Fact Check | ಪ್ರತಿಭಟನೆಯ ಸಂದರ್ಭದಲ್ಲಿ ಹಿಂದೂಗಳು ಕಲ್ಲು ತೂರಾಟ ನಡೆಸಿದ್ದಾರೆ ಎಂಬುದು ಸುಳ್ಳು

“ಈ ವಿಡಿಯೋ ನೋಡಿ.. ಇದು ಪ್ರತಿಭಟನೆಯ ಸಂದರ್ಭದಲ್ಲಿ ತೆಗೆದಂತಹ ದೃಶ್ಯಾವಳಿಗಳು. ಇಲ್ಲಿ ಪ್ರತಿಭಟನೆ ನಡೆಸುತ್ತಿರುವವರೆಲ್ಲರೂ ಕೂಡ ಹಿಂದೂಗಳು. ಹೀಗೆ ಯಾವುದೋ ಒಂದು ವಿಚಾರದ ವಿರುದ್ಧವಾಗಿ ಪ್ರತಿಭಟಿಸುವ ಇವರು ಏಕಾಏಕಿ ಉದ್ರಿಕ್ತರಾಗಿ ಕಲ್ಲು ತೂರಾಟವನ್ನು ನಡೆಸಲು ಪ್ರಾರಂಭಿಸಿದರು. ಆದರೆ ಇದುವರೆಗೂ ಇವರ ಮನೆಗಳನ್ನು ಯಾವ ಕಾನೂನಿಂದಲೂ ಕೆಡವಲಾಗಿಲ್ಲ. ಇದು ಇಂದಿನ ಸರ್ಕಾರದ ಇಬ್ಬಗೆಯ ನೀತಿಯಲ್ಲದೆ ಮತ್ತಿನ್ನೇನು?” ಎಂಬ ಬರಹದೊಂದಿಗೆ ವಿಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ

ಈ ವಿಡಿಯೋದಲ್ಲಿ ಕೂಡ ಕಲ್ಲು ತೂರಾಟ ನಡೆಸುವ ಹಲವು ಮಂದಿ ಕೇಸರಿ ಬಣ್ಣದ ಶಾಲುಗಳು, ಕೇಸರಿ ಬಣ್ಣದ ಉಡುಗೆಗಳು ಧರಿಸಿರುವುದರಿಂದ ಹಲವರು ವೈರಲ್ ಪೋಸ್ಟ್‌ ಅನ್ನು ನಿಜವೆಂದು ಭಾವಿಸಿ, ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಂಡು, ಆಕ್ರೋಶವನ್ನು ಹೊರಹಾಕಿದ್ದಾರೆ. ಮತ್ತು ರಾಜಕೀಯವಾಗಿ ಚರ್ಚೆಯನ್ನು ಕೂಡ ಮಾಡುತ್ತಿದ್ದಾರೆ. ಹೀಗೆ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನ ಸತ್ಯಾಸತ್ಯತೆ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವ ಪೋಸ್ಟ್‌ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ವೈರಲ್‌ ವಿಡಿಯೋವಿನ ವಿವಿಧ ಕೀ ಫ್ರೇಮ್‌ಗಳನ್ನು ಬಳಸಿ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲನೆಯನ್ನು ನಡೆಸಲಾಯಿತು. ಈ ವೇಳೆ ನಮಗೆ 2024 ರ ಬಾಗ್ವಾಲ್ ಮೇಳವನ್ನು ವಿವರಿಸುವ ವಿವಿಧ ವರದಿಗಳು ಕಂಡು ಬಂದವು. ಈ ವರದಿಗಳಲ್ಲಿ “ಉತ್ತರಾಖಂಡದ ದೇವಿಧುರಾದಲ್ಲಿ ಹೆಸರಾಂತ ಬಾಗ್ವಾಲ್ ಜಾತ್ರೆ ಪ್ರಾರಂಭವಾಯಿತು, ಕೇಂದ್ರ ರಾಜ್ಯ ಸಚಿವ ಅಜಯ್ ತಮ್ತಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜಾತ್ರೆಯ ಪ್ರಾರಂಭದಲ್ಲಿ ದೇವಿಧುರ ಬಾಗವಾಲ ಮೇಳದ ಶ್ರೀಮಂತ ಇತಿಹಾಸವನ್ನು ಸಾರುವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.” ಎಂದು ಉಲ್ಲೇಖಿಸಿರುವುದು ಕೂಡ ಕಂಡು ಬಂದಿದೆ.

ಸಂಪ್ರದಾಯದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ನಾವು ಉತ್ತರಾಖಂಡದ ಪ್ರವಾಸೋದ್ಯಮ ಸಚಿವಾಲಯದ ವೆಬ್‌ಸೈಟ್‌ಗೆ ಭೇಟಿ ನೀಡಿದ್ದೇವೆ, ಇದು ದೇವಿಧುರ ಬಗ್ವಾಲ್ ಮೇಳದ ಬಗ್ಗೆ ವಿವರವಾದ ಸಂದರ್ಭವನ್ನು ಒದಗಿಸಿದೆ. ಚಂಪಾವತ್ ಜಿಲ್ಲೆಯ ರಕ್ಷಾ ಬಂಧನದ ಸಂದರ್ಭದಲ್ಲಿ ವಾರ್ಷಿಕವಾಗಿ ನಡೆಯುವ ಈ ಕಾರ್ಯಕ್ರಮವು ಬರಾಹಿ ದೇವಿಯ ದೇವಿಧುರ ದೇವಸ್ಥಾನದಲ್ಲಿ ನಡೆಯುತ್ತದೆ. ಮೇಳವು ನಾಲ್ಕು ಕುಲಗಳು (ಖಾಮ್) ಪರಸ್ಪರರ ಮೇಲೆ ಕಲ್ಲುಗಳನ್ನು ಎಸೆಯುವುದನ್ನು ಒಳಗೊಂಡಿದೆ ಎಂಬುದು ತಿಳಿದು ಬಂದಿದೆ. ಹಾಗಾಗಿ ವೈರಲ್‌ ಪೋಸ್ಟ್‌ನಲ್ಲಿ ಯಾವುದೇ ನೈಜಾಂಶವಿಲ್ಲ ಎಂಬುದು ಸಾಬೀತಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ರೀತಿಯಲ್ಲಿ ಹಿಂದೂಗಳು ಪ್ರತಿಭಟನೆಯ ಸಂದರ್ಭದಲ್ಲಿ ಕಲ್ಲು ತೂರಾಟವನ್ನು ನಡೆಸಿದ್ದಾರೆ ಮತ್ತು ಆ ಮೂಲಕ ವಿದ್ವಾಂಸಕ ಕೃತ್ಯಕ್ಕೆ ಮುಂದಾಗಿದ್ದಾರೆ ಎಂಬುದು ಸುಳ್ಳಾಗಿದೆ. ಹಾಗಾಗಿ ಇಂತಹ ಸುಳ್ಳು ಸುದ್ದಿ ಕಂಡು ಬಂದರೆ ಅವುಗಳನ್ನು ಹಂಚಿಕೊಳ್ಳಬೇಡಿ ಮತ್ತು ಸುಳ್ಳು ಸುದ್ದಿ ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ ಎಂಬುದನ್ನು ಮರೆಯಬೇಡಿ.


ಇದನ್ನೂ ಓದಿ : Fact Check | ಬಾಂಗ್ಲಾದೇಶದ ಪ್ರವಾಹ ಸಂದರ್ಭದಲ್ಲಿ ಇಸ್ಕಾನ್‌ ಆಹಾರ ವಿತರಿಸಿದೆ ಎಂದು ಹಳೆಯ ವಿಡಿಯೋ ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *