Fact Check | ಬಾಂಗ್ಲಾದೇಶದ ಚಿತ್ತಗಾಂಗ್‌ನಲ್ಲಿ ಗಣೇಶ ಪೂಜೆಯನ್ನು ಮಧ್ಯಂತರ ಸರ್ಕಾರ ನಿಷೇಧಿಸಿದೆ ಎಂಬುದು ಸುಳ್ಳು

“ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥ ಡಾ.ಮಹಮ್ಮದ್ ಯೂನಸ್ ಅವರು ಬಾಂಗ್ಲಾದೇಶದ ಚಿತ್ತಗಾಂಗ್‌ನಲ್ಲಿ ಗಣೇಶ ಪೂಜೆಯನ್ನು ನಿಷೇಧಿಸಿದ್ದಾರೆ. ಇದು ಹಿಂದೂಗಳ ಮೇಲಿನ ದೌರ್ಜನ್ಯವಲ್ಲದೆ ಮತ್ತಿನ್ನೇನು?, ಬಡಪಾಯಿ ಹಿಂದೂಗಳು ಅಲ್ಪಸಂಖ್ಯಾಂತರಾಗಿರುವ ಬಾಂಗ್ಲಾದೇಶದಲ್ಲಿ ಅವರ ಭಾವನೆಗಳಿಗೆ ಬೆಲೆಯೇ ಇಲ್ಲದಂತಾಗಿದೆ.” ಎಂಬ ರೀತಿಯ ವಿವಿಧ ಟಿಪ್ಪಣಿಗಳೊಂದಿಗೆ ವಿವಿಧ ವರದಿಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಹೀಗೆ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ಪೋಸ್ಟ್‌ನ್ನು ಗಮನಿಸಿದ ಸಾಕಷ್ಟು ಮಂದಿ ಇದು ನಿಜವಿರಬಹುದು ಎಂದು ಭಾವಿಸಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. 7 ಸೆಪ್ಟೆಂಬರ್ 2024 ರಂದು ಗಣೇಶ ಮೂರ್ತಿಯ ಮೇಲೆ ನಡೆದ ದಾಳಿ ಹಾಗೂ ಇದಕ್ಕಾಗಿ ಹಿಂದೂಗಳ ಪ್ರತಿಭಟನೆಯ ಹಿನ್ನೆಲೆ ಗಣೇಶೋತ್ಸವವನ್ನು ನಿಷೇಧಿಸಲಾಗಿದೆ ಎಂದು ಹಂಚಿಕೊಂಡಿದ್ದಾರೆ. . ಹೀಗೆ ನಾನಾ ಬರಹಗಳೊಂದಿಗೆ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ಪೋಸ್ಟ್‌ನ ಅಸಲಿಯತ್ತು ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ಪೋಸ್ಟ್‌ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ನಾವು  ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ಬಾಂಗ್ಲಾದೇಶದ ಚಿತ್ತಗಾಂಗ್‌ನಲ್ಲಿ 7 ಸೆಪ್ಟೆಂಬರ್ 2024 ರಂದು ಗಣೇಶ ಮೂರ್ತಿಯ ಮೇಲೆ ದಾಳಿಯ ಕುರಿತ ವರದಿಯ ನಂತರ ಗಣೇಶ ಪೂಜೆ ಆಚರಣೆಗಳ ಮೇಲೆ ಅಂತಹ ಯಾವುದೇ ನಿಷೇಧದ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ನಮಗೆ ಕಂಡುಬಂದಿಲ್ಲ.

ಹೀಗಾಗಿ ಹೆಚ್ಚಿನ ಮಾಹಿತಿಗಾಗಿ ನಾವು ಇನ್ನಷ್ಟು ಹುಡುಕಾಟವನ್ನು ನಡೆಸಿದೆವು.  ಈ ವೇಳೆ ನಮಗೆ  8 ಸೆಪ್ಟೆಂಬರ್ 2024 ರಂದು ಬಾಂಗ್ಲಾದೇಶದ ಮಾಧ್ಯಮವು ಧಾರ್ಮಿಕ ವ್ಯವಹಾರಗಳ ಸಲಹೆಗಾರ ಡಾ ಎಎಫ್‌ಎಂ ಖಾಲಿದ್ ಹೊಸೈನ್ ಅವರು ಕಟ್ಟುನಿಟ್ಟಾದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿ ಮಾಡಿದೆ, ಪೂಜಾ ಸ್ಥಳಗಳಲ್ಲಿ ಯಾವುದೇ ಅಡಚಣೆಗಳನ್ನು ಕಟ್ಟುನಿಟ್ಟಾಗಿ ವ್ಯವಹರಿಸಲಾಗುವುದು ಎಂದು ಹೇಳಿದ್ದಾರೆ. ದುರ್ಗಾಪೂಜೆಗೂ ಮುನ್ನ ಕಿಡಿಗೇಡಿಗಳು ಕೋಮು ಸೌಹಾರ್ದತೆಗೆ ಭಂಗ ತರುವ ಪ್ರಯತ್ನ ನಡೆಸಬಹುದು ಎಂದು ಎಚ್ಚರಿಕೆ ನೀಡಿರುವ ವರದಿಗಳು ಕಂಡು ಬಂದಿದೆ.

ಇನ್ನಷ್ಟು ಪರಿಶೀಲನೆ ನಡೆಸಿದಾಗ ಬಾಂಗ್ಲಾದೇಶದ ಸುದ್ದಿ ವಾಹಿನಿಯೊಂದು ಪ್ರಕಟಿಸಿದ ವೀಡಿಯೊ ನಮಗೆ ಕಂಡು ಬಂದಿದೆ. ಇದರಲ್ಲಿ ಡಾ ಎಎಫ್‌ಎಂ ಖಾಲಿದ್ ಹೊಸೈನ್ ಅವರು “ಉದ್ದೇಶಪೂರ್ವಕವಾಗಿ ಸಮಸ್ಯೆಗಳನ್ನು ಉಂಟುಮಾಡುವ ವ್ಯಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಎಚ್ಚರಿಕೆ ನೀಡುತ್ತಿದ್ದೇ. ಮಧ್ಯಂತರ ಸರ್ಕಾರದಿಂದ ಧಾರ್ಮಿಕ ಸ್ಥಳಗಳ ಮೇಲಿನ ದಾಳಿ ಮತ್ತು ಹಿಂದೂ ಹಬ್ಬಗಳ ಸಂದರ್ಭದಲ್ಲಿ ರಕ್ಷಣೆಯ ವಿಷಯದ ಬಗ್ಗೆ ನಾವು ಎಚ್ಚರಿಕೆಯ ಹೆಜ್ಜೆ ಇಟ್ಟಿದ್ದೇವೆ” ಎಂದು ಹೇಳಿರುವುದು ಕಂಡು ಬಂದಿದೆ. ಇನ್ನು ಈ ಬಗ್ಗೆ ಬಾಂಗ್ಲಾದೇಶದ ಸತ್ಯ-ಪರಿಶೀಲನಾ ಸಂಸ್ಥೆ ರೂಮರ್ ಸ್ಕ್ಯಾನರ್ ಕೂಡ ತನ್ನ ಎಕ್ಸ್‌ ಖಾತೆಯಲ್ಲಿ ‘ಚಿತ್ತಗಾಂಗ್‌ನಲ್ಲಿ ಗಣೇಶ ಪೂಜೆಯನ್ನು ನಿಷೇಧಿಸುವ ಸುಳ್ಳು ಹೇಳಿಕೆ ಭಾರತದಲ್ಲಿ ಹರಡುತ್ತಿದೆ’ ಎಂದು ಪೋಸ್ಟ್ ಮಾಡಿದೆ.

ಒಟ್ಟಾರೆಯಾಗಿ ಹೇಳುವುದುದಾರೆ . 7 ಸೆಪ್ಟೆಂಬರ್ 2024 ರಂದು ಗಣೇಶ ಮೂರ್ತಿಯ ಮೇಲೆ ನಡೆದ ದಾಳಿ ಹಾಗೂ ಇದಕ್ಕಾಗಿ ಹಿಂದೂಗಳ ಪ್ರತಿಭಟನೆಯ ಹಿನ್ನೆಲೆ ಬಾಂಗ್ಲಾದೇಶದ ಚಿತ್ತಗಾಂಗ್‌ನಲ್ಲಿ ಗಣೇಶೋತ್ಸವವನ್ನೇ ಬ್ಯಾನ್‌ ಮಾಡಲಾಗಿದೆ ಎಂಬುದು ಸುಳ್ಳು. ವೈರಲ್‌ ಪೋಸ್ಟ್‌ನ ಪ್ರತಿಪಾದನೆಗೆ ಪೂರಕವಾದ ಯಾವುದೇ ಪುರಾವೆಗಳು ಪತ್ತೆಯಾಗಿಲ್ಲ. ಹಾಗಾಗಿ ವೈರಲ್‌ ಪೋಸ್ಟ್‌ ಸಂಪೂರ್ಣವಾಗಿ ಸುಳ್ಳಿನಿಂದ ಕೂಡಿದೆ. ಕೋಮು ಸೂಕ್ಷ್ಮತೆಗೆ ಸಂಬಂಧಿಸಿದ ಯಾವುದೇ ಸುದ್ದಿಗಳು ಕಂಡು ಬಂದರೆ, ಅವುಗಳನ್ನು ಮೊದಲು ಪರಿಶೀಲಿಸಿ.. ಇಲ್ಲದಿದ್ದರೆ ಸುಳ್ಳು ಸುದ್ದಿ ಹರಡುವ ಸಾಧ್ಯತೆಗಳು ಹೆಚ್ಚಾಗಿವೆ ಎಚ್ಚರ.


ಇದನ್ನೂ ಓದಿ : Fact Check | ಕನೌಜ್ ಅತ್ಯಾಚಾರದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಹೆದರಿ ಅಖಿಲೇಶ್ ಯಾದವ್ ಓಡಿ ಹೋದರು ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *