Fact Check | ಬದ್ಲಾಪುರ್ ಶಾಲೆಯ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಮುಸ್ಲಿಂ ಅಲ್ಲ

“ಹಿಂದೂಗಳೇ ಎಚ್ಚರ ದೇಶಾದ್ಯಂತ ಮುಸಲ್ಮಾನರು ಹಿಂದೂ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಎಸಗುವ ಪ್ರಕರಣಗಳು ಹೆಚ್ಚಾಗುತ್ತಿದೆ. ಇದು ಮುಸಲ್ಮಾನರ ಹೊಸ ಜಿಹಾದ್‌ ಕೂಡ ಆಗಿರಬಹುದು. ಇದಕ್ಕೀಗ ಸಣ್ಣ ಸಣ್ಣ ಹಿಂದೂ ಕಂದಮ್ಮಗಳು ಕೂಡ ಹೊರತಾಗಿಲ್ಲ. ಮಹಾರಾಷ್ಟ್ರದ ಥಾಣೆಯ ಬದ್ಲಾಪುರ ಎಂಬಲ್ಲಿ 4 ವರ್ಷದ ಹಿಂದೂ ಬಾಲಕಿಯ ಮೇಲೆ ಅಶ್ರಫ್ ಹುಸೇನ್‌ ಎಂಬಾತ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈತನನ್ನು ಈಗ ಸಾರ್ವಜನಿಕರು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈಗಲಾದರು ಎಚ್ಚೆತ್ತುಕೊಳ್ಳಿ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಈ ವಿಡಿಯೋದಲ್ಲಿ ಹಲವು ಮಂದಿ ವ್ಯಕ್ತಿಯೊಬ್ಬನಿಗೆ ಥಳಿಸುತ್ತಿರುವುದನ್ನು ನೋಡಬಹುದಾಗಿದ್ದು, ಆ ವ್ಯಕ್ತಿ ಕೂಡ ಮುಸಲ್ಮಾನರಂತೆ ಕಾಣುತ್ತಿದ್ದಾನೆ. ಹೀಗಾಗಿ ಈ ವಿಡಿಯೋ ನೋಡಿದ ಹಲವು ಮಂದಿ ವೈರಲ್‌ ವಿಡಿಯೋದೊಂದಿಗೆ ಹಂಚಿಕೊಳ್ಳಲಾಗುತ್ತಿರುವ ಟಿಪ್ಪಣಿ ನಿಜವೆಂದು ಭಾವಿಸಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹಲವು ಮಂದಿ ಮುಸ್ಲಿಂ ಸಮುದಾಯದ ವಿರುದ್ಧ ಟೀಕೆಗಳನ್ನು ಮಾಡಿ ವಿವಿಧ ಬರಹಗಳನ್ನು ಕೂಡ ಪ್ರಕಟಿಸುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ ಕುರಿತು ಈ ವಿಡಿಯೋದಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿರುವ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ವೈರಲ್‌ ವಿಡಿಯೋಗೆ ಸಂಬಂಧಿಸಿದಂತೆ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಹುಡುಕಾಟವನ್ನು ನಡೆಸಲಾಯಿತು. ಆದರೆ ವೈರಲ್‌ ವಿಡಿಯೋದಲ್ಲಿನ ಟಿಪ್ಪಣಿಗೆ ಸಂಬಂಧ ಪಟ್ಟಂತೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಈ ಹಿನ್ನಲೆಯಲ್ಲಿ ವಿವಿಧ ಮಾಧ್ಯಮಗಳು ಘಟನೆಯ ಕುರಿತು ಪ್ರಕಟಿಸಿರುವ ಹಲವು ವರದಿಗಳನ್ನು ಪರಿಶೀಲನೆ ನಡೆಸಲಾಯಿತು.

ಈ ವೇಳೆ 24 ಆಗಸ್ಟ್‌ 2024ರಂದು ಹಿಂದೂಸ್ತಾನ್‌ ಟೈಮ್ಸ್‌ Badlapur sexual abuse case: No Maharashtra bandh today, but Sharad Pawar, Uddhav take to streets (ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣ: ಇಂದು ಮಹಾರಾಷ್ಟ್ರ ಬಂದ್ ಇಲ್ಲ, ಆದರೆ ಶರದ್ ಪವಾರ್, ಉದ್ಧವ್ ಬೀದಿಗಿಳಿದಿದ್ದಾರೆ) ಎಂದು ಶೀರ್ಷಿಕೆ ನೀಡಿ ವರದಿಯನ್ನು ಪ್ರಕಟಿಸಿರುವುದನ್ನು ಕಂಡುಕೊಂಡಿದ್ದೇವೆ. ಈ ವರದಿ ಕೊನೆಯ ಪ್ಯಾರದಲ್ಲಿ “4 ವರ್ಷದ ಮಗುವಿನ ಮೇಲೆ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಶಾಲೆಯ ಸ್ವಚ್ಛತಾ ಸಿಬ್ಬಂದಿಯ 23 ವರ್ಷದ ಅಕ್ಷಯ್ ಶಿಂಧೆ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.” ಎಂದು ಉಲ್ಲೇಖವಾಗಿರುವುದು ಕಂಡು ಬಂದಿದೆ. 

ಇದರ ಆಧಾರದ ಮೇಲೆ ಇನ್ನಷ್ಟು ಹುಡುಕಾಟವನ್ನು ನಡೆಸಿದಾಗ ಇದೇ ಮಾಹಿತಿಯನ್ನು ಹೊಂದಿರುವ ಹಲವು ರಾಷ್ಟ್ರೀಯ ಹಾಗೂ ಸ್ಥಳೀಯ ಮಾಧ್ಯಮಗಳು ವರದಿ ಮಾಡಿರುವುದು ಕಂಡು ಬಂದಿದೆ. ಇನ್ನು ವಿಡಿಯೋದಲ್ಲಿ ಹಲ್ಲೆಗೊಳಗಾದ ವ್ಯಕ್ತಿಯ ಕುರಿತು ಪರಿಶೀಲನೆ ನಡೆಸಿದಾಗ ಆಂಗ್ಲ ಸುದ್ದಿ ಸಂಸ್ಥೆ ಬೂಮ್‌ ಬದ್ಲಾಪುರದ ಹಲವಾರು ಸ್ಥಳೀಯ ವರದಿಗಾರರಲ್ಲಿ ವಿಚಾರಿಸಿದ್ದು ವೈರಲ್ ವೀಡಿಯೊದಲ್ಲಿರುವ ವ್ಯಕ್ತಿ ಪ್ರಕರಣದಲ್ಲಿ ಆರೋಪಿಯಲ್ಲ. ಈತ ಆ ಶಾಲೆಯ ಕಾರ್ಮಿಕ ಎಂಬುದು ತಿಳಿದುಬಂದಿದೆ. ಈ ಘಟನೆಯ ಕುರಿತು ಹಿಂದಿಯ ಆಜ್‌ತಕ್‌ ಸೇರಿಂದತೆ ಇನ್ನೂ ಹಲವು ಮಾಧ್ಯಮಗಳು ಕೂಡ ವರದಿಯನ್ನು ಮಾಡಿವೆ. 

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಸಂಪೂರ್ಣವಾಗಿ ಪರಿಶೀಲಿಸಿದಾಗ ವೈರಲ್‌ ವಿಡಿಯೋದೊಂದಿಗೆ ಹಂಚಿಕೊಂಡಂತೆ ಬದ್ಲಾಪುರ್ ಶಾಲೆಯ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಮುಸ್ಲಿಂ ಎಂಬುದು ಸುಳ್ಳು, ಹಾಗೂ ವೈರಲ್‌ ವಿಡಿಯೋದಲ್ಲಿ ಕಂಡು ಬಂದ ವ್ಯಕ್ತಿ ಶಾಲೆಯ ಕಾರ್ಮಿಕನಾಗಿದ್ದು, ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಈತನಿಗೂ ಈ ಘಟನೆಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂಬುದು ಸಾಬೀತಾಗಿದೆ.


ಇದನ್ನೂ ಓದಿ : Fact Check | ಮುಸ್ಲಿಂ ವ್ಯಾಪಾರಿ ಚರಂಡಿ ನೀರಿನಲ್ಲಿ ತರಕಾರಿ ತೊಳೆದಿದ್ದಾನೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *