Fact Check | ಮುಸ್ಲಿಂ ವ್ಯಕ್ತಿಯೊಬ್ಬ ತನ್ನ ಹಿಂದೂ ಗೆಳತಿಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ರಷ್ಯಾ ವಿಡಿಯೋ ಹಂಚಿಕೆ

“ಈ ವಿಡಿಯೋ ನೋಡಿ ಹಿಂದೂ ಯುವತಿಯರೇ.. ನೀವೇನಾದರೂ ಮುಸ್ಲಿಂ ವ್ಯಕ್ತಿಯನ್ನು ಪ್ರೀತಿಸಿ ಮದುವೆಯಾದರೆ  ನಿಮಗೆ ಸಿಗುವ ಶೀಕ್ಷೆ ಹೀಗೆಯೇ ಇರಲಿದೆ. ಮುಸಲ್ಮಾನರ ಲವ್‌ ಜಿಹಾದ್‌ಗೆ ಬಲಿಯಾಗುವ ಮುನ್ನ ಈ ವಿಡಿಯೋವನ್ನು ನೋಡಿ. ಆಕೆಯ ಪ್ರಿಯಕರ ಆಕೆಯನ್ನು ಹೀಗೆ ಥಳಿಸುತ್ತಿರುವುದರ ಹಿಂದೆ ಮತಾಂತರದ ಒತ್ತಾಯವಿದೆ. ಹಿಂದೂಗಳೇ ಎಚ್ಚರ. ನಿಮ್ಮ ಸಹೋದರಿಯರಿಗೆ ರಕ್ಷಣೆ ನೀಡಿ” ಎಂಬ ರೀತಿಯ ವಿವಿಧ ಬರಹಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಈ ವೈರಲ್‌ ವಿಡಿಯೋದಲ್ಲಿ ಕೂಡ ಯುವತಿಯೊಬ್ಬಳಿಗೆ ಥಳಿಸುತ್ತಿರುವುದು ಕಂಡು ಬಂದಿದ್ದು, ಈ ವಿಡಿಯೋ ನೋಡಿದ ಹಲವು ಮಂದಿ ವೈರಲ್‌ ಪೋಸ್ಟ್‌ಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಕೋಮು ಅಧಾರಿತ ಬರಹಗಳನ್ನು ನಿಜವೆಂದು ಭಾವಿಸಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದು ಸಾರ್ವಜನಿಕ ವಲಯದಲ್ಲಿ ಕೂಡ ಕೋಮು ಸಂಬಂಧಿತ ತಪ್ಪು ನಿರೂಪಣೆ ಸೃಷ್ಟಿಯಾಗಲು ಕಾರಣವಾಗುತ್ತಿದೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ಪೋಸ್ಟ್‌ನ ಅಸಲಿಯತ್ತು ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ಪೋಸ್ಟ್‌ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು ಇದಕ್ಕಾಗಿ ವೈರಲ್‌ ಪೋಸ್ಟ್‌ಗೆ ಸಂಬಂಧಿಸಿದಂತೆ ವಿವಿಧ ಕೀ ಫ್ರೇಮ್‌ಗಳನ್ನು ಬಳಸಿ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ನಾವು ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ರಷ್ಯಾದ ವಿವಿಧ ಸುದ್ದಿ ಮಾಧ್ಯಮಗಳ ವರದಿಗಳು ಪತ್ತೆಯಾಗಿದ್ದವು. ಈ ವರದಿಗಳ ಪ್ರಕಾರ ಈ ಘಟನೆಯು ಜುಲೈ 2021 ರಲ್ಲಿ ರಷ್ಯಾದ ನಗರವಾದ ಕ್ರಾಸ್ನೋಡರ್ನಲ್ಲಿ ಸಂಭವಿಸಿದೆ.

ವರದಿಯಲ್ಲಿ ಉಲ್ಲೇಖಿಸಲಾಗಿರುವಂತೆ ಮಹಿಳೆ, ಇಸ್ಲಾಂ ಧರ್ಮವನ್ನು ಆಚರಿಸುವ ಕ್ರಿಮಿಯನ್ ಜಿಪ್ಸಿ ಸಮುದಾಯದ ಸದಸ್ಯೆ, ತನ್ನ ಉಕ್ರೇನಿಯನ್ ಗೆಳೆಯನೊಂದಿಗೆ ಮನೆ ಬಿಟ್ಟು ಹೋಗಲು ಪ್ರಯತ್ನಿಸಿದಳು. ಆದರೆ, ಪೊಲೀಸರ ಸಹಾಯದಿಂದ ಆಕೆಯ ಮನೆಯವರು ಆಕೆಯನ್ನು ಪತ್ತೆ ಹಚ್ಚಿ, ಪರಾರಿಯಾಗಲು ಯತ್ನಿಸುತ್ತಿದ್ದಾಗ ಹಣ ಕದ್ದಿದ್ದಾಳೆ ಎಂದು ಆರೋಪಿಸಿ ಹಲ್ಲೆ ನಡೆಸಿದ್ದಾರೆ. ಇನ್ನು ತನ್ನ ಕುಟುಂಬದೊಂದಿಗೆ ದೀರ್ಘಕಾಲದ ದ್ವೇಷದಲ್ಲಿದ್ದ ಹುಡುಗನೊಂದಿಗೆ ಮನೆ ಬಿಟ್ಟು ಹೋದ ಕಾರಣ ಮಹಿಳೆಯ ಸಹೋದರ ತನ್ನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಸಂತ್ರಸ್ಥೆ ವಿವರಿಸಿದ್ದಾರೆ. ಆ ವಿಡಿಯೋ ರಷ್ಯಾದ್ದು ಎಂದು ಆಕೆ ಖಚಿತಪಡಿಸಿದ್ದಾಳೆ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿಯಲ್ಲಿ ಮುಸ್ಲಿಂ ಪ್ರಿಯಕರನೊಂದಿಗೆ ಮನೆಬಿಟ್ಟು ಹೋದ ಹಿಂದೂ ಯುವತಿಯನ್ನು ಆಕೆಯ ಪ್ರಿಯಕರ ಹಲ್ಲೆ ನಡೆಸಿ ಹಿಂಸಿಸಿದ್ದಾನೆ ಎಂಬುದು ಸುಳ್ಳು ಆರೋಪದಿಂದ ಕೂಡಿದೆ. ವೈರಲ್‌ ಆಗುತ್ತಿರುವ ವಿಡಿಯೋ ರಷ್ಯಾಗೆ ಸಂಬಂಧ ಪಟ್ಟಿದೆ. ಹಾಗಾಗಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋದೊಂದಿಗೆ ಹಂಚಿಕೊಳ್ಳಲಾಗುತ್ತಿರುವ ನಿರೂಪಣೆ ಸುಳ್ಳು ಮಾಹಿತಿಯಿಂದ ಕೂಡಿದೆ.


ಇದನ್ನೂ ಓದಿ : Fact check: ಬಾಲಿವುಡ್‌ ಸಿನೆಮಾ ನಿರ್ದೇಶಕ ಅನುಭವ್‌ ಸಿನ್ಹಾ ಭಯೋತ್ಪಾದನೆ ಕುರಿತು ಹೇಳಿಕೆ ನೀಡಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *