ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಅವರ ಪಕ್ಕದಲ್ಲಿ ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿ ಸಂಜಯ್ ರಾಯ್ ಕೇಕ್ ಕತ್ತರಿಸುತ್ತಿದ್ದಾನೆ ಎಂದು ಹೇಳುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಕೋಲ್ಕತ್ತಾದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಭೀಕರ ಅಪರಾಧ ಪತ್ತೆಯಾದಾಗಿನಿಂದ ಪ್ರಾಂಶುಪಾಲ ಸಂದೀಪ್ ಘೋಷ್ ಸುದ್ದಿಯಲ್ಲಿದ್ದಾರೆ. ಆಗಸ್ಟ್ 9ರಂದು ಸ್ನಾತಕೋತ್ತರ ತರಬೇತಿ ವೈದ್ಯ ವಿದ್ಯಾರ್ಥಿನಿಯ ಮೃತದೇಹ ಪತ್ತೆಯಾದ ನಂತರ ಘೋಷ್ ಘಟನೆಯ ಬಗ್ಗೆ ಎಫ್‌ಐಆರ್ ಸಹ ದಾಖಲಿಸಿರಲಿಲ್ಲ. ಅವರ ಈ ನಡವಳಿಕೆಯ ಬಗ್ಗೆ ಗಂಭೀರ ಆರೋಪಗಳು ಕೇಳಿಬಂದ ಬಳಿಕ ಆಗಸ್ಟ್ 12ರಂದು ರಾಜೀನಾಮೆ ನೀಡಿದ್ದರು. ಆದರೆ, ಅವರು ರಾಜೀನಾಮೆ ನೀಡಿದ ಕೆಲವೇ ಗಂಟೆಗಳಲ್ಲಿ ಪಶ್ಚಿಮ ಬಂಗಾಳ ಸರ್ಕಾರವು ಅವರನ್ನು ಮತ್ತೊಂದು ಸರ್ಕಾರಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾಗಿ ಮರು ನೇಮಕಾತಿ ಮಾಡಿತ್ತು. ಭಾರೀ ವಿರೋಧದ ಬಳಿಕ ಈ ನಿರ್ಧಾರವನ್ನು ಹಿಂತೆಗೆದುಕೊಂಡಿತ್ತು ಮತ್ತು ಕಲ್ಕತ್ತಾ ಹೈಕೋರ್ಟ್ ಅವರನ್ನು ಕಡ್ಡಾಯ ರಜೆ ತೆಗೆದುಕೊಳ್ಳುವಂತೆ ಆದೇಶಿಸಿತ್ತು. ಈ ಬಳಿಕ ಸಿಬಿಐ ಸತತ 13ದಿನಗಳ ಕಾಲ ಘೋಷ್ ಅವರನ್ನು ವಿಚಾರಣೆಗೆ ಒಳಪಡಿಸಿತ್ತು.
ಆದರೆ, ಆಗಸ್ಟ್ 29ರಂದು ಪ್ರಧಾನಿ ಮೋದಿಯವರ ಸಮರ್ಥಕ ಎಂದು ಹೇಳಿಕೊಂಡಿರುವ ಜಿತೇಂದ್ರ ಪ್ರತಾಪ್ ಸಿಂಗ್ ತನ್ನ ಎಕ್ಸ್ ಖಾತೆಯಲ್ಲಿ
“ಕೋಲ್ಕತ್ತಾ ಅತ್ಯಾಚಾರ ಕೊಲೆ ಆರೋಪಿ ಸಂಜಯ್ ರಾಯ್ ಯಾವುದೇ ಪದವಿ ಔದ್ಯೋಗಿಕ ಸ್ಥಾನ ಇರಲಿಲ್ಲ. ಆತ ಮೊದಲಿನಿಂದಲೇ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತನಾಗಿದ್ದ. ಹೀಗಾಗಿ ತೃಣಮೂಲ ಕಾಂಗ್ರೆಸ್‌ನ ಸಿಂಡಿಕೇಟ್ ಈತನಿಗೆ ಮೆಡಿಕಲ್ ಕಾಲೇಜಿನಲ್ಲಿ ಕ್ಯಾಂಟೀನ್ ಉಸ್ತುವಾರಿ ಸೇರಿದಂತೆ ಆಸ್ಪತ್ರೆಯಲ್ಲಿ ರೋಗಿಗಳನ್ನು ದಾಖಲು ಮಾಡಿಸುವುದಕ್ಕೆ ಕಮಿಷನ್ ಕೊಡುತ್ತಿತ್ತು. ಆತ ಆರ್‌ಜಿ ಕರ್ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಸಂದೀಪ್ ಘೋಷ್‌ರವರ ಕ್ಯಾಬಿನ್ ಕೋಣೆಯಲ್ಲಿ ತನ್ನ ಜನ್ಮದಿನವನ್ನು ಆಚರಿಸಿತ್ತಿರುವ ಪೊಗರು ನೋಡಿ. ಮಮತಾ ಬ್ಯಾನರ್ಜಿಯವರು ಹೇಗೆ ಕಮಿಷನ್‌ಕೋರರಿಗಾಗಿ ಬಂಗಾಳವನ್ನು ಹಾಳು ಮಾಡಿಟ್ಟಿದ್ದಾರೆಂಬುದನ್ನು ಇದನ್ನು ನೋಡಿಯಾದರೂ ನೀವು ಊಹಿಸಿಕೊಳ್ಳಿ”. ಎಂದು ಎಕ್ಸ್ ಖಾತೆಯಲ್ಲಿ ಘೋಷ್‌ರವರ ಕೊಠಡಿಯಲ್ಲಿ ಕೇಕ್ ಕತ್ತರಿಸುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
कोलकाता का दरिंदा संजय राय किसी भी पद पर नहीं था
वह तृणमूल कांग्रेस का कार्यकर्ता था
और तृणमूल कांग्रेस के सिंडिकेट ने उसे मेडिकल कॉलेज में कैंटीन चलाने का और मरीजों को एडमिट करने पर कमीशन का परमिशन दिया था
और उसका रुतबा देखिए कि वह आरजी कर मेडिकल कॉलेज के प्रिंसिपल संदीप… pic.twitter.com/zPZBcjCmPY
— 🇮🇳Jitendra pratap singh🇮🇳 (@jpsin1) August 29, 2024
ಇದೇ ಫೋಟೋ ಬಳಸಿ ಹಲವು ಎಕ್ಸ್ ಖಾತೆಗಳಲ್ಲಿ ಇಂತಹುದೇ ಸಂದೇಶ ಹಂಚಿಕೊಂಡಿರುವುದನ್ನು ಕಾಣಬಹುದು. ಝೀನ್ಯೂಸ್, ಕೋಲ್ಕತ್ತಾ ಟೆಲಿವಿಷನ್ ನೆಟ್ವರ್ಕ್ ಕೂಡ ಇದನ್ನೇ ಆಧಾರವಾಗಿರಿಸಿಕೊಂಡು ವರದಿ ಮಾಡಿವೆ.
ಫ್ಯಾಕ್ಟ್‌ಚೆಕ್
ಈ ಫೋಟೋವನ್ನು ಗೂಗಲ್ ರಿವರ್ಸ್ ಸರ್ಚ್ ಮಾಡಿದಾಗ, ಕಲ್ಕತ್ತಾ ನ್ಯಾಷನಲ್ ಮೆಡಿಕಲ್ ಕಾಲೇಜ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ ಎಂಬ ಇನ್ಸ್ಟಾಗ್ರಾಮ್ ಹ್ಯಾಂಡಲಿನಲ್ಲಿ ಆಗಸ್ಟ್ 28ರಂದು ಹಂಚಿಕೊಳ್ಳಲಾಗಿದ್ದು, ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ವ್ಯಕ್ತಿಯನ್ನು ಕಲ್ಕತ್ತಾ ನ್ಯಾಷನಲ್ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯ(CNMC&H) ಡಾಟಾ ಎಂಟ್ರಿ ಆಪರೇಟರ್ ಪ್ರಸೂನ್ ಚಟರ್ಜಿ ರಾಣಾ ಎಂದು ಗುರುತಿಸಿದೆ.
ಪ್ರಸೂನ್ ಚಟರ್ಜಿಯವರ ಬಗ್ಗೆ ಅನ್ವೇಷಿಸಿದಾಗ 2020ರ ಜನವರಿ 3ರಂದು ಕಲ್ಕತ್ತಾ ನ್ಯಾಷನಲ್ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯ(CNMC&H) ಮೆಡಿಕಲ್ ಸೂಪರ್‌ವೈಸರ್ ಹಾಗೂ ಕಾಲೇಜು ಉಪ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದ ಸಂದೀಪ್ ಘೋಷ್‌ರವರ ಕಚೇರಿಯಲ್ಲಿ ಡಾಟಾ ಎಂಟ್ರಿ ಆಪರೇಟರ್ ಪ್ರಸೂನ್ ಚಟರ್ಜಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದರ ಬಗ್ಗೆ ಫೇಸ್‌ಬುಕ್ ಪೋಸ್ಟ್ ಲಭ್ಯವಿದೆ.
2020ರ ಜನವರಿ 3 ರಂದು ಪೋಸ್ಟ್ ಮಾಡಲಾದ ಫೇಸ್‌ಬುಕ್ ಪೋಸ್ಟ್‌ನಲ್ಲಿ ಸುಮಾರು 8 ಫೋಟೋಗಳು ಲಭ್ಯವಿದ್ದು, ಸಂದೀಪ್ ಘೋಷ್ ಹಾಗೂ ಡಾಟಾ ಎಂಟ್ರಿ ಆಪರೇಟರ್ ಪ್ರಸೂನ್ ಚಟರ್ಜಿಯ ಇರುವುದು ದೃಢೀಕೃತವಾಗಿದೆ. ಪ್ರಸೂನ್ ಈಗಿನ ಆರ್‌ಜಿಕರ್ ಕಾಲೇಜು ಪ್ರಾಂಶುಪಾಲರಾದ ಘೋಷ್‌ರವರೊಂದಿಗೆ ಬಹಳ ವರ್ಷಗಳ ಕಾಲ ಕೆಲಸ ಮಾಡಿದ್ದಾರೆ ಎಂದು ಬಂಗಾಳಿ ಮಾಧ್ಯಮಗಳೂ ವರದಿ ಮಾಡಿವೆ.
ಈ ಎಲ್ಲ ಚಿತ್ರಗಳನ್ನು ಪರಿಶೀಲಿಸಿದಾಗ ಫೋಟೋದಲ್ಲಿರುವ ವ್ಯಕ್ತಿಯು ಅತ್ಯಾಚಾರ ಕೊಲೆ ಆರೋಪಿ ಸಂಜಯ್ ರಾಯ್ ಅಲ್ಲ ಬದಲಾಗಿ ಕಲ್ಕತ್ತಾ ನ್ಯಾಷನಲ್ ಕಾಲೇಜಿನಲ್ಲಿ ಡಾಟಾ ಎಂಟ್ರಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಪ್ರಸೂನ್ ಚಟರ್ಜಿ ಎಂಬುದು ಸಾಬೀತಾಗಿದೆ.