Fact Check| ಗುಮಾಸ್ತ-ಟೈಪಿಸ್ಟ್ ನಡುವಿನ ಜಗಳಕ್ಕೆ ನ್ಯಾಯಾಧೀಶರ ಮೇಲೆ ಹಲ್ಲೆ ಎಂದು ವಿಡಿಯೋ ಹಂಚಿಕೊಳ್ಳಲಾಗುತ್ತಿದೆ

“ನ್ಯಾಯದ ಬಗ್ಗೆ ಅಸಮಾಧಾನಗೊಂಡ ವ್ಯಕ್ತಿಯೊಬ್ಬ ನ್ಯಾಯಾಲಯದಲ್ಲಿ ನ್ಯಾಯಾಧೀಶರನ್ನು ಥಳಿಸುತ್ತಿರುವ ದೃಶ್ಯ” ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದೆ.

ಈ ವಿಡಿಯೋದಲ್ಲಿ ಕೊಠಡಿಯೊಂದರಲ್ಲಿ ಇಬ್ಬರು ವ್ಯಕ್ತಿಗಳು ಹೊಡೆದಾಡಿಕೊಳ್ಳುತ್ತಿರುವುದು ಕಂಡು ಬಂದಿದ್ದು, ಒಬ್ಬ ವ್ಯಕ್ತಿ ಇನ್ನೊಬ್ಬನಿಗೆ ಕೋಲಿನಿಂದ ಥಳಿಸುತ್ತಿದ್ದಾನೆ. ಅಕ್ಕಪಕ್ಕದಲ್ಲಿ ನಿಂತಿದ್ದ ಜನರು ಇದನ್ನು ವಿಕ್ಷೀಸುತ್ತಿರುವುದು ಕಂಡು ಬರುತ್ತದೆ.

ಈ ಘಟನೆ ಹರಿಯಾಣದ ಯಮುನಾನಗರದ ಜಿಲ್ಲಾ ನ್ಯಾಯಾಲಯದಲ್ಲಿ ನಡೆದಿದ್ದಾಗಿ ಹೇಳಲಾಗಿದೆ.

ಆಗಾಗ ಸುಳ್ಳು ಸುದ್ದಿಗಳನ್ನು ಹರಡುವುದರಲ್ಲೇ ಖ್ಯಾತರಾದ ಬಿಜೆಪಿ ಬೆಂಬಲಿಗ ಜಿತೇಂದ್ರ ಪ್ರತಾಪ್ ಸಿಂಗ್ ಎಕ್ಸ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದು, “ಹರಿಯಾಣದ ಯಮುನಾನಗರ ಜಗಧ್ರಿ ಎಂಬಲ್ಲಿ ನ್ಯಾಯದಿಂದ ಅತೃಪ್ತನಾದ ವ್ಯಕ್ತಿ ಜಿಲ್ಲಾ ನ್ಯಾಯಾಧೀಶರೊಬ್ಬರಿಗೆ ಥಳಿಸುತ್ತಿರುವುದು” ಎಂದು ಉಲ್ಲೇಖಿಸಿದ್ದಾರೆ.

ಇನ್ನೊಂದು Omniscient Chautala ಎಂಬ ಎಕ್ಸ್ ಖಾತೆಯಲ್ಲಿಯೂ ಇದೇ ರೀತಿಯ ಸಂದೇಶದೊಂದಿಗೆ ವಿಡಿಯೋ‌ ಹಂಚಿಕೊಳ್ಳಲಾಗಿದೆ‌.

ಫ್ಯಾಕ್ಟ್‌ಚೆಕ್:

ಈ ಘಟನೆಗೆ ಸಂಬಂಧಿಸಿದಂತೆ ದೈನಿಕ್ ಭಾಸ್ಕರ್ ವೆಬ್‌ಸೈಟ್‌ನಲ್ಲಿ ವರದಿಯನ್ನು ಪ್ರಕಟಿಸಿದ್ದು, ಹರಿಯಾಣದ ಜಗಧ್ರಿ ನ್ಯಾಯಾಲಯದಲ್ಲಿ ಕೇವಲ 650 ರೂಪಾಯಿಗೆ ಸಂಬಂಧಿಸಿ ಟೈಪಿಸ್ಟ್ ರವಿ ಪ್ರತಾಪ್ ಮತ್ತು ಗುಮಾಸ್ತರಾದ ರಮೇಶ್ ಚಂದ್ ನಡುವೆ ಮಾರಾಮಾರಿ ನಡೆದಿದ್ದಾಗಿ ವರದಿ ಮಾಡಿದೆ. ರಮೇಶ್ ಚಂದ್‌ರವರು ಟೈಪಿಸ್ಟ್ ರವಿ ಪ್ರತಾಪ್‌ ಬಳಿ ಕ್ಲೈಮ್ ಅನ್ನು ಟೈಪ್ ಮಾಡಿಸಿದ್ದು, ಹಣ ನೀಡದೇ ಇದ್ದುದ್ದರಿಂದ ರವಿ ಹಲ್ಲೆ ನಡೆಸಿದ್ದಾನೆ. ಈ ಬಗ್ಗೆ ಸೆಕ್ಟರ್17ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಾಗಾಗಿ, ಈ ವೀಡಿಯೋದಲ್ಲಿ ಥಳಿಸಲ್ಪಟ್ಟಿರುವ ವ್ಯಕ್ತಿ ನ್ಯಾಯಾಧೀಶರೂ ಅಲ್ಲ ಅಥವಾ ಈ ವಿಷಯವು ನ್ಯಾಯದ ಅತೃಪ್ತಿಗೆ ಸಂಬಂಧಿಸಿದ್ದಲ್ಲ ಎಂಬುದು ಇದರಿಂದ ಸಾಬೀತಾಗಿದೆ. ಗುಮಾಸ್ತ ಮತ್ತು ಬೆರಳಚ್ಚುಗಾರನ ನಡುವೆ ನಡೆದ ಜಟಾಪಟಿಯನ್ನು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.


ಇದನ್ನು ಓದಿದ್ದೀರಾ? Fact Check: RBIನ ಮಾಜಿ ಗವರ್ನರ್ ಪುಸ್ತಕದಲ್ಲಿ ಕಾಂಗ್ರೆಸ್‌ ಆಡಳಿತದಲ್ಲಿ ಬ್ಯಾಂಕುಗಳ ಲೂಟಿಮಾಡಲಾಗಿದೆ ಎಂದು ಉಲ್ಲೇಖಿಸಿದ್ದಾರೆ ಎಂಬ ವೈರಲ್ ಹೇಳಿಕೆ ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *