“ಐಐಟಿ-ಬಿಎಚ್‌ಯು ಗ್ಯಾಂಗ್‌ರೇಪ್ ಪ್ರಕರಣದ ಮೂವರು ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಬಿಜೆಪಿ ಕಾರ್ಯಕರ್ತರೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಇದು ಬಿಜೆಪಿಯ ಸಂಸ್ಕೃತಿ” ಎಂದು ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಾಗಾಗಿ ಹಲವರು ಬಿಜೆಪಿ ವಿರುದ್ಧ ಮತ್ತು ಆರೋಪಿಗಳ ವಿರುದ್ಧ ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ. ವಿವಿಧ ಮಂದಿ ಹಲವು ರೀತಿಯಲ್ಲಿ ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸುತ್ತಿದ್ದಾರೆ.
BHU gangrape accused granted
bail within seven months crime.
This is What kind of justice is providing
To victims .?? pic.twitter.com/RFhIXV2guT— Priya Saroj (@PriyaSarojMP) September 1, 2024
ಇನ್ನು, ಈ ಬರಹ ಮತ್ತು ಪೋಸ್ಟ್ ನೋಡಿದ ಸಾರ್ವಜನಿಕರು ಇದು ನಿಜವಾದ ಘಟನೆ ಎಂದು ಭಾವಿಸಿ, ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಹೀಗಾಗಿ ವೈರಲ್ ಫೋಟೋ ಸಾರ್ವಜನಿಕ ವಲಯದಲ್ಲಿ ಕೂಡ ವಿವಿಧ ಅಭಿಪ್ರಾಯಗಳನ್ನು ಸೃಷ್ಟಿಸಿರುವುದರಿಂದ, ಜನ ಸಾಮಾನ್ಯರ ದಾರಿ ತಪ್ಪಿಸುವಲ್ಲಿ ಈ ಫೋಟೋ ಹಾಗೂ ಪೋಸ್ಟ್ ಯಶಸ್ವಿಯಾಗಿದೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಫೋಟೋವಿನ ಅಸಲಿಯತ್ತು ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ
BHU gangrape accused granted
bail within seven months crime.
This is What kind of justice is providing
To victims .??Culture of BJP!
While doing this they don't think about Modi lecture of women's safety.. pic.twitter.com/UdY9RrSfdV
— Vivek Yadav (@Vivek_28_Yadav) September 1, 2024
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಫೋಟೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ವೈರಲ್ ಫೋಟೋ ಹಾಗೂ ಪೋಸ್ಟ್ ಕುರಿತು ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಲಾಯಿತು. ಈ ವೇಳೆ ನಮಗೆ 1 ಸೆಪ್ಟೆಂಬರ್ 2024ರ ಆಜ್ ತಕ್ ವರದಿ ಕಂಡು ಬಂದಿದೆ. ಈ ವರದಿಯ ಪ್ರಕಾರ ವೈರಲ್ ಫೋಟೋ ಸುಮಾರು ಐದು ವರ್ಷಗಳಷ್ಟು ಹಳೆಯದು ಮತ್ತು ಈ ಕುರಿತು ಬಿಜೆಪಿ ಶಾಸಕ ಸೌರಭ್ ಶ್ರೀವಾಸ್ತವ ಅವರು ಸ್ಪಷ್ಟ ಪಡಿಸಿದ್ದಾರೆ ಎಂಬುದು ತಿಳಿದು ಬಂದಿದೆ.
ಈ ವರದಿಯನ್ನು ಆಧಾರಿಸಿ ಇನ್ನಷ್ಟು ಕೀ ವರ್ಡ್‌ಗಳನ್ನು ಬಳಸಿ ಹುಡುಕಾಟವನ್ನು ನಡೆಸಲಾಯಿತು. ಈ ವೇಳೆ 2 ಜನವರಿ 2024ರ ಟೈಮ್ಸ್ ಆಫ್ ಇಂಡಿಯಾದ ವರದಿಯೊಂದು ಕಂಡು ಬಂದಿದೆ. ಅದರ ಪ್ರಕಾರ ಸ್ಥಳೀಯ ಬಿಜೆಪಿ ಪದಾಧಿಕಾರಿಗಳು ಆರೋಪಿಗಳನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಹೊರಹಾಕಿದ್ದು, ಈಗ ಆರೋಪಿಗಳು ಬಿಜೆಪಿಯಿಂದ ಹೊರಗುಳಿಯುವಂತಾಗಿದೆ. ಜಾಮೀನು ವಿಚಾರಕ್ಕೆ ಸಂಬಂಧ ಪಟ್ಟಂತೆ ಕೆಲವೊಂದು ವರದಿಗಳನ್ನು ಪರಿಶೀಲನೆ ನಡೆಸಿದಾಗ ಇಬ್ಬರು ಆರೋಪಿಗಳು ಮಾತ್ರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಬಿಡುಗಡೆಯಾದಾಗ ಅವರನ್ನು ಹೂಮಾಲೆಯೊಂದಿಗೆ ಸ್ವಾಗತಿಸಲಾಯಿತು , ವೈರಲ್ ಫೋಟೋ ಜುಲೈ, 2021 ರ ಹಿಂದಿನದು ಮತ್ತು ಇನ್ನೂ ಜೈಲಿನಲ್ಲಿರುವ ಒಬ್ಬ ಆರೋಪಿ ಮಾತ್ರ ಆ ಫೋಟೊದಲ್ಲಿ ಇದ್ದಾನೆ ಎಂದು ತಿಳಿದು ಬಂದಿದೆ. ಹಾಗಾಗಿ ವೈರಲ್ ಫೋಟೋ ನಂಬಿಕೆ ಅರ್ಹವಾಗಿಲ್ಲ ಎಂಬುದು ಸಾಬೀತಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ.. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿರುವ ರೀತಿ ಐಐಟಿ-ಬಿಎಚ್‌ಯು ಗ್ಯಾಂಗ್‌ರೇಪ್ ಪ್ರಕರಣದ ಮೂವರು ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಬಿಜೆಪಿ ಕಾರ್ಯಕರ್ತರೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ ಎಂಬುದು ಸುಳ್ಳು. ವೈರಲ್ ಫೋಟೋ 2021 ರದ್ದಾಗಿದ್ದು ಇದು ಅತ್ಯಾಚಾರ ಪ್ರಕರಣ ದಾಖಲಾಗುವುದಕ್ಕೂ ಹಿಂದಿನ ಫೋಟೋ ಎಂದು ತಿಳಿದು ಬಂದಿದೆ. ಹಾಗಾಗಿ ಇಂತಹ ಸುದ್ದಿಗಳನ್ನು ನಂಬುವ ಮುನ್ನ ಒಮ್ಮೆ ಪರಿಶೀಲಿಸಿಕೊಳ್ಳಿ.
ಇದನ್ನೂ ಓದಿ : Fact Check | ಮಣಿಪುರ ಗಲಭೆಗೆ ಸಂಬಂಧ ಪಟ್ಟಂತೆ ಸಂಬಂಧವಿಲ್ಲದ ಫೋಟೋ ಹಂಚಿಕೊಂಡ ರಿಪಬ್ಲಿಕ್ ಟಿವಿ