“ಹಿಂದುಗಳೇ ಎಚ್ಚರ ಮುಸಲ್ಮಾನರ ಅಂಗಡಿಗಳಲ್ಲಿ ವ್ಯಾಪಾರ ಮಾಡುವಾಗ ಇಂತಹ ಘಟನೆಗಳು ಜರುಗುತ್ತಲೇ ಇರುತ್ತವೆ. ಮುಸಲ್ಮಾನರ ಅಂಗಡಿಯಲ್ಲಿ ಮೀನು ಮಾಂಸಗಳನ್ನು ಖರೀದಿಸುವ ಮುನ್ನ ಎಚ್ಚರ. ಈ ವಿಡಿಯೋದಲ್ಲಿ ನೋಡಿ ಮೀನಿಗೆ ಮುಸಲ್ಮಾನರು ಮಾತ್ರೆಯೊಂದನ್ನು ಸೇರಿಸಿ, ಅದು ಕರಗುವಂತೆ ಮಾಡಿ, ತದನಂತರ ಮಾರಾಟ ಮಾಡುತ್ತಿದ್ದಾರೆ. ಇನ್ನು ಮುಂದಿನ ದಿನಗಳಲ್ಲಾದರೂ ಮುಸಲ್ಮಾನರ ಅಂಗಡಿಯಲ್ಲಿ ಮೀನು ಮತ್ತು ಮಾಂಸವನ್ನು ಖರೀದಿಸಬೇಡಿ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
जिहादी मछली 🐟🦈🐠 बेच रहे हैं तो एक ऐसी गोली 💊 डाल रहे हैं जो आपकी किडनी को 🫘 डैमेज कर सकती है 💁♀️💁🏻♂️ 😨🤮🤢 हिंदुओं को सिर्फ इतना करना चाहिए 😊 विशेष कर खाने पीने की समान हिंदू, केवल हिंदू के दुकान से ही खरीदें और अपना स्वास्थ्य अच्छा रखें ‼️ pic.twitter.com/CYRmYLmah1
— RAI Sahab ( Bhartiy )🇮🇳 (@Sarvesh280989) August 20, 2024
ಹೀಗೆ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಪೊಲೀಸರು ಮೀನು ವ್ಯಾಪಾರಿಗಳ ಅಂಗಡಿಗಳಿಗೆ ದಾಳಿ ನಡೆಸಿ, ಮೀನುಗಳ ಒಳಗಿದ್ದ ಮಾತ್ರೆಗಳನ್ನು ಪರಿಶೀಲಿಸುತ್ತಿರುವುದು ಕಂಡುಬಂದಿದೆ. ಹೀಗಾಗಿ ವೈರಲ್ ವಿಡಿಯೋದೊಂದಿಗೆ ಹಂಚಿಕೊಳ್ಳಲಾಗುತ್ತಿರುವ ಪ್ರತಿಪಾದನೆಯನ್ನು ನಿಜವೆಂದು ನಂಬಿ ಸಾಕಷ್ಟು ಮಂದಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ವೈರಲ್ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ. ವಿವಿಧ ನಿರೂಪಣೆಗಳೊಂದಿಗೆ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋವಿನ ಅಸಲಿಯತ್ತು ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ
मुस्लिम लोग मछली में किडनी डैमेज करने की दवा डाल कर हिन्दुओ को बेचते हुए।
यही भाईचारा कायम रखने वाला प्लान pic.twitter.com/shJmHhGcXp— हिन्दू दीप नारायण भारद्वाज (मोदी का परिवार) (@DeepnarayanDee8) August 22, 2024
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ಕುರಿತು ಪರಿಶೀಲನೆಯನ್ನು ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ವಿವಿಧ ಕೀ ಫ್ರೇಮ್‌ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಲಾಯಿತು. ಈ ವೇಳೆ ನಮಗೆ ಇಂಟರ್ನ್ಯಾಷನಲ್ ಬಿಜಿನೆಸ್ ಟೈಮ್ಸ್ ಸುದ್ದಿ ತಾಣ 8 ಸೆಪ್ಟೆಂಬರ್ 2024 ಹಂಚಿಕೊಂಡಿದ್ದ ವರದಿಯೊಂದು ಪತ್ತೆಯಾಗಿದೆ.
ಈ ವರದಿಯನ್ನು ಸಂಪೂರ್ಣವಾಗಿ ಪರಿಶೀಲಿಸಿದಾಗ ಫಾರ್ಮಾಲಿನ್ ಮಾತ್ರೆಗಳನ್ನು ಬೆರೆಸಿದ ಮೀನು ಮಾರಾಟ ಜಾಲದ ಕುರಿತು ಸಂಪೂರ್ಣವಾಗಿ ವಿವರಣೆಯನ್ನು ನೀಡಲಾಗಿದೆ. ಫಾರ್ಮಾಲಿನ್ ಮಾತ್ರೆಗಳನ್ನು ಮೀನುಗಳ ಒಳಗೆ ಇರಿಸಲಾಗುತ್ತದೆ. ಅದು ಕರಗಿ ಮೂರು ನಾಲ್ಕು ದಿನಗಳ ಕಾಲ ಮೀನುಗಳು ಹಾಳಾಗದಂತೆ ಇಡಲು ನೆರವಾಗುತ್ತದೆ ಎಂದು ಉಲ್ಲೇಖಿಸಲಾಗಿದೆ. ಇದರ ಜೊತೆಗೆ ಮೀನುಗಳಲ್ಲಿ ಫಾರ್ಮಾಲಿನ್ ಮಾತ್ರೆಗಳನ್ನು ಇರಿಸುವ ಜಾಲ ದೊಡ್ಡದಾಗಿದ್ದು, 2018ರಲ್ಲಿ ಕೂಡ ಕೇರಳದಾದ್ಯಂತ ಇಂತಹ ಮೀನುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂಬ ವರದಿಯನ್ನು ಕಂಡುಕೊಂಡೆವು
ಇದರ ಆಧಾರದ ಮೇಲೆ 2018ರಲ್ಲಿ ಕೇರಳದಲ್ಲಿ ಫಾರ್ಮಾಲಿನ್ ಮೀನುಗಳನ್ನು ಪೊಲೀಸರು ವಶಪಡಿಸಿಕೊಂಡ ವರದಿಗಳ ಕುರಿತು ಹುಡುಕಾಟ ನಡೆಸಲು ಕೆಲವೊಂದು ಕೀ ವರ್ಡ‌್‌ಗಳನ್ನು ಬಳಸಿ ಪರಿಶೀಲನೆಯನ್ನು ನಡೆಸಿದೆವು ಈ ವೇಳೆ ನಮಗೆ ಎನ್‌ಡಿಟಿವಿ, ದ ನ್ಯೂಸ್ ಮಿನಿಟ್, ದ ಹಿಂದೂ, ದ ಇಂಡಿಯನ್ ಎಕ್ಸ್ಪ್ರೆಸ್, ಹಿಂದುಸ್ತಾನ್ ಟೈಮ್ಸ್, ಸೇರಿದ ಹಾಗೆ ಹಲವು ಮಾಧ್ಯಮಗಳು ಮಾಡಿದ್ದ ವರದಿಗಳು ಪತ್ತೆಯಾಗಿದ್ದವು. ಇದು ವೈರಲ್ ವಿಡಿಯೋ ದಲ್ಲಿ ಹಂಚಿಕೊಳ್ಳಲಾಗುತ್ತಿರುವ ಪ್ರತಿಪಾದನೆ ಸುಳ್ಳು ಎಂಬುದನ್ನು ಸಾಬೀತು ಪಡಿಸಿದೆ.
ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ ಫಾರ್ಮಾಲಿನ್ ಮಾತ್ರೆಯನ್ನು ಬೆರೆಸಿದ ಮೀನುಗಳನ್ನು ಕೇವಲ ಮುಸಲ್ಮಾನರು ಮಾತ್ರ ಮಾರಾಟ ಮಾಡುತ್ತಿದ್ದಾರೆ ಎಂಬುದು ಸುಳ್ಳಿನಿಂದ ಕೂಡಿದೆ. ಈ ರೀತಿಯ ಮೀನು ಮಾರಾಟದ ಜಾಲ ದೊಡ್ಡದಾಗಿ ಹರಡಿಕೊಂಡಿದ್ದು, 2018 ರಲ್ಲಿ ಕೇರಳದಲ್ಲಿ ಪೊಲೀಸರು ಫಾರ್ಮಾಲಿನ್ ಮಾತ್ರೆಗಳನ್ನು ಬೆರೆಸಿದ್ದ ಮೀನುಗಳನ್ನು ವಶಪಡಿಸಿಕೊಂಡಿದ್ದ ಸಂದರ್ಭದಲ್ಲಿ ವಿಡಿಯೋವನ್ನು ಬಳಸಿಕೊಂಡು ಸುಳ್ಳು ಸುದ್ದಿಯನ್ನು ಹರಡಲಾಗಿದೆ. ಇಂತಹ ಸುಳ್ಳು ಸುದ್ದಿಗಳು ಕಂಡು ಬಂದರೆ ಆ ಕುರಿತು ಎಚ್ಚರವಹಿಸಿ.
ಇದನ್ನೂ ಓದಿ : Fact Check : ಬುಲ್ಡೋಜರ್ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸಿದ ವೀಡಿಯೊ ತೆಲಂಗಾಣದ್ದಲ್ಲ ಸೌದಿ ಅರೇಬಿಯಾದ್ದು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.