“ಮೊನ್ನೆ ಬಾಂಗ್ಲಾದೇಶದ ಮುಸ್ಲಿಂ ಮತಾಂದರು ಇಸ್ಕಾನ್ ದೇವಸ್ಥಾನವನ್ನು ಸುಟ್ಟುಹಾಕಿದರು, ಅದಾದ ಕೆಲವೇ ದಿನಗಳಲ್ಲಿ ಬಾಂಗ್ಲಾದೇಶದಲ್ಲಿ ಪ್ರವಾಹ ಬಂದು ಅಲ್ಲಿನ ಅದೇ ಮುಸಲ್ಮಾನರು ಅನ್ನ ನೀರಿಗಾಗಿ ತತ್ತರಿಸುತ್ತಿದ್ದರು. ಇದರಿಂದ ಅವರು ತಮ್ಮ ಮನೆ ಮಠ ಕಳೆದುಕೊಂಡು ಬೀದಿಗೆ ಬಿದ್ದಿದ್ದರು, ಅದೇ ಬೀದಿಗೆ ಬಿದ್ದವರಿಗೆ ತಾವೆ ಸುಟ್ಟು ಹಾಕಿದ ಇಸ್ಕಾನ್ ದೇವಸ್ಥಾನದ ಊಟವೆ ಈಗ ಗತಿಯಾಗಿದೆ” ಎಂದು ಫೋಟೋದೊಂದಿಗೆ ವಿವಿಧ ಬರಹಗಳನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ಹೀಗೆ ಹಂಚಿಕೊಳ್ಳಲಾಗುತ್ತಿರುವ ಬರಹವನ್ನು ವಿವಿಧ ಕೋಮು ನಿರೂಪಣೆ ನೀಡಿ ಹಂಚಿಕೊಳ್ಳಲಾಗುತ್ತಿದ್ದು, ಮುಸಲ್ಮಾನ ಸಮುದಾಯವನ್ನು ಟೀಕಿಸಿ ಕೂಡ ಪೋಸ್ಟ್‌ಗಳನ್ನು ಮಾಡಲಾಗುತ್ತಿದೆ. ಇದನ್ನು ನೋಡಿದ ಹಲವು ಸಾಮಾಜಿಕ ಜಾಲತಾಣದ ಬಳಕೆದಾರರು ತಮ್ಮ ವೈಯಕ್ತಿಕ ಖಾತೆಗಳಲ್ಲಿ ಕೂಡ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಶೇರ್ ಮಾಡಲಾಗುತ್ತಿರುವ ಫೋಟೋವಿನ ಅಸಲಿಯತ್ತು ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಶೇರ್ ಮಾಡಲಾಗುತ್ತಿರುವ ವೈರಲ್ ಫೋಟೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು ಇದಕ್ಕಾಗಿ ಫೋಟೋವಿಗೆ ಸಂಬಂಧಿಸಿದಂತೆ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಲಾಯಿತು. ಈ ವೇಳೆ 25 ಆಗಸ್ಟ್ 2022ರಂದು ಫೇಸ್‌ಬುಕ್ ಖಾತೆಯೊಂದರಲ್ಲಿ ಇದೇ ವೈರಲ್ ಫೋಟೋವನ್ನು ಹಂಚಿಕೊಳ್ಳಲಾಗಿದ್ದು, ಅದರಲ್ಲಿ ಇಸ್ಕಾನ್ ಮಾಯಾಪುರ ಯಾತ್ರೆಯಲ್ಲಿ ಪ್ರಸಾದ ವಿತರಣೆ ಎಂಬ ಶೀರ್ಷಿಕೆಯನ್ನು ನೀಡಿರುವುದು ಕಂಡು ಬಂದಿದೆ. ಹೀಗಾಗಿ ಈ ಫೋಟೋ ಬಾಂಗ್ಲಾದೇಶದಲ್ಲ, ಭಾರತದ್ದಾಗಿದೆ ಮತ್ತು 2022ರದ್ದು ಎಂಬುದು ಸಾಬೀತಾಗಿದೆ.
ಆದರೂ ಹೆಚ್ಚಿನ ಮಾಹಿತಿಗಾಗಿ ನಾವು ವೈರಲ್ ವಿಡಿಯೋದಲ್ಲಿ ಹೇಳಿದಂತೆ ಯಾವುದಾದರೂ ವರದಿಗಳು ಕಂಡು ಬಂದಿವೆಯೇ ಎಂದು ಪರಿಶೀಲನೆ ನಡೆಸಲು ಅಂತರ್ಜಾಲದಲ್ಲಿ ಹುಡಕಾಟವನ್ನು ನಡೆಸಿದೆವು. ಒಂದು ವೇಳೆ ವೈರಲ್ ವಿಡಿಯೋದಲ್ಲಿ ಹೇಳಿದಂತೆ ನಡೆದಿದ್ದರೆ ಆ ಕುರಿತು ವರದಿ ಪ್ರಕಟವಾಗಬೇಕಿತ್ತು. ಆದರೆ ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ಇಸ್ಕಾನ್ ಪ್ರವಾಹ ಸಂತ್ರಸ್ಥರಿಗೆ ಆಹಾರ ವಿತರಿಸಿದೆ ಎಂಬ ಯಾವುದೇ ವರದಿಗಳು ಕಂಡು ಬಂದಿಲ್ಲ. ಹಾಗಾಗಿ ವೈರಲ್ ಫೋಟೋ ನಂಬಿಕೆಗೆ ಅರ್ಹವಾಗಿಲ್ಲ.
ಒಟ್ಟಾರೆಯಾಗಿ ಹೇಳುವುದಾದರೆ ಎಲ್ಲಾ ಅಂಶಗಳ ಆಧಾರದ ಮೇಲೆ ನಡೆಸಿದ ಪರಿಶೀಲನೆಯಲ್ಲಿ ವೈರಲ್ ಪೋಸ್ಟ್‌ನಲ್ಲಿ ಹಂಚಿಕೊಂಡಂತೆ ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ಭೀಕರ ಪ್ರವಾಹ ಬಂದು, ಅಲ್ಲಿ ಪರದಾಡುತ್ತಿದ್ದ ಮುಸಲ್ಮಾನರಿಗೆ ಇಸ್ಕಾನ್ ಆಹಾರ ವಿತರಿಸಿದೆ ಎಂಬುದು ಸುಳ್ಳು ಮಾಹಿತಿಯಿಂದ ಕೂಡಿದೆ. ಇಂತಹ ಸುಳ್ಳು ಪೋಸ್ಟ್‌ಗಳನ್ನು ಹಂಚಿಕೊಳ್ಳುವ ಮುನ್ನ ಎಚ್ಚರ ವಹಿಸಿ.
ಇದನ್ನೂ ಓದಿ : Fact Check | 200 ರೂ ನೋಟು ಬ್ಯಾನ್ ಆಗಲಿದೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.