Fact Check | ವಿದೇಶದಲ್ಲಿ ಪ್ರಯಾಣಿಸುವ ಎಲ್ಲಾ ಭಾರತೀಯರಿಗೆ ತೆರಿಗೆ ಕ್ಲಿಯರೆನ್ಸ್ ಪ್ರಮಾಣಪತ್ರ ಅಗತ್ಯವಿದೆ ಎಂಬುದು ಸುಳ್ಳು

“ಅಕ್ಟೋಬರ್ 1, 2024 ರಿಂದ ವಿದೇಶಕ್ಕೆ ಪ್ರಯಾಣಿಸುವ ಮೊದಲು ಎಲ್ಲಾ ಭಾರತೀಯ ನಾಗರಿಕರು ಆದಾಯ ತೆರಿಗೆ ಕ್ಲಿಯರೆನ್ಸ್ ಪ್ರಮಾಣಪತ್ರವನ್ನು (ITCC) ಪಡೆಯಬೇಕು,  ಇಲ್ಲದಿದ್ದರೆ ಯಾವುದೇ ವಿದೇಶ ಪ್ರವಾಸವನ್ನು ಕೈಗೊಳ್ಳಲು ಯಾವ ಭಾರತೀಯನಿಂದಲೂ ಸಾಧ್ಯವಾಗುವುದಿಲ್ಲ. ಒಂದು ವೇಳೆ ತೆರಿಗೆ ಕ್ಲಿಯರೆನ್ಸ್‌ ಪಡೆಯದೆ  ವಿದೇಶ ಪ್ರವಾಸ ಮಾಡಲು ಯತ್ನಿಸಿದರೆ ಅವರಿಗೆ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ” ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದು ವೈರಲ್‌ ಆಗುತ್ತಿದೆ.

ಹೀಗೆ ಹೆಚ್ಚಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ಪೋಸ್ಟ್‌ ಅನ್ನು ನೋಡಿದ ಹಲವು ಸಾಮಾಜಿಕ ಜಾಲತಾಣದ ಬಳಕೆದಾರರು ತಮ್ಮ ಖಾತೆಗಳಲ್ಲಿ ಕೂಡ ಹಂಚಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ವಾಟ್ಸ್‌ಆಪ್‌ಗಳಲ್ಲಿ ಈ ಸಂದೇಶವನ್ನು ಹೆಚ್ಚಾಗಿ ಫಾರ್‌ವರ್ಡ ಮಾಡುತ್ತಿದ್ದು, ಅಲ್ಲಿ ಈ ಸಂದೇಶವನ್ನು ಓದಿದ ಹಲವರು ಇದು ನಿಜವಿರಬಹುದು ಎಂದು ಭಾವಿಸಿದ್ದಾರೆ. ಹೀಗಾಗಿ ಈ ಸಂದೇಶ ಜನ ಸಾಮಾನ್ಯರಲ್ಲಿ ಗೊಂದಲವನ್ನು ಮೂಡಿಸಿದೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಈ ಪೋಸ್ಟ್‌ನ ನೈಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ಪೋಸ್ಟ್‌ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ವೈರಲ್‌ ಪೋಸ್ಟ್‌ಗೆ ಸಂಬಂಧಿಸಿದಂತೆ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ನಾವು ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಿದೆವು ಈ ವೇಳೆ ನಮಗೆ 1961 ರ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 230 ರ ಅಡಿಯಲ್ಲಿ, ಪ್ರತಿಯೊಬ್ಬರೂ ಆದಾಯ ತೆರಿಗೆ ಕ್ಲಿಯರೆನ್ಸ್ ಪ್ರಮಾಣಪತ್ರವನ್ನು (ITCC) ಪಡೆಯುವ ಅಗತ್ಯವಿಲ್ಲ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (CBDT) ಸ್ಪಷ್ಟಪಡಿಸಿದೆ ಎಂಬುದು ತಿಳಿದು ಬಂದಿದೆ.

ಇದನ್ನೇ ಆಧಾರವಾಗಿ ಇರಿಸಿಕೊಂಡು ಇನ್ನಷ್ಟು ಹುಡುಕಾಟವನ್ನು ನಡೆಸಿದಾಗ ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ITCC ಅವಶ್ಯಕವಾಗಿದೆ ಎಂದಾಗ ಮಾತ್ರ ತೆರಿಗೆ ಕ್ಲಿಯರೆನ್ಸ್‌ ಕೇಳಬಹುದು. ಉದಾಹರಣೆಗೆ ಬ್ಬ ವ್ಯಕ್ತಿಯು ಗಮನಾರ್ಹ ಹಣಕಾಸಿನ ಅಕ್ರಮಗಳಲ್ಲಿ ತೊಡಗಿಸಿಕೊಂಡಾಗ ಮತ್ತು ಆದಾಯ ತೆರಿಗೆ ಕಾಯಿದೆ ಅಥವಾ ಸಂಪತ್ತು-ತೆರಿಗೆ ಕಾಯಿದೆಯಡಿ ತನಿಖೆಗೆ ಅವರ ಉಪಸ್ಥಿತಿಯು ಅತ್ಯಗತ್ಯವಾಗಿರುತ್ತದೆ ಈ ಸಂದರ್ಭ ಅಥವಾ ಇನ್ನೀತರೆ ಗಂಭೀರ ಆರ್ಥಿಕ ಅಪರಾಧದ ಸಾಧ್ಯತೆಗಳು ಹೆಚ್ಚಿದ್ದಾಗ ಕೇಳಬಹುದಾಗಿದೆ ಎಂಬ ಅಂಶ CBDT ಯ ಅಧಿಕೃತ ಪ್ರಕಟಣೆಯಿಂದ ತಿಳಿದು ಬಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ  ಅಕ್ಟೋಬರ್ 1, 2024 ರಿಂದ ವಿದೇಶಕ್ಕೆ ಪ್ರಯಾಣಿಸುವ ಮೊದಲು ಎಲ್ಲಾ ಭಾರತೀಯ ನಾಗರಿಕರು ಆದಾಯ ತೆರಿಗೆ ಕ್ಲಿಯರೆನ್ಸ್ ಪ್ರಮಾಣಪತ್ರವನ್ನು (ITCC) ಪಡೆಯಬೇಕು ಎಂಬುದು ಸುಳ್ಳಾಗಿದೆ. 1961 ರ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 230 ರ ಅಡಿಯಲ್ಲಿ, ಪ್ರತಿಯೊಬ್ಬರೂ ಆದಾಯ ತೆರಿಗೆ ಕ್ಲಿಯರೆನ್ಸ್ ಪ್ರಮಾಣಪತ್ರವನ್ನು (ITCC) ಪಡೆಯುವ ಅಗತ್ಯವಿಲ್ಲ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (CBDT) ಸ್ಪಷ್ಟಪಡಿಸಿದೆ. ಹಾಗಾಗಿ ಇಂತಹ ಸುಳ್ಳು ಸುದ್ದಿಗಳನ್ನು ಶೇರ್‌ ಮಾಡುವುದು ಅಪರಾಧವಾಗಿದೆ.


ಇದನ್ನೂ ಓದಿ : Fact Check | ಬಾಂಗ್ಲಾದೇಶದಲ್ಲಿ ಹಿಂದೂ ಪ್ರಾಧ್ಯಪಕನಿಂದ ಬಲವಂತವಾಗಿ ಕುರಾನ್‌ ಪಠಿಸಲಾಗಿದೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *