Fact Check | ಡೋನಾಲ್ಡ್‌ ಟ್ರಂಪ್‌ ಇತ್ತೀಚೆಗೆ “ನಾನು ಹಿಂದೂ ಮತ್ತು ಭಾರತದ ದೊಡ್ಡ ಅಭಿಮಾನಿ” ಎಂದು ಹೇಳಿಲ್ಲ

“ನಾನು ಹಿಂದೂಗಳು ಮತ್ತು ಭಾರತದ ದೊಡ್ಡ ಅಭಿಮಾನಿ; ಅಧ್ಯಕ್ಷರಾಗಿ ಆಯ್ಕೆಯಾದರೆ, ಭಾರತೀಯ ಸಮುದಾಯವು ಶ್ವೇತಭವನದಲ್ಲಿ ನಿಜವಾದ ಸ್ನೇಹಿತನನ್ನು ಹೊಂದಿರುತ್ತದೆ ಎಂದು ಡೋನಾಲ್ಡ್‌ ಟ್ರಂಪ್‌ ಅವರು ಇತ್ತೀಚೆಗೆ 2024ರ ಅಧ್ಯಕ್ಷೀಯ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಹೇಳುತ್ತಿದ್ದಾರೆ. ಈ ಬಾರಿ ಅಮೆರಿಕದಲ್ಲಿರುವ ಎಲ್ಲಾ ಅನಿವಾಸಿ ಭಾರತೀಯರು ಡೊನಾಲ್ಡ್‌ ಟ್ರಂಪ್‌ ಅವರಿಗೆ ಮತ ಚಲಾಯಿಸಬೇಕು, ಆ ಮೂಲಕ ಭಾರತ ಮತ್ತು ಅಮೆರಿಕದ ಸಂಬಂಧ ಇನ್ನಷ್ಟು ಗಟ್ಟಿಯಾಗಲು ನೆರವಾಗಬೇಕು” ಎಂದು ವಿಡಿಯೋವೊಂದರ ಜೊತೆ ಟಿಪ್ಪಣಿಯನ್ನು ಬರೆದು ಹಂಚಿಕೊಳ್ಳಲಾಗುತ್ತಿದೆ. 

ಹಲವರು ಈ ವಿಡಿಯೋವನ್ನು ನೋಡಿ ಡೊನಾಲ್ಡ್‌ ಟ್ರಂಪ್‌ ಮತ್ತು ಭಾರತದ ನಡುವಿನ ಸಂಬಂಧ ಉತ್ತಮವಾಗಿದೆ. ಒಂದು ವೇಳೆ ಟ್ರಂಪ್‌ ಅಮೆರಿಕ ಅಧ್ಯಕ್ಷರಾದರೆ ಭಾರತಕ್ಕೆ ಇನ್ನಷ್ಟು ಬಲ ಬರಲಿದೆ ಎಂದು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಬರೆದುಕೊಂಡು ಪೋಸ್ಟ್‌ಗಳನ್ನು ಮಾಡುತ್ತಿದ್ದಾರೆ. ಇನ್ನು ಕೆಲವರು ಈ ವಿಡಿಯೋ ನೋಡಿ ಇದು ಇತ್ತೀಚಿನದಲ್ಲ ಎಂದು ಹೇಳಿಕೊಳ್ಳುತ್ತಿದ್ದಾರೆ. ಹೀಗಾಗಿ ಈ ವಿಡಿಯೋ ಈಗ ಗೊಂದಲದ ಗೂಡಾಗಿದೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ಕುರಿತು ಸತ್ಯಾಸತ್ಯತೆ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ಪೋಸ್ಟ್‌ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು ಇದಕ್ಕಾಗಿ ವೈರಲ್‌ ವಿಡಿಯೋಗೆ ಸಂಬಂಧ ಪಟ್ಟಂತೆ ವಿಡಿಯೋವಿನ ವಿವಿಧ ಕೀ ಫ್ರೇಮ್‌ಗಳನ್ನು ಬಳಸಿ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲನೆ ನಡೆಸಲಾಯಿತು. ಈ ವೇಳೆ 16 ಅಕ್ಟೋಬರ್ 2016 ರಂದು ಏಷ್ಯನ್ ನ್ಯೂಸ್ ಇಂಟರ್‌ನ್ಯಾಶನಲ್ ತಮ್ಮ ಫೇಸ್‌ಬುಕ್ ಪುಟದಲ್ಲಿ #WATCH US Elections 2016 ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿದ ವೀಡಿಯೊವೊಂದು ಕಂಡು ಬಂದಿದೆ. ಇದರಲ್ಲಿ ವೈರಲ್‌ ವಿಡಿಯೋದಲ್ಲಿನ ಹೇಳಿಕೆಯನ್ನು ಕಾಣಬಹುದಾಗಿದೆ. ಹಾಗಾಗಿ ಇದು ಹಳೆಯ ವಿಡಿಯೋ ಎಂಬುದು ತಿಳಿದು ಬಂದಿದೆ.

ಇನ್ನಷ್ಟು ಮಾಹಿತಿಗಾಗಿ ಹುಡುಕಾಟವನ್ನು ನಡೆಸಿದಾಗ 16 ಅಕ್ಟೋಬರ್‌ 2016ರಲ್ಲಿ ನ್ಯೂಯಾರ್ಕ್‌ ಟೈಮ್ಸ್‌ನಲ್ಲಿ ಪ್ರಕಟಗೊಂಡ ವರದಿಯೊಂದು ಕಂಡು ಬಂದಿದೆ. ಆ ವರದಿಯಲ್ಲಿ ” ಎನ್‌ಜೆಯ ಎಡಿಸನ್‌ನಲ್ಲಿ ನಡೆದ ಭಾರತೀಯ-ಅಮೆರಿಕನ್ ಚಾರಿಟಿ ಕಾರ್ಯಕ್ರಮದ ಸಂದರ್ಭದಲ್ಲಿ, ಡೊನಾಲ್ಡ್ ಟ್ರಂಪ್ ಅವರು “ಹಿಂದೂಗಳ ದೊಡ್ಡ ಅಭಿಮಾನಿ” ಎಂದು ಘೋಷಿಸಿಕೊಂಡರು. ಅವರು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಹೊಗಳಿದರು, ಅವರ ಅಧಿಕಾರಶಾಹಿ ವಿರೋಧಿ ಮತ್ತು ರಾಷ್ಟ್ರೀಯತಾವಾದಿ ದೃಷ್ಟಿಕೋನಗಳನ್ನು ಒಟ್ಟುಗೂಡಿಸಿದರು. ಅವರ ಆಡಳಿತದಲ್ಲಿ ಭಾರತವು ಪ್ರಮುಖ ಮಿತ್ರ ರಾಷ್ಟ್ರವಾಗಲಿದೆ ಎಂದು ಅವರು ಒತ್ತಿ ಹೇಳಿದರು, ಗುಪ್ತಚರ ಹಂಚಿಕೆ ಮತ್ತು ಭದ್ರತೆಯಲ್ಲಿ ಸಹಕಾರವನ್ನು ತೋರಿದರು.”  ಎಂದು ಉಲ್ಲೇಖಿಸಲಾಗಿದೆ.

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿ ಹೇಳುವುದಾದರೆ ಡೋನಾಲ್ಡ್‌ ಟ್ರಂಪ್‌ ಅವರು 2024ರ ಅಧ್ಯಕ್ಷೀಯ ಚುನಾವಣೆಗಾಗಿ ಇತ್ತೀಚೆಗೆ ನಾನು ಹಿಂದೂ ಮತ್ತು ಭಾರತದ ದೊಡ್ಡ ಅಭಿಮಾನಿ ಎಂದು ಹೇಳಿಕೊಂಡಿದ್ದಾರೆ ಎಂಬುದು ಸುಳ್ಳು. ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ ಸುದ್ದಿ 2016ರದ್ದಾಗಿದ್ದು, ಇದನ್ನು ಇತ್ತೀಚೆಗಿನದ್ದು ಎಂದು ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ವೈರಲ್‌ ವಿಡಿಯೋ ಸುಳ್ಳು ಪ್ರತಿಪಾದನೆಯಿಂದ ಕೂಡಿದೆ.


ಇದನ್ನೂ ಓದಿ : Fact Check | ಟೆಲಿಗ್ರಾಮ್ ಅಪ್ಲಿಕೇಶನ್ ಅನ್ನು ನಿಷೇಧಿಸುವುದಿಲ್ಲ ಎಂದು ಪ್ರಧಾನಿ ಮೋದಿ ಭರವಸೆ ನೀಡಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *