Fact Check | ಹಿಂದೂಗಳ ಆಸ್ತಿಯನ್ನು ಮುಸಲ್ಮಾನರಿಗೆ ನೀಡುತ್ತೇವೆ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿಲ್ಲ

“ಈ ವಿಡಿಯೋವನ್ನು ನೋಡಿ.. ಕಾಂಗ್ರೆಸ್ ಜನರು ನಿಮ್ಮ ಮನೆಗೆ ನುಗ್ಗುತ್ತಾರೆ, ಬೀರು ಒಡೆದು ಹಣವನ್ನು ತೆಗೆದುಕೊಂಡು ಹೆಚ್ಚು ಮಕ್ಕಳನ್ನು ಹೊಂದಿರುವ ಮುಸ್ಲಿಮರಿಗೆ ಹಂಚುತ್ತಾರೆ. ಮತ್ತು ಹಿಂದುಗಳು ಕಡಿಮೆ ಮಕ್ಕಳನ್ನು ಹೊಂದಿದ್ದರೆ ಅದರ ಬಗ್ಗೆ ನಾನು ಏನು ಮಾಡಬಹುದು?” ಎಂದು ವಿಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋದಲ್ಲಿ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹಿಂದುಗಳ ಆಸ್ತಿಯನ್ನು ಮುಸ್ಲಿಮರಿಗೆ ಹಂಚಲಿದ್ದಾರೆ ಎಂಬ ಅರ್ಥದಲ್ಲಿ ಟಿಪ್ಪಣಿಯನ್ನು ಬರೆದು ಹಂಚಿಕೊಳ್ಳಲಾಗುತ್ತದೆ. ಜೊತೆಗೆ ಖರ್ಗೆ ಅವರೇ ಈ ಹೇಳಿಕೆ ನೀಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ವಿಡಿಯೋದಲ್ಲಿ ಕೂಡ ಖರ್ಗೆ ಅವರ ಧ್ವನಿಯೇ ಇದ್ದು, ಮಲ್ಲಿಕಾರ್ಜುನ ಖರ್ಗೆ ಅವರೇ ಮಾತನಾಡಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಆದರೆ ಈ ವಿಡಿಯೋವಿನ ಕೆಲವೊಂದು ಭಾಗಗಳಲ್ಲಿ ಸ್ಪಷ್ಟತೆ ಇಲ್ಲದಿರುವುದರಿಂದ, ವೈರಲ್ ವಿಡಿಯೋ ಬಗ್ಗೆ ಹಲವು ಅನುಮಾನಗಳು ಮೂಡಲು ಪ್ರಾರಂಭಿಸಿವೆ. ಆದರೂ ಸಾಕಷ್ಟು ಮಂದಿ ಇದನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಹೀಗೆ ವ್ಯಾಪಕವಾಗಿ ವೈರಲ್ ಆಗಿರುವ ವಿಡಿಯೋ ಕುರಿತು ಈ ಫ್ಯಾಕ್ಟ್‌ಚೆಕ್‌ ನಲ್ಲಿ ಪರಿಶೀಲನೆಯನ್ನು ನಡೆಸೋಣ

ಫ್ಯಾಕ್ಟ್‌ಚೆಕ್

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ಕುರಿತು ಪರಿಶೀಲನೆಯನ್ನು ನಡೆಸಲು ಕನ್ನಡ ಫ್ಯಾಕ್ಟ್ ತಂಡ ಮುಂದಾಯಿತು. ಇದಕ್ಕಾಗಿ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಲಾಯಿತು. ಈ ವೇಳೆ 3 ಮೇ 2024 ರಂದು ಕಾಂಗ್ರೆಸ್ ಪಕ್ಷದ ಅಧಿಕೃತ ಯೂಟ್ಯಬ್‌ ಚಾನಲ್‌ನಲ್ಲಿ ಹಂಚಿಕೊಳ್ಳಲಾದಂತಹ ಖರ್ಗೆಯವರ ವಿಡಿಯೋವೊಂದು ಪತ್ತೆಯಾಗಿದೆ. ಈ ವಿಡಿಯೋದಲ್ಲಿ ಆಂಗ್ಲ ಭಾಷೆಯಲ್ಲಿ ಶೀರ್ಷಿಕೆಯನ್ನು ನೀಡಲಾಗಿದ್ದು, ಅದರ ಪ್ರಕಾರ ಕಾಂಗ್ರೆಸ್ ಅಧ್ಯಕ್ಷ ಶ್ರೀ ಮಲ್ಲಿಕಾರ್ಜುನ ಖರ್ಗೆ ಗುಜರಾತ್ ನ ಅಹಮದಾಬಾದ್ ನಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ್ದಾರೆ ಎಂದು ಬರೆಯಲಾಗಿತ್ತು.

ಇದರಲ್ಲಿ ಅವರು ಪ್ರಧಾನಿ ಮೋದಿ ಅವರು ಹೇಳಿದ್ದ ಹೇಳಿಕೆಯನ್ನು ಜನರ ಮುಂದೆ ಹೇಳುತ್ತಾರೆ ಅದರಲ್ಲಿ ಅವರು “ಆಗ ಮೋದಿ ಸಾಹೇಬ್ ಕಾಂಗ್ರೆಸ್ ಏನು ಮಾಡುತ್ತಿದೆ ಎಂದು ನಿಮಗೆ ತಿಳಿದಿದೆಯೇ? ಕಾಂಗ್ರೆಸ್ ಸದಸ್ಯರು ನಿಮ್ಮ ಮನೆಗೆ ನುಗ್ಗಿ ಬೀರುಗಳನ್ನು ಒಡೆದು ನಿಮ್ಮ ಹಣವನ್ನು ತೆಗೆದುಕೊಂಡು ಇತರರಿಗೆ ಅದರಲ್ಲೂ ವಿಶೇಷವಾಗಿ ಹೆಚ್ಚು ಮಕ್ಕಳನ್ನು ಹೊಂದಿರುವ ಮುಸಲ್ಮಾನರಿಗೆ ಹಂಚಲಿದ್ದಾರೆ. ನಿಮಗೆ ಅಂದರೆ ಹಿಂದುಗಳಿಗೆ ಕಡಿಮೆ ಮಕ್ಕಳಿದ್ದಾರೆ ನಾನು ಅದರ ಬಗ್ಗೆ ಏನು ಮಾಡಬಹುದು” ಎಂದು ಮೋದಿಯವರು ಹೇಳಿದ್ದನ್ನು ಉಲ್ಲೇಖಿಸಿದರು. ಈ ವಿಡಿಯೋವನ್ನು ಸಂಪೂರ್ಣವಾಗಿ ಗಮನಿಸಿದಾಗ ಮಲ್ಲಿಕಾರ್ಜುನ ಖರ್ಗೆಯವರು ಪ್ರಧಾನಿ ಮೋದಿ ಅವರು ನೀಡಿದ ಹೇಳಿಕೆಯನ್ನು ಸಂಪೂರ್ಣವಾಗಿ ವಿವರಿಸಿ ಅದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವುದು ಕಂಡುಬಂದಿದೆ. ಹಾಗಾಗಿ ವೈರಲ್ ವಿಡಿಯೋದಲ್ಲಿ ಹೇಳಿರುವುದು ಸಂಪೂರ್ಣವಾಗಿ ಸುಳ್ಳಾಗಿದೆ ಮತ್ತು ಎಡಿಟೆಡ್ ಎಂಬುದು ಸಾಬೀತಾಗಿದೆ. ಹಾಗೇಯೇ  ಪ್ರಧಾನಿ ಮೋದಿ ಅವರು ಈ ಹೇಳಿಕೆ ನೀಡಿದ್ದಾರೆಯೇ ಎಂದು ಪರಿಶೀಲನೆ ನಡೆಸಿದಾಗ, 21 ಏಪ್ರಿಲ್‌ 2024ರಂದು ಪ್ರಧಾನಿ ಮೋದಿ ಅವರ ಈ ಹೇಳಿಕೆಯನ್ನು ಉದ್ದೇಶಿದಿ ದಿ ಹಿಂದೂ ಪ್ರಕಟಿಸಿದ ವರದಿಯೊಂದು ಪತ್ತೆಯಾಗಿದೆ.

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ, ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ಹಿಂದುಗಳ ಆಸ್ತಿಯನ್ನು ಮುಸಲ್ಮಾನರಿಗೆ ಹಂಚುತ್ತೇವೆ ಎಂದು ಹೇಳಿದ್ದಾರೆ ಎಂಬುದು ಸುಳ್ಳು. ವೈರಲ್ ವಿಡಿಯೋ ಪ್ರಧಾನಿ ಮೋದಿ ಅವರ ಹೇಳಿಕೆಯನ್ನು ಮಲ್ಲಿಕಾರ್ಜುನ ಖರ್ಗೆಯವರು ವಿವರಿಸಿದ್ದು, ಅದರಲ್ಲಿನ ಆಯುಧ ಭಾಗಗಳನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಮಾಹಿತಿಯನ್ನು ಹರಡಲಾಗಿದೆ ಹಾಗಾಗಿ ಇಂತಹ ಸುದ್ದಿಗಳು ಕಂಡುಬಂದರೆ ಎಚ್ಚರವಹಿಸಿ


ಇದನ್ನೂ ಓದಿ : Fact Check : ರತನ್‌ ಟಾಟಾ ಭಾರತೀಯ ಸೇನೆಗೆ 2500 ಗುಂಡು ನಿರೋಧಕ ವಾಹನಗಳ ಖರೀದಿಗೆ ದೇಣಿಗೆ ನೀಡಿದ್ದಾರೆಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *