Fact Check: ಪ್ರಧಾನಿ ಮೋದಿ ಇಸ್ಲಾಂ ವಿರೋಧಿ ಹೇಳಿಕೆ ನೀಡಿಲ್ಲ ಎಂಬುದು ಸುಳ್ಳು. ನೂರಕ್ಕೂ ಹೆಚ್ಚು ಬಾರಿ ಮುಸ್ಲಿಂ ಸಮುದಾಯದ ಕುರಿತು ದ್ವೇಷ ಭಾಷಣ ಮಾಡಿದ್ದಾರೆ

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿಯವರಿಗೆ ಸಂಬಂಧಿಸಿದ ರೀಲ್ಸ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ವೀಡಿಯೋದಲ್ಲಿ ವ್ಯಕ್ತಿಯೊಬ್ಬರು ” ಮೋದಿಯವರು ಒಂದೇ ಒಂದು ಬಾರಿಯೂ ಕೂಡ ಇಸ್ಲಾಂ ಧರ್ಮವನ್ನು ಮುಗಿಸಬೇಕು ಎಂದು ಹೇಳಲಿಲ್ಲ! ಆದರೂ ಕೂಡ, ಒಬ್ಬನೇ ಒಬ್ಬ ಮುಸಲ್ಮಾನನು ಮೋದಿಜಿಯವರಿಗೆ ಓಟು ನೀಡುವುದಿಲ್ಲ. ಆದರೆ ರಾಹುಲ್ ಗಾಂಧಿಯವರು ಅನೇಕ ಸಲ ಹೇಳಿದ್ದಾರೆ! ಹಿಂದೂ ಧರ್ಮವನ್ನು ನಾಶ ಪಡಿಸಬೇಕು ಎಂದು. ಆದರೂ ಸಹ ಹಿಂದುಗಳು ರಾಹುಲ್ ಗಾಂಧಿಯವರಿಗೆ ಓಟು ಹಾಕುತ್ತಾರೆ. ಇದರಿಂದಲೇ ಹಿಂದೂಗಳು 800 ವರ್ಷ ಗುಲಾಮರಾಗಿದ್ದರು.” ಎಂದು ಹೇಳಿದ್ದಾರೆ.

ಈ ವೀಡಿಯೋವನ್ನು ರಾಷ್ಟ್ರ ಧರ್ಮ ಎಂಬ ಬಲಪಂಥೀಯ ಮತ್ತು ಬಿಜೆಪಿ ಬೆಂಬಲಿತ ಗುಂಪು ಹಂಚಿಕೊಂಡಿದ್ದು ಈ ವೀಡಿಯೋವನ್ನು ಸಾಕಷ್ಟು ಜನರು ಹಂಚಿಕೊಳ್ಳುತ್ತಿದ್ದಾರೆ. ಅವುಗಳನ್ನು ನೀವು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಹಾಗಾದರೆ ನರೇಂದ್ರ ಮೋದಿಯವರು ಇಸ್ಲಾಂ ಧರ್ಮದ ಕುರಿತು ಮುಸ್ಲಿಮರ ಕುರಿತು ಒಂದೇ ಒಂದು ಬಾರಿಯೂ ದ್ವೇಷ ಭಾಷಣವನ್ನು ಮಾಡಿಲ್ಲವೇ? ಮತ್ತು ರಾಹುಲ್ ಗಾಂಧಿಯವರು ಹಿಂದೂ ಧರ್ಮವನ್ನು ನಾಶ ಪಡಿಸಬೇಕು ಎಂದು ಹೇಳಿದ್ದಾರೆಯೇ ಎಂದು ಈ ಲೇಖನದ ಮೂಲಕ ಪರಿಶೀಲಿಸೋಣ.

ಫ್ಯಾಕ್ಟ್‌ ಚೆಕ್:

ಈ ಕುರಿತು ನಾವು ಸತ್ಯಶೋಧನೆ ನಡೆಸಿದಾಗ ಪ್ರಧಾನಿ ನರೇಂದ್ರ ಮೋದಿಯವರು ಅನೇಕ ಬಾರಿ ತಮ್ಮ ಚುನಾವಣಾ ಪ್ರಚಾರದ ವೇಳೆ ಮುಸ್ಲಿಂ ಸಮುದಾಯದ ಕುರಿತು ಮತ್ತು ಮುಸ್ಲಿಂ ಧರ್ಮದ ಕುರಿತು ಅವಹೇಳನಕಾರಿ ಹೇಳಿಕೆಗಳು ಮತ್ತು ದ್ವೇಷ ಭಾಷಣವನ್ನು ಮಾಡಿರುವುದು ವರದಿಯಾಗಿದೆ. ಹಾಗೆಯೇ ರಾಹುಲ್ ಗಾಂಧಿಯವರು ಸಹ ಹಿಂದೂ ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ಬಿಜೆಪಿ ಆರೋಪಿಸಿರುವ ವರದಿಗಳು ಸಹ ಲಭ್ಯವಾಗಿವೆ. ಆದರೆ ಎಲ್ಲಿಯೂ ರಾಹುಲ್ ಗಾಂಧಿಯವರು ಹಿಂದೂ ಧರ್ಮವನ್ನು ನಾಶ ಪಡಿಸಬೇಕು ಎಂಬ ಹೇಳಿಕೆ ನೀಡಿರುವ ಕುರಿತು ಯಾವುದೇ ವರದಿಗಳು ಲಭ್ಯವಾಗಿಲ್ಲ. ಹಾಗೆಯೇ ನರೇಂದ್ರ ಮೋದಿ ಸಹ ಇಸ್ಲಾಂ ಧರ್ಮವನ್ನು ಮುಗಿಸಬೇಕು ಎಂಬ ನೇರ ಹೇಳಿಕೆ ನೀಡಿಲ್ಲ.

ನರೇಂದ್ರ ಮೋದಿಯವರು ಮುಸ್ಲಿಂ ಸಮುದಾಯದ ಕುರಿತು ಆಡಿರುವ ದ್ವೇಷಭಾಷಣಗಳನ್ನು ದೇಶದ ಮತ್ತು ಜಗತ್ತಿನ ಅನೇಕ ಮಾಧ್ಯಮಗಳು ವರದಿ ಮಾಡಿದ್ದು ಅವುಗಳನ್ನು ನೀವು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ನ್ಯೂಸ್‌ ಮಿನಟ್‌ ತನ್ನ ವರದಿಯಲ್ಲಿ “2024 ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದಾಗ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 173 ಭಾಷಣಗಳಲ್ಲಿ 110 ರಲ್ಲಿ ಮುಸ್ಲಿಂ ವಿರೋಧಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಅಂತರರಾಷ್ಟ್ರೀಯ ಸರ್ಕಾರೇತರ ಸಂಸ್ಥೆ ಹ್ಯೂಮನ್ ರೈಟ್ಸ್ ವಾಚ್ (ಎಚ್ಆರ್ಡಬ್ಲ್ಯೂ) ವರದಿ ಬಹಿರಂಗಪಡಿಸಿದೆ. ಗುಜರಾತ್, ತೆಲಂಗಾಣ, ರಾಜಸ್ಥಾನ, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಜಾರ್ಖಂಡ್‌ನಲ್ಲಿ ಪ್ರಧಾನಿ ಮೋದಿಯವರ ಭಾಷಣಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಅನೇಕ ಮಾಧ್ಯಮಗಳು ಬಿಜೆಪಿ ನಾಯಕರು ಸೇರಿದಂತೆ ಪ್ರಧಾನಿ ಮೋದಿಯವರ ಆಡಳಿತದಲ್ಲಿ ಮುಸ್ಲಿಂ ಮತ್ತು ಇತರ ಅಲ್ಪಸಂಖ್ಯಾತ ಸಮುದಾಯಗಳು ಭಯದಲ್ಲಿ ಬದುಕುವ ವಾತಾವರಣವನ್ನು ನಿರ್ಮಿಸಿದೆ. ಬಿಜೆಪಿ ಅಧಿಕಾರ ಹಿಡಿಯಲು ಮತ್ತು ಹಿಂದು ರಾಷ್ಟ್ರ ಮಾಡುವ ಸಲುವಾಗಿ ದ್ವೇಷದ ರಾಜಕೀಯವನ್ನು ಆಸ್ತ್ರವಾಗಿ ಬಳಸಿಕೊಂಡು ಕೋಮು ಜಗಳ, ನೈತಿಕ ಪೋಲಿಸ್‌ಗಿರಿ, ದಂಗೆಯಂತಹ ಸಾಮಾಜ ಘಾತುಕ ನಡೆಗಳಿಗೆ ಬೆಂಬಲ ಸೂಚಿಸುತ್ತಿದೆ ಎಂದು ನ್ಯೂರ್ಯರ್ಕ್‌ ಟೈಮ್ಸ್‌, ಸಿಎನ್‌ಎನ್‌ ಮತ್ತು ಟೈಮ್ಸ್‌ ತನ್ನ ವರದಿಗಳಲ್ಲಿ ತಿಳಿಸಿವೆ. ಮತ್ತು ಮೋದಿ ಸರ್ಕಾರದ ನಡೆಯನ್ನು ಟೀಕಿಸಿವೆ.

ಇನ್ನೂ ರಾಹುಲ್ ಗಾಂಧಿಯವರು ಹಿಂದು ಧರ್ಮದ ಕುರಿತು ನೀಡಿರುವ ವಿವಾದಾತ್ಮಕ ಹೇಳಿಕೆಗಳನ್ನು ಹುಡುಕಿದಾಗ, ರಾಹುಲ್ ಹಿಂದೂ ಧರ್ಮದ ಕುರಿತು ನೇರವಾಗಿ ಯಾವುದೇ ವಿವಾದಾತ್ಮಕ ಹೇಳಿಕೆ ನೀಡಿರದೇ ವಿರೋಧ ಪಕ್ಷವನ್ನು ಟೀಕಿಸಲು ಬಳಸಿದ ಹೇಳಿಕೆಗಳನ್ನು ಹಿಂದೂ ವಿರೋಧಿ ಹೇಳಿಕೆ ಎಂದು ವಿವಾದಕ್ಕೆ ಎಡೆ ಮಾಡಿಕೊಟ್ಟಿರುವುದು ಕಂಡು ಬರುತ್ತದೆ.

ಅವರು ನೀಡಿರುವ ಹಿಂದು ವಿರೋಧಿ ಹೇಳಿಕೆ ಮತ್ತು ವಿವಾದ ಗಮನಿಸಿದಾಗ 2024ರಲ್ಲಿಯೇ ಎರಡು ಬಾರಿ ಇಂತಹ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿರುವುದು ಕಂಡು ಬರುತ್ತದೆ.  ಮೊದಲಿಗೆ, ಮಾರ್ಚ್‌ ತಿಂಗಳಲ್ಲಿ ಭಾರತ್ ಜೋಡೋ ನ್ಯಾಯ ಯಾತ್ರೆಯ ಸಂದರ್ಭದಲ್ಲಿ ಮುಂಬೈನ ಒಂದು ರ್ಯಾಲಿಯಲ್ಲಿ ಜನರನ್ನು ಉದ್ದೇಶಿಸಿ “ಇಂತಹ ಶಕ್ತಿಗಳ ವಿರುದ್ಧ ಹೋರಾಡಬೇಕು” ಎಂದು ನೀಡಿದ ಹೇಳಿಕೆಯು, ನಂತರ ರಾಹುಲ್ ಗಾಂಧಿಯವರು “ಶಕ್ತಿ(ದೇವಿ)ಯ ವಿರುದ್ಧ ಹೋರಾಡಬೇಕು” ಎಂದು ಹೇಳಿಕೆ ನೀಡಿದ್ದಾರೆ ಎಂದು ಬಿಜೆಪಿ ನಾಯಕರು ಟೀಕಿಸಿದ್ದರು.

ನಂತರ ಜುಲೈ 1 ಎಂದು ಲೋಕಸಭೆಯ ಅಧಿವೇಶನದ ಮೊದಲನೇ ದಿನ ವಿರೋಧ ಪಕ್ಷದ ನಾಯಕನಾಗಿ ರಾಹುಲ್ ಗಾಂಧಿಯವರು ಮಾಡಿದ ಭಾಷಣ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು ಕಾರಣ ಈ ಭಾಷಣದಲ್ಲಿ ಅವರು ನಿಜವಾದ ಹಿಂದೂಗಳು ಎಂದು ಹೇಳಿಕೊಳ್ಳುವವರು ಹಿಂಸೆಯಲ್ಲಿ ತೊಡಗಿದ್ದಾರೆ ಎಂದು ಹೇಳಿದ್ದರು.

ಶಕ್ತಿ ಹೇಳಿಕೆಯ ಕುರಿತು:

ರಾಹುಲ್ ಗಾಂಧಿಯವರು ಭಾರತ್ ಜೋಡೋ ನ್ಯಾಯ ಯಾತ್ರೆಯ ಸಂದರ್ಭದಲ್ಲಿ ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ದೊಡ್ಡ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ರಾಹುಲ್, “ಹಿಂದಿಯಲ್ಲಿ ‘ಶಕ್ತಿ’ (ಶಕ್ತಿ) ಎಂಬ ಪದವಿದೆ. ನಾವು ‘ಶಕ್ತಿ’ (ರಾಜ್ಯದ ಶಕ್ತಿ) ವಿರುದ್ಧ ಹೋರಾಡುತ್ತಿದ್ದೇವೆ. ಪ್ರಶ್ನೆ ಏನೆಂದರೆ, ಆ ‘ಶಕ್ತಿ’ ಎಂದರೇನು ಮತ್ತು ಅದು ನಮಗೆ ಏನನ್ನು ನೀಡುತ್ತದೆ?” ಎಂದು ಹೇಳಿಕೆ ನೀಡಿದ್ದರು. ಅವರು ಭಾಷಣದ ಈ ಹೇಳಿಕೆಯ ತುಣುಕನ್ನು ಮಾತ್ರ ಸಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡಲಾಗಿತ್ತು, ಮತ್ತು ಅನೇಕರು ರಾಹುಲ್ ಗಾಂಧಿ ಶಕ್ತಿಯ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಟೀಕಿಸಿದ್ದರು. 

ಇದಕ್ಕೆ ಪ್ರತಿಕ್ರಿಯೆ ನೀಡಿದ ರಾಹುಲ್ ಗಾಂಧಿಯವರು ” ನನ್ನ ಹೇಳಿಕೆಯನ್ನು ಸಂದರ್ಭದಿಂದ ಹೊರತೆಗೆಯಲಾಗಿದೆ. ನಾವು ಹೋರಾಡುತ್ತಿರುವ ‘ಶಕ್ತಿ’ ವ್ಯವಸ್ಥೆಯಲ್ಲಿ ಆಳವಾಗಿ ಆವರಿಸಿದೆ, ಪ್ರಧಾನಿ ಅದರ ಮುಖವಾಡ ಮಾತ್ರ, ಚುನಾವಣಾ ಆಯೋಗದಂತಹ ಸಾಂವಿಧಾನಿಕ ಸಂಸ್ಥೆಗಳನ್ನು ನಾಶಪಡಿಸಿದ್ದು, ಸಿಬಿಐ, ಇಡಿಯಂತಹ ಸಂಸ್ಥೆಗಳನ್ನು ಕೈಗೊಂಬೆಯನ್ನಾಗಿಸಿ ಇಡೀ ಸಾಂವಿಧಾನಿಕ ವ್ಯವಸ್ಥೆಯನ್ನು ಮಜಾ ಮಾಡಿದ್ದು ‘ಶಕ್ತಿ’.

ಈ ಶಕ್ತಿಯಿಂದಾಗಿ ಬಡ ಮತ್ತು ಅಂಚಿನಲ್ಲಿರುವ ರೈತರು ಹೆಚ್ಚು ದಯನೀಯ ಪರಿಸ್ಥಿತಿಗಳಿಗೆ ತಳ್ಳಲ್ಪಡುತ್ತಿದ್ದಾರೆ, ಆದರೆ ದೊಡ್ಡ ಕಾರ್ಪೊರೇಟ್‌ಗಳು ನೂರಾರು ಸಾವಿರಾರು ಕೋಟಿಗಳ ಬ್ಯಾಂಕ್ ಸಾಲ ಮನ್ನಾವನ್ನು ಪಡೆಯುತ್ತಿದ್ದಾರೆ” ಎಂದು ತಮ್ಮ ಎಕ್ಸ್‌ ಖಾತೆಯಲ್ಲಿ ಅವರ ಹೇಳಿಕೆ ವಿವಾದಕ್ಕೆ ತಿರುಗಿದ ಕುರಿತು ಸ್ಪಷ್ಟನೆ ನೀಡಿದ್ದರು. ಅವರು ಭಾಷಣದಲ್ಲಿ ಶಕ್ತಿ ಎಂಬ ಪದವನ್ನು “ದೇವಿ” ಎಂಬ ಅರ್ಥದಲ್ಲಿ ಬಳಸದೆ, “ದುಷ್ಟ ಶಕ್ತಿ” ಎನ್ನುವ ಅರ್ಥದಲ್ಲಿ ಮತ್ತು ಅದರ ವಿರುದ್ಧ ನಾವು ಹೋರಾಡಬೇಕಿದೆ ಎಂದಿದ್ದೇನೆ ಎಂದು ರಾಹುಲ್ ಗಾಂಧಿ ಸ್ಪಷ್ಟನೆ ನೀಡಿದ್ದಾರೆ. ಮತ್ತು ತಮ್ಮ ಭಾಷಣವನ್ನು ತಿರುಚಿ ವರದಿ ಮಾಡಿದ್ದಕ್ಕಾಗಿ, “ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವು ಸತ್ಯಗಳನ್ನು ವರದಿ ಮಾಡುವುದನ್ನು ನಿಲ್ಲಿಸಿದೆ ಮತ್ತು ಈ ‘ಶಕ್ತಿ’ಗೆ ವಂದನೆ ಸಲ್ಲಿಸುತ್ತೇನೆ” ಎಂದು ಹೇಳಿದರು.

ಇಂಡಿಯನ್ ಎಕ್ಸ್‌ಪ್ರೆಸ್‌ ವರದಿಯ ಪ್ರಕಾರ ರಾಹುಲ್ ಗಾಂಧಿಯವರ ಹೇಳಿಕೆಯನ್ನು ಮೊದಲು ವಿವಾದಕ್ಕೆ ತಿರುಗಿಸಿದವರು ಪ್ರಧಾನಿ ಮೋದಿಯವರು. “ರಾಹುಲ್ ಗಾಂಧಿ ಅವರ ಭಾರತ್ ಜೋಡೋ ನ್ಯಾಯ್ ಯಾತ್ರೆಯ ಮುಕ್ತಾಯದ ಅಂಗವಾಗಿ ಭಾನುವಾರ ಮುಂಬೈನಲ್ಲಿ ನಡೆದ ಬೃಹತ್ ಭಾರತ ರ್ಯಾಲಿಯ ಉತ್ಸಾಹದಲ್ಲಿ, ಕಾಂಗ್ರೆಸ್ ನಾಯಕ “ಶಕ್ತಿ” ಬಗ್ಗೆ ನೀಡಿದ ಹೇಳಿಕೆ ಬಹುತೇಕ ಗಮನಕ್ಕೆ ಬರಲಿಲ್ಲ. ಒಂದು ದಿನದ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ಮುಂಬರುವ ಚುನಾವಣಾ ಘರ್ಷಣೆಯನ್ನು “ಶಕ್ತಿಯನ್ನು ಪೂಜಿಸುವವರು ಮತ್ತು ಅದನ್ನು ನಾಶಪಡಿಸಲು ಬಯಸುವವರ ನಡುವಿನ ಘರ್ಷಣೆ” ಎಂದು ಚಿತ್ರಿಸಲು ಆ ಹೇಳಿಕೆಯನ್ನು ಕೈಗೆತ್ತಿಕೊಂಡರು.” ಎಂದು ತನ್ನ ವರದಿಯಲ್ಲಿ ತಿಳಿಸಿದೆ.

ಹಿಂದೂಗಳು ಹಿಂಸೆಯಲ್ಲಿ ತೊಡಗಿದ್ದಾರೆ ಹೇಳಿಕೆ ಕುರಿತು:

ರಾಹುಲ್ ಗಾಂಧಿಯವರು ವಿರೋಧ ಪಕ್ಷದ ನಾಯಕನಾಗಿ ಮಾಡಿದ ಮೊದಲ ಭಾಷಣದಲ್ಲಿ ಹಿಂದುಗಳ ವಿರುದ್ಧ ಮಾತನಾಡಿದ್ದಾರೆ ಎಂದು ಹಬ್ಬಿಸಲಾಗುತ್ತಿದೆ. ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಮತ್ತು ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು ರಾಹುಲ್ ಗಾಂಧಿಯವರ ಎಡಿಟ್‌ ವೀಡಿಯೋ ಹಂಚಿಕೊಂಡು ರಾಹುಲ್ ಹಿಂದೂ ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ಸುಳ್ಳನ್ನು ಹರಿಬಿಟ್ಟಿದ್ದರು.

ರಾಹುಲ್ ಗಾಂಧಿ ಸಂಸತ್ತಿನಲ್ಲಿ ಆಡಿದ ಮಾತುಗಳು ಹೀಗಿವೆ, “ಈ ದೇಶ ಅಹಿಂಸೆಯ ದೇಶ. ಈ ದೇಶ ಹೆದರಿಸುವ ದೇಶ ಅಲ್ಲ. ನಮ್ಮ ಎಲ್ಲಾ ಮಹಾಪುರುಷರು ಅಹಿಂಸೆಯ ಕುರಿತು ಮಾತನಾಡಿದ್ದಾರೆ. ಭಯ ದೂರವಾಗಿಸುವ ಬಗ್ಗೆ ಮಾತನಾಡಿದ್ದಾರೆ. ಹೆದರಬೇಡಿ, ಹೆದರಿಸಬೇಡಿ, ಭಗವಾನ್ ಶಿವ ಹೇಳುವುದೇನೆಂದರೆ ಹೆದರಬೇಡಿ, ಹೆದರಿಸಬೇಡಿ, ಅದಕ್ಕಾಗಿಯೇ ನಾವು ಅಭಯ ಮುದ್ರೆಯನ್ನು ತೋರಿಸುತ್ತೇವೆ. ಅಹಿಂಸೆಯ ಮಾತನಾಡುತ್ತಾರೆ, ತ್ರಿಶೂಲವನ್ನು ಭೂಮಿಯಲ್ಲಿ ಚುಚ್ಚಿ ಹೇಳುತ್ತಾರೆ. ಆದರೆ ಯಾವ ಜನರು ತಮ್ಮನ್ನು ತಾವು ಹಿಂದುಗಳು ಎಂದು ಕರೆದುಕೊಳ್ಳುತ್ತಿದ್ದಾರೆ ಅವರು 24 ಗಂಟೆ ಹಿಂಸೆ, ಹಿಂಸೆ, ಹಿಂಸೆ.. ದ್ವೇಷ, ದ್ವೇಷ, ದ್ವೇಷ, ಸುಳ್ಳು, ಸುಳ್ಳು.. ಸುಳ್ಳು . ಅಸಲಿಗೆ ನೀವು ಹಿಂದುಗಳೇ ಅಲ್ಲ” ಎಂದು ಆರೋಪಿಸಿದ್ದಾರೆ.

ಮುಂದುವರೆದು ” ಹಿಂದು ಧರ್ಮದಲ್ಲಿ ಸರಳವಾಗಿ ಬರೆದಿದ್ದಾರೆ. ಸತ್ಯದ ಪರವಾಗಿ ನಿಲ್ಲಬೇಕು, ಸತ್ಯಕ್ಕೆ ವಿಮುಖವಾಗಿರಬಾರದು, ಸತ್ಯಕ್ಕೆ ಹೆದರಿಕೊಳ್ಳಬಾರದು. ಅಹಿಂಸೆ ನಮ್ಮ ಪ್ರತೀಕವಾಗಿದೆ” ಎಂದು ಅಭಯ ಮುದ್ರೆಯನ್ನು ಬಿಜೆಪಿ ನಾಯಕರಿಗೆ ತೋರಿಸಿದ್ದಾರೆ.

ಇದಕ್ಕೆ ನರೇಂದ್ರ ಮೋದಿಯವರು ” ಹಿಂದುಗಳನ್ನು ಹಿಂಸಾತ್ಮಕ ಎಂದು ಕರೆಯುವುದು ಗಂಭಿರ ವಿಚಾರವಾಗಿದೆ” ಎಂದು ರಾಹುಲ್ ಗಾಂಧಿಯವರ ಮಾತುಗಳಿಗೆ ಆಕ್ಷೇಪ ವ್ಯಕ್ತಪಡಿಸಿದರು.

ನಂತರ ಪ್ರತಿಕ್ರಯಿಸಿದ ರಾಹುಲ್ ಗಾಂಧಿಯವರು “ಇಲ್ಲ, ಇಲ್ಲ.. ನರೇಂದ್ರ ಮೋದಿ ಅಂದ್ರೆ ಇಡೀ ಹಿಂದೂ ಸಮುದಾಯವಲ್ಲ, ಕೇವಲ ಬಿಜೆಪಿ ಅಂದ್ರೆ ಇಡೀ ಹಿಂದೂ ಸಮುದಾಯವಲ್ಲ ಮತ್ತು ಆರ್‌ಎಸ್‌ಎಸ್‌ ಅಂದ್ರೆ ಇಡೀ ಹಿಂದೂ ಸಮುದಾಯವಲ್ಲ” ಎಂದು ತೀವ್ರ ಟೀಕೆ ಮಾಡಿದ್ದಾರೆ.

ರಾಹುಲ್ ಗಾಂಧಿ ಯಾರು ಹಿಂದು ಧರ್ಮದ, ಹಿಂದುತ್ವದ ಹೆಸರು ಹೇಳಿಕೊಂಡು ಹಿಂಸೆಗೆ ಇಳಿಯುತ್ತಾರೋ ಅವರು ನಿಜವಾಗಿಯೂ ಹಿಂದುಗಳಲ್ಲ ಎಂದು ಹೇಳಿದ್ದಾರೆ. ಅವರು ಸಂಸತ್ತಿನಲ್ಲಿ ಆಡಿರುವ ಮಾತುಗಳನ್ನು ಈ ಕೆಳಗೆ ಅನುವಾದದೊಂದಿಗೆ ನೋಡಬಹದು.

ಆದ್ದರಿಂದ ಈ ವೀಡಿಯೋ(ರೀಲ್ಸ್‌)ದಲ್ಲಿ ಪ್ರತಿಪಾದಿಸಿರುವಂತೆ ನರೇಂದ್ರ ಮೋದಿ ಇಸ್ಲಾಂ ಧರ್ಮವನ್ನು ಮುಗಿಸಬೇಕು ಎಂದು ಯಾವುದೇ ಹೇಳಿಕೆ ನೀಡಿಲ್ಲ ಆದರೆ ನೂರಕ್ಕೂ ಹೆಚ್ಚು ಬಾರಿ ಮುಸ್ಲಿಂ ಸಮುದಾಯದ ಕುರಿತು ದ್ವೇಷ ಭಾಷಣ ಮಾಡಿದ್ದಾರೆ. ಇನ್ನೂ ರಾಹುಲ್ ಗಾಂಧಿಯವರು ಹಿಂದೂ ಧರ್ಮವನ್ನು ಮುಗಿಸಬೇಕು ಎಂದು ಸಹ ಯಾವುದೇ ಹೇಳಿಕೆ ನೀಡಿಲ್ಲ. ಬದಲಾಗಿ ಅವರ ಕೆಲವು ಹೇಳಿಕೆಗಳು ಹಿಂದು ವಿರೋಧಿ ಎಂದು ವಿವಾದಕ್ಕೆ ಎಡೆ ಮಾಡಿಕೊಟ್ಟಿವೆ ಮತ್ತು ಅವರ ಅನೇಕ ವೀಡಿಯೋಗಳನ್ನು ಎಡಿಟ್‌ ಮಾಡಿ ದ್ವೇಷ ಭಾಷಣ ಮಾಡಿದ್ದಾರೆ ಎಂದು ಹಂಚಿಕೊಳ್ಳಲಾಗಿದೆ.


ಇದನ್ನು ಓದಿ: ರಾಹುಲ್ ಗಾಂಧಿ ಹೇಳಿಕೆಗಳನ್ನು ತಿರುಚಿ ಅವರ ಹಿಂದು ವಿರೋಧಿ ಹೇಳಿಕೆಗಳ ಪಟ್ಟಿ ಎಂದು ಹಂಚಿಕೊಳ್ಳಲಾಗುತ್ತಿದೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವ

Leave a Reply

Your email address will not be published. Required fields are marked *