“ಇಂದು ಮಧ್ಯರಾತ್ರಿಯಿಂದಲೇ 200ರೂ ನೋಟು ಬ್ಯಾನ್ ಆಗಲಿದೆ. ಈ ಕೂಡಲೇ ಈ ಸಂದೇಶವನ್ನು ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ, ಒಂದು ವೇಳೆ ಈ ಮಾಹಿತಿ ನಿಮಗೆ ತಡವಾಗಿ ತಲುಪಿದ್ದರೆ ಏನು ಮಾಡಲು ಸಾಧ್ಯವಿಲ್ಲ” ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದು ವೈರಲ್ ಆಗಿದೆ. ಈ ಪೋಸ್ಟ್‌ನಲ್ಲಿ ಈ ಹಿಂದೆ 500 ರೂ ನೋಟ್ ಬಂದ್ ಆಗಲಿದೆ ಎಂಬ ಸಂದೇಶ ಹರಡಿದ ರೀತಿಯಲ್ಲೇ, ಟಿಪ್ಪಣಿಯನ್ನು ಬರೆಯಲಾಗಿದ್ದು, ಇದು ಸಾರ್ವಜನಿಕರನ್ನು ಒಮ್ಮೆ ಗೊಂದಲಕ್ಕೆ ಕೂಡ ಒಳಪಡಿಸಿದೆ.
ಇನ್ನೂ ಹಲವರು ಇದನ್ನು ಮನೋರಂಜನೆಗಾಗಿ ಹಂಚಿಕೊಳ್ಳುತ್ತಿದ್ದು, ಸಾಕಷ್ಟು ಮಂದಿ ಇದಕ್ಕೆ ವಿವಿಧ ರೀತಿಯಾದ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಹಲವರು ಇದೊಂದು ಸುಳ್ಳು ಮಾಹಿತಿ ಎಂದು ಕಮೆಂಟ್ ಮಾಡುತ್ತಿದ್ದರೆ. ಇನ್ನೂ ಕೆಲವರು ಆದಷ್ಟು ಬೇಗ 200ರೂ ನೋಟು ಬ್ಯಾನ್ ಮಾಡಲಾಗುತ್ತದೆ. ಇತ್ತೀಚೆಗೆ ಅದರ ಬಳಕೆ ಕಡಿಮೆಯಾಗಿದೆ ಎಂದು ವಾದವನ್ನು ಮುಂದಿಟ್ಟಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನ ನೈಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ 200 ರೂ ನೋಟನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಲಿದೆಯೇ ಎಂದು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ವೈರಲ್ ಪೋಸ್ಟ್‌ಗೆ ಸಂಬಂಧಿಸಿದಂತೆ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಅಂತರ್ಜಾಲದಲ್ಲಿ ಈ ಕುರಿತು ಯಾವುದಾದರೂ ವರದಿಗಳು ಕಂಡು ಬಂದಿವೆಯೇ ಎಂದು ಹುಡುಕಾಟವನ್ನು ನಡೆಸಿದೆವು. ಒಂದು ವೇಳೆ ಈ ಘಟನೆ ನಿಜವೇ ಆಗಿದ್ದರೆ ಆ ಕುರಿತು ವರದಿಗಳು ಪ್ರಕಟವಾಗಬೇಕಿತ್ತು. ಆದರೆ ಇದುವರೆಗೂ ಆ ರೀತಿಯಾದ ಯಾವುದೇ ವರದಿಗಳು ಕಂಡು ಬಂದಿಲ್ಲ.
ಈ ಕುರಿತು ಇನ್ನಷ್ಟು ಪರಿಶೀಲನೆ ನಡೆಸಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಅಧಿಕೃತ ವೆಬ್‌ಸೈಟ್ ಅನ್ನು ಪರಿಶೀಲಿಸಲಾಯಿತು. ಇಲ್ಲಿಯೂ ಕೂಡ 200ರೂ ನೋಟ್ ಅನ್ನು ನಿಷೇಧಿಸುವ ಕುರಿತು ಯಾವುದೇ ರೀತಿಯಾದ ಅಧಿಕೃತ ಆದೇಶಗಳು ಕಂಡು ಬಂದಿಲ್ಲ. ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್‌ನಲ್ಲಿ ವಿವಿಧ ಪ್ರಕಟಣೆಗಳನ್ನು ಪರಿಶೀಲಿಸಿದಾಗ ಅಲ್ಲಿಯೂ ಈ ಕುರಿತು ಯಾವುದೇ ಸಣ್ಣ ಸುಳಿವು ಕೂಡ ಸಿಕ್ಕಿಲ್ಲ. ಹಾಗಾಗಿ ವೈರಲ್ ವಿಡಿಯೋದಲ್ಲಿ ಹೇಳಲಾದಂತೆ 200 ರೂ ನೋಟು ಬ್ಯಾನ್ ಆಗಲಿದೆ ಎಂಬುದಕ್ಕೆ ಯಾವುದೇ ಪುರಾವೆಗಳು ಇಲ್ಲದಂತಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಂತೆ ಇಂದು ಮಧ್ಯರಾತ್ರಿಯಿಂದಲೇ 200ರೂ ನೋಟು ಬ್ಯಾನ್ ಆಗಲಿದೆ ಎಂಬುದು ಸುಳ್ಳು. ಈ ಕುರಿತು ಯಾವುದೇ ಮಾಧ್ಯಮಗಳು ಅಧಿಕೃತ ವರದಿಗಳನ್ನು ಮಾಡಿಲ್ಲ, ಕೇಂದ್ರ ಸರ್ಕಾರದ ಆದೇಶಗಳು ಕಂಡು ಬಂದಿಲ್ಲ, ಹಾಗೂ RBI ನ ಅಧಿಕೃತ ವೆಬ್‌ಸೈಟ್‌ನಲ್ಲಿ ಕೂಡ ಈ ಬಗ್ಗೆ ಪ್ರಕಟಣೆಗಳು ಇಲ್ಲ ಹಾಗಾಗಿ ವೈರಲ್ ಪೋಸ್ಟ್ ಸಂಪೂರ್ಣವಾಗಿ ಸುಳ್ಳಿನಿಂದ ಕೂಡಿದೆ.
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.