Fact Check | ಮುಸ್ಲಿಂ ಯುವಕರನ್ನು ಯುಪಿ ಪೊಲೀಸರು ಥಳಿಸಿದ ಹಳೆಯ ವಿಡಿಯೋ ಹಸುವಿನ ಬಾಲ ಕತ್ತರಿಸಿದ್ದಕ್ಕೆ ಎಂದು ತಪ್ಪಾಗಿ ಹಂಚಿಕೆ

“ರಾಜಸ್ಥಾನದ ಭಿಲ್ಜಾರದ ದೇವಸ್ಥಾನದ ಹೊರಗೆ ಹಸುವಿನ ಬಾಲವನ್ನು ಕೆಲ ಅನ್ಯಕೋಮಿನ ಕಿಡಿಗೇಡಿಗಳು ಎಸೆದು ಹೋಗಿದ್ದಾರೆ. ಇದೆ 25 ಆಗಸ್ಟ್ 2024ರಂದು ನಡೆದ ಈ ದುಷ್ಕೃತ್ಯದಲ್ಲಿ ಭಾಗಿಯಾದ ಎಂಟು ಮಂದಿಯನ್ನು ಈಗ ಬಂಧಿಸಲಾಗಿದ್ದು, ಅವರಿಗೆ ಪೊಲೀಸರು ತಮ್ಮ ಬೂಟು ಕಾಲಿನ ರುಚಿಯನ್ನು ತೋರಿಸಿದ್ದಾರೆ. ಈ ರೀತಿಯ ಹೀನ ಕೃತ್ಯವನ್ನು ಎಸೆಗಿದವರಿಗೆ ತಕ್ಕ ಪಾಠವನ್ನು ರಾಜಸ್ಥಾನದ ಪೊಲೀಸ್ ಇಲಾಖೆ ಕಲಿಸಿದೆ.” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಈ ವಿಡಿಯೋ ನೋಡಿದ ಹಲವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುವುದರ ಜೊತೆಗೆ, ಪೊಲೀಸರು ಉತ್ತಮವಾದ ಕೆಲಸವನ್ನು ಮಾಡಿದ್ದಾರೆ ಎಂದು ಪೊಲೀಸ್ ಇಲಾಖೆಯನ್ನು ಹಲವರು ಹೊಗಳಿ ಪೋಸ್ಟ್ ಮಾಡುತ್ತಿದ್ದಾರೆ. ಆದರೆ ಇನ್ನೂ ಕೆಲವರು ಇದು ಈ ಘಟನೆಗೆ ಸಂಬಂಧಿಸಿದಲ್ಲ ಎಂದು ಕಮೆಂಟ್ ಮಾಡುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ವೈರಲ್ ಆಗಿರುವ ವಿಡಿಯೋವಿನ ಅಸಲಿ ಯತ್ತು ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ವೈರಲ್ ವಿಡಿಯೋವಿಗೆ ಸಂಬಂಧ ಪಟ್ಟಂತೆ ಕೆಲವೊಂದು ಕೀ ಫ್ರೇಮ್‌ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಾಟ ನಡೆಸಲಾಯಿತು. ಈ ವೇಳೆ ನಮಗೆ ಇಂಡಿಯಾ ಟುಡೆ ಪ್ರಕಟಿಸಿದ್ದ ವರದಿಯೊಂದು ಕಂಡು ಬಂದಿತ್ತು. ಈ ವರದಿಯನ್ನು ಸಂಪೂರ್ಣವಾಗಿ ಓದಿದಾಗ ವೈರಲ್‌ ಪೋಸ್ಟ್‌ಗೂ ಅಸಲಿ ಘಟನೆಗೂ ಯಾವುದೇ ರೀತಿಯಾದ ಸಂಬಂಧವಿಲ್ಲ ಎಂಬುದು ತಿಳಿದು ಬಂದಿದೆ.

ನಾವು ಕಂಡಂತೆ  12 ಜೂನ್ 2022 ರಲ್ಲಿ ಇಂಡಿಯಾ ಟುಡೇ ಈ ವರದಿಯನ್ನು ಪ್ರಕಟಿಸಿತ್ತು. ಇದೇ ರೀತಿಯ ಹಲವು ವರದಿಗಳು ಕಂಡು ಬಂದಿವೆ. ಈ ವರದಿಯ ಪ್ರಕಾರ, 26 ಮೇ 2022ರಲ್ಲಿ ಬಿಜೆಪಿ ನಾಯಕಿ ನೂಪುರ್‌ ಶರ್ಮಾ ಪ್ರವಾದಿ ಮೊಮ್ಮದ್‌ ಫೈಗಂಬರ್‌ ಅವರ ವಿರುದ್ಧ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು. ಇದರಿಂದ ದೇಶಾದ್ಯಂತ ಪ್ರತಿಭಟನೆಗಳು ನಡೆದಿದ್ದವು. ಇದೇ ರೀತಿ ಉತ್ತರ ಪ್ರದೇಶದ ಸಹರನ್ಪುರ ಜಿಲ್ಲೆಯಲ್ಲಿ ಕೂಡ ಪ್ರತಿಭಟನೆಯನ್ನು ನಡೆಸಲಾಗಿತ್ತು. ಈ ವೇಳೆ ಕಿಡಿಗೇಡಿಗಳು ಕಲ್ಲು ತೂರಾಟವನ್ನು ನಡೆಸಿದ್ದರಿಂದ ಗಲಭೆ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ಗಲಭೆಗೆ ಕಾರಣಕರ್ತರಾದ ಕೆಲ ಶಂಕಿತರನ್ನು ಕೊತ್ವಾಲಿ ಪೊಲೀಸರು ಬಂಧಿಸಿ ವಿಚಾರಣೆಯ ನೆಪದಲ್ಲಿ ದೌರ್ಜನ್ಯವನ್ನು ನಡೆಸಿದ್ದರು. ಈ ಕುರಿತು 11 ಜೂನ್‌ 2022ರಲ್ಲಿ ವಿಡಿಯೋ ಕೂಡ ವೈರಲ್‌ ಆಗಿತ್ತು.

11 ಜೂನ್‌ 2022 ರಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದ ವಿಡಿಯೋ 

ಹೀಗೆ ಆರೋಪಿಗಳ ವಿಚಾರಣೆ ಎಂದು ಪೊಲೀಸ್‌ ಠಾಣೆಯ ಲಾಕಪ್‌ ಕೊಠಡಿಯಲ್ಲಿ ಆರೋಪಿಗಳಿಗೆ ಥಳಿಸುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆ,  ಅಂದು ಸಾಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್‌ ಅವರ ಗಮನಕ್ಕೆ ಈ ವಿಚಾರ ಬಂದಿತ್ತು. ಬಳಿಕ ಅವರು ಈ ಕುರಿತು ತಮ್ಮ ಎಕ್ಸ್‌ ಖಾತೆ( ಹಿಂದಿನ ಟ್ವಿಟರ್‌)ಯಲ್ಲಿ ಪೊಲೀಸರ ದೌರ್ಜನ್ಯದ ವಿರುದ್ಧ ಪೋಸ್ಟ್‌ ಮಾಡಿ ಆಕ್ರೋಶವನ್ನು ವ್ಯಕ್ತ ಪಡಿಸಿದ್ದರು.

ಬಳಿಕ ಈ ಕುರಿತು ಆಗಿನ ಸಹರನ್ಪುರ ಎಸ್‌ಎಸ್‌ಪಿ ಆಕಾಶ್ ತೋಮರ್ ಅವರು ಈ ಘಟನೆ  ಸಹರನ್ಪುರ ಜಿಲ್ಲೆಯಲ್ಲಿ ನಡೆದೇ ಇಲ್ಲ ಎಂದು ಹೇಳಿದ್ದರು. ಆದರೆ ವಿಡಿಯೋದಲ್ಲಿದ್ದ ವ್ಯಕ್ತಿಗಳನ್ನು ಅವರ ಕುಟುಂಬ ಪತ್ತೆ ಮಾಡಿ, ಆರೋಪಿಗಳ ನಮ್ಮ ಕುಟುಂಬದವರೇ ಎಂದು ಹೇಳಿಕೆಯನ್ನು ನೀಡಿದ್ದರು. ಇದನ್ನು ಸ್ಕ್ರೋಲ್‌.ಇನ್‌ ಸೇರಿದಂತೆ ಹಲವು ಮಾಧ್ಯಮಗಳು ಕೂಡ ವರದಿಯನ್ನು ಮಾಡಿದ್ದವು. ಹೀಗೆ ಉತ್ತರ ಪ್ರದೇಶದಲ್ಲಿ ಈ ಹಿಂದೆ ಮುಸಲ್ಮಾನರ ಮೇಲೆ ಪೊಲೀಸರ ದೌರ್ಜನ್ಯದ ವಿಡಿಯೋವನ್ನು, ಇತ್ತೀಚಗಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಹಂಚಿಕೊಳ್ಳಲಾಗುತ್ತಿದೆ.

ಹಸುವಿನ ಬಾಲ ಕತ್ತರಿಸಿದ ಪ್ರಕರಣ ಏನು?

ಇದೇ 25 ಆಗಸ್ಟ್‌ 202ರಂದು ದನದ ಬಾಲ ಕತ್ತರಿಸಿ ದೇವಸ್ಥಾನ ಬಾಗಿಲಿಗೆ ಎಸೆದ ಘಟನೆ ರಾಜಸ್ಥಾನದ ಬಿಲ್ವಾರದಲ್ಲಿ ನಡೆದಿರುವುದು ನಿಜ. ಎಬಿಪಿ ಲೈವ್ ಸುದ್ದಿ ಸಂಸ್ಥೆ ಮಾಡಿದ್ದ ವರದಿಯ ಪ್ರಕಾರ, ಹಸುವಿನ ಬಾಲ ಕತ್ತರಿಸಿ ಬಿಲ್ವಾರದ ಗಾಂಧಿ ಸಾಗರದ ಬಳಿ ಇರುವ ವೀರ್ ಹನುಮಾನ್ ದೇವಸ್ಥಾನ ಮುಂಭಾಗ ಎಸೆಯಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊತ್ವಾಲಿ ಪೊಲೀಸರು ಹುಸೇನ್ ಕಾಲೋನಿ ಶಾಸ್ತ್ರಿನಗರ ನಿವಾಸಿ ನಿಸಾರ್ ಮೊಹಮ್ಮದ್ ಎಂಬುವವರ ಪುತ್ರ ಬಬ್ಲು ಶಾ (40 ವರ್ಷ) ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಈ ಘಟನೆಗೆ ಸಂಬಂಧ ಪಟ್ಟಂತೆ ಇನ್ನೂ ನಾಲ್ವರು ಶಂಕಿತ ಆರೋಪಿಗಳನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಈ ಎಲ್ಲಾ ಅಂಶಗಳನ್ನು ಗಮನಿಸಿದ ನಂತರ ವೈರಲ್ ಆಗಿರುವ ವಿಡಿಯೋ ಭಿಲ್ವಾರದ ದೇವಸ್ಥಾನದ ಹೊರಗೆ, ಹಸುವಿನ ಬಾಲವನ್ನು ಎಸೆದ ಆರೋಪದ ಮೇಲೆ ಬಂಧಿತರಾಗಿರುವವರು ಆರೋಪಿಗಳಲ್ಲ, ಇದು 2022ರ ಗಲಭೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೂಪಿಸಿ ಬಂಧಿಸಿದವರ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯದ ವಿಡಿಯೋವಾಗಿದೆ. ಹಾಗಾಗಿ ಇಂತಹ ವಿಡಿಯೋಗಳು ಕಂಡುಬಂದರೆ ಅವುಗಳನ್ನು ಪರಿಶೀಲಿಸದೆ ಹಂಚಿಕೊಳ್ಳಬೇಡಿ


ಇದನ್ನೂ ಓದಿ : Fact Check: ಬಾಂಗ್ಲಾದೇಶದಲ್ಲಿ ಹಿಂದೂ ಶಿಕ್ಷಕಿಯನ್ನು ಅವಮಾನಿಸಿದ್ದಾರೆ ಎಂಬ ವೀಡಿಯೊ ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *