ಬಾಲಿವುಡ್ ದಂಪತಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ತಮ್ಮ ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಆದರೆ, ನಟಿ ದೀಪಿಕಾ ಮಗುವನ್ನು ಹಿಡಿದುಕೊಂಡಿರುವ ಹಲವು ಚಿತ್ರಗಳು ಇಂಟರ್ನೆಟ್‌ನಲ್ಲಿ ಹರಿದಾಡುತ್ತಿವೆ. ಗರ್ಭಿಣಿಯಾಗಿ ಏಳು ತಿಂಗಳಲ್ಲೇ ಹೆರಿಗೆಯಾಗಿದೆ ಎಂದು ಪೋಸ್ಟ್ ಹಂಚಿಕೊಳ್ಳಲಾಗುತ್ತಿದೆ.
“ಶುಭಸುದ್ದಿ ಬಾಲಿವುಡ್ ನಟಿ ದೀಪಿಕಾ ಏಳು ತಿಂಗಳ ಬಳಿಕ ಮೊದಲ ಬಾತಿ ಮಗುವಿಗೆ ಜನ್ಮ ನೀಡಿದ್ದಾರೆ”. ಎಂದು ಹೇಳಿ ಕೆಲವು ಫೋಟೋಗಳನ್ನು ಲಗತ್ತಿಸಿ ಹಂಚಿಕೊಳ್ಳಲಾಗಿದೆ.
ಫ್ಯಾಕ್ಟ್‌ಚೆಕ್:
ನ್ಯೂಸ್‌ಮೊಬೈಲ್ ಎಂಬ ಸುದ್ದಿಸಂಸ್ಥೆಯು ಈ ಫೋಟೊಗಳ ಸತ್ಯಾಸತ್ಯತೆಯ ಬಗ್ಗೆ ಅನ್ವೇಷಣೆ ನಡೆಸಿದ್ದು, ಇವುಗಳು ನಟಿ ದೀಪಿಕಾ ಪಡುಕೋಣೆಯವರ ಚಿತ್ರಗಳಲ್ಲ ಬದಲಾಗಿ ನಕಲು ಮಾಡಲಾದ ಮತ್ತು ತಿರುಚಲಾದ ಚಿತ್ರಗಳು ಎಂದು ವರದಿ ಮಾಡಿದೆ.
ದೀಪಿಕಾ ಪಡುಕೋಣೆ ಮಗುವಿಗೆ ಜನ್ಮ ನೀಡಿರುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಿಲ್ಲದ ಕಾರಣದಿಂದಾಗಿ ಹಂಚಿಕೊಳ್ಳಲಾಗುತ್ತಿರುವ, ಚಿತ್ರಗಳನ್ನು ರಿವರ್ಸ್ ಇಮೇಜ್ ಹುಡುಕಾಟದ ಮೂಲಕ ನೋಡಿದಾಗ,
ಮೊದಲ ಚಿತ್ರವು ದ ಲಾರೆಡೊ ಮಾರ್ನಿಂಗ್ ಟೈಮ್ಸ್(LMTonline)ನಲ್ಲಿ ಲಭ್ಯವಾಗಿದೆ. ದಿ ಲಾರೆಡೊ ಮಾರ್ನಿಂಗ್ ಟೈಮ್ಸ್ ಅಮೇರಿಕಾದ ದಿನ ಪತ್ರಿಕೆಗಳಲ್ಲಿ ಒಂದಾಗಿದ್ದು, 2022ರ ಜನವರಿ 2ರಂದು ಈ ಫೋಟೋ ಮುದ್ರಣವಾಗಿದೆ.
ವರದಿಯ ಪ್ರಕಾರ, ಚಿತ್ರದಲ್ಲಿರುವ ಮಹಿಳೆಯ ಹೆಸರು ಸಿಂಡಿ ಚಾವೆಜ್. ಮತ್ತು ಫೋಟೋವನ್ನು ಟೆಕ್ಸಾಸ್‌ನ ಲಾರೆಡೊದಲ್ಲಿ ತೆಗೆದುಕೊಳ್ಳಲಾಗಿದೆ. ಆಕೆಯ ಮಗು ಡಾಕ್ಟರ್ಸ್ ಆಸ್ಪತ್ರೆಯಲ್ಲಿ ಜನಿಸಿತ್ತು. ಅಲ್ಲಿ ಹೊಸ ವರ್ಷದ ದಿನದಂದು ಜನಿಸಿದ ಶಿಶುಗಳಿಗೆ ಉಡುಗೊರೆಗಳನ್ನು ನೀಡುವ ಸಂಪ್ರದಾಯವಿದೆ. 2022 ರಲ್ಲಿ, ಸಿಂಡಿ ಚಾವೆಜ್ ಮತ್ತು ಅವರ ಮಗಳಿಗೆ ಆಸ್ಪತ್ರೆಯಿಂದ ಮತ್ತು ಹಲವರಿಂದ ಉಡುಗೊರೆಗಳು ಲಭಿಸಿದ್ದು,ಈ ಸುದ್ದಿ ಮಾಧ್ಯಮ ಪ್ರಸಾರದಲ್ಲಿ ಅವರ ಫೋಟೋಗಳು ಸಹ ಕಾಣಿಸಿಕೊಂಡಿದ್ದವು.
ಎರಡನೆ ಫೋಟೋ ಪರ್ಷಿಯನ್ ಲೇಖನದ ಒಂದು ವರದಿಯದ್ದಾಗಿದ್ದು, ಅದರಲ್ಲಿ ಮಗುವನ್ನು ಹಿಡಿದಿರುವ ವಿಭಿನ್ನ ಮಹಿಳೆಯ ಚಿತ್ರವಿದೆ.
ಮೇಲಿನ ಎಲ್ಲಾ ಆಧಾರಗಳನ್ನು ಗಮನಿಸುವಾಗ, ಮೂಲ ಚಿತ್ರಗಳ ಮೇಲೆ ದೀಪಿಕಾ ಪಡುಕೋಣೆ ಅವರ ಮುಖವನ್ನು ನಕಲು ಮಾಡಿ ಲಗತ್ತಿಸಿರುವುದು ಸಾಬೀತಾಗಿದೆ. ಹಾಗಾಗಿ ದೀಪಿಕಾ ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಹಂಚಿಕೊಳ್ಳುತ್ತಿರುವ ಚಿತ್ರಗಳು ನಕಲಿ ಎಂದು ಧೃಢೀಕರಿಸಲಾಗಿದೆ.