Fact Check : ಬಂಗಾಳದಲ್ಲಿ ಹಿಂದೂ ಮಹಿಳೆಯ ಮೇಲೆ ಹಲ್ಲೆ ಎಂದು ಮುಸ್ಲಿಂ ವ್ಯಕ್ತಿಗಳ ವಿಡಿಯೋ ಹಂಚಿಕೆ

ಪಶ್ಚಿಮ ಬಂಗಾಳ

ಕೋಲ್ಕತ್ತಾದ ಆರ್‌ಜಿ ಕರ್ ಆಸ್ಪತ್ರೆಯಲ್ಲಿ ಪ್ರಶಿಕ್ಷಣಾರ್ಥಿ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಹತ್ಯೆಯ ಬಗ್ಗೆ ನಡೆಯುತ್ತಿರುವ ಆಕ್ರೋಶದ ನಡುವೆ, ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿಯವರ ಸರ್ಕಾರವು ಮಹಿಳೆಯರ ಸುರಕ್ಷತೆಗೆ ಕ್ರಮ ವಹಿಸುತ್ತಿಲ್ಲ ಎಂದು ಹಲವು ವಿಡಿಯೋಗಳನ್ನು ಹಂಚಿಕೊಳ್ಳಲಾಗುತ್ತಿದೆ. ಈ ಸಂದರ್ಭದಲ್ಲಿ, ಬಂಗಾಳದಲ್ಲಿ ಪೊಲೀಸರ ಎದುರಿನಲ್ಲೇ ಹಿಂದೂ ಮಹಿಳೆಯನ್ನು ಮುಸ್ಲಿಮರು ಥಳಿಸಿರುವ ಘಟನೆ ನಡೆದಿದೆ ಎಂದು ವಿಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಆ ವಿಡಿಯೋದಲ್ಲಿ ಪೊಲೀಸ್ ವಾಹನದ ಬಳಿ ಜನರ ಗುಂಪೊಂದು ಮಹಿಳೆಯ ಮೇಲೆ ಹಿಂಸಾತ್ಮಕವಾಗಿ ಹಲ್ಲೆ ನಡೆಸುತ್ತಿರುವುದನ್ನು ಕಾಣಬಹುದು.

ಫೇಸ್‌ಬುಕ್‌ನಲ್ಲಿ ಈ  ವೀಡಿಯೊವನ್ನುಹಿಂದಿ ಭಾಷೆಯಲ್ಲಿ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ: “पश्चिम बंगाल में ममता बनर्जी की पुलिस के सामने ही शरिया कानून के तहत एक हिंदू महिला को मुल्ले सजा दे रहे है। देखिये पुलिस केसे तमाशबीन बनी हुई है…. कहा गये सविधान, मानवाधिकार की दुहाई देने वाले कांगेस, सपा, ऐसी स्थिति पूरे देश में लागू करना चाहते है। बड़े शर्म की बात है कि कुछ हिंदू इनको समर्थन करते है। इनको और पुलिस को सज़ा होनी चाहिए”. ಮತ್ತು ಇಂಗ್ಲೀಷ್‌ ಭಾಷೆಯಲ್ಲಿಯೂ ಸಹಿತ ಈ ಕೆಳಗಿನಂತೆ ಹಂಚಿಕೊಳ್ಳಲಾಗುತ್ತಿದೆ. ಇದು ನಿಜವೇ ಎಂದು ಪರಿಶೀಲಿಸೋಣ.

ಮೇಲಿನ ಪೋಸ್ಟ್‌ನ ಲಿಂಕ್‌ನ್ನು ನೀವಿಲ್ಲಿ ವೀಕ್ಷಿಸಬಹುದು.

ಫ್ಯಾಕ್ಟ್ ಚೆಕ್

ಈ ವೈರಲ್‌ ಆದ ವಿಡಿಯೋವನ್ನು ನಾವು ಸೂಕ್ಷ್ಮವಾಗಿ ಗಮನಿಸಿದಾಗ ಈ ವೀಡಿಯೋದಲ್ಲಿ ವಾಹನದ ಮೇಲೆ “ಬರಸತ್ ಪೋಲೀಸ್” ಎಂಬ ಪದವನ್ನು ಬರೆಯಲಾಗಿದೆ ಎಂಬುದು ತಿಳಿದುಬಂದಿತು. ಇದು ಪಶ್ಚಿಮ ಬಂಗಾಳದ ನಗರವಾದ ಬರಾಸತ್‌ನಲ್ಲಿ ಈ ಘಟನೆ ನಡೆದಿರಬಹುದು ಎಂಬುದನ್ನು ಸೂಚಿಸುತ್ತದೆ. ಈ ಕುರಿತು ಹುಡುಕಿದಾಗ ಜೂನ್ 2024 ರಿಂದ ಈ ವಿಡಿಯೋದ ಕುರಿತು ಹಲವು ಮಾಧ್ಯಮ ವರದಿಗಳು  ಕಂಡುಬಂದಿವೆ. ಅವುಗಳಲ್ಲಿ ಮಕ್ಕಳನ್ನು ಕಳ್ಳತನ ಮಾಡುವ ಗ್ಯಾಂಗ್‌ ಎಂದು ಆರೋಪಿಸಿ ಜನಸಮೂಹವು ಮಹಿಳೆ ಮತ್ತು ಪುರುಷನ ಮೇಲೆ ದಾಳಿ ಮಾಡಿದೆ ಎಂದು ಬರೆಯಲಾಗಿದೆ.

ಜೂನ್ 19, 2024 ರಂದು ದಿ ಟೆಲಿಗ್ರಾಫ್ ವರದಿಯ ಪ್ರಕಾರ, ಬರಾಸತ್‌ನಲ್ಲಿ ರೊಚ್ಚಿಗೆದ್ದ ಜನರು ಮೂವರ ಮೇಲೆ ಹಲ್ಲೆ ನಡೆಸಿದ್ದಾರೆ. ಒಂದು ಘಟನೆ ಮೊಲ್ಲಾಪುರದಲ್ಲಿ ಸಂಭವಿಸಿದೆ, ಅಲ್ಲಿ ಒಬ್ಬ ಪುರುಷನ ಮೇಲೆ ಹಲ್ಲೆ ನಡೆಸಲಾಯಿತು ಮತ್ತು ಇನ್ನೊಂದು ಕಾಮಾಖ್ಯ ದೇವಸ್ಥಾನದ ಬಳಿ. ಮಕ್ಕಳ ಕಳ್ಳತನದ ಆರೋಪದಲ್ಲಿ ಮಹಿಳೆ ಮತ್ತು ಪುರುಷ ಇಬ್ಬರನ್ನು ಥಳಿಸಲಾಗಿದೆ.

ಕೋಲ್ಕತ್ತಾ ಟಿವಿಯ ವಿಡಿಯೋ ವರದಿಯಲ್ಲಿ ,ಬರಾಸತ್ ಎಸ್ಪಿ ಪ್ರತೀಕ್ಷಾ ಜಾರ್ಖಾರಿಯಾ ಅವರು ಮಾತನಾಡಿ ಥಳಿಸಲ್ಪಟ್ಟಿರುವವರು ಮಕ್ಕಳ ಕಳ್ಳರಲ್ಲ. ಆದರೆ ಸಾಮಾಜಿಕ ಮಾಧ್ಯಮದಲ್ಲಿ ಹರಡಿದ ವದಂತಿಗಳಿಗೆ ಬಲಿಯಾದವರು ಎಂದು ದೃಢಪಡಿಸಿದ್ದಾರೆ.

ಜೂನ್ 10 ರಂದು ಬರಾಸತ್‌ನ ಕಾಜಿಪಾರಾದಲ್ಲಿ ಐದನೇ ತರಗತಿಯ ಮಗು ನಾಪತ್ತೆಯಾದ ನಂತರ ಈ ಘಟನೆಯು ಜೂನ್ 13 ರಂದು ನಡೆದಿದೆ. ಇದು ಆ ಪ್ರದೇಶದಲ್ಲಿ ಸಕ್ರಿಯವಾಗಿರುವ ಮಕ್ಕಳ ಕಳ್ಳರ ಗ್ಯಾಂಗ್ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ವದಂತಿಗಳಿಗೆ ಕಾರಣವಾಯಿತು. ಈ ವೈರಲ್ ವಿಡಿಯೋದಲ್ಲಿ ಕಾಣಿಸಿಕೊಂಡ ಮಹಿಳೆಯನ್ನು ಮಕ್ಕಳ ಕಳ್ಳರೆಂದು ತಪ್ಪಾಗಿ ಗುರಿಪಡಿಸಲಾಗಿದೆ. ಈ ಪ್ರದೇಶದಲ್ಲಿ ಯಾವುದೇ ಮಕ್ಕಳ ಕಳ್ಳತನ ನಡೆದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಬರಾಸತ್ ಪೊಲೀಸ್ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಎಫ್‌ಐಆರ್ ಪ್ರಕಾರ ದಾಳಿಯಲ್ಲಿ ಭಾಗಿಯಾಗಿರುವ 10 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂಬುದು ತಿಳಿದುಬಂದಿದೆ. ಸಂತ್ರಸ್ತರನ್ನು 32 ವರ್ಷದ ಮೆಹರ್ಬಾನೊ ಬೀಬಿ ಮತ್ತು 36 ವರ್ಷದ ಸಾದಿಕ್ ಎಂದು ಗುರುತಿಸಲಾಗಿದೆ. ಇವರಿಬ್ಬರೂ ಕೂಡ ಮುಸ್ಲಿಮರು. ಪೋಸ್ಟ್‌ರ್‌ಗಳಲ್ಲಿ ಹೇಳಿಕೊಂಡಂತೆ ಹಿಂದೂಗಳಲ್ಲ. ಅವರ ಗಾಯಗಳ ತೀವ್ರತೆಯಿಂದಾಗಿ, ಅವರನ್ನು ಚಿಕಿತ್ಸೆಗಾಗಿ ಬರಾಸತ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಅದೇ ವೀಡಿಯೋ ಜುಲೈನಲ್ಲಿ ತಪ್ಪುದಾರಿಗೆಳೆಯುವ ಕೋಮುವಾದಿ ಹಕ್ಕುಗಳೊಂದಿಗೆ ಮರಳಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿತು. ಕೇವಲ ವದಂತಿಗಳಿಂದ ಹಲ್ಲೆ ನಡೆದಿದೆ ಎಂದು ಬರಾಸತ್ ಪೊಲೀಸರು ಮತ್ತೆ ಮತ್ತೆ ತಿಳಿಸಿದ್ದಾರೆ.

ಹೀಗಾಗಿ, ಪಶ್ಚಿಮ ಬಂಗಾಳದ ಬರಾಸತ್‌ನಲ್ಲಿ ಮಕ್ಕಳ ಕಳ್ಳರ ವದಂತಿಗಳಿಂದಾಗಿ ಮುಸ್ಲಿಂ ಪುರುಷ ಮತ್ತು ಮಹಿಳೆಯ ಮೇಲೆ ಹಲ್ಲೆ ನಡೆಸುತ್ತಿರುವ ವೀಡಿಯೋವನ್ನು ಹಿಂದೂಗಳ ಮೇಲೆ ಹಲ್ಲೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.


ಇದನ್ನು ಓದಿದ್ದೀರಾ?


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *