Fact Check | ವಿಶೇಷ ಚೇತನ ನೃತ್ಯಗಾರನನ್ನು ಕಾರ್ಗಿಲ್‌ ಹಿರೋ ಎಂದು ತಪ್ಪಾಗಿ ಹಂಚಿಕೆ

“ಈ ವಿಡಿಯೋ ನೋಡಿ ಇದು ನಿಮಗೆ ಸಾಮಾನ್ಯ ವಿಡಿಯೋದಂತೆ ಭಾಸವಾಗಬಹುದು. ಇಲ್ಲಿ ಕಾಲುಗಳಿಲ್ಲದ ಯುವಕನೊಬ್ಬ ಮಹಿಳೆಯೊಂದಿಗೆ ಡಾನ್ಸ್ ಮಾಡುತ್ತಿದ್ದಾನೆ ಎಂಬುದು ನಿಮಗೆ ಮೊದಲಿಗೆ ಕಾಣಿಸುತ್ತದೆ. ಆದರೆ ಹೀಗೆ ಕಾಲುಗಳಿಲ್ಲದೆ ನೃತ್ಯ ಮಾಡುತ್ತಿರುವ ವ್ಯಕ್ತಿ ಸಾಮಾನ್ಯ ವ್ಯಕ್ತಿಯಲ್ಲ. ಇವರು ದೇಶಕ್ಕಾಗಿ ಅದರಲ್ಲೂ ಪ್ರಮುಖವಾಗಿ ಕಾರ್ಗಿಲ್ ಯುದ್ಧದಲ್ಲಿ ಕಾಲುಗಳನ್ನು ಕಳೆದುಕೊಂಡ ಮೇಜರ್ ವಿಕ್ರಂ. ಇವರು ತಮ್ಮ ಪತ್ನಿಯ ಜೊತೆಗೆ ನೃತ್ಯ ಮಾಡುತ್ತಿರುವ ವಿಡಿಯೋ ಇದಾಗಿದ್ದು, ಇವರ ಮಡದಿಗೊಂದು ಬಿಗ್ ಸೆಲ್ಯೂಟ್” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಈ ವಿಡಿಯೋ ನೋಡಿದ ಹಲವು ಮಂದಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ವಿಡಿಯೋವನ್ನು ಹಂಚಿಕೊಂಡು “ಮೇಜರ್ ವಿಕ್ರಂ ಅವರ ತ್ಯಾಗಕ್ಕೆ ನಾವೆಲ್ಲರೂ ತಲೆಬಾಗಲೇಬೇಕು” ಎಂದು ಬರೆದುಕೊಳ್ಳುತ್ತಿದ್ದಾರೆ. ಈ ವಿಡಿಯೋ ಈಗ ಸಾಕಷ್ಟು ವೈರಲ್ ಆಗುತ್ತಿದ್ದು, ಹಲವು ಮಂದಿ ಇದನ್ನು ನಿಜವೆಂದು ಭಾವಿಸಿದ್ದಾರೆ. ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಈ ವಿಡಿಯೋವಿನ ಅಸಲಿಯತ್ತು ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.

ಫ್ಯಾಕ್ಟ್‌ಚೆಕ್

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಈ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ವೈರಲ್ ವಿಡಿಯೋವಿನ ವಿವಿಧ ಕೀ ಪ್ರೇಮ್‌ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಪರಿಶೀಲನೆ ನಡೆಸಲಾಯಿತು. ಈ ವೇಳೆ ನಮಗೆ ಬ್ಲ್ಯಾಕ್‌ವೈಟ್ ಮ್ಯೂಸಿಕ್ ಎಂಬ ಯುಟ್ಯೂಬ್ ಚಾನೆಲ್‌ನಲ್ಲಿ ವಿಡಿಯೋವಿನ ಸಣ್ಣ ಕ್ಲಿಪ್ ಪತ್ತೆಯಾಗಿದೆ. ಆದರೆ ವಿಡಿಯೋದಲ್ಲಿರುವ ವ್ಯಕ್ತಿಗಳ ಕುರಿತು ಯಾವುದೇ ಮಾಹಿತಿಗಳು ಲಭ್ಯವಾಗಿರಲಿಲ್ಲ.

ಹೀಗಾಗಿ ಇನ್ನಷ್ಟು ಹುಡುಕಾಟವನ್ನು ನಡೆಸಿದಾಗ vinodthakur9268 ಎಂಬ instagram ಬಳಕೆದಾರರು ಹಂಚಿಕೊಂಡ ವಿಡಿಯೋ ಕಂಡು ಬಂದಿದೆ. ಇದರಲ್ಲಿ ಕಾಣಿಸಿಕೊಂಡವರು ವಿನೋದ್ ಠಾಕೂರ್ ಎಂಬುದು ತಿಳಿದು ಬಂದಿದ್ದು, ಈ ವಿಡಿಯೋವನ್ನು 6 ಏಪ್ರಿಲ್ 2024 ರಂದು ತಮ್ಮ instagram ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿನೋದ್ ಠಾಕೂರ್ ಅವರು ತಮ್ಮ ಪ್ರೊಫೈಲ್‌ನಲ್ಲಿ 2024ರ ಎಪಿಜೆ ಅಬ್ದುಲ್ ಕಲಾಂ ಪ್ರಶಸ್ತಿ ವಿಜೇತ ಎಂದು ಕಂಡುಬಂದಿದೆ

ಹೆಚ್ಚುವರಿಯಾಗಿ ಪರಿಶೀಲನೆ ನಡೆಸಿದಾಗ ಜೋಶ್ ಟಾಕ್ಸ್ ನ ಯೂಟ್ಯೂಬ್‌ ಚಾನೆಲ್‌ನಲ್ಲಿ ಠಾಕೂರ್ ಅವರೊಂದಿಗೆ ಸಂದರ್ಶನ ನಡೆಸಿದ ವಿಡಿಯೋವೊಂದು ಕಂಡುಬಂದಿದೆ. ಅವರನ್ನು ಬಿಹಾರದ ನೃತ್ಯಗಾರ ಮತ್ತು ಫಿಟ್ನೆಸ್ ಪ್ರಭಾವಶಾಲಿ ಎಂದು ಇಲ್ಲಿ ಉಲ್ಲೇಖಿಸಿರುವುದು ಸ್ಪಷ್ಟವಾಗಿದೆ.  ಈ ಸಂದರ್ಶನದಲ್ಲಿ ಠಾಕೂರ್ ಅವರ ಜೀವನಗಾತೆಯ ಕುರಿತು ಮಾಹಿತಿ ಇದ್ದು, ಅವರು ಕಾಲುಗಳಿಲ್ಲದೆಯೇ ಬೆಳೆದು ಬಂದ ಹಾದಿ ಹೇಗಿತ್ತು ಎಂದು ವಿವರಿಸಲಾಗಿದೆ. ಇಲ್ಲಿರುವ ಮಾಹಿತಿಯ ಪ್ರಕಾರ ಠಾಕೂರ್ ಅವರು ರಾಷ್ಟ್ರೀಯ ಪ್ಯಾರ ಪವರ್ ಲಿಫ್ಟಿಂಗ್ ಚಾಂಪಿಯನ್ ಆಗಿದ್ದಾರೆ ಮತ್ತು ವಿವಿಧ ನೃತ್ಯ ರಿಯಾಲಿಟಿ ಶೋ ಗಳಲ್ಲಿಯೂ ಕೂಡ ಕಾಣಿಸಿಕೊಂಡಿರುವ ಮಾಹಿತಿ ಇದೆ. ಹೀಗಾಗಿ ವೈರಲ್ ವಿಡಿಯೋದಲ್ಲಿ ಠಾಕೂರ್ ಅವರ ಕುರಿತು ಸುಳ್ಳು ಸುದ್ದಿಯನ್ನು ಹಬ್ಬಿಸಿರುವುದು ದೃಢಪಟ್ಟಿದೆ.

ಒಟ್ಟಾರೆಯಾಗಿ ಹೇಳುವುದಾದರೆ ವೈರಲ್ ವಿಡಿಯೋದಲ್ಲಿ ಹೇಳಿರುವಂತೆ ಮಹಿಳೆಯೊಂದಿಗೆ ಕಾಲುಳಿಲ್ಲದಿದ್ದರೂ ನೃತ್ಯ ಮಾಡುತ್ತಿರುವ ವ್ಯಕ್ತಿ ಕಾರ್ಗಿಲ್ ಯುದ್ಧದ ಹೀರೋ ಮೇಜರ್ ವಿಕ್ರಂ ಎಂಬುದು ಸುಳ್ಳು ಮತ್ತು ಆ ವ್ಯಕ್ತಿಯ ನಿಜವಾದ ಹೆಸರು ವಿನೋದ್ ಠಾಕೂರ್ ಎಂದು ತಿಳಿದುಬಂದಿದ್ದು, ಇವರು ರಾಷ್ಟ್ರೀಯ ಪ್ಯಾರ ಪವರ್ ಲಿಫ್ಟಿಂಗ್ ಚಾಂಪಿಯನ್ ಮತ್ತು ವಿವಿಧ ನೃತ್ಯ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿರುವ ನೃತ್ಯಗಾರ ಎಂದು ತಿಳಿದುಬಂದಿದೆ. ಹಾಗಾಗಿ ವೈರಲ್ ವಿಡಿಯೋ ಸಂಪೂರ್ಣವಾಗಿ ಸುಳ್ಳಿನಿಂದ ಕೂಡಿದೆ.


ಇದನ್ನೂ ಓದಿ : Fact Check: ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಬಲವಂತವಾಗಿ ಮತಾಂತರ ಮಾಡುತ್ತಿದ್ದಾರೆ ಎಂದು ಸಂಬಂಧವಿಲ್ಲದ ವೀಡಿಯೋ ಹಂಚಿಕೊಳ್ಳಲಾಗುತ್ತಿದೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *