Fact Check | ಅಕ್ರಮ ವಲಸಿಗ ರೋಹಿಂಗ್ಯಾಗಳು ರೈಲಿನಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದರು ಎಂಬುದು ಸುಳ್ಳು

“ರೈಲಿನಲ್ಲಿ ಪ್ರಯಾಣಿಕರ ಲಗೇಜ್ ಕದಿಯುತ್ತಿದ್ದ ಇಬ್ಬರು ಅಕ್ರಮ ರೋಹಿಂಗ್ಯಾಗಳು ಸಿಕ್ಕಿಬಿದ್ದಿದ್ದಾರೆ. ನಂತರ ಅವರನ್ನು ಪ್ರಯಾಣಿಕರು ಹಿಡಿದು ವಿಚಾರಿಸಿದ್ದು, ಆರೋಪಿಗಳು ತಪ್ಪು ಒಪ್ಪಿಕೊಂಡು ಪೆಟ್ಟು ತಿಂದಿದ್ದಾರೆ. ಈ ಅಕ್ರಮ ವಲಸಿಗ ರೋಹಿಂಗ್ಯಾಗಳು ಮತ್ತು ಬಾಂಗ್ಲಾದೇಶಿಗಳು ಎಲ್ಲಾ ರೀತಿಯ ಅಪರಾಧಗಳಲ್ಲಿ ಭಾಗಿಯಾಗಿದ್ದಾರೆ ಮತ್ತು ಕೆಲವು ರಾಜಕೀಯ ಪಕ್ಷಗಳು ಮತ ಬ್ಯಾಂಕ್‌ಗಾಗಿ ಅವರಿಗೆ ಸಹಾಯ ಮಾಡುತ್ತಿವೆ.” ಎಂದು ಪೋಸ್ಟ್‌ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಇನ್ನೂ ಕೆಲವರು ” ರೋಹಿಂಗ್ಯಾಗಳು ಈಗಾಗಲೇ ದೇಶಾದ್ಯಂತ ಬೀಡುಬಿಟ್ಟಿದ್ದಾರೆ ಮತ್ತು ಭಾರತದಲ್ಲಿ ಹಲವು ರೀತಿಯಾದ ವಿದ್ವಂಸಕ ಕೃತ್ಯಗಳನ್ನು ಎಸಗಲು ಪ್ರಾರಂಭಿಸಿದ್ದಾರೆ. ಇವರು ಹಲವು ರಾಜ್ಯಗಳಲ್ಲಿ ತಮ್ಮ ಮೂಲ ಗುರುತನ್ನು ಮರೆಮಾಚಿ ಈ ರೀತಿಯ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದಾರೆ” ಎಂದು ಕೂಡ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವಿವಿಧ ಟಿಪ್ಪಣಿಗಳಿಂದ ಹಂಚಿಕೊಳ್ಳಲಾದ ವಿಡಿಯೋ ನೋಡಿದ ಹಲವರು ಇದು ನಿಜವಿರಬಹುದು ಎಂದು ಭಾವಿಸಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ವ್ಯಾಪಕವಾಗಿ ಶೇರ್‌ ಮಾಡಲಾಗುತ್ತಿರುವ ವಿಡಿಯೋವಿನ ಅಸಲಿಯತ್ತು ಏನು ಎಂಬುದನ್ನು ಈ ಅಂಕಣದಲ್ಲಿ ಪರಿಶೀಲನೆ ನಡೆಸೋಣ.

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ವಿವಿಧ ಕೀ ವರ್ಡ್‌ಗಳನ್ನು ಬಳಸಿಕೊಂಡು ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ 7 ಆಗಸ್ಟ್‌ 2024ರಂದು RCM Daily Vlogs ಎಂಬ ಯುಟ್ಯೂಬ್‌ ಚಾನಲ್‌ನಲ್ಲಿ ಹಂಚಿಕೊಂಡ ಪೂರ್ಣ ಆವೃತ್ತಿಯ ವಿಡಿಯೋ ಪತ್ತೆಯಾಗಿದೆ. ಈ ವಿಡಿಯೋದಲ್ಲಿ ಹಲವು ಮಾಹಿತಿಗಳು ಲಭ್ಯವಾಗಿದ್ದು, ವೈರಲ್‌ ವಿಡಿಯೋದಲ್ಲಿ ಹೇಳಿಕೊಂಡಿರುವುದು ಸುಳ್ಳು ಎಂಬುದಕ್ಕೆ ಹಲವು ಸಾಕ್ಷಿಗಳು ಲಭ್ಯವಾಗಿದೆ.

ಈ ವಿಡಿಯೋದಲ್ಲಿನ ಮಾಹಿತಿಯ ಪ್ರಕಾರ “ನೈನಿ-ಡೂನ್ ಜನ್ ಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ವೀಡಿಯೊವನ್ನು ರೆಕಾರ್ಡ್ ಮಾಡಲಾಗಿದೆ, ಅಲ್ಲಿ ಇಬ್ಬರು ಕಳ್ಳರು ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದರು.” ಎಂಬುದು ತಿಳಿದು ಬಂದಿದೆ. ಇನ್ನು ವೈರಲ್‌ ವಿಡಿಯೋದಲ್ಲಿ ಹೇಳಲಾದಂತೆ ಅವರು ಬಾಂಗ್ಲಾದೇಶಿಯರು ಎಂಬುದಕ್ಕೆ ಯಾವುದೇ ಮಾಹಿತಿ ಲಭ್ಯಾವಾಗಿಲ್ಲ. ಈ ಕುರಿತು ದಿ ಇಂಟೆಂಟ್‌ ಡೇಟಾ ಕೂಡ ವರದಿಯನ್ನು ಮಾಡಿದೆ  ಹಾಗೆಯೇ ಇವರನ್ನು  ಅಕ್ರಮ ರೋಹಿಂಗ್ಯಾ ಮುಸಲ್ಮಾನರು ಎಂಬುದಕ್ಕೆ ಯಾವುದೇ ರೀತಿಯಾದ ಅಧಿಕೃತ ಸಾಕ್ಷಿಗಳು ಮತ್ತು ವರದಿಗಳು ಕೂಡ ಲಭ್ಯವಾಗಿಲ್ಲ ಹಾಗಾಗಿ ವೈರಲ್‌ ವಿಡಿಯೋ ನಂಬಿಕೆಗೆ ಅರ್ಹವಾಗಿಲ್ಲ ಎಂಬುದು ತಿಳಿದು ಬಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ ಪೋಸ್ಟ್‌ನಲ್ಲಿ ಉಲ್ಲೇಖವಾದಂತೆ ರೋಹಿಂಗ್ಯಾ ಮುಸಲ್ಮಾನರು  ರೈಲಿನಲ್ಲಿ ಕಳ್ಳತನ ನಡೆಸಿದ್ದಾರೆ ಎಂಬುದು ಸುಳ್ಳಾಗಿದೆ. ಹಾಗೆಯೇ ಸಿಕ್ಕಬಿದ್ದ ಕಳ್ಳರು ರೋಹಿಂಗ್ಯಾ ಮುಸಲ್ಮಾನರು ಎಂಬುದಕ್ಕೆ ಯಾವುದೇ ರೀತಿಯಾದ ಸಾಕ್ಷಿಗಳು ಕೂಡ ಇಲ್ಲ. ಹಾಗಾಗಿ ಇಂತಹ ಸುದ್ದಿಗಳನ್ನು ನಂಬುವ ಮುನ್ನ ಒಮ್ಮೆ ಪರಿಶೀಲಿಸಿಕೊಳ್ಳಿ.


ಇದನ್ನೂ ಓದಿ : Fact Check | ಬದ್ಲಾಪುರ್ ಶಾಲೆಯ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಮುಸ್ಲಿಂ ಅಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *