Fact Check | ಕಮಲಾ ಹ್ಯಾರಿಸ್‌ ಪರ ಪ್ರಚಾರಕ್ಕಾಗಿ ಡಿಕೆಶಿ ಅಮೆರಿಕಗೆ ತೆರಳಿದ್ದಾರೆ ಎಂಬುದು ಸುಳ್ಳು

“ನವೆಂಬರ್‌ ̧5 2024ಕ್ಕೆ ಅಮೆರಿಕ ಅಧ್ಯಕ್ಷರ ಆಯ್ಕೆಯ ಐತಿಹಾಸಿಕ ಚುನಾವಣೆ ನಡೆಯಲಿದೆ. ಡೆಮಾಕ್ರೆಟಿಕ್‌ ಪಕ್ಷದಿಂದ ಭಾರತೀಯ ಮೂಲದ ಕಮಲಾ ಹ್ಯಾರೀಸ್‌‌ ಅಭ್ಯರ್ಥಿಯಾಗಿದ್ದರೆ ರಿಪಬ್ಲಿಕನ್‌ ಪಕ್ಷದಿಂದ ಡೊನಾಲ್ಡ್‌ ಟ್ರಂಪ್‌ 2ನೇ ಸಲ ಅದೃಷ್ಟಪರೀಕ್ಷೆಗೆ ಇಳಿದಿದ್ದಾರೆ. ಈಗ ಕಮಲಾ ಹ್ಯಾರಿಸ್‌ ಪರವಾಗಿ ಪ್ರಚಾರ ಮಾಡಲು ಅನಿವಾಸಿ ಭಾರತೀಯರು, ಅಮೆರಿಕದಲ್ಲಿರುವ ಕನ್ನಡಿಗರ ಮತ ಸೆಳೆಯಲು ಡಿ.ಕೆ ಶಿವಕುಮಾರ್‌  ಅಮೆರಿಕಾಗೆ ತೆರಳಿದ್ದಾರೆ. ಕಮಲಾ ಹ್ಯಾರಿಸ್‌ ತಾಯಿ ಟ್ರಸ್ಟ್‌ ಜೊತೆ ಡಿಕೆ ಶಿವಕುಮಾರ್‌ ಅವರಿಗೆ ನಂಟಿದೆ ಅನ್ನೋದು ಕಾಂಗ್ರೆಸ್‌ ಮೂಲಗಳ ಮಾಹಿತಿ. ಕಮಲಾ ಹ್ಯಾರಿಸ್‌ ತಾಯಿ ಟ್ರಸ್ಟ್‌ಗೆ ಡಿಕೆಶಿವಕುಮಾರ್‌ ಎಲ್ಲಾ ರೀತಿಯ ನೆರವನ್ನೂ ಕೊಟ್ಟಿದ್ದಾರೆ ಅಂತ ಹೇಳಲಾಗ್ತಿದೆ.” ಎಂದು ನ್ಯೂಸ್‌ 18 ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಇನ್ನು ಇದೇ ರೀತಿಯ ಸುದ್ದಿಯನ್ನು ಹಲವು ಮಾಧ್ಯಮಗಳು ಮಾಡಿದ್ದು, ಈ ಕುರಿತು ಸ್ವತಃ ಡಿ.ಕೆ.ಶಿವಕುಮಾರ್‌ ಅವರೇ ಸ್ಪಷ್ಟನೆಯನ್ನು ನೀಡಿದ್ದರು, ಈ ಬಗ್ಗೆ ಅನೇಕ ಸಾಮಾಜಿಕ ಜಾಲತಾಣದ ಬಳಕೆದಾರರು ವಿವಿಧ ರೀತಿಯ ಕತೆಗಳನ್ನು ಕಟ್ಟಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದೇ ವಿಚಾರ ಇದೀಗ ಜನಸಾಮಾನ್ಯರಲ್ಲಿ ತಪ್ಪು ಅಭಿಪ್ರಾಯವನ್ನು ಸೃಷ್ಟಿಸುತ್ತಿದ್ದು, ಈ ಬಗ್ಗೆ ಸತ್ಯ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಸುದ್ದಿಯ ಬಗೆಗಿನ ಸ್ಪಷ್ಟ ಮಾಹಿತಿಗಾಗಿ ಕನ್ನಡ ಫ್ಯಾಕ್ಟ್‌ಚೆಕ್‌ ರಾಜ್ಯದ ಉಪ ಮುಖ್ಯಮಂತ್ರಿಗಳಾದ ಡಿ.ಕೆ ಶಿಕುಮಾರ್‌ ಅವರ ಎಕ್ಸ್‌( ಈ ಹಿಂದಿನ ಟ್ವಿಟರ್‌) ಖಾತೆಯನ್ನು ಪರಿಶೀಲನೆ ನಡೆಸಿತು. ಈ ವೇಳೆ ನಮಗೆ ಸ್ವತಃ ಡಿ.ಕೆ ಶಿವಕುಮಾರ್‌ ಅವರೇ 8 ಸೆಪ್ಟೆಂಬರ್‌ 2024ರಂದು ರಾತ್ರಿ 8 ಗಂಟೆ 2 ನಿಮಿಷಕ್ಕೆ ಮಾಡಿದ್ದ ಪೋಸ್ಟ್‌ ಕಂಡು ಬಂದಿದೆ. ಅದರಲ್ಲಿ ಅವರು “ನಾನು ಕೈಗೊಳ್ಳುತ್ತಿರುವ ಅಮೆರಿಕ ಪ್ರವಾಸಕ್ಕೆ ಸಂಬಂಧಿಸಿದಂತೆ ಹರಿದಾಡುತ್ತಿರುವ ವದಂತಿಗಳ ಬಗ್ಗೆ ನನ್ನ ಸ್ಪಷ್ಟನೆ ಇದು. ಈ ಪ್ರವಾಸವು ವೈಯಕ್ತಿಕವಾಗಿದ್ದು, ಯಾವುದೇ ರಾಜಕೀಯ ಉದ್ದೇಶವನ್ನು ಹೊಂದಿಲ್ಲ. ಅಥವಾ ನನಗೆ ಯಾವುದೇ ರಾಜಕೀಯ ಆಹ್ವಾನಗಳೂ ಬಂದಿಲ್ಲ. ಸಾರ್ವಜನಿಕರು ಯಾವುದೇ ರೀತಿಯ ಊಹಾಪೋಹಗಳಿಗೆ ಕಿವಿಗೊಡದಂತೆ ವಿನಂತಿಸುತ್ತೇನೆ.” ಎಂದು ಬರೆದುಕೊಂಡಿರುವುದು ಕಂಡು ಬಂದಿದೆ.

ಇದರ ಜೊತೆಗೆ ಕರ್ನಾಟಕ ಕಾಂಗ್ರೆಸ್‌ ಕೂಡ ಈ ಬಗ್ಗೆ ಸ್ಪಷ್ಟನೆಯನ್ನು ನೀಡಿ ಪೋಸ್ಟ್‌ ಮಾಡಿದ್ದು, ಅದರಲ್ಲಿ “ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪಮುಖ್ಯಮಂತ್ರಿಗಳಾದ @DKShivakumar ಅವರು ವಯಕ್ತಿಕ ಕೆಲಸಗಳ ನಿಮಿತ್ತ ಅಮೇರಿಕಾದ ವಾಷಿಂಗ್ಟನ್ ನಗರಕ್ಕೆ ಪ್ರವಾಸ ಕೈಗೊಂಡಿದ್ದಾರೆಯೇ ಹೊರತು ಯಾವುದೇ ರಾಜಕೀಯ ಕಾರಣಗಳಿಗಲ್ಲ. ಕೆಲ ಮಾಧ್ಯಮಗಳಲ್ಲಿ ಉಹಾಪೋಹದ ವರದಿಗಳು ಪ್ರಸಾರವಾಗುತ್ತಿದ್ದು, ಆ ವರದಿಗಳು ಸತ್ಯಕ್ಕೆ ದೂರವಾಗಿದೆ.” ಎಂದು ಸ್ಪಷ್ಟನೆಯನ್ನು ನೀಡಿದೆ.

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಡಿ.ಕೆ.ಶಿವಕುಮಾರ್‌ ಅವರು ಕಮಲಾ ಹ್ಯಾರಿಸ್‌ ಅವರನ್ನು ಬೆಂಬಲಿಸಲು ಅಮೆರಿಕಗೆ ಪ್ರವಾಸ ಕೈಗೊಂಡಿದ್ದಾರೆ ಎಂಬ ಮಾಧ್ಯಮಗಳ ವರದಿ ಸುಳ್ಳಾಗಿದೆ. ತಮ್ಮ ಪ್ರವಾಸದ ಕುರಿತು ಸ್ವತಃ ಡಿ.ಕೆ ಶಿವಕುಮಾರ್‌ ಅವರೇ ಸ್ಪಷ್ಟನೆಯನ್ನು ನೀಡಿರುವುದರಿಂದ ಯಾವುದೇ ಊಹಪೋಹದ ಸುದ್ದಿಗಳನ್ನು ಶೇರ್‌ ಮಾಡುವುದು ಸುಳ್ಳು ಸುದ್ದಿ ಹರಡಲು ದಾರಿ ಮಾಡಿಕೊಡುತ್ತದೆ.


ಇದನ್ನೂ ಓದಿ :Fact Check | ಹಿಂದೂಗಳು ಸಿಖ್‌ ವ್ಯಕ್ತಿಗೆ ಬೆಂಕಿ ಹಚ್ಚಿದ್ದಾರೆ ಎಂಬ ಫೋಟೋ ಸುಳ್ಳು ಮಾಹಿತಿಯಿಂದ ಕೂಡಿದೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *