“ಇದು ಉದಯಪುರದ ವಿದ್ಯಾರ್ಥಿಯೇ? ದೇವರಾಜ್ ನೀಡಿದ ಈ ಧಾರ್ಮಿಕ ಮತ್ತು ಅದ್ಭುತ ಪ್ರದರ್ಶನ ಅವರ ಸಾವಿಗೆ ಕಾರಣವಾಯಿತು??”. ಎಂಬ ಪ್ರಶ್ನೆಯೊಂದಿಗೆ ಯುವಕನೊನೊಬ್ಬ ವೇದಿಯಲ್ಲಿ ಹಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ಹಲವರು ಈತ ಹತ್ಯೆಗೀಡಾದ ದೇವರಾಜ್ ಎಂದು ಹೇಳುತ್ತಿದ್ದಾರೆ. ಇನ್ನೂ ಕೆಲವರು ಈ ಯುವಕನಿಗೆ ಹಿಂದುತ್ವದ ಮೇಲೆ ಅತೀವವಾದ ಅಭಿಮಾನವಿತ್ತು. ಅದು ಈತನ ಸಾವಿಗೆ ಕಾರಣವಾಗಿದೆ ಎಂದು ಅಂತರ್ಜಾಲದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ನೋಡಿದ ಹಲವರು ತಮ್ಮ ವೈಯಕ್ತಿಕ ಖಾತೆಗಳಲ್ಲಿ ತಮ್ಮದೇ ಆದ ಅಭಿಪ್ರಾಯಗಳನ್ನು ವ್ಯಕ್ತ ಪಡಿಸುತ್ತಿದ್ದು, ಇಸ್ಲಾಂ ಸಮುದಾಯದ ವಿರುದ್ಧ ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ. ಇನ್ನೂ ಕೆಲವರು ಕೋಮು ಸಂಘರ್ಷವನ್ನು ಉಂಟು ಮಾಡುವ ರೀತಿಯಾದ ಬರಹಗಳನ್ನು ಬರೆದು ವೈರಲ್ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ. ಇದು ಜನ ಸಾಮಾನ್ಯರಿಗೆ ತಪ್ಪು ಸಂದೇಶ ರವಾನೆಯಾಗುವಂತೆ ಮಾಡುತ್ತಿದೆ. ಹೀಗೆ ವಿವಿಧ ಅಭಿಪ್ರಾಯಗಳೊಂದಿಗೆ ಹಂಚಿಕೆಯಾಗುತ್ತಿರುವ ವಿಡಿಯೋ ಕುರಿತು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ವೈರಲ್ ವಿಡಿಯೋವಿನ ವಿವಿಧ ಕೀ ಫ್ರೇಮ್‌ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಪರಿಶೀಲನೆ ನಡೆಸಲಾಯಿತು. ಈ ವೇಳೆ ನಮಗೆ ಫೆಬ್ರವರಿ 2024 ರಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಇದೇ ರೀತಿಯ ವೀಡಿಯೊಗಳು ಕಂಡು ಬಂದಿದ್ದು. ಇದರ ಇನ್ನೀತರ ಹಲವು ಅಯಾಮಗಳು ವೈರಲ್ ವಿಡಿಯೋವಿನ ಕುರಿತು ಅನುಮಾನ ಮೂಡುವಂತೆ ಮಾಡಿತ್ತು.
ಈ ಹಿನ್ನೆಲೆಯಲ್ಲಿ ಇನ್ನಷ್ಟು ಹುಡುಕಾಟವನ್ನು ನಡೆಸಿದಾಗ ಈ ವಿಡಿಯೋ 26 ಜನವರಿ 2024 ರಂದು ಗುಜರಾತ್‌ನ ಸೂರತ್‌ನ ಗೋದಾದಾರದಲ್ಲಿನ ರಾಧೆ ಶ್ಯಾಮ್ ಶಾಲೆಗೆ ಸಂಬಂಧಿಸಿದ್ದಾಗಿದೆ ಎಂಬುದು ತಿಳಿದು ಬಂದಿದೆ. ಇನ್ನು ವಿಡಿಯೋದಲ್ಲಿ ಕಂಡು ಬಂದ ಬಾಲಕನ ಕುರಿತು ಫ್ಯಾಕ್ಟ್‌ಲೀ ಆಂಗ್ಲ ವೆಬ್‌ತಾಣ ಈ ವಿದ್ಯಾರ್ಥಿಯ ಕುರಿತು ಶಾಲಾ ಆಡಳಿತ ಮಂಡಳಿಯಲ್ಲಿ ವಿಚಾರಸಿದ್ದು, ಈ ವೇಳೆ ಈತ ಸುಮಿತ್ ಮೋಹನ್ ಲಾಲ್ ಪುರೋಹಿತ್ ಮತ್ತು ಅವನ ಜೊತೆಯಲ್ಲಿರುವ ಹುಡುಗಿ ಅವನ ಸಹೋದರಿ ಲತಾ ಪುರೋಹಿತ್ ಎಂದು ಶಾಲಾ ಆಡಳಿತ ಮಂಡಳಿ ದೃಢಪಡಿಸಿದೆ ಎಂಬುದು ತಿಳಿದು ಬಂದಿದೆ. ಈ ಅಧಿಕೃತ ಮಾಹಿತಿಯಿಂದಾಗಿ ವೈರಲ್ ವಿಡಿಯೋ ಸುಳ್ಳು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂಬುದು ಸಾಬೀತಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಈ ವೈರಲ್ ವೀಡಿಯೊದಲ್ಲಿ ವೇದಿಕೆಯ ಮೇಲೆ ಪ್ರದರ್ಶನ ನೀಡುತ್ತಿರುವ ಹುಡುಗ ಸೂರತ್‌ನ ಸುಮಿತ್ ಪುರೋಹಿತ್ ಮತ್ತು ಇತ್ತೀಚೆಗೆ ಉದಯಪುರದಲ್ಲಿ ಇರಿದ ದೇವರಾಜ್ ಅಲ್ಲ. ಹೀಗಾಗಿ ವೈರಲ್ ವಿಡಿಯೋ ಸಂಪೂರ್ಣವಾಗಿ ಸುಳ್ಳಿನಿಂದ ಕೂಡಿದ್ದು, ಜನ ಸಾಮಾನ್ಯರನ್ನು ದಾರಿ ತಪ್ಪಿಸಲು ಈ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಇಂತಹ ತಪ್ಪು ಮಾಹಿತಿಯಿರುವ ವಿಡಿಯೋಗಳನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ತಪ್ಪಾಗಿದೆ.
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.