Fact Check | ಹಿಂದೂಗಳು ಸಿಖ್‌ ವ್ಯಕ್ತಿಗೆ ಬೆಂಕಿ ಹಚ್ಚಿದ್ದಾರೆ ಎಂಬ ಫೋಟೋ ಸುಳ್ಳು ಮಾಹಿತಿಯಿಂದ ಕೂಡಿದೆ

“ಇದು ಹಿಂದೂ ಉಗ್ರಗಾಮಿಗಳ ಕೃತ್ಯ. ಒಬ್ಬ ಅಮಾಯಕ ಸಿಖ್ ತಂದೆ ತನ್ನ ಮಗನನ್ನು ಉಳಿಸಿಕೊಳ್ಳಲು ಹೇಗೆ ಪರದಾಡುತ್ತಿದ್ದಾನೆ ನೋಡಿ.. ಹೀಗೆ ಈ ಅಮಾಯಕ ಮಗನನ್ನು ಬೆಂಕಿ ಹಚ್ಚಿ ಕೊಲ್ಲಲು ಯತ್ನಿಸಿದವರು ಇದೇ ಹಿಂದುಗಳು. ಇಂದು ಇವರ ಕೃತ್ಯವನ್ನು ಯಾರು ಕೂಡ ಪ್ರಶ್ನೆ ಮಾಡುತ್ತಿಲ್ಲ.. ಏಕೆಂದರೆ ಈಗ ಪ್ರಶ್ನಿಸುವ ಪರಿಸ್ಥಿತಿಯಲ್ಲಿ ಯಾರೂ ಇಲ್ಲ.” ಎಂದು ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಈ ಫೋಟೋದಲ್ಲಿ ಕೂಡ ವ್ಯಕ್ತಿಯೊಬ್ಬನಿಗೆ ಬೆಂಕಿ ತಗುಲಿದ್ದು, ಆ ಬೆಂಕಿಯನ್ನು ನಂದಿಸಲು ಆತನ ಸುತ್ತಮುತ್ತಲಿದ್ದ ಇಬ್ಬರಿಂದ ಮೂವರು ವ್ಯಕ್ತಿಗಳು ಪರದಾಡುತ್ತಿರುವುದು ಕಾಣಿಸುತ್ತದೆ. ಅದರಲ್ಲಿ ಒಬ್ಬ ಸಿಖ್‌ ವ್ಯಕ್ತಿ ಇರುವುದು ಕೂಡ ಕಂಡು ಬಂದಿದೆ. ಹಾಗಾಗಿ ಈ ವೈರಲ್ ಫೋಟೋವನ್ನು ನೋಡಿದ ಬಹುತೇಕರು ಅದರೊಳಗಿನ ಟಿಪ್ಪಣಿಯನ್ನು ನಿಜವೆಂದು ಭಾವಿಸಿ, ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಹೀಗೆ ಶೇರ್ ಮಾಡಲಾಗುತ್ತಿರುವ ಫೋಟೋವಿನ ಸತ್ಯಾಸತ್ಯತೆ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಫೋಟೋ ಕುರಿತು ಪರಿಶೀಲನೆಯನ್ನು ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಹೀಗಾಗಿ ವೈರಲ್ ಫೋಟೋವಿನ ವಿವಿಧ ಕೀ ಫ್ರೇಮ್‌ಗಳನ್ನು ಬಳಸಿ ನಾವು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಪರಿಶೀಲನೆಯನ್ನು ನಡೆಸಿದೆವು. ಈ ವೇಳೆ ನಮಗೆ ಟೈಮ್ಸ್ ಕಂಟೆಂಟ್.ಕಾಂ ಎಂಬ ವೆಬ್‌ಸೈಟ್‌ನಲ್ಲಿ ಮಾಹಿತಿಯೊಂದು ಲಭ್ಯವಾಗಿದೆ. ಈ ಮಾಹಿತಿಯನ್ನು ಗಮನಿಸಿದಾಗ ವೈರಲ್ ಫೋಟೋದಲ್ಲಿ ಹಂಚಿಕೊಳ್ಳಲಾಗುತ್ತಿರುವ ಟಿಪ್ಪಣಿಯು ಸುಳ್ಳು ಮಾಹಿತಿಯಿಂದ ಕೂಡಿದೆ ಎಂಬುದು ಸ್ಪಷ್ಟವಾಗಿದೆ.

ಟೈಮ್ಸ್ ಕಂಟೆಂಟ್.ಕಾಂ ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ವೈರಲ್ ಚಿತ್ರವು 20 ಆಗಸ್ಟ್ 1990ರಲ್ಲಿ ಸೆರೆಹಿಡಿಯಲಾಗಿದೆ. ಅದರ ಮಾಹಿತಿಯ ಪ್ರಕಾರ ಮಂಡಲ್ ಆಯೋಗದ ಶಿಫಾರಸ್ಸುಗಳ ಅನುಷ್ಠಾನವನ್ನು ವಿರೋಧಿಸಿ ನಡೆಸಿದ, ಆಂದೋಲನದ ಭಾಗವಾಗಿ ದಕ್ಷಿಣ ದೆಹಲಿಯ ದೇಶಬಂಧು ಕಾಲೇಜಿನಲ್ಲಿ 1990 ರಲ್ಲಿ ಪ್ರತಿಭಟನೆಯನ್ನು ನಡೆಸಲಾಗಿತ್ತು. ಈ ಪ್ರತಿಭಟನೆಯಲ್ಲಿ, ವಿದ್ಯಾರ್ಥಿ ರಾಜು ಗೋಸ್ವಾಮಿ ಅವರು ಬೆಂಕಿಯನ್ನು ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು ಎಂಬುದು ತಿಳಿದು ಬಂದಿದೆ.

ಇದನ್ನೇ ಆಧಾರವಾಗಿರಿಸಿಕೊಂಡು ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಹುಡುಕಾಟವನ್ನು ನಡೆಸಿದಾಗ, 7 ಆಗಸ್ಟ್ 2021 ರಂದು ದ ಕ್ವಿಂಟ್‌ ಪ್ರಕಟಿಸಿದ ಮಂಡಲ ವಿರೋಧಿ ಪ್ರತಿಭಟನೆಗಳು ನಮ್ಮ ಯುವ ಮನಸ್ಸಿನಲ್ಲಿ ಜಾತಿ ಬೆಂಕಿಯನ್ನು ಹೇಗೆ ಹುಟ್ಟು ಹಾಕಿದ್ದವು ಎಂಬ ಶೀರ್ಷಿಕೆ ಅಡಿಯಲ್ಲಿನ ವರದಿಯೊಂದನ್ನು ಕಂಡುಕೊಂಡಿದ್ದೇವೆ. ಆ ವರದಿಯಲ್ಲೂ ಕೂಡ ಇದೇ ವೈರಲ್ ಫೋಟೋ ಕಂಡು ಬಂದಿದೆ. ಹಾಗಾಗಿ ವೈರಲ್ ಆಗುತ್ತಿರುವ ಟಿಪ್ಪಣಿಯು ಸಂಪೂರ್ಣವಾಗಿ ಸುಳ್ಳಿನಿಂದ ಕೂಡಿದೆ ಎಂಬುದು ಸಾಬೀತಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ, ಸಿಖ್ ವ್ಯಕ್ತಿಯೊಬ್ಬನಿಗೆ ಹಿಂದೂಗಳು ಬೆಂಕಿ ಹಚ್ಚಿ ಕೊಲ್ಲಲು ಯತ್ನಿಸಿದ್ದಾರೆ ಎಂಬುದು ಸಂಪೂರ್ಣವಾಗಿ ಸುಳ್ಳಾಗಿದೆ. ವೈರಲ್ ಫೋಟೋ 1990ರದಾಗಿದ್ದು, ಮಂಡಲ್ ಆಯೋಗದ ಶಿಫಾರಸುಗಳ ಅನುಷ್ಠಾನವನ್ನು ವಿರೋಧಿಸಿ ನಡೆಸಿದ ಪ್ರತಿಭಟನೆಗೆ ಸಂಬಂಧಿಸಿದಾಗಿದೆ. ಹಾಗಾಗಿ ಇಂತಹ ಸುಳ್ಳು ಮಾಹಿತಿಯುಳ್ಳ ಫೋಟೋಗಳನ್ನು ಹಂಚಿಕೊಳ್ಳಬೇಡಿ. ಒಂದು ವೇಳೆ ಹಂಚಿಕೊಂಡರೆ ಅದು ಕಾನೂನಿನ ಪ್ರಕಾರ ಅಪರಾಧವಾಗಿದೆ


ಇದನ್ನೂ ಓದಿ : Fact Check : ಯುವಕನೊಬ್ಬ ವಿದ್ಯುತ್‌ ಕಂಬದ ಕೇಬಲ್‌ಗಳನ್ನು ಹಾನಿಗೊಳಿಸುತ್ತಿರುವ ವೀಡಿಯೊ ಭಾರತದ್ದಲ್ಲ, ಪಾಕಿಸ್ತಾನದ್ದು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *