Fact Check | ಪಾಕಿಸ್ತಾನದಲ್ಲಿನ ಪ್ರವಾಹದ ವಿಡಿಯೋವನ್ನು ಆಂಧ್ರಪ್ರದೇಶದ್ದು ಎಂದು ಸುಳ್ಳು ಮಾಹಿತಿ ಹಂಚಿಕೆ

“ಈ ವಿಡಿಯೋ ನೋಡಿ ಇದು ಆಂಧ್ರಪ್ರದೇಶದಲ್ಲಿನ ವಿಜಯವಾಡದ ಪರಿಸ್ಥಿತಿ. ಅಲ್ಲಿ ಮಳೆಯಿಂದಾಗಿ ಜನರ ಜೀವನ ಅಸ್ತವ್ಯಸ್ತಗೊಂಡಿದೆ. ಜನಸಾಮಾನ್ಯರು ಪರದಾಡುವಂತಾಗಿದೆ. ತಮ್ಮ ಜೀವವನ್ನು ಉಳಿಸಿಕೊಳ್ಳಲು ಪ್ರವಾಹ ಪೀಡಿತ ನೀರು ತುಂಬಿದ ಸ್ಥಳದಲ್ಲಿಯೇ ಜನರು ನಡೆದುಕೊಂಡು ಹೋಗುತ್ತಿದ್ದಾರೆ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋದಲ್ಲಿ ಕೂಡ ಜನರು ನೀರಿನ ಮಧ್ಯೆ ಇರುವುದನ್ನು ನೋಡಬಹುದಾಗಿದೆ.

ಈ ವಿಡಿಯೋ ನೋಡಿದ ಹಲವು ಮಂದಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲೂ ಕೂಡ ಹಂಚಿಕೊಂಡು, ಆಂಧ್ರಪ್ರದೇಶದಲ್ಲಿ ಭೀಕರವಾದ ಮಳೆಯಿಂದಾಗಿ ಜನರು ಪರದಾಡುತ್ತಿದ್ದಾರೆ. ಅಲ್ಲಿನ ಪ್ರವಾಹ ಪೀಡಿತ ಪ್ರದೇಶದಲ್ಲಿ ನೀರಿನಲ್ಲಿಯೇ ಜನರು ಹಲವು ರೀತಿಯ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ ಎಂದು ಇದೇ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋವಿನ ಅಸಲಿಯತ್ತು ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ವೈರಲ್ ವಿಡಿಯೋವಿನ ಕೆಲವೊಂದು ಕೀ ಪ್ರೇಮ್‌ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಪರಿಶೀಲನೆಯನ್ನು ನಡೆಸಲಾಯಿತು. ಈ ವೇಳೆ ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಸಾಕಷ್ಟು ಮಂದಿ ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ಗಳು ಕಂಡುಬಂದಿದ್ದು, ಆ ಪೋಸ್ಟ್ ಗಳ ಪ್ರಕಾರ ವೈರಲ್ ವಿಡಿಯೋ ಪಾಕಿಸ್ತಾನದ್ದಾಗಿದೆ.

ಈ ಕುರಿತು ಇನ್ನಷ್ಟು ಹುಡುಕಿದಾಗ, ಈ ವಿಡಿಯೋವನ್ನು ಜುಲೈ 2024 ರಿಂದಲೂ ಕೂಡ ಫೇಸ್‌ಬುಕ್‌ನಲ್ಲಿ ಸಾಕಷ್ಟು ಮಂದಿ ಪೋಸ್ಟ್ ಮಾಡುತ್ತಿರುವುದು ಪತ್ತೆಯಾಗಿದೆ. ಈ ವಿಡಿಯೋ ಪಾಕಿಸ್ತಾನದ ಸಿಂಧ್‌ ಪ್ರಾಂತ್ಯದ ಕಟ್ಟಾ ಜಿಲ್ಲೆಯ, ಕಾರ್ಲಿ ಸರೋವರ ಎಂದು ತಿಳಿದು ಬಂದಿದೆ. ಈ ಕುರಿತು ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಹುಡುಕಿದಾಗ, ಆಂಧ್ರಪ್ರದೇಶ ಸರ್ಕಾರದ ಫ್ಯಾಕ್ಟ್‌ಚೆಕ್‌ ಘಟಕ ಈ ವೈರಲ್ ಪೋಸ್ಟ್‌ಗೂ ಆಂಧ್ರಪ್ರದೇಶದಲ್ಲಿನ ಪ್ರವಾಹ ಪರಿಸ್ಥಿತಿಗೂ ಯಾವುದೇ ರೀತಿಯಾದಂತಹ ಸಂಬಂಧವಿಲ್ಲ ಎಂಬುದನ್ನು ಸ್ಪಷ್ಟಪಡಿಸಿ ಉಲ್ಲೇಖಿಸಿರುವುದು ಕೂಡ ಕಂಡುಬಂದಿದೆ.

ಇನ್ನಷ್ಟು ಮಾಹಿತಿಗಾಗಿ ನಾವು ಯುಟ್ಯೂಬ್‌ನಲ್ಲಿ ಕಾರ್ಲಿ ಸರೋವರ ಎಂಬ ಕೀ ವರ್ಡ್‌ ಬಳಸಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ 16 ಜೂನ್‌ 2022ರಂದು ಚಾಲ್ಟೇ ಫಿರ್ಟೇ ಎಂಬ ಯುಟ್ಯೂಬ್‌ ಚಾನಲ್‌ನಲ್ಲಿ ಅಪ್‌ಲೋಡ್‌ ಮಾಡಲಾದ ವಿಡಿಯೋ ವ್ಲಾಗ್‌ವೊಂದು ಕಂಡು ಬಂದಿದೆ. ಈ ವಿಡಿಯೋದಲ್ಲಿ ಕಾರ್ಲಿ ಸರೋವರ ಪ್ರವಾಸಿತಾಣ ಮತ್ತು ಈ ಸರೋವರದಲ್ಲಿ ಜನರು ಸ್ನಾನ, ಮೋಜು-ಮಸ್ತಿ ಮಾಡುವ ಕುರಿತು ಮಾಹಿತಿಯನ್ನು ನೀಡಲಾಗಿತ್ತು.

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ ಆಂಧ್ರಪ್ರದೇಶದ ವಿಜಯವಾಡದಲ್ಲಿ ಉಂಟಾದ ಪ್ರವಾಹದಲ್ಲಿ ಜನರು ನೀರಿನ ಮಧ್ಯೆ ನಡೆದುಕೊಂಡು ಹೋಗುತ್ತಿದ್ದಾರೆ ಎಂಬ ವಿಡಿಯೋ ಸುಳ್ಳಿನಿಂದ ಕೂಡಿದೆ. ವೈರಲ್‌ ಆಗಿರುವ ವಿಡಿಯೋ ಪಾಕಿಸ್ತಾನದ್ದು ಎಂಬುದು ಸತ್ಯಶೋಧನೆಯಲ್ಲಿ ದೃಢಪಟ್ಟಿದೆ. ಹಾಗಾಗಿ ವೈರಲ್‌ ವಿಡಿಯೋಗಳನ್ನು ಹಂಚಿಕೊಳ್ಳುವ ಮುನ್ನ ಒಮ್ಮೆ ಪರಿಶೀಲಿಸಿಕೊಳ್ಳುವುದು ಉತ್ತಮ.


ಇದನ್ನೂ ಓದಿ : Fact Check | ಬಾಂಗ್ಲಾದೇಶದ ವೀಡಿಯೊವನ್ನು ಪ.ಬಂಗಾಳದ ವಿಡಿಯೋ ಎಂದು ಸುಳ್ಳು ಮಾಹಿತಿ ಹಂಚಿಕೊಂಡ ಅಮಿತ್‌ ಮಾಳವಿಯಾ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *