟನೆ ಕಬಿ ನಜ್ರುಲ್ ಕಾಲೇಜಿನಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ. ಹೀಗಾಗಿ ಘಟನೆಗೆ ಸಂಬಂಧ ಪಟ್ಟಂತೆ ಇನ್ನಷ್ಟು ಹುಡುಕಿದಾಗ ಕೆಲವು ವರದಿಗಳು ಕಂಡು ಬಂದಿವೆ.

ಆ ವರದಿಗಳ ಪ್ರಕಾರ ಅವಾಮಿ ಲೀಗ್ ನ ಪ್ರಮುಖ ಸದಸ್ಯೆಯು ಆಗಿರುವ ಅಮೀನಾ ಬೇಗಂ ಅವರು ಹಲವಾರು ಅಕ್ರಮಗಳು ಮತ್ತು ಭ್ರಷ್ಟಾಚಾರದ ಆರೋಪವನ್ನು ಹೊತ್ತಿದ್ದರು. ಹೆಚ್ಚುವರಿಯಾಗಿ ಪ್ರಾಂಶುಪಾಲರ ರಾಜೀನಾಮೆಯ ನಂತರ ಕಬಿ ನಜ್ರುಲ್ ಸರ್ಕಾರಿ ಕಾಲೇಜಿನ ಶಿಕ್ಷಕರ ಮಂಡಳಿಯನ್ನು ಸಹ ವಿಸರ್ಜಿಸಲಾಯಿತು. ಅವಾಮಿ ಪರ ಶಿಕ್ಷಕರೇ ಪರಿಷತ್ತಿನ ಸದಸ್ಯರಾಗಿದ್ದರಿಂದ, ವಿದ್ಯಾರ್ಥಿಗಳು ಕೂಡಲೇ ಶಿಕ್ಷಕರ ಪರಿಷತ್ ವಿಸರ್ಜನೆಗೆ ಆಗ್ರಹಿಸಿ ಚಳುವಳಿಯನ್ನು ಆರಂಭಿಸಿದ್ದರು. ಬಳಿಕ ಕಾಲೇಜು ಉಪಪ್ರಾಂಶುಪಾಲ ಪ್ರೊಫೆಸರ್ ಸಲೇಹ್‌ ಅಹಮದ್ ಫಕೀರ್ ಶಿಕ್ಷಕರ ಪರಿಷತ್ತನ್ನು ವಿಸರ್ಜಿಸುವಂತೆ ಒತ್ತಾಯಿಸಿದರು ಎಂಬುದು ವರದಿಯಲ್ಲಿ ಕಂಡುಬಂದಿದೆ. ಆದರೆ ಇದೇ ವಿಡಿಯೋವನ್ನು ಕಿಡಿಗೇಡಿಗಳು ತಿರುಚಿ ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದಾರೆ

ಒಟ್ಟಾರೆಯಾಗಿ ಹೇಳುವುದಾದರೆ ಬಾಂಗ್ಲಾದೇಶದ ಸರ್ಕಾರಿ ಹುದ್ದೆಯಲ್ಲಿರುವ ಹಿಂದುಗಳನ್ನು ರಾಜೀನಾಮೆ ನೀಡುವಂತೆ ಅಲ್ಲಿನ ಬಹುಸಂಖ್ಯಾತರಾದ ಮುಸಲ್ಮಾನರು ಒತ್ತಾಯಿಸಿದ್ದಾರೆ ಎಂಬುದು ಸುಳ್ಳು. ವೈರಲ್ ವಿಡಿಯೋ ಕಾಲೇಜು ಪ್ರಾಂಶುಪಾಲರು ಮತ್ತು ವಿದ್ಯಾರ್ಥಿಗಳ ನಡುವಿನ ಸಂಘರ್ಷವನ್ನು ಉಲ್ಲೇಖಿಸುತ್ತದೆಯೇ ವಿನಹ ಅಲ್ಲಿ ಯಾವುದೇ ಕೋಮು ಆಯಾಮವಿಲ್ಲ‌. ಆದರೆ ಕಿಡಿಗೇಡಿಗಳು ಈ ಘಟನೆಯ ವೀಡಿಯೋವನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದಾರೆ. ಈ ರೀತಿಯ ಆಧಾರರಹಿತ ಸುದ್ದಿಗಳನ್ನು ಹಂಚಿಕೊಳ್ಳುವುದು ಅಪರಾಧವಾಗಿದೆ.


ಇದನ್ನೂ ಓದಿ : Fact Check | ಧ್ವಜಸ್ತಂಭದಲ್ಲಿ ಸಿಲುಕಿದ್ದ ರಾಷ್ಟ್ರಧ್ವಜವನ್ನು ಹಕ್ಕಿಯೊಂದು ಬಿಡಿಸಿದೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *