Fact Check | ಮಣಿಪುರ ಗಲಭೆಗೆ ಸಂಬಂಧ ಪಟ್ಟಂತೆ ಸಂಬಂಧವಿಲ್ಲದ ಫೋಟೋ ಹಂಚಿಕೊಂಡ ರಿಪಬ್ಲಿಕ್‌ ಟಿವಿ

ಹಲವು ಚಿತ್ರಗಳನ್ನು ಬಳಸಿ ರಿಪಬ್ಲಿಕ್ ಟಿವಿಯ ಅರ್ನಬ್‌ ಗೋಸ್ವಾಮಿ ಅವರು, “ಮಹಿಳೆಯರೇ, ಮಹನೀಯರೇ, ಈ ಚಿತ್ರಗಳನ್ನು ನೋಡಿ. ಇದು ಐಟಿಎಲ್‌ಎಫ್ ಡ್ರೋನ್ ಸ್ಕ್ವಾಡ್‌ನ ಚಿತ್ರವಾಗಿದೆ. ಅವರು ಇಂದು ನನ್ನ ವಿರುದ್ಧ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ಇದನ್ನು ( ಡ್ರೋನ್‌ಗಳನ್ನು) ಮಣಿಪುರ ಪೊಲೀಸರು ಅಕ್ಟೋಬರ್ 2023 ರಲ್ಲಿ ವಶಪಡಿಸಿಕೊಂಡಿದ್ದಾರೆ ಮತ್ತು ಈ ದೃಶ್ಯಾವಳಿಯನ್ನು ಅವರು ಮಣಿಪುರ ಹಿಂಸಾಚಾರದ ವಿಚಾರಣೆಯ ಸಮಯದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.” ಎಂದು ಸುದೀರ್ಘವಾಗಿ ತಮ್ಮ ಚರ್ಚಾ ಕಾರ್ಯಕ್ರಮದಲ್ಲಿ ಈ ಫೋಟೋಗಳನ್ನು ಬಳಸಿ ಮಾತನಾಡಿದ್ದಾರೆ.

ಈ ಚರ್ಚಾ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾದ ಡ್ರೋನ್‌ನ ಚಿತ್ರಗಳು ನಿಜವಾಗಿಯೂ ಮಣಿಪುರದಲ್ಲಿನ ಚಿತ್ರಗಳು ಮತ್ತು ಅಲ್ಲಿ ಐಟಿಎಲ್‌ಎಫ್‌( ಇಂಡಿಜಿನಿಯಸ್‌ ಟ್ರೈಬಲ್‌ ಲೀಡರ್ಸ್‌ ಫೋರಮ್‌) ಉಪಯೋಗಿಸಿ ವಿಧ್ವಂಸಕ ಕೃತ್ಯವನ್ನು ನಡೆಸಿದೆ ಎಂದು ಹಲವರು ಹಂಚಿಕೊಳ್ಳುತ್ತಿದ್ದಾರೆ. ಇನ್ನು ಇದನ್ನು ಸ್ವತಃ ರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದರ ಮುಖ್ಯಸ್ಥನಾಗಿರುವ ಅರ್ನಬ್‌ ಗೋಸ್ವಾಮಿ ಅವರೇ ಹೇಳಿರುವುದರಿಂದ ಸಾಕಷ್ಟು ಜನ ಇದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ಕುರಿತು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ರಿಪಬ್ಲಿಕ್‌ ಟಿವಿ ಇಂಗ್ಲೀಷ್‌ ಸುದ್ದಿವಾಹಿನಿಯಲ್ಲಿ ಅದರ ಮುಖ್ಯಸ್ಥ ಅರ್ನಬ್‌ ಗೋಸ್ವಾಮಿ ಹಂಚಿಕೊಂಡಂತೆ ನಿಜಕ್ಕೂ ಈ ಫೋಟೋಗಳು ಮಣಿಪುರಕ್ಕೆ ಸಂಬಂಧಿಸಿವೆಯೇ ಎಂಬುದನ್ನು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ನಾವು ವಿಡಿಯೋವಿನ ವಿವಿಧ ಕೀ ಫ್ರೇಮ್‌ಗಳನ್ನು ಬಳಸಿ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ವಿಕಿಮೀಡಿಯಾ ಕಾಮನ್ಸ್‌ನಲ್ಲಿ 6 ಜುಲೈ 2007 ರ ಫೋಟೋವೊಂದು ಪತ್ತೆಯಾಗಿದ್ದು, ಇದು ಅರ್ನಬ್‌ ಗೋಸ್ವಾಮಿ ಸುಳ್ಳು ಮಾಹಿತಿನ್ನು ಹಳೆಯ ಫೋಟೋದೊಂದಿಗೆ ಹಂಚಿಕೊಂಡಿದ್ದಾರೆ ಎಂಬುದು ಸಾಭೀತು ಪಡಿಸಿದೆ.

ಲಭ್ಯವಿರುವ ವಿವರಗಳ ಪ್ರಕಾರ, ಚಿತ್ರವನ್ನು 6 ಜುಲೈ 2007 ರಂದು ಸೆರೆಹಿಡಿಯಲಾಗಿದೆ. ಈ ವರದಿಯಲ್ಲಿ ” ಇಸ್ರೇಲ್‌ ರಕ್ಷಣಾ ಇಲಾಖೆಯು ಎಂಟು ಕಸ್ಸಾಮ್ ಲಾಂಚರ್‌ಗಳು, ಏಳು ಆಪರೇಟಿಂಗ್ ಸಿಸ್ಟಮ್‌ಗಳನ್ನು ಹೊಂದಿದೆ ಮತ್ತು ಒಂದು ಸಶಸ್ತ್ರ ಮತ್ತು ಉಡಾವಣೆಗೆ ಸಿದ್ಧವಾಗಿದೆ.” ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಲ್ಲಿಗೆ ಈ ಫೋಟೋಗೂ ಭಾರತಕ್ಕೂ ಯಾವುದೇ ರೀತಿಯಾದ ಸಂಬಂಧವಿಲ್ಲ ಎಂಬುದು ಸಾಭೀತಾಗಿದೆ. ಈ ಬಗ್ಗೆ ಇನ್ನಷ್ಟು ಹುಡುಕಾಟವನ್ನು ನಡೆಸಿದಾಗ ಇದೇ ರೀತಿಯಾದ ವರದಿಯನ್ನು ಫ್ರಾನ್ಸ್‌ 24 ಎಂಬು ಸುದ್ದಿ ಸಂಸ್ಥೆ ಕೂಡ “Palestinian militants fire first rockets into Israel” ಎಂಬ ಶೀರ್ಷಿಕೆಯಲ್ಲಿ ವರದಿಯನ್ನು ಪ್ರಕಟಿಸಿದೆ.

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿ ಹೇಳುವುದಾದರೆ, ರಿಪಬ್ಲಿಕ್‌ ಟಿವಿ ಮುಖ್ಯಸ್ಥ ಅರ್ನಬ್‌ ಗೋಸ್ವಾಮಿ 2007ರ ಇಸ್ರೇಲ್‌-ಪ್ಯಾಲೇಸ್ತೀನ್‌ ಸಂಘರ್ಷದ ಫೋಟೋವನ್ನು ಬಳಸಿಕೊಂಡು ಇತ್ತೀಚೆಗಿನ ಮಣಿಪುರ ಸಂಘರ್ಷದಲ್ಲಿ ಡ್ರೋನ್‌ ಬಳಸಲಾಗಿದೆ ಎಂದು ಸುಳ್ಳು ಮಾಹಿತಿಯನ್ನು ನೀಡಿದ್ದಾರೆ. ಹಾಗಾಗಿ ಇಂತಹ ಸುಳ್ಳು ಸುದ್ದಿಗಳನ್ನು ನಂಬುವ ಮುನ್ನ ಎಚ್ಚರಿಕೆಯನ್ನು ವಹಿಸಿ.


ಇದನ್ನೂ ಓದಿ : Fact Check : ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲಿನ ದಾಳಿಯನ್ನು ಪಶ್ಚಿಮ ಬಂಗಾಳದ ಮುಸ್ಲಿಮರು ಸಂಭ್ರಮಿಸಿದ್ದಾರೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *