Fact Check | ಮಗಳನ್ನು ಅತ್ಯಾಚಾರಗೈದ ಆರೋಪಿಯನ್ನು ತಾಯಿ ಕೊಲ್ಲುವ ವಿಡಿಯೋ ನಿಜವಲ್ಲ, ಸಿನಿಮಾ ದೃಶ್ಯವಾಗಿದೆ

“ಈ ವಿಡಿಯೋ ನೋಡಿ ಜರ್ಮನಿಯ ಮಹಿಳೆ ಮರಿಯಾನ್ನೆ ಬ್ಯಾಚ್ಮಿಯರ್ ತನ್ನ ಏಳು ವರ್ಷದ ಮಗಳನ್ನು ಲೈಂಗಿಕವಾಗಿ ದೌರ್ಜನ್ಯ ಎಸಗಿ ಕೊಂದ ವ್ಯಕ್ತಿಯನ್ನು ನ್ಯಾಯಾಲಯದಲ್ಲಿ ಶೂಟ್ ಮಾಡಿದ್ದಾರೆ.  ಅವರ ಆಕ್ರೋಶ ಮತ್ತು ತನ್ನ ಮಗಳ ಸಾವಿಗೆ ನ್ಯಾಯ ಕೊಡಸಲೇ ಬೇಕು ಎನ್ನುವ ಉದ್ದೇಶದಿಂದ ಅವರು ತೆಗೆದುಕೊಂಡ ಈ ನಿರ್ಧಾರದಿಂದ ಅಲ್ಲಿ ಮಹತ್ತರವಾದ ಬದಲಾವಣೆ ಮತ್ತು ಪ್ರಬಲವಾದ ಕಾನೂನು ಜಾರಿಗೆ ಬಂದಿದೆ.” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಹೀಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ಬರಹವನ್ನು ಮತ್ತು ವಿಡಿಯೋವನ್ನು ನೋಡಿದ ಹಲವರು ಈ ರೀತಿಯಾಗಿ ಭಾರತದಲ್ಲಿ ಕೂಡ ಅತ್ಯಾಚಾರಿಗಳನ್ನು ಗುಂಡಿಟ್ಟು ಕೊಲ್ಲಬೇಕು. ಎಂದು ಪ್ರತಿಪಾದಿಸುತ್ತಿದ್ದರೆ, ಇನ್ನೂ ಕೆಲವರು ಆ ಮಹಿಳೆ ಸರಿಯಾದದ್ದನ್ನೇ ಮಾಡಿದ್ದಾಳೆ ಎಂದು ಬರೆದುಕೊಂಡು, ಮಹಿಳೆಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತ ಪಡಿಸುತ್ತಿದ್ದಾರೆ. ಹೀಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ವಿಡಿಯೋವಿನ ಅಸಲಿಯತ್ತು ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

Fact Check 

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ವಿಡಿಯೋ ಕುರಿತು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಪರಿಶೀಲನೆ ನಡೆಸಲು ಮುಂದಾಯಿತು. ಇದಕ್ಕಾಗಿ ವೈರಲ್‌ ವಿಡಿಯೋವಿನ ವಿವಿಧ ಕೀ ಫ್ರೇಮ್‌ಗಳನ್ನು ಬಳಸಿ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲನೆಯನ್ನು ನಡೆಸಲಾಯಿತು. ಈ ವೇಳೆ ನಮಗೆ  1984 ರ ಚಲನಚಿತ್ರ ನೋ ಟೈಮ್ ಫಾರ್ ಟಿಯರ್ಸ್: ದಿ ಬ್ಯಾಚ್‌ಮಿಯರ್ ಕೇಸ್‌ ಎಂಬ ಸಿನಿಮಾದ ದೃಶ್ಯಗಳು ಪತ್ತೆಯಾಗಿವೆ. 

ಇದನ್ನೇ ಆಧಾರವಾಗಿ ಬಳಸಿಕೊಂಡು ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಲಾಯಿತು. ಈ ವೇಳೆ ನಮಗೆ 17 ಅಕ್ಟೋಬರ್‌ 2014ರಂದು Der Fall Marianne Bachmeier keine Zeit für Tränen ( ಮರಿಯಾನ್ನೆ ಬ್ಯಾಚ್ಮಿಯರ್‌ ಪ್ರಕರಣವು ಕಣ್ಣೀರು ಹಾಕುವ ಸಮಯವಲ್ಲ) ಎಂಬ ಶೀರ್ಷಿಕೆಯ ಅಡಿಯಲ್ಲಿ ಅಪ್‌ಲೋಡ್‌ ಮಾಡಲಾದ ಸಿನಿಮಾವೊಂದು ಕಂಡು ಬಂದಿದ್ದು, ಅದಲ್ಲಿ 1:19:30 ಟೈಮ್‌ಸ್ಟ್ಯಾಂಪ್‌ನಲ್ಲಿ ವೈರಲ್‌ ಪೋಸ್ಟ್‌ನಲ್ಲಿ ತೋರಿಸಿದ ದೃಶ್ಯಗಳೇ ಕಂಡು ಬಂದಿವೆ.

ಈ ಕುರಿತು ಇನ್ನಷ್ಟು ಮಾಹಿತಿಗಾಗಿ ಪರಿಶೀಲನೆ ನಡೆಸಲು ಮಾಹಿತಿಗಾಗಿ IMDb ಯಲ್ಲಿ ಹುಡುಕಾಟ ನಡೆಸಿದೆವು. ಈ ವೇಳೆ ವೀಡಿಯೊದಲ್ಲಿ ನಟಿ ಹೊಂದಿಕೆಯಾಗಿರುವುದನ್ನು ಫೋಟೋಗಳು ಖಚಿತಪಡಿಸಿವೆ. ಹೀಗಾಗಿ ಮತ್ತಷ್ಟು ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಾಟ ನಡೆಸಿದಾಗ ವೈರಲ್ ವೀಡಿಯೊಗೆ ಹೊಂದಿಕೆಯಾಗುವ ಕ್ಲಿಪ್‌ನ ಮತ್ತೊಂದು ಕೋನವನ್ನು ನಾವು YouTube ನಲ್ಲಿ ಕಂಡುಕೊಂಡಿದ್ದೇವೆ. ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ವೈರಲ್‌ ವಿಡಿಯೋ ದಾರಿ ತಪ್ಪಿಸುವಂತಿದೆ ಎಂಬುದು ಸಾಬೀತಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುವ ರೀತಿಯಲ್ಲಿ ತಾಯಿಯೊಬ್ಬಳು ತನ್ನ ಮಗಳನ್ನು ಅಪಹರಿಸಿ ಅತ್ಯಾಚಾರ ಮಾಡಿ ಕೊಂದವನನ್ನು ನ್ಯಾಯಾಲಯದ ಅವರಣದಲ್ಲೇ ಗುಂಡಿಟ್ಟು ಕೊಂದಿದ್ದಾಳೆ ಎಂಬ ವಿಡಿಯೋ ಸಿನಿಮಾದ್ದಾಗಿದೆ. ಹಾಗೂ ಇದೇ ವಿಡಿಯೋವನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಯನ್ನು ಹರಡಲಾಗುತ್ತಿದೆ. ಹಾಗಾಗಿ ಇಂತಹ ಸುಳ್ಳು ಸುದ್ದಿಗಳನ್ನು ನಂಬುವ ಮುನ್ನ ಎಚ್ಚರವಹಿಸಿ.


ಇದನ್ನೂ ಓದಿ : Fact Check: ಆರ್ ಜಿ. ಕರ್ ಆಸ್ಪತ್ರೆಯ ಅತ್ಯಾಚಾರ ಪ್ರಕರಣವನ್ನು ತನಿಖೆ ಮಾಡುತ್ತಿದ್ದ ಸಿಬಿಐನ ಡಾ. ಆಕಾಶ್ ನಾಗ್ ಅವರು ರಾಜೀನಾಮೆ ನೀಡಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *