Fact Check | ಬಾಂಗ್ಲಾದೇಶದಲ್ಲಿ ಹಿಂದೂ ಪ್ರಾಧ್ಯಪಕನಿಂದ ಬಲವಂತವಾಗಿ ಕುರಾನ್‌ ಪಠಿಸಲಾಗಿದೆ ಎಂಬುದು ಸುಳ್ಳು

“ಬಾಂಗ್ಲಾದೇಶದಲ್ಲಿ ಹಿಂದೂ ಪ್ರಾಧ್ಯಪಕನಿಗೆ ಕುರಾನ್‌ ಓದುವಂತೆ ಒತ್ತಾಯಿಸಲಾಗುತ್ತಿದೆ. ಈ ವಿಡಿಯೋದಲ್ಲಿ ಎಷ್ಟರ ಮಟ್ಟಿಗೆ ಆ ಪ್ರಾಧ್ಯಪಕ ಒತ್ತಡಕ್ಕೆ ಬಿದ್ದಿದ್ದಾನೆ ಎಂಬುದನ್ನು ಗಮನಿಸಿ. ಬಾಂಗ್ಲಾದಲ್ಲಿ ಹಿಂದೂಗಳ ಪರಿಸ್ಥಿತಿಯ ಬಗ್ಗೆ ಯಾಕೆ ಯಾರೂ ಮಾತನಾಡುತ್ತಿಲ್ಲ.? ನಾವು ಇಂದು ಇದನ್ನು ನಿರ್ಲಕ್ಷ್ಯ ಮಾಡಿದರೆ ನಾಳೆ ಭಾರತದಲ್ಲಿಯೂ ಕೂಡ ಇದೇ ರೀತಿ ಆಗಬಹುದು ಎಚ್ಚರ ವಹಿಸಿ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಹೀಗೆ ಈ ಪೋಸ್ಟ್‌ ಅನ್ನು ನೋಡಿದ ಹಲವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲೂ ಕೂಡ ಹಂಚಿಕೊಂಡು ಬಾಂಗ್ಲಾದೇಶದ ನಾಗರಿಕರ ವಿರುದ್ಧ ಹಾಗೂ ಎಲ್ಲಾ ಮುಸಲ್ಮಾನರ ವಿರುದ್ಧ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ. ಇದು ಜನ ಸಾಮಾನ್ಯರಿಗೆ ಬಾಂಗ್ಲಾದೇಶದಲ್ಲಿನ ಪರಿಸ್ಥಿತಿಯ ಕುರಿತು ಹಲವು ರೀತಿಯ ಗುಮಾನಿಗಳು ಹಬ್ಬುವಂತೆ ಮಾಡಿದೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋವಿನ ಅಸಲಿಯತ್ತು ಏನೆಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಈ ಪೋಸ್ಟ್‌ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ವೈರಲ್‌ ವಿಡಿಯೋವಿನ ವಿವಿಧ ಕೀ ಫ್ರೇಮ್‌ಗಳನ್ನು ಬಳಸಿ, ನಾವು ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲನೆಯನ್ನು ನಡೆಸಿದೆವು. ಈ ವೇಳೆ ನಮಗೆ ಢಾಕಾ ಪೋಸ್ಟ್ ಎಂಬ ವೆರಿಫೈಡ್ ಯೂಟ್ಯೂಬ್‌ ಚಾನೆಲ್‌ನಲ್ಲಿ ಆಗಸ್ಟ್ 19ರಂದು  ಅಪ್ಲೋಡ್ ಮಾಡಿರುವ ವಿಡಿಯೋವೊಂದು ಕಂಡು ಬಂದಿದೆ. ಈ ಯುಟ್ಯೂಬ್‌ ಚಾನೆಲ್ ಪ್ರಕಾರ, ಢಾಕಾ ವಿಶ್ವವಿದ್ಯಾನಿಲಯದಲ್ಲಿ ರಂಝಾನ್ ತಿಂಗಳಲ್ಲಿ ಕುರ್‌ಆನ್‌ ಪಠಿಸಿದ ವಿದ್ಯಾರ್ಥಿಗಳ ವಿರುದ್ದ ಕ್ರಮ ಕೈಗೊಂಡಿದ್ದಕ್ಕೆ ಕಲಾ ವಿಭಾಗದ ಡೀನ್ ಪ್ರೊ.ಅಬ್ದುಲ್ ಬಶೀರ್ ಅವರ ರಾಜೀನಾಮೆಗೆ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ಆಗಸ್ಟ್ 19ರಂದು ಢಾಕಾ ಟ್ರಿಬ್ಯೂನ್.ಕಾಂ ಮಾಡಿರುವ ವರದಿ ಪ್ರಕಾರ, “ವಿದ್ಯಾರ್ಥಿ ಮೇಲೆ ಆಪಾದಿತ ಹಲ್ಲೆ ಮಾಡಿರುವುದು ಮತ್ತು ವಿದ್ಯಾರ್ಥಿಗಳು ಕುರಾನ್‌ ಪಠಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ಕ್ರಮ ಕೈಗೊಳ್ಳಲು ಮುಂದಾಗಿರುವುದಕ್ಕೆ ವಿದ್ಯಾರ್ಥಿ ಸಂಘಟನೆಯವರು ಪ್ರತಿಭಟಿಸಿದ ಹಿನ್ನೆಲೆ ಪ್ರೊ. ಅಬ್ದುಲ್ ಬಶೀರ್ ಅವರು ಢಾಕಾ ವಿವಿಯ ಕಲಾ ವಿಭಾಗದ ಡೀನ್ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಈ ವಿಡಿಯೋ ವರದಿಯಲ್ಲಿ ಉಲ್ಲೇಖವಾಗಿದೆ. 

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ ಹಿಂದೂ ಪ್ರಾಧ್ಯಪಕನನ್ನು ಬಾಂಗ್ಲಾದೇಶದ ವಿದ್ಯಾರ್ಥಿಗಳು ಕುರಾನ್‌ ಓದುವಂತೆ ಒತ್ತಾಯಿಸಿದ್ದಾರೆ ಎಂಬುದು ಸುಳ್ಳು. ಈ ಘಟನೆ ವಿದ್ಯಾರ್ಥಿಗಳ ಮೇಲೆ ಪ್ರೊ.ಅಬ್ದುಲ್ ಬಶೀರ್ ಎಂಬುವವರು ಹಲ್ಲೆ ನಡೆಸಿದ್ದರಿಂದ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತ ಪಡಿಸಿ ಪ್ರತಿಭಟಿಸಿರುವುದಕ್ಕೆ ಸಂಬಂಧಿಸಿದ್ದಾಗಿದೆ. ಹಾಗಾಗಿ ವೈರಲ್‌ ವಿಡಿಯೋದೊಂದಿಗೆ ಹಂಚಿಕೊಳ್ಳಲಾಗುತ್ತಿರುವ ಪ್ರತಿಪಾದನೆ ಸಂಪೂರ್ಣವಾಗಿ ಸುಳ್ಳಿನಿಂದ ಕೂಡಿದೆ.


ಇದನ್ನೂ ಓದಿ : Fact Check: ಮುಸ್ಲಿಂ ಯೂತ್ ಲೀಗ್‌ನ ಹಿಂದೂ ವಿರೋಧಿ ಘೋಷಣೆಗಳ ಹಳೆಯ ವೀಡಿಯೊವನ್ನು ಇತ್ತೀಚಿನದು ಎಂದು ಹಂಚಿಕೊಳ್ಳಲಾಗುತ್ತಿದೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *