“ಅಮೆರಿಕಾದಲ್ಲಿ ಕುಳಿತು ಚೀನಾವನ್ನು ಹೊಗಳಿದ್ದೇಕೆ ರಾಹುಲ್ ಗಾಂಧಿ? ಬಿಜೆಪಿ ಹೇಳಿದ್ದೇನು?” ಎಂದು ಶೀರ್ಷಿಕೆ ನೀಡಿರುವ ಏಷ್ಯಾನೆಟ್ ಸುವರ್ಣ ನ್ಯೂಸ್ ಜನಸಾಮಾನ್ಯರಲ್ಲಿ ರಾಹುಲ್ ಗಾಂಧಿ ಬಗ್ಗೆ ತಪ್ಪು ಅಭಿಪ್ರಾಯ ಮೂಡುವಂತೆ ಮಾಡಿದೆ. ಹೀಗೆ ಶೀರ್ಷಿಕೆ ನೀಡಿರುವ ಏಷ್ಯಾನೆಟ್ ಸುವರ್ಣ ನ್ಯೂಸ್ ತನ್ನ ಸುದ್ದಿಯಲ್ಲಿ ಮಾತ್ರ ರಾಹುಲ್ ಗಾಂಧಿ ಅವರು ಏನು ಹೇಳಿದ್ದಾರೋ ಅದನ್ನೇ ಉಲ್ಲೇಖಿಸಿದೆ. ಇದು ಸಾರ್ವಜನಿಕರಲ್ಲಿ ಗೊಂದಲವನ್ನು ಮೂಡಿಸುವುದರ ಜೊತೆಗೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ದೇಶದ್ರೋಹಿ ಎಂಬಂತೆ ಬಿಂಬಿಸಲಾಗಿದೆ.
ಅಮೆರಿಕಾದಲ್ಲಿ ಕುಳಿತು ಚೀನಾವನ್ನು ಹೊಗಳಿದ್ದೇಕೆ ರಾಹುಲ್ ಗಾಂಧಿ? ಬಿಜೆಪಿ ಹೇಳಿದ್ದೇನು?#RahulGandhi #China #Congress https://t.co/JyWdKtV1Mk
— Asianet Suvarna News (@AsianetNewsSN) September 10, 2024
ಹೀಗೆ ಸುವರ್ಣ ನ್ಯೂಸ್‌ನ ಈ ವರದಿಯನ್ನು ಕಂಡ ಹಲವರು ವಿವಿಧ ರೀತಿಯಾದ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ. ಇನ್ನು ಸುವರ್ಣ ನ್ಯೂಸ್ ಈ ವರದಿಯನ್ನು ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಅದರಲ್ಲಿ ಮಧುಕರ್ ಎಂಬುವವರು ಸುವರ್ಣ ನ್ಯೂಸ್ ಶೀರ್ಷಿಕೆಯನ್ನು ಗಮನಿಸಿ “ಇವನನ್ನ ದೇಶದಿಂದ ಗಡಿ ಪಾರು ಮಾಡಿ, ಇಲ್ಲ ಅಂದ್ರೆ ದೇಶದಲ್ಲಿ ಇವನಂತ ಕೆಟ್ಟ ಹುಳಗಳು ಜಾಸ್ತಿ ಇವೆ ಜಾಸ್ತಿ ಹುಟ್ಟುಕೊಳ್ಳತ್ತವೆ ” ಎಂದು ರಾಹುಲ್ ಗಾಂಧಿ ವಿರುದ್ಧ ಪೋಸ್ಟ್ ಮಾಡಿ ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ.
ಇವನನ್ನ ದೇಶದಿಂದ ಗಡಿ ಪಾರು ಮಾಡಿ ಇಲ್ಲ ಅಂದ್ರೆ ದೇಶದಲ್ಲಿ ಇವನಂತ ಕೆಟ್ಟ ಹುಳಗಳು ಜಾಸ್ತಿ ಇವೆ ಜಾಸ್ತಿ ಹುಟ್ಟುಕೊಳ್ಳತ್ತವೆ 😡
— MadhuKumar (@MadhuKu87802809) September 10, 2024
ಫ್ಯಾಕ್ಟ್‌ಚೆಕ್
ಹೀಗೆ ಸಾರ್ವಜನಿಕರ ದಾರಿ ತಪ್ಪಿಸುವ ಶಿರ್ಷಿಕೆಯನ್ನು ನೀಡಿರುವ ಏಷ್ಯಾನೆಟ್ ಸುವರ್ಣ ನ್ಯೂಸ್ ತನ್ನ ವರದಿಯಲ್ಲಿ ಏನು ಉಲ್ಲೇಖಿಸಿದೆ ಎಂಬುದನ್ನು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಪರಿಶೀಲನೆಯನ್ನು ನಡೆಸಿದೆ. ಇದಕ್ಕಾಗಿ ನಾವು ಏಷ್ಯಾನೆಟ್ ಸುವರ್ಣ ನ್ಯೂಸ್ ಸುದ್ದಿಯನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸಿದೆವು. ಈ ವೇಳೆ ತನ್ನ ಸುದ್ದಿಯಲ್ಲಿ ಚೀನಾದಲ್ಲಿ ನಿರುದ್ಯೋಗವಿಲ್ಲ ಎಂಬ ಅಂಶವನ್ನು ಉಲ್ಲೇಖಿಸಿರುವುದು ಕಂಡು ಬಂದಿದೆ. ಅದರಲ್ಲಿ “ಇದೇ ವೇಳೆ ಭಾರತದಲ್ಲಿನ ನಿರುದ್ಯೋಗ ಸಮಸ್ಯೆಗೆ ಚೀನಾ ಹೋಲಿಸಿ ಮಾತನಾಡಿದ ರಾಹುಲ್ ಗಾಂಧಿ, ‘ಭಾರತ, ಅಮೆರಿಕದಲ್ಲಿ ನಿರುದ್ಯೋಗ ಸಮಸ್ಯೆ ಇದೆ. ಇದಕ್ಕೆಲ್ಲ ಕಾರಣ, ಅಮೆರಿಕವನ್ನು ಹಿಂದಿಕ್ಕಿ ಚೀನಾ ವಿಶ್ವದ ಬಹುದೊಡ್ಡ ಉತ್ಪಾದನಾ ಕೇಂದ್ರವಾಗಿ ಹೊರಹೊಮ್ಮಿದ್ದು. ಮೊದಲು ಅಮೆರಿಕ ಉತ್ಪಾದನೆಯಲ್ಲಿ ಮುಂದಿತ್ತು. ಆದರೆ ಇಂದು ಪಾಶ್ಚಾತ್ಯ ದೇಶಗಳು ಬಳಕೆದಾರ ದೇಶಗಳಾಗಿವೆ. ಚೀನಾ ಉತ್ಪಾದಕ ದೇಶವಾಗಿದೆ. ಹೀಗಾಗಿ ಆ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಇಲ್ಲ’ ಎಂದರು.” ಎಂದು ಸ್ಪಷ್ಟವಾಗಿ ಉಲ್ಲೇಖಿಸಿದೆ.
ಹೆಚ್ಚಿನ ಮಾಹಿತಿಗಾಗಿ ರಾಹುಲ್ ಗಾಂಧಿ ಏನು ಮಾತನಾಡಿದ್ದಾರೆ ಎಂಬುದನ್ನು ಕೂಡ ನಾವು ಪರಿಶೀಲನೆ ನಡೆಸಿದೆವು. ಇದಕ್ಕಾಗಿ ರಾಹುಲ್ ಗಾಂಧಿ ಅವರ ಯುಟ್ಯೂಬ್ ಚಾನಲ್‌ನಲ್ಲಿ ಅವರ ಚರ್ಚೆ ಮತ್ತು ಭಾಷಣದ ವಿಡಿಯೋಗಳನ್ನು ಪರಿಶೀಲನೆ ನಡೆಸಿದೆವು. ಇದರಲ್ಲಿ ಎಲ್ಲಿಯೂ ರಾಹುಲ್ ಗಾಂಧಿ ಚೀನಾವನ್ನು ಹೊಗಳಿದ್ದಾರೆ ಎಂಬುದಕ್ಕೆ ಪುರಾವೆಗಳೇ ಇಲ್ಲ. ಅಸಲಿಗೆ ರಾಹುಲ್ ಗಾಂಧಿ ಕೂಡ ಚೀನಾವನ್ನು ಎಲ್ಲೂ ಹೊಗಳಲಿಲ್ಲ. ಬದಲಾಗಿ ವಾಸ್ತವದಲ್ಲಿ ಚೀನಾ ಈಗ ಜಗತ್ತಿನ ಮುಂದೆ ಹೇಗಿದೆ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆಯೇ ವಿನಹ ಎಲ್ಲಿಯೂ ಚೀನಾವನ್ನು ಹೊಗಳಿ, ಚೀನಾ ಒಂದು ಅದ್ಭುತ ದೇಶ ಎಂಬಂತೆ ರಾಹುಲ್ ಗಾಂಧಿ ಮಾತನಾಡಿಲ್ಲ ಎಂಬುದು ಸಾಬೀತಾಗಿದೆ. ಅಲ್ಲಿಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಉದ್ದೇಶಪೂರ್ವಕವಾಗಿ ರಾಹುಲ್ ಗಾಂಧಿ ವಿರುದ್ಧ ತಪ್ಪು ಅಭಿಪ್ರಾಯ ಮೂಡಬೇಕೆಂದು ಪ್ರಶ್ನಾರ್ಥಕ ಚಿಹ್ನೆಯನ್ನು ಬಳಸಿ ಸುಳ್ಳು ಶೀರ್ಷಿಕೆಯನ್ನು ನೀಡಿದೆ.
ಒಟ್ಟಾರೆಯಾಗಿ ಹೇಳುವುದಾದರೆ ಏಷ್ಯಾನೆಟ್ ಸುವರ್ಣ ನ್ಯೂಸ್ ರಾಹುಲ್ ಗಾಂಧಿ ವಿರುದ್ಧ ತಪ್ಪು ಮಾಹಿತಿಯನ್ನು ಹಂಚಿಕೊಳ್ಳುವ ಉದ್ದೇಶದಿಂದ ಪ್ರಶ್ನಾರ್ಥಕ ಚಿಹ್ನೆಯನ್ನು ಬಳಸಿ ರಾಹುಲ್ ಗಾಂಧಿ ಚೀನಾವನ್ನು ಹೊಗಳಿದ್ದಾರೆ ಎಂಬ ಭಾವನೆ ಬರುವಂತೆ ಸುಳ್ಳು ಶೀರ್ಷಿಕೆ ನೀಡಿರುವುದು ಸಾಬೀತಾಗಿದೆ. ಹಾಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಪ್ರಕಟಿಸುವ ಯಾವುದೇ ಸುದ್ದಿಗಳನ್ನು ನಂಬುವ ಮುನ್ನ ಒಮ್ಮೆ ಪರಿಶೀಲಿಸಿ ಹಂಚಿಕೊಳ್ಳುವುದು ಉತ್ತಮ.
ಇದನ್ನೂ ಓದಿ : Fact Check | ಕಮಲಾ ಹ್ಯಾರಿಸ್ ಪರ ಪ್ರಚಾರಕ್ಕಾಗಿ ಡಿಕೆಶಿ ಅಮೆರಿಕಗೆ ತೆರಳಿದ್ದಾರೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.