ಪಶ್ಚಿಮ ಬಂಗಾಳದ ಬೆಲ್ಘಾರಿಯಾದಲ್ಲಿ ಯುವಕನೊಬ್ಬ ಶಾಲಾ ಬಾಲಕಿಗೆ ಇರಿದಿರುವ ವೀಡಿಯೊವನ್ನು, ಮುಸ್ಲಿಂ ಯುವಕನೊಬ್ಬ ಹಿಂದೂ ಹುಡುಗಿಗೆ ಇರಿದಿದ್ದಾನೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
@naziaelahikhan ಎಂಬಾತ ಇನ್‌ಸ್ಟಾಗ್ರಾಮ್‌ನಲ್ಲಿ “ಹಗಲು ಹೊತ್ತಿನಲ್ಲಿ ಮುಸ್ಲಿಂ ಹುಡುಗನೊಬ್ಬ ಹಿಂದೂ ಹುಡುಗಿಯನ್ನು ಹೇಗೆ ಇರಿದಿದ್ದಾನೆಂದು ನೋಡಿ!! *ಮಮತಾ ಬ್ಯಾನರ್ಜಿಯವರ ಆಡಳಿತದಲ್ಲಿ ಹಿಂದೂಗಳು ಸುರಕ್ಷಿತವಾಗಿಲ್ಲ!* ಆಘಾತಕಾರಿ!! ಪಶ್ಚಿಮ ಬಂಗಾಳದಲ್ಲಿ ಹಿಂದೂಗಳ ಪರಿಸ್ಥಿತಿ ಭಯಾನಕವಾಗಿದೆ. ಈ ಭಯಾನಕ ಪರಿಸ್ಥಿತಿ ಶೀಘ್ರದಲ್ಲೇ ಕೋಲ್ಕತ್ತಾ ಮತ್ತು ಇತರ ನೆರೆಯ ರಾಜ್ಯಗಳಿಗೂ ಹರಡುತ್ತದೆ. BD/Myanmar ನಿಂದ ಮುಸ್ಲಿಮರು ಪಾವತಿಸಿದ ಆಧಾರ್/ವೋಟರ್ ಐಡಿ/ ಮತ್ತು ರೇಷನ್ ಕಾರ್ಡ್‌ಗಳೊಂದಿಗೆ ಬಂಗಾಳದಿಂದ ತಳ್ಳಲ್ಪಡುತ್ತಿದ್ದಾರೆ. ಆದ್ದರಿಂದ TMC ಗೆ ಮತ ಚಲಾಯಿಸುತ್ತಲೇ ಇರಿ. @MamataOfficial @KolkataPolice ದಯವಿಟ್ಟು ಸರಿಯಾದ ಕಾನೂನು ಕ್ರಮ ಕೈಗೊಳ್ಳಿ, ಪಶ್ಚಿಮ ಬಂಗಾಳ ಮುಸ್ಲಿಂ ರಾಜ್ಯವಲ್ಲ @kolkata_police100 ದಯವಿಟ್ಟು ಅರ್ಥಮಾಡಿಕೊಳ್ಳಿ” ಎಂಬ ಪೋಸ್ಟ್‌ನ್ನು ಹಂಚಿಕೊಂಡಿದ್ದಾನೆ.
ಫ್ಯಾಕ್ಟ್ ಚೆಕ್ :
ವೈರಲ್ ವೀಡಿಯೊದಲ್ಲಿನ ಸ್ಕ್ರೀನ್ಶಾಟ್ ಪೋಟೊಗಳನ್ನು ಗೂಗಲ್ ರಿವರ್ಸ್ ಇಮೇಜ್ ಬಳಸಿಕೊಂಡು ಹುಡುಕಾಡಿದಾಗ 12 ನೇ ತರಗತಿಯ ಬಾಲಕಿಗೆ ಯುವಕನೊಬ್ಬಇರಿದಿದ್ದಾನೆ. ಆತನ ಹೆಸರು ಅಭಿಜಿತ್ ದತ್ತಾ ಎಂದು ತಿಳಿದುಬಂದಿದೆ. ಅವನು ಬೆಲ್ಘಾರಿಯಾದ ಪ್ರಫುಲ್ಲನಗರದವನು ಎಂದು ಸ್ಪಷ್ಟವಾಗಿ ತಿಳಿದುಬಂದಿದೆ. 2024ರ ಸೆಪ್ಟೆಂಬರ್ 4ರಂದು ದತ್ತಾ ಎಂಬ ಹುಡುಗ 12 ನೇ ತರಗತಿಯ ಬಾಲಕಿಗೆ ಪ್ರಪೋಸ್ ಮಾಡಿದ್ದಾನೆ, ಆಕೆ ತಿರಸ್ಕರಿಸಿದ್ದಾಳೆ. ಮತ್ತು ಅಶ್ಲೀಲ ಪದಗಳಿಂದ ಅವನಿಗೆ ಬೈದು ಕಪಾಳಕ್ಕೆ ಹೊಡೆದಿದ್ದಾಳೆ. ಇದರಿಂದ ಮತ್ತಷ್ಟು ಕುಪಿತನಾಗಿ ಹಗಲು ಹೊತ್ತಿನಲ್ಲಿಯೇ ಬಾಲಕಿಯ ಮೇಲೆ ಹಲ್ಲೆ ನಡೆಸಿ ಮೂರು ಬಾರಿ ಹರಿತವಾದ ಆಯುಧದಿಂದ ಇರಿದಿದ್ದಾನೆ. ಅಲ್ಲಿದ್ದಂತಹ ಜನರು ಯುವಕನನ್ನು ಹಿಡಿದು ತೀವ್ರವಾಗಿ ಥಳಿಸಿದ್ದಾರೆ.
2024 ಸೆಪ್ಟೆಂಬರ್ 5ರಂದು ಈ ಘಟನೆಯ ಕುರಿತು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಆ ಹುಡುಗಿಯನ್ನುರಕ್ಷಿಸಲು ಮುಂದಾದ ಆಕೆಯ ತಾಯಿಯೂ ಕೂಡ ಗಾಯಗೊಂಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ನಂತರ ಬೆಲ್ಘಾರಿಯಾ ಪೊಲೀಸ್ ಠಾಣೆಯ ಅಧಿಕಾರಿಗಳು ಆ ಹುಡುಗನನ್ನು ತಮ್ಮ ಕಸ್ಟಡಿಗೆ ತೆಗೆದುಕೊಂಡು, ಆ ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಿ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಬಾಲಕಿಯ ಕುಟುಂಬದವರು ನೀಡಿದ ದೂರಿನ ಮೇರೆಗೆ ಆತನ ವಿರುದ್ಧ ಬೆಲ್ಘಾರಿಯಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಕೆಳಗಿನ ಸುದ್ದಿ ವರದಿಯು ವೈರಲ್ ವೀಡಿಯೊದಲ್ಲಿರುವ ಅದೇ ದೃಶ್ಯಗಳನ್ನು ಹೊಂದಿದೆ.
ಬೆಲ್ಘಾರಿಯಾ ಪೊಲೀಸ್ ಅಧಿಕಾರಿ ಸುಭ್ರಜಿತ್ ಮಜುಂದರ್ ಅವರನ್ನು ಈ ವಿಷಯದ ಕುರಿತು ಚರ್ಚಿಸಿದಾಗ ಅವರು ವೈರಲ್ ಹೇಳಿಕೆಯು ಸುಳ್ಳಿನಿಂದ ಕೂಡಿದೆ. “ಇದರಲ್ಲಿ ಯಾವುದೇ ಕೋಮು ವೈಷಮ್ಯವಿಲ್ಲ. ಆರೋಪಿ ಮತ್ತು ಸಂತ್ರಸ್ತೆ ಇಬ್ಬರೂ ಒಂದೇ ಸಮುದಾಯದವರು” ಎಂದು ಕನ್ನಡ ಫ್ಯಾಕ್ಟ್ ಚೆಕ್ ತಂಡಕ್ಕೆ ತಿಳಿಸಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಪಶ್ಚಿಮ ಬಂಗಾಳದ ಬೆಲ್ಘಾರಿಯಾದಲ್ಲಿ 12ನೇ ತರಗತಿ ವಿದ್ಯಾರ್ಥಿನಿ ತನ್ನ ಪ್ರಪೋಸ್‌ನ್ನು ನಿರಾಕರಿಸಿದ್ದಾಳೆ ಎಂಬ ಕಾರಣದಿಂದ ಯುವಕನೊಬ್ಬ ಆಕೆಗೆ ಹರಿತವಾದ ಆಯುಧದಿಂದ ಬಲವಾಗಿ ಇರಿದಿದ್ದಾನೆ. ಈ ಘಟನೆಯನ್ನು ಕೋಮು ವೈಷಮ್ಯದೊಂದಿಗೆ ಮುಸ್ಲಿಂ ಯುವಕ ಹಿಂದೂ ಬಾಲಕಿಯನ್ನು ಇರಿದಿದ್ದಾನೆ ಎಂಬ ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.
ಇದನ್ನು ಓದಿದ್ದೀರಾ?
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.