Fact Check | ಕಂದಹಾರ್ ವಿಮಾನ ಅಪಹರಣದ ವೆಬ್‌ ಸೀರಿಸ್‌ನಲ್ಲಿ ಮುಸ್ಲಿಂ ಹೆಸರನ್ನು ಉದ್ದೇಶಪೂರ್ವಕವಾಗಿ ತಿದ್ದಲಾಗಿದೆ ಎಂಬುದು ಸುಳ್ಳು

“ಕಂದಹಾರ್ ವಿಮಾನ ಅಪಹರಣವನ್ನು ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆ ಅಲ್-ಖೈದಾ ಮಾಡಿದೆ. ಆದರೆ, ಅನುಭವ್ ಸಿನ್ಹಾ ಭಯೋತ್ಪಾದಕರಿಗೆ ಭೋಲಾ ಮತ್ತು ಶಂಕರ್ ಎಂದು ಹೆಸರಿಟ್ಟಿದ್ದಾರೆ. ಈ ಮೂಲಕ ಭಗವಾನ್ ಮಹಾದೇವನ ನಂತರ, ಉದ್ದೇಶಪೂರ್ವಕವಾಗಿ ಹಿಂದೂ ಧರ್ಮವನ್ನು ಅವಮಾನಿಸಿದ್ದಾರೆ. ಸೆನ್ಸಾರ್ ಮಂಡಳಿ ಇದನ್ನು ಹೇಗೆ ಅನುಮೋದಿಸಿತು?” ಎಂದು ಒಟಿಟಿ ಫ್ಲ್ಯಾಟ್‌ ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ ‘ಐಸಿ-814’ಎಂಬ ವೆಬ್‌ ಸೀರಿಸ್ ಮುಸಲ್ಮಾನ ಭಯೋತ್ಪಾದಕರ ಹೆಸರನ್ನು ಉದ್ದೇಶಪೂರ್ವಕವಾಗಿ  ಹಿಂದೂ ಹೆಸರುಗಳಾಗಿ ‘ಭೋಲಾ ಮತ್ತು ಶಂಕರ್’ ಎಂದು ತಿದ್ದಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. 

ಹಲವರು ಈ ಬರಹಗಳನ್ನು ನೋಡಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.  ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತವಾಗುತ್ತಿದ್ದಂತೆ ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಭಾರತದ ನೆಟ್‌ಫ್ಲಿಕ್ಸ್ ಕಂಟೆಂಟ್ ಚೀಫ್ ಮೋನಿಶಾ ಶೇರ್ಗಿಲ್ ಅವರಿಗೆ ಸಮನ್ಸ್ ನೀಡಿದೆ. ಇದು ಸಾರ್ವಜನಿಕರಲ್ಲಿ ಗೊಂದಲವನ್ನು ಸೃಷ್ಟಿಸಿದೆ. ಹೀಗಾಗಿ ಈ ಸುದ್ದಿಯಲ್ಲಿನ ಸತ್ಯಾಸತ್ಯತೆ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿರುವ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ನಾವು ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ “21 Years on, Kandahar hijack still haunts Bhopal couple” ಎಂಬ ಶೀರ್ಷಿಕೆಯಲ್ಲಿ 24 ಡಿಸೆಂಬರ್‌ 2020ರಲ್ಲಿ ಟೈಮ್ಸ್‌ ಆಫ್‌ ಇಂಡಿಯಾ ವಿಶೇಷ ವರದಿಯೊಂದನ್ನು ಪ್ರಕಟಿಸಿರುವುದನ್ನು ಕಂಡು ಕೊಂಡಿದ್ದೇವೆ.

ಈ ವರದಿಯಲ್ಲಿ ‘ದುರ್ಗೇಶ್ ಮತ್ತು ರೇಣು ಗೋಯೆಲ್’ ಎಂಬ ದಂಪತಿಯನ್ನು ಸಂದರ್ಶನ ಮಾಡಿ ಪ್ರಕಟಿಸಲಾಗಿತ್ತು. ‘ದುರ್ಗೇಶ್ ಮತ್ತು ರೇಣು ಗೋಯೆಲ್’ ದಂಪತಿ ಕಂದಹಾರ್ ವಿಮಾನ ಅಪಹರಣದ ವೇಳೆ ಅದರೊಳಗಿದ್ದವರಾಗಿದ್ದಾರೆ. ಬಳಿಕ ಅಂದಿನ ಸರ್ಕಾರ ಇವರನ್ನು ರಕ್ಷಿಸಿತ್ತು. ವಿಮಾನ ಅಪಹರಣದ ಸಂದರ್ಭವನ್ನು ಟೈಮ್ಸ್ ಆಫ್‌ ಇಂಡಿಯಾ ಜೊತೆ ನೆನಪು ಮಾಡಿಕೊಂಡಿರುವ ದಂಪತಿ “ಬರ್ಗರ್, ಡಾಕ್ಟರ್, ಚೀಫ್, ಭೋಲಾ ಮತ್ತು ಶಂಕರ್” ಎಂಬ ಹೆಸರುಗಳು ಇಂದಿಗೂ ನಮಗೆ ಒಂದು ಕೆಟ್ಟ ಕನಸಾಗಿ (ದುಃಸ್ವಪ್ನ) ಕಾಡುತ್ತಿದೆ. ಈ ಹೆಸರುಗಳು ಉಗ್ರರ ಕೋಡ್‌ ಹೆಸರುಗಳಾಗಿದ್ದವು ಎಂದು ತಿಳಿದು ಬಂದಿದೆ. ಇದೇ ರೀತಿಯ ವರದಿಗಳನ್ನು ನೇಪಾಲ್ ಟೈಮ್ಸ್ಫಿನಾನ್ಶಿಯಲ್‌ ಎಕ್ಸ್‌ಪ್ರೆಸ್‌ದಿ ಟ್ರಿಬ್ಯೂನ್  ಸೇರಿದಂತೆ ಹಲವು ಮಾಧ್ಯಮಗಳು ವರದಿಯನ್ನು ಮಾಡಿದ್ದವು.

ಒಟ್ಟಾರೆಯಾಗಿ ಹೇಳುವುದಾದರೆ ಈ ಎಲ್ಲಾ ಅಂಶಗಳನ್ನು ಗಮನಿಸಿದ ನಂತರ ವಿಮಾನ ಅಪಹರಣಕಾರರು ತಮ್ಮನ್ನು ಪರಸ್ಪರ ಅಡ್ಡ ಹೆಸರುಗಳಿಂದ ಕರೆಯುತ್ತಿದ್ದರು. ಆ ಪೈಕಿ ಭೋಲಾ ಮತ್ತು ಶಂಕರ್ ಎಂಬುವುದು ಅವುಗಳಲ್ಲಿ ಸೇರಿದೆ. ಇದನ್ನು ಅಂದಿನ ಕೇಂದ್ರ ಸರ್ಕಾರ ಕೂಡ ದೃಢೀಕರಿಸಿದೆ. ಅದಲ್ಲದೆ, ಭಯೋತ್ಪಾದಕರಿಗೆ ಈ ಭೋಲಾ ಮತ್ತು ಶಂಕರ್ ಎಂಬ ಹಿಂದೂ ಹೆಸರುಗಳನ್ನು “ಐಸಿ 814” ವೆಬ್‌ ಸೀರಿಸ್ ನಿರ್ದೇಶಕ ಅನುಭವ್ ಸಿನ್ಹಾ ಇಟ್ಟಿದ್ದಲ್ಲ ಎಂಬುದು ಸಾಬೀತಾಗಿದೆ.


ಇದನ್ನೂ ಓದಿ : Fact Check | ಮುಸ್ಲಿಂ ಯುವಕರನ್ನು ಯುಪಿ ಪೊಲೀಸರು ಥಳಿಸಿದ ಹಳೆಯ ವಿಡಿಯೋ ಹಸುವಿನ ಬಾಲ ಕತ್ತರಿಸಿದ್ದಕ್ಕೆ ಎಂದು ತಪ್ಪಾಗಿ ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *