Fact Check | ಬಾಂಗ್ಲದೇಶದಲ್ಲಿ ಹಿಂದೂ ಪ್ರಾಂಶುಪಾಲೆಯನ್ನು ಮರಕ್ಕೆ ಕಟ್ಟಿ ಹಾಕಲಾಗಿದೆ ಎಂಬುದು ಸುಳ್ಳು

“ಬಾಂಗ್ಲಾದೇಶದಲ್ಲಿ ಮಧ್ಯಂತರ ಸರ್ಕಾರ ರಚನೆಯಾದ ನಂತರ ಅಲ್ಲಿನ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಹಿಂದುಗಳು ಅಪಾಯದಲ್ಲಿ ಸಿಲುಕಿದ್ದಾರೆ. ಹಲವಾರು ಹಿಂದೂ ಅಲ್ಪಸಂಖ್ಯಾತರು ತಮ್ಮ ಸ್ಥಾನಗಳಿಗೆ ರಾಜೀನಾಮೆಯನ್ನು ನೀಡುತ್ತಿದ್ದಾರೆ. ನೀಡದಿದ್ದರೆ ಅವರು ಹಲವು ಬೆದರಿಕೆಗಳನ್ನು ಮತ್ತು ಹಲ್ಲೆಯಂತಹ ಸಂಕಷ್ಟಗಳನ್ನು ಎದುರಿಸಬೇಕಾಗಿದೆ. ಇದೀಗ ಇಂತಹದ್ದೇ ಪರಿಸ್ಥಿತಿಯನ್ನು ಅಜೀಂಪುರ ಸರ್ಕಾರಿ ಪ್ರಾಂಶುಪಾಲೆಯಾದ ಗೀತಾಂಜಲಿ ಬರುವಾ ಅವರು ಎದುರಿಸಿದ್ದಾರೆ. ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದಿದ್ದಕ್ಕೆ ವಿದ್ಯಾರ್ಥಿನಿಯರು ಸುತ್ತುವರೆದು ಅವರನ್ನು ಮರಕ್ಕೆ ಕಟ್ಟಿಹಾಕಿದ್ದಾರೆ.” ಎಂದು ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ

ಈ ವಿಡಿಯೋ ನೋಡಿದ ಹಲವರು “ಇಂದು ಬಾಂಗ್ಲಾದೇಶದಲ್ಲಿ ಹಿಂದೂಗಳು ಅನುಭವಿಸುತ್ತಿರುವ ನರಕ ಯಾತನೆಯಾಗಿದೆ. ಅಲ್ಲಿನ ಬಹುಸಂಖ್ಯಾತ ಮುಸಲ್ಮಾನರು ಹಿಂದೂ ಸರ್ಕಾರಿ ಅಧಿಕಾರಿಗಳನ್ನು ಒತ್ತಾಯಪೂರ್ವಕವಾಗಿ ರಾಜೀನಾಮೆ ಕೊಡಿಸುತ್ತಿದ್ದಾರೆ.” ಎಂದು ಬರೆದು ಹಲವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ. ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಈ ವಿಡಿಯೋವಿನ ಸತ್ಯಾಸತ್ಯತೆ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.

ಫ್ಯಾಕ್ಟ್‌ಚೆಕ್

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ವೈರಲ್ ವಿಡಿಯೋಗೆ ಸಂಬಂಧಪಟ್ಟಂತೆ ವಿವಿಧ ಕೀವರ್ಡ್‌ಗಳನ್ನು ಬಳಸಿ ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಲಾಯಿತು. ಈ ವೇಳೆ ನಮಗೆ 18 ಆಗಸ್ಟ್ 2024 ರಂದು ಪ್ರಕಟಗೊಂಡ ಹಲವು ವರದಿಗಳು ಕಂಡುಬಂದವು. ಈ ವರದಿಗಳ ಪ್ರಕಾರ ಪ್ರಾಂಶುಪಾಲೆ ಗೀತಾಂಜಲಿ ಬರುವಾ ಅವರ ವಿರುದ್ಧ ಪ್ರತಿಭಟನೆ ನಡೆದಿರುವುದು ನಿಜ. ಆದರೆ ಮರಕ್ಕೆ ಕಟ್ಟಿ ಹಾಕಿರುವ ಮಹಿಳೆ ಕಾಲೇಜಿಗೆ ಸಂಬಂಧಿಸಿದವಳಲ್ಲ ಎಂಬುದು ತಿಳಿದುಬಂದಿದೆ.

ಈ ಹಿನ್ನೆಲೆಯಲ್ಲಿ ಇನ್ನಷ್ಟು ಮಾಹಿತಿಗಾಗಿ ಹುಡುಕಾಟವನ್ನು ನಡೆಸಿದಾಗ ಅಜೀಂಪುರ ಸರ್ಕಾರಿ ಶಾಲಾ ಮತ್ತು ಕಾಲೇಜಿನ ವಿದ್ಯಾರ್ಥಿನಿಯರು ಶಿಕ್ಷಣ ಸಂಸ್ಥೆಯಲ್ಲಿನ ಭ್ರಷ್ಟಾಚಾರ, ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ವಿದ್ಯಾರ್ಥಿನಿಯರ ಮೇಲಿನ ದುರುವರ್ತನೆಗೆ ಸಂಬಂಧಿಸಿದಂತೆ ಪ್ರಾಂಶುಪಾಲೆ ಗೀತಾಂಜಲಿ ಬರುವಾ ಮತ್ತು ಇತರ ಕೆಲವು ಸಿಬ್ಬಂದಿಗಳ ರಾಜೀನಾಮೆಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ಹೀಗೆ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿರುವುದರಿಂದಾಗಿ ಪ್ರಾಂಶುಪಾಲರು ಸೇರಿದಂತೆ ಕೆಲ ಸಿಬ್ಬಂದಿಗಳು ರಾಜಿನಾಮೆಯನ್ನು ನೀಡಿದ್ದಾರೆ ಎಂಬುದು ತಿಳಿದುಬಂದಿದೆ.

ಇನ್ನು ಪ್ರತಿಭಟನೆಯ ವೇಳೆ ತಾನು ಈ ಶಿಕ್ಷಣ ಸಂಸ್ಥೆಯ ಹಳೆಯ ವಿದ್ಯಾರ್ಥಿನಿಯೆಂದು ಮಹಿಳೆಯೊಬ್ಬಳು ವಿದ್ಯಾರ್ಥಿನಿಯರ ನಡುವೆ ಬಂದಿದ್ದಾಳೆ. ಈ ವೇಳೆ ಆಕೆ ಪ್ರತಿಭಟನೆ ನಿರತ ವಿದ್ಯಾರ್ಥಿನಿಯರ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾಳೆ ಎಂದು ಭಾವಿಸಿ ವಿದ್ಯಾರ್ಥಿನಿಯರು ಆ ಮಹಿಳೆಯನ್ನು ಮರಕ್ಕೆ ಕಟ್ಟಿ ಹಾಕಿದ್ದಾರೆ. ಇದನ್ನು ಬಾಂಗ್ಲಾದೇಶದ ATN News ಸೇರಿದಂತೆ ಹಲವು ಮಾಧ್ಯಮಗಳು ಕೂಡ ವರದಿ ಮಾಡಿವೆ. ಇದೇ ವಿಡಿಯೋ ವೈರಲ್ ಆಗುತ್ತಿದ್ದು, ಹೀಗೆ ಮರಕೆ ಕಟ್ಟಿ ಹಾಕಿದ ಮಹಿಳೆಯನ್ನು ಅಜೀಂಪುರ ಸರ್ಕಾರಿ ಶಾಲೆ ಮತ್ತು ಕಾಲೇಜಿನ ಪ್ರಾಂಶುಪಾಲೆ ಗೀತಾಂಜಲಿ ಬರುವಾ ಎಂದು ಸುಳ್ಳು ಮಾಹಿತಿಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ ಎಂಬುದು ತಿಳಿದು ಬಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ ವೈರಲ್ ವಿಡಿಯೋದಲ್ಲಿ ಹಂಚಿಕೊಂಡಂತೆ ಗೀತಾಂಜಲಿ ಬರುವ ಎಂಬ ಪ್ರಾಂಶುಪಾಲೆಯನ್ನು ಮರಕ್ಕೆ ಕಟ್ಟಿ ಹಾಕಲಾಗಿದೆ ಎಂಬುದು ಸುಳ್ಳು. ವೈರಲ್ ವಿಡಿಯೋದಲ್ಲಿ ಮರಕ್ಕೆ ಕಟ್ಟಿ ಹಾಕಲಾದ ಮಹಿಳೆ ವಿದ್ಯಾರ್ಥಿನಿಯರ ಪ್ರತಿಭಟನೆಯ ಸಂದರ್ಭದಲ್ಲಿ ತಾನು ಶಿಕ್ಷಣ ಸಂಸ್ಥೆಯ ಹಳೆಯ ವಿದ್ಯಾರ್ಥಿನಿಯಂದು ನುಸುಳಿಕೊಂಡಿದ್ದಾಳೆ. ಈಕೆಯ ಮೇಲೆ ಅನುಮಾನಗೊಂಡ ವಿದ್ಯಾರ್ಥಿನಿಯರು ಆಕೆಯನ್ನು ಮರಕ್ಕೆ ಕಟ್ಟಿ ಹಾಕಿದ್ದಾರೆ. ಹಾಗಾಗಿ ವೈರಲ್ ವಿಡಿಯೋದಲ್ಲಿನ ಪ್ರತಿಪಾದನೆ ಸಂಪೂರ್ಣವಾಗಿ ಸುಳ್ಳಿನಿಂದ ಕೂಡಿದೆ


ಇದನ್ನೂ ಓದಿ : Fact Check: ಬಾಂಗ್ಲಾದೇಶದಲ್ಲಿ ದರ್ಗಾಕ್ಕೆ ಬೆಂಕಿ ಹಚ್ಚಿದ ವೀಡಿಯೊವನ್ನು ದೇವಾಲಯಕ್ಕೆ ಬೆಂಕಿ ಹಚ್ಚಿದ್ದಾರೆ ಎಂದು ಸುಳ್ಳು ಕೋಮು ಹೇಳಿಕೆಗಳೊಂದಿಗೆ ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *