“ಬ್ರೇಕಿಂಗ್ ನ್ಯೂಸ್ : ಧಾರ್ಮಿಕ ಪ್ರವಾಸಿ ತಾಣವಾಗಿರುವ ಹಿಂದೂ ದೇವಲಾಯಗಳ ಅಭಿವೃದ್ದಿ ಮಾಡದಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ” ಎಂದು ಪೋಸ್ಟರ್‌ವೊಂದನ್ನು ವ್ಯಾಪಕವಾಗಿ ವಾಟ್ಸ್‌ಆಪ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಪೋಸ್ಟರ್ ನೋಡಿದ ತಕ್ಷಣ ಯಾವುದೋ ಸುದ್ದಿ ವಾಹಿನಿಯ ಬ್ರೇಕಿಂಗ್ ನ್ಯೂಸ್ ಪೋಸ್ಟರ್ ಎಂಬ ಭಾವನೆ ಬರುತ್ತಿರುವುದರಿಂದ, ಹಲವರು ಇದೇ ಪೋಸ್ಟರ್ ಅನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಹೀಗೆ ಹಂಚಿಕೊಳ್ಳಲಾಗುತ್ತಿರುವ ಪೋಸ್ಟರ್ ನೋಡಿದ ಹಲವು ಮಂದಿ, ರಾಜ್ಯ ಸರ್ಕಾರ ಧಾರ್ಮಿಕವಾಗಿ ತರಾತಮ್ಯವನ್ನು ಮಾಡುತ್ತಿದೆ. ಮುಸಲ್ಮಾನರ ಪರವಾಗಿ ರಾಜ್ಯ ಸರ್ಕಾರ ಒಲವು ತೋರುತ್ತಿದೆ. ಸಿದ್ದರಾಮಯ್ಯ ಅವರು ಅಹಿಂದ ನಾಯಕರಲ್ಲ ಅವರು ಮುಸಲ್ಮಾನರ ನಾಯಕ ಎಂದು ಹಲವರು ಸಿಎಂ ಸಿದ್ದರಾಮಯ್ಯ ಸೇರಿದಂತೆ ಅವರ ಸರ್ಕಾರವನ್ನು ಟೀಕಿಸುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಶೆರ್ ಆಗುತ್ತಿರುವ ಪೋಸ್ಟರ್‌ನ ಅಸಲಿಯತ್ತು ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಈ ಪೋಸ್ಟರ್ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ಪೋಸ್ಟರ್‌ನಲ್ಲಿ ಹೇಳಲಾದಂತೆ ಸಿಎಂ ಸಿದ್ದರಾಮಯ್ಯ ಸರ್ಕಾರ ಧಾರ್ಮಿಕ ಪ್ರವಾಸಿ ತಾಣವಾಗಿರುವ ಹಿಂದೂ ದೇವಲಾಯಗಳ ಅಭಿವೃದ್ದಿ ಮಾಡದಂತೆ ಆದೇಶ ಹೊರಡಿಸಿದ್ದಾರೆಯೆ ಎಂದು ಪರಿಶೀಲಿಸಲು ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಗೂಗಲ್‌ನಲ್ಲಿ ಹುಡುಕಾಟವನ್ನು ನಡೆಸಲಾಯಿತು. ಒಂದು ವೇಳೆ ಇದು ನಿಜವಾದ ಆದೇಶವೇ ಆಗಿದ್ದರೆ, ಈ ಕುರಿತು ರಾಜ್ಯದ ಹಲವು ಮಾಧ್ಯಮಗಳು ವರದಿಯನ್ನು ಮಾಡಬೇಕಿತ್ತು. ಆದರೆ ಆ ರೀತಿಯ ಯಾವುದೇ ಅಧಿಕೃತ ವರದಿಗಳು ಕಂಡು ಬಂದಿಲ್ಲ.
ಇನ್ನೂ ಹೆಚ್ಚಿನ ಮಾಹಿತಿಗಾಗಿ ಹಿಂದೂ ಧಾರ್ಮಿಕ ಹಾಗೂ ಧರ್ಮಾದಾಯ ದತ್ತಿಗಳ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆಯ ವೆಬ್‌ತಾಣಗಳನ್ನೂ ಕೂಡ ಪರಿಶೀಲನೆ ನಡೆಸಲಾಯಿತು. ಒಂದು ವೇಳೆ ರಾಜ್ಯ ಸರ್ಕಾರ ಈ ಆದೇಶವನ್ನು ಹೊರಡಿಸಿದ್ದೇ ಆಗಿದ್ದಲ್ಲಿ ಆ ಕುರಿತು ಸರ್ಕಾರಿ ವೆಬ್‌ತಾಣದಲ್ಲಿ ಮಾಹಿತಿಗಳು ಕಂಡು ಬರಬೇಕಿತ್ತು. ಆದರೆ ಆ ರೀತಿಯ ಯಾವುದೇ ಉಲ್ಲೇಖಗಳು ಈ ವೆಬ್‌ಸೈಟ್‌ಗಳಲ್ಲಿ ಕಂಡು ಬಂದಿಲ್ಲ. ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಕೆಲ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಅವರು ಕೂಡ ಈ ಕುರಿತು ಯಾವುದೇ ಆದೇಶಗಳು ಬಂದಿಲ್ಲ ಎಂಬ ಉತ್ತರವನ್ನು ನೀಡಿದ್ದಾರೆ. ಹಾಗಾಗಿ ವೈರಲ್ ಪೋಸ್ಟರ್ ನಕಲಿ ಎಂಬುದು ಸಾಬೀತಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣಲದಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ ಧಾರ್ಮಿಕ ಪ್ರವಾಸಿ ತಾಣವಾಗಿರುವ ಹಿಂದೂ ದೇವಲಾಯಗಳ ಅಭಿವೃದ್ದಿ ಮಾಡದಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ ಎಂಬುದು ಸುಳ್ಳು. ಹಾಗಾಗಿ ಇಂತಹ ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳುವುದು ಕಾನೂನು ಪ್ರಕಾರ ಅಪರಾಧವಾಗಿದ್ದು, ಈ ಪೋಸ್ಟರ್ ಕಂಡು ಬಂದರೆ ಅದನ್ನು ನಿರ್ಲಕ್ಷಿಸಿ ಮತ್ತು ಯಾರಿಗೂ ಶೇರ್ ಮಾಡಬೇಡಿ..
ಇದನ್ನೂ ಓದಿ : Fact Check | ಅಕ್ರಮ ವಲಸಿಗ ರೋಹಿಂಗ್ಯಾಗಳು ರೈಲಿನಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದರು ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ