ಈ ಫೋಟೋ ನೋಡಿ.. ಇದೊಂದು ಅಪರೂಪದ ಫೋಟೋ, ಇದರಲ್ಲಿ ಮಹಾತ್ಮ ಗಾಂಧಿ ಅವರು ಡಾ. ಬಿ.ಆರ್. ಅಂಬೇಡ್ಕರ್ ಅವರ ಪಾದಗಳನ್ನು ಸ್ಪರ್ಷಿಸಿ ಅವರಿಂದ ಆಶಿರ್ವಾದಗಳನ್ನು ಪಡೆದುಕೊಂಡಿದ್ದಾರೆ. ಇಂತಹ ಅಪರೂಪದ ಫೋಟೋಗಳನ್ನು ಸರ್ಕಾರ ನಮ್ಮಿಂದ ಮುಚ್ಚಿಟ್ಟಿದ್ದು ಯಾಕೆ? ಈ ಫೋಟೋವನ್ನು ಆದಷ್ಟು ಎಲ್ಲರಿಗೂ ಹಂಚಿಕೊಳ್ಳಿ ಎಂದು” ವೈರಲ್ ಫೋಟೋದೊಂದಿಗೆ ವಿವಿಧ ರೀತಿಯಾದ ಟಿಪ್ಪಣಿಗಳನ್ನು ಬರೆದು ಹಂಚಿಕೊಳ್ಳಲಾಗುತ್ತಿದೆ.
ಈ ವೈರಲ್ ಫೋಟೋವನ್ನು ನೋಡಿದ ಹಲವು ಮಂದಿ ಇದು ನಿಜವಾದ ಫೋಟೋ ಇರಬೇಕು ಎಂದು ಭಾವಿಸಿ ಸಾಕಷ್ಟು ಮಂದಿ ವಾಟ್ಸ್‌ಆಪ್ ಸೇರಿದಂತೆ ತಮ್ಮ ವಿವಿಧ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಹೀಗೆ ವ್ಯಾಪಕವಾಗಿ ಶೇರ್ ಮಾಡಲಾಗುತ್ತಿರುವ ವಿಡಿಯೋವಿನ ಫೋಟೋವಿನ ಹಿನ್ನೆಲೆ ಎಂದು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಶೋಣ
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಫೋಟೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ವೈರಲ್ ಫೋಟೋಗೆ ಸಂಬಂಧಿಸಿದಂತೆ ಕೆಲವೋಂದು ಕೀ ಫ್ರೇಮ್‌ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ವೈರಲ್ ಚಿತ್ರದ ಬೇರೆ ಬೇರೆ ಆವೃತ್ತಿಯ ಫೋಟೋಗಳು ಪತ್ತೆಯಾಗಿದ್ದು, ಆ ಫೋಟೋಗಳ ಮೂಲಕ ವೈರಲ್ ಫೋಟೋ ಎಡಿಟೆಡ್ ಆಗಿದೆ ಎಂಬುದನ್ನು ಕಂಡು ಕೊಂಡಿದ್ದೇವೆ.
ಈ ಕುರಿತು ಇನ್ನಷ್ಟು ಮಾಹಿತಿಯನ್ನು ಪಡೆಯಲು ನಾವು ಪ್ರತ್ಯೇಕ ಫೋಟೋಗಳ ಕುರಿತು ಪರಿಶೀಲನೆ ನಡೆಸಲು ಪ್ರಾರಂಭಿಸಿದೆವು. ಈ ವೇಳೆ ನಮಗೆ “ಡಾ . ಅಂಬೇಡ್ಕರ್ ಅವರು ಪತ್ನಿ ಡಾ. ಸವಿತಾ ಅಂಬೇಡ್ಕರ್, ಸಾಹಾಯಕ ಸುದಾಮ ಮತ್ತು ಅವರ ಶ್ವಾನದೊಂದಿಗೆ” ಎಂದು alamy ವೆಬ್‌ತಾಣದಲ್ಲಿ ಮೂಲ ಫೋಟೋವನ್ನು ಕಂಡು ಕೊಂಡಿದ್ದೇವೆ. ಇದರ ಜೊತೆಗೆ ಗಾಂಧಿಯವರ ಚಿತ್ರದ ಕುರಿತು ಹೆಚ್ಚಿನ ಪರಿಶೀಲನೆಯನ್ನು ನಡೆಸಲಾಯಿತು. ಈ ವೇಳೆ ನಮಗೆ ದಂಡಿ ಮಾರ್ಚ್ 1930 ರ ಸಮಯಕ್ಕೆ ಹಿಂದಿನದು, ಈ ಚಿತ್ರದಲ್ಲಿ ಗಾಂಧಿಯವರು ಉಪ್ಪನ್ನು ಎತ್ತುತ್ತಿರುವುದನ್ನು ಕಾಣಬಹುದು. ಇದೇ ಫೋಟೋವನ್ನು ಬಳಸಿಕೊಂಡು ವೈರಲ್ ಫೋಟೋದೊಂದಿಗೆ ಸುಳ್ಳು ಮಾಹಿತಿಯನ್ನು ಹಂಚಿಕೊಳ್ಳಲಾಗುತ್ತಿದೆ.
ಒಟ್ಟಾರೆಯಾಗಿ ಹೇಳುವುದಾದರೆ ಮಹಾತ್ಮ ಗಾಂಧಿಯವರು ಬಾಬಾಸಾಹೇಬ್ ಅಂಬೇಡ್ಕರ್ ಅವರ ಪಾದಗಳನ್ನು ಸ್ಪರ್ಶಿಸುತ್ತಿದ್ದಾರೆ ಎಂದು ಎರಡು ವಿಭಿನ್ನ ಫೋಟೋಗಳನ್ನು ಎಡಿಟ್ ಮಾಡಲಾಗಿದೆ ಮತ್ತು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ನಿಮಗೆ ಯಾವುದೇ ವೈರಲ್ ಫೋಟೋಗಳು ಕಂಡು ಬಂದರೆ ಅವುಗಳನ್ನು ಪರಿಶೀಲಿಸಿ. ಒಂದು ವೇಳೆ ಸುಳ್ಳು ಮಾಹಿತಿಗಳಿಂದ ಕೂಡಿದ್ದರೆ ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ.