Fact Check | ಪ್ರಧಾನಿ ನರೇಂದ್ರ ಮೋದಿ ಅವರು 90 ದಿನಗಳ ಕಾಲ ಚೀನಾ ಉತ್ಪನ್ನಗಳನ್ನು ಬಳಸಬೇಡಿ ಎಂದು ಹೇಳಿಲ್ಲ

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದು ಹರಿದಾಡುತ್ತಿದ್ದು, ಅದರ ಪ್ರಕಾರ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು 90 ದಿನಗಳ ಕಾಲ ವಿದೇಶಿ ವಸ್ತುಗಳನ್ನು, ವಿಶೇಷವಾಗಿ ಚೀನಾದಿಂದ ಆಮದು ಮಾಡಿಕೊಳ್ಳುವ ವಸ್ತುಗಳನ್ನು ಖರೀದಿಸದಂತೆ ಭಾರತದ ಜನರನ್ನು ಒತ್ತಾಯಿಸಿದ್ದಾರೆ. ಈ ಪೋಸ್ಟ್‌ನ ಪ್ರಕಾರ, ಎಲ್ಲಾ ಭಾರತೀಯರು ಹೀಗೆ ಚೀನಾ ಉತ್ಪನ್ನಗಳನ್ನು ಖರೀದಿ ಮಾಡದಿದ್ದರೆ, ಭಾರತವು ವಿಶ್ವದ ಎರಡನೇ ಶ್ರೀಮಂತ ರಾಷ್ಟ್ರವಾಗಬಹುದು ಮತ್ತು ಅದೇ ಸಮಯದೊಳಗೆ ಭಾರತೀಯ ರೂಪಾಯಿ ಮೌಲ್ಯವು 2 ರೂಪಾಯಿಗೆ ಒಂದು ಯುಎಸ್ ಡಾಲರ್‌ಗೆ ತಲುಪಬಹುದು. ಕಳೆದ ವರ್ಷ ದೀಪಾವಳಿ ಸಂದರ್ಭದಲ್ಲಿ ಸ್ಥಳೀಯ ವಸ್ತುಗಳನ್ನು ಖರೀದಿಸುವುದರಿಂದ ಚೀನೀ ಉತ್ಪನ್ನಗಳ ಬಳಕೆಯಲ್ಲಿ 20% ಇಳಿಕೆಯಾಗಿದೆ ಎಂದು ಈ ಪೋಸ್ಟ್‌ನಲ್ಲಿ ಪ್ರತಿಪಾದಿಸಲಾಗಿದೆ.

ಹೀಗೆ ವೈರಲ್‌ ಆಗುತ್ತಿರುವ ಈ ಪೋಸ್ಟ್‌ ನೋಡಿದ ಹಲವರು ಇದು ನಿಜವೆಂದು ಭಾವಿಸಿದ್ದಾರೆ. ಸಾಕಷ್ಟು ಮಂದಿ ಜನ ಸಾಮಾನ್ಯರು ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಆದರೆ ಇನ್ನೂ ಕೆಲವರು ಇಲ್ಲ ಇದು ಸುಳ್ಳು ಮಾಹಿತಿ ಎಂದು ಪೋಸ್ಟ್‌ಗಳನ್ನು ಕೂಡ ಮಾಡುತ್ತಿದ್ದಾರೆ. ಹಾಗಾಗಿ ಈ ವೈರಲ್‌ ಪೋಸ್ಟ್‌ ಸಾಕಷ್ಟು ಗೊಂದಲಗಳನ್ನು ಕೂಡ ಉಂಟು ಮಾಡುತ್ತಿದೆ. ಹೀಗಾಗಿ ಈ ವೈರಲ್‌ ಪೋಸ್ಟ್‌ನಲ್ಲಿನ ನೈಜಾಂಶ ಏನು, ಸುಳ್ಳು ಮಾಹಿತಿ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿರುವ ಪೋಸ್ಟ್‌ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್‌ ಪೋಸ್ಟ್‌ಗೆ ಸಂಬಂಧಿಸಿದಂತೆ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ  ಯಾವುದೇ ಅಧಿಕೃತ ಹೇಳಿಕೆಗಳು ನಮಗೆ ಕಂಡುಬಂದಿಲ್ಲ.  ಆದರೆ ನಾವು 1 ನವೆಂಬರ್ 2021 ರ ನ್ಯೂಸ್ 18 ಹಿಂದ್ i ನಿಂದ ಸಂಬಂಧಿತ ಸುದ್ದಿ ಲೇಖನವನ್ನು ಕಂಡುಕೊಂಡಿದ್ದೇವೆ . ಈ ಲೇಖನವು ಪ್ರಧಾನಿ ಮೋದಿಯವರು ಸ್ವದೇಶಿ ವಸ್ತುಗಳನ್ನು ಖರೀದಿಸಲು ಮತ್ತು ಸ್ಥಳೀಯ ಉತ್ಪನ್ನಗಳನ್ನು ಉತ್ತೇಜಿಸಲು ಪ್ರೋತ್ಸಾಹಿಸಿದ್ದಾರೆ ಎಂದು ವರದಿ ಮಾಡಿರುವುದು ತಿಳಿದು ಬಂದಿದೆ. ಆದರೆ ಇಲ್ಲಿ ಅವರು ಚೀನಾವನ್ನು ಉಲ್ಲೇಖಿಸಿಲ್ಲ ಎಂಬುದು ಖಚಿತವಾಗಿದೆ.

ಈ ಬಗ್ಗೆ ಇನ್ನಷ್ಟು ಪರಿಶೀಲನೆ ನಡೆಸಿದಾಗ 2023 ರ ದೀಪಾವಳಿ ಸಂದರ್ಭದಲ್ಲಿ, ಭಾರತದಲ್ಲಿ ತಯಾರಿಸಿದ ಉತ್ಪನ್ನಗಳನ್ನು ಮಾತ್ರ ಖರೀದಿಸಲು ಜನರನ್ನು ಒತ್ತಾಯಿಸುವ ಪ್ರಧಾನಿ ನರೇಂದ್ರ ಮೋದಿಯವರ ಹೆಸರಿನ ಪತ್ರವೊಂದು ವೈರಲ್ ಆಗಿದೆ. ಆದರೆ, ಮೋದಿ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಪತ್ರಗಳು ನಕಲಿ ಎಂದು ಪ್ರಧಾನಿ ಕಾರ್ಯಾಲಯ ಸ್ಪಷ್ಟಪಡಿಸಿತ್ತು. ಹೆಚ್ಚುವರಿಯಾಗಿ, ಸುದ್ದಿ ಸಂಸ್ಥೆಗಳು ಸಾಮಾಜಿಕ ಮಾಧ್ಯಮದಲ್ಲಿ ಹರಡುವ ಈ ಮಾಹಿತಿಯು ಸುಳ್ಳು ಎಂದು ದೃಢೀಕರಿಸುವ ಲೇಖನಗಳನ್ನು ಪ್ರಕಟಿಸಿತು.

ಒಟ್ಟಾರೆಯಾಗಿ ಹೇಳುವುದಾದರೆ, ಪ್ರಧಾನಿ ನರೇಂದ್ರ ಮೋದಿ ಅವರು 90 ದಿನಗಳವರೆಗೆ ಚೀನಾದ ವಸ್ತುಗಳನ್ನು ಖರೀದಿಸದಂತೆ ಭಾರತದ ಜನರಿಗೆ ಮನವಿ ಮಾಡಿದ್ದಾರೆ ಎಂದು ಹೇಳುವ ಈ ಪೋಸ್ಟ್ ನಕಲಿಯಾಗಿದೆ. ಈ ರೀತಿ ಪ್ರಧಾನಿ ಮೋದಿಯವರು ಯಾವುದೇ ಹೇಳಿಕೆಯನ್ನು ನೀಡಿಲ್ಲ. ಹಾಗಾಗಿ ಇಂತಹ ಸುದ್ದಿಗಳು ನಿಮಗೆ ಕಂಡು ಬಂದರೆ ಅವುಗಳನ್ನು ಶೇರ್‌ ಮಾಡಬೇಡಿ.


ಇದನ್ನೂ ಓದಿ : Fact Check : ಮಧ್ಯಪ್ರದೇಶದಲ್ಲಿ ಪ್ರತಿಮೆಯನ್ನು ದ್ವಂಸಗೊಳಿಸಿರುವ ವೀಡಿಯೊವನ್ನು ಕರ್ನಾಟಕದ್ದು ಎಂದು ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *