Fact Check | ಸೇನೆಯ ಮೇಲೆ ದಾಳಿ ಎಂದು ತಪ್ಪಾಗಿ ಅಸ್ಸಾಂ ರೈಫಲ್ಸ್ – ಮಣಿಪುರ ಪೊಲೀಸರ ಘರ್ಷಣೆಯ ವಿಡಿಯೋ ಹಂಚಿಕೆ

ಇತ್ತೀಚೆಗೆ, ಇಂಫಾಲ್‌ನಲ್ಲಿ ಭಾರತೀಯ ಸೇನೆಯ ಸಿಬ್ಬಂದಿಗೆ ಮೈತೆಯ್ ಪೊಲೀಸರು ಕಿರುಕುಳ ಮತ್ತು ಬೆದರಿಕೆ ಹಾಕಿದ್ದಾರೆ ಎಂಬ ಹೇಳಿಕೆಯೊಂದಿಗೆ ಪೊಲೀಸರು ಮತ್ತು ಭದ್ರತಾ ಪಡೆಗಳ ನಡುವೆ ಮಾತಿನ ಚಕಮಕಿಯನ್ನು ತೋರಿಸುವ ವೀಡಿಯೊವನ್ನು ಪ್ರಸಾರ ಮಾಡಲಾಗಿದೆ. ಈ ವಿಡಿಯೋ ಹಂಚಿಕೊಳ್ಳುತ್ತಿರುವ ಹಲವರು ಭಾರತೀಯ ಸೈನಿಕರಿಗೆ ಮಣಿಪುರದ ಪೊಲೀಸರೇ ಬೆದರಿಕೆಯನ್ನು ಹಾಕುತ್ತಿದ್ದಾರೆ ಎಂಬ ಟಿಪ್ಪಣಿಯನ್ನು ಬರೆದು ವಿಡಿಯೋವನ್ನು ಶೇರ್‌ ಮಾಡುತ್ತಿದ್ದಾರೆ.

ವಿಡಿಯೋ ನೋಡಿದ ಹಲವು ಮಂದಿ ಮಣಿಪುರದ ಪೊಲೀಸ್‌ ಇಲಾಖೆಗೆ ನಿಂದಿಸುತ್ತಿದ್ದು, ದೇಶದ ಸೇನೆಗೇ ಅಲ್ಲಿ ಭದ್ರತೆ ಇಲ್ಲ ಎಂದು ವ್ಯಂಗ್ಯವಾಗಿ ಬರೆದುಕೊಳ್ಳುತ್ತಿದ್ದಾರೆ. ಹಲವರು ಈ ವಿಡಿಯೋವನ್ನು ನೋಡಿ ವೈರಲ್‌ ಪೋಸ್ಟ್‌ನಲ್ಲಿನ ಟಿಪ್ಪಣಿಯನ್ನೇ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದು ಸಾರ್ವಜನಿಕರಿಗೆ ಘಟನೆಯ ಕುರಿತು ಹಲವು ರೀತಿಯ ಗೊಂಲವನ್ನು ಕೂಡ ಮೂಡಿಸಿತ್ತಿದೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ಪೋಸ್ಟ್‌ನ ಅಸಲಿಯತ್ತು ಏನು ಎಂಬುದನ್ನು ನಾವು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿರುವ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ವೈರಲ್‌ ವಿಡಿಯೋಗೆ ಸಂಬಂಧಿಸಿದಂತೆ ವಿವಿಧ ಕೀ ವರ್ಡ್‌ಗಳನ್ನು ಬಳಸಿ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲನೆಯನ್ನು ನಡೆಸಿದ್ದೇವೆ. ಈ ವೇಳೆ ನಮಗೆ  ಇದೇ ವೈರಲ್‌ ವಿಡಿಯೋಗಳನ್ನೇ ಒಳಗೊಂಡ ಹಲವು ವರದಿಗಳು ಕಂಡು ಬಂದಿದ್ದು, ಅವು ಘಟನೆಯ ಕುರಿತು ಬೇರೆಯದ್ದೇ ಮಾಹಿತಿಯನ್ನು ನೀಡಿವೆ. ಈ ವರದಿಗಳೆಲ್ಲವೂ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಹೇಳಿಕೆ ತಪ್ಪು ಎಂಬಂತೆ ಪ್ರಕಟವಾಗಿದೆ.

ಈ ವರದಿಗಳ ಪ್ರಕಾರ ಕಾಕ್ಚಿಂಗ್‌ನಲ್ಲಿರುವ ಸುಗ್ನು ಪೊಲೀಸ್ ಠಾಣೆಯಲ್ಲಿ ಮಣಿಪುರ ಪೊಲೀಸ್ ಸಿಬ್ಬಂದಿ ಮತ್ತು ಅಸ್ಸಾಂ ರೈಫಲ್ಸ್ ನಡುವೆ ಸಂಘರ್ಷ ನಡೆದಿದೆ ಎಂಬುದನ್ನು ಉಲ್ಲೇಖಿಸಲಾಗಿದೆ.  ಈ ಘರ್ಷಣೆಯ ಫೋಟೋ ಹಾಗೂ ವಿಡಿಯೋಗಳು ವೈರಲ್‌ ಆಗುತ್ತಿದ್ದಂತೆ ಈ ಕುರಿತು ತನಿಖೆನ್ನು ನಡೆಸಲು ಒತ್ತಾಯಗಳು ಕೇಳಿ ಬಂದವು, ಈ ಹಿನ್ನೆಲೆಯಲ್ಲಿ ಘಟನೆಯ ಕುರಿತು ವಿಚಾರಣೆಯನ್ನು ಕೂಡ ನಡೆಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಹೆಚ್ಚಿನ ಹುಡುಕಾಟವನ್ನು ನಡೆಸಿದಾಗ ಹಿಂಸಾತ್ಮಕ ಘಟನೆಗಳಲ್ಲಿ ಸಾವನ್ನಪ್ಪಿದ ಮತ್ತು ಕಕ್ಚಿಂಗ್‌ನ ಸುಗ್ನು ಪೊಲೀಸ್ ಠಾಣಾ ವ್ಯಾಪ್ತಿಯ ಸ್ಥಳದಲ್ಲಿ ಬಿದ್ದಿರುವ ಕೆಲವು ವ್ಯಕ್ತಿಗಳ ಮೃತ ದೇಹಗಳನ್ನು ಹೊರತೆಗೆಯುವ ಪ್ರಯತ್ನದಲ್ಲಿ ಎರಡು ಪಡೆಗಳ ನಡುವಿನ ತಪ್ಪು ತಿಳುವಳಿಕೆಯಿಂದ  ಘರ್ಷಣೆ ಉಂಟಾಗಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಇನ್ನು ಈ ಘಟನೆ 2023ರ ಜೂನ್‌ನಲ್ಲಿ ನಡೆದಿದೆ ಎಂಬುದು ಕೂಡ ತಿಳಿದು ಬಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಂತೆ ಮೈತೆಯ್ ಪೊಲೀಸರು ಭಾರತೀಯ ಸೇನೆಗೆ ಬೆದರಿಕೆಯೊಡ್ಡಿ, ಹಲ್ಲೆ ನಡೆಸಿದ್ದಾರೆ ಎಂಬುದು ಸುಳ್ಳು. ಮಣಿಪುರ ಪೊಲೀಸ್ ಸಿಬ್ಬಂದಿ ಮತ್ತು ಅಸ್ಸಾಂ ರೈಫಲ್ಸ್ ನಡುವೆ ನಡೆದ ಘರ್ಷಣೆಯ ವಿಡಿಯೋವನ್ನು ಸುಳ್ಳು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಇಂತಹ ಆಧಾರವಿಲ್ಲದ ಯಾವುದೇ ಸುದ್ದಿಗಳು ಬಂದರೂ ಅವುಗಳನ್ನು ನಂಬಬೇಡಿ ಮತ್ತು ಶೇರ್‌ ಮಾಡಬೇಡಿ.


ಇದನ್ನೂ ಓದಿ : Fact Check: ಶ್ರೀಲಂಕಾದಲ್ಲಿ ಹನುಮಂತನ ಬೃಹತ್ ಗದೆ ಪತ್ತೆಯಾಗಿದೆ ಎಂದು ಇಂದೋರ್‌ನ ಪಿತ್ರ ಪರ್ವತದ ಹನುಮಂತನ ವಿಗ್ರಹದ ಗದೆ ಚಿತ್ರ ವೈರಲ್


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *