Fact Check : ಸಿಜೆಐ ಡಿ.ವೈ ಚಂದ್ರಚೂಡ್‌ರವರ ಕುಟುಂಬಕ್ಕೂ ಬಂಗಾಳ ಸಿಎಂರವರ ವೈದ್ಯರಾದ ಡಾ.ಎಸ್‌.ಪಿ ದಾಸ್‌ರವರಿಗೂ ಯಾವುದೇ ಸಂಬಂಧವಿಲ್ಲ

ಭಾರತದ ಮುಖ್ಯ ನ್ಯಾಯಮೂರ್ತಿಗಳಾದ (ಸಿಜೆಐ) ಡಿ.ವೈ.ಚಂದ್ರಚೂಡ್‌ರವರ ಪತ್ನಿ ಕಲ್ಪನಾ ದಾಸ್‌ರವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಆಪ್ತ ವೈದ್ಯರಾದ ಎಸ್‌.ಪಿ ದಾಸ್‌ರವರ ಸೋದರ ಸೊಸೆ ಎಂಬ ಪೋಸ್ಟರ್‌ನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿಯವರೊಂದಿಗೆ ಚಂದ್ರಚೂಡ್‌ರವರು ವಿದೇಶಿ ಪ್ರವಾಸಕ್ಕೆ ಹೋಗಿದ್ದಾರೆ ಎಂಬುದರ ಕುರಿತು ಯಾವುದೇ ಆಧಾರಗಳಿಲ್ಲ. ಮತ್ತು ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ 31 ವರ್ಷದ ಕಿರಿಯ ವೈದ್ಯೆಯ ಮೇಲಾದ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಸಿಜೆಐ ನೇತೃತ್ವದ ಪೀಠವು ಸ್ವಯಂಪ್ರೇರಿತವಾಗಿ ವಿಚಾರಣೆ ನಡೆಸುತ್ತಿರುವ ಸಮಯದಲ್ಲಿ ಈ ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗುತ್ತಿದೆ.

2024ರ ಆಗಸ್ಟ್ 9ರಂದು ಕೋಲ್ಕತ್ತಾದ ಆಸ್ಪತ್ರೆಯಲ್ಲಿ ಕಿರಿಯ ವೈದ್ಯೆ ರಾತ್ರಿ ಪಾಳಿಯ ಕರ್ತವ್ಯದಲ್ಲಿದ್ದಾಗ, ಆ ವೈದ್ಯೆಯನ್ನು ಅತ್ಯಾಚಾರ ಮಾಡಿ ಹತ್ಯೆಗಯ್ಯಲಾಗಿತ್ತು. ಈ ಘಟನೆಯಿಂದಾಗಿ ಪಶ್ಚಿಮ ಬಂಗಾಳದ ಜನರು ಒಂದು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.  ಈ ವೇಳೆ ನಾಗರಿಕರು ಮತ್ತು ಕಿರಿಯ ವೈದ್ಯರು ಬೀದಿಗಿಳಿದು TMC ನೇತೃತ್ವದ ಸರ್ಕಾರ ರಾಜ್ಯದ ಆರೋಗ್ಯ ವ್ಯವಸ್ಥೆಯಲ್ಲಿ ನಿರಂತರವಾಗಿ ಭ್ರಷ್ಟಾಚಾರವನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆಯನ್ನು ನಡೆಸಿದರು. ಪ್ರತಿಭಟನೆಯಲ್ಲಿ ನಿರತವಾಗಿರುವ ವೈದ್ಯರು ಸೆಪ್ಟೆಂಬರ್ 10 ರಂದು ಸಂಜೆ 5 ಗಂಟೆಯೊಳಗೆ ಕೆಲಸವನ್ನು ಪುನರಾರಂಭಿಸಿ ಎಂಬ ಸುಪ್ರೀಂ ಕೋರ್ಟಿನ ತೀರ್ಪನ್ನು ನಿರ್ಲಕ್ಷಿಸಿ ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ ತಮ್ಮ ಪ್ರತಿಭಟನೆಯನ್ನು ಮುಂದುವರೆಸುವುದಾಗಿ ಪ್ರತಿಜ್ಞೆ ಮಾಡಿದ್ದರು.

ಈ ಹಿನ್ನೆಲೆಯಲ್ಲಿ, ಈ ವೈರಲ್ ಸಂದೇಶವೊಂದು ಸಿಜೆಐ ಕುಟುಂಬ ಮತ್ತು ಟಿಎಂಸಿಯ ಉನ್ನತ ಅಧಿಕಾರಿಗಳ ನಡುವೆ ನಿಕಟ ಸಂಬಂಧವನ್ನು ಹೊಂದಿದ್ದಾರೆ ಎಂದು ಆರೋಪಿಸಿ, ವಿಶಾಲ್‌ ಭಾರ್ದ್ವಾಜ್‌ ಎಂಬುವವರು ಹಂಚಿಕೊಂಡ ಪೋಸ್ಟರ್‌ನಲ್ಲಿ “CJI ಚಂದ್ರಚೂಡ್‌ ಅವರ ಎರಡನೇಯ ಪತ್ನಿ ಕಲ್ಪನಾ ದಾಸ್‌ರವರು ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿಯವರ ಕುಟುಂಬದ ವೈದ್ಯರಾದ ಡಾ. ಎಸ್‌ಪಿ ದಾಸ್‌ರವರ ಸೊಸೆಯಾಗಿದ್ದಾರೆ. ನ್ಯಾಯಮೂರ್ತಿ ಚಂದ್ರಚೂಡ್‌ ಮತ್ತು ಅಭಿಷೇಕ್ ಬ್ಯಾನರ್ಜಿಯವರು ಇಬ್ಬರೂ ಸೇರಿಕೊಂಡು ತಮ್ಮ ರಜಾದಿನಗಳನ್ನು ಮಲೇಷಿಯಾ ಮತ್ತು ಬ್ಯಾಂಕಾಕ್‌ನಲ್ಲಿ ಕಳೆಯುತ್ತಾರೆ! ” ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಯ ಸಂದರ್ಭದಲ್ಲಿ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಸಿಜೆಐ ಅವರ ಕುಟುಂಬದವರು ಹೊಂದಿರುವ ಸಂಬಂಧಗಳ ಕುರಿತು  ಪೋಸ್ಟ್‌ರ್‌ಗಳನ್ನು ಹಂಚಿಕೊಂಡಿದ್ದಾರೆ.


ಫ್ಯಾಕ್ಟ್‌ ಚೆಕ್‌ :

ಈ ವೈರಲ್‌ ಸಂದೇಶದ ಕುರಿತು ಮೊದಲು ಕೀವರ್ಡ್ ಬಳಸಿ ಹುಡುಕಾಟ ನಡೆಸಿದಾಗ,  CJI ಚಂದ್ರಚೂಡ್ ಅವರ ಪತ್ನಿ ಕಲ್ಪನಾ ದಾಸ್‌ರವರು ಪಶ್ಚಿಮ ಬಂಗಾಳದ ಡಾ. SP ದಾಸ್‌ರವರ ಕುಟುಂಬದೊಂದಿಗೆ ಹೊಂದಿರುವ ಸಂಬಂಧದ ಬಗ್ಗೆ ಯಾವುದೇ ವಿಶ್ವಾಸಾರ್ಹ ಸುದ್ದಿ ವರದಿಗಳಲ್ಲಿ ಕಂಡುಬಂದಿಲ್ಲ.  ಅಲ್ಲದೇ,  CJI ಚಂದ್ರಚೂಡ್ ಮತ್ತು TMC ನಾಯಕ ಅಭಿಷೇಕ್ ಬ್ಯಾನರ್ಜಿಯವರು ಮಲೇಷ್ಯಾ ಮತ್ತು ಬ್ಯಾಂಕಾಕ್‌ನಲ್ಲಿ ಒಟ್ಟಿಗೆ  ಸಮಯ ಕಳೆದ ಬಗ್ಗೆ ಯಾವುದೇ ವರದಿಗಳು ಕಂಡುಬಂದಿಲ್ಲ.

ದಿ ಸ್ಟೇಟ್ಸ್‌ಮನ್ ಪ್ರಕಾರ, ಚಂದ್ರಚೂಡ್ ಅವರ ಮೊದಲ ಪತ್ನಿ ರಶ್ಮಿ ಚಂದ್ರಚೂಡ್ ಅವರು 2007ರಲ್ಲಿ ಕ್ಯಾನ್ಸರ್ ನಿಂದ ನಿಧನರಾದರು. ಅವರ ಸಾವಿನ ನಂತರ, ಚಂದ್ರಚೂಡ್ ಅವರು ಹಿಂದೆ ಬ್ರಿಟಿಷ್ ಕೌನ್ಸಿಲ್‌ನೊಂದಿಗೆ ಕೆಲಸ ಮಾಡಿದ್ದ ವಕೀಲ ವೃತ್ತಿಯಲ್ಲಿರುವ ಕಲ್ಪನಾ ದಾಸ್‌ರನ್ನು ವಿವಾಹವಾಗಿದ್ದಾರೆ ಎಂದು ವರದಿಯನ್ನು ತಯಾರಿಸಿದೆ.

“ಭಾರತದ ಮುಖ್ಯ ನ್ಯಾಯಾಧೀಶರ ಕುಟುಂಬದ ಸದಸ್ಯರನ್ನು ಬಂಗಾಳದ ವೈದ್ಯಕೀಯ ಕುಟುಂಬದೊಂದಿಗೆ ಸಂಬಂಧವನ್ನು ಸೃಷ್ಟಿಸಿ ಕೋಲ್ಕತ್ತಾದ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಕುರಿತು ಸುಪ್ರೀಂ ಕೋರ್ಟ್ ವಿಚಾರಣೆಗೆ ಮುನ್ನ ಎಕ್ಸ್‌ನಲ್ಲಿ ದುರುದ್ದೇಶಪೂರಿತ ಟ್ವೀಟ್‌ನ್ನು ಹಂಚಿಕೊಳ್ಳಲಾಗುತ್ತಿದೆ. ಟ್ವೀಟ್‌ನ ಸಂದೇಶ ಸುಳ್ಳಿನಿಂದ ಕೂಡಿದೆ. ವಾಸ್ತವಿಕವಾಗಿ ಹೇಳುವುದಾದರೆ ನ್ಯಾಯಾಂಗವನ್ನು ಕೆಡಿಸುವ ಯತ್ನ ತಪ್ಪು  ಮಾರ್ಗದ್ದಾಗಿದೆ” ಎಂದು ಸುಪ್ರೀಂ ಕೋರ್ಟ್ ರಿಜಿಸ್ಟರ್‌ ಹೇಳಿಕೆಯಲ್ಲಿ ತಿಳಿಸಿದೆ. “ಸುಳ್ಳು ಹರಡುವುದು ಕಾನೂನುಬಾಹಿರ ಮತ್ತು ಶಿಕ್ಷಾರ್ಹ”.
ಪಶ್ಚಿಮ ಬಂಗಾಳ ಪೊಲೀಸರು 2024ರ ಸೆಪ್ಟೆಂಬರ್ 7ರಂದು ಮುಂಚೂಣಿಯಲ್ಲಿದ್ದ ಸುದ್ದಿಯನ್ನು ತಳ್ಳಿಹಾಕಿದ್ದಾರೆ. “ಭಾರತದ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳು ಸೇರಿದಂತೆ ಭಾರತದ ಗೌರವಾನ್ವಿತ ಸುಪ್ರೀಂ ಕೋರ್ಟ್‌ನ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವರು  ಅತ್ಯಂತ ಅವಹೇಳನಕಾರಿ ಮತ್ತು ಆಧಾರರಹಿತ ಹೇಳಿಕೆಗಳನ್ನು ನೀಡುತ್ತಿದ್ದಾರೆ”. ಇದಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಕೃಷ್ಣನಗರ ಪೊಲೀಸರು ಸುಳ್ಳು ಸುದ್ದಿ ಹಂಚಿಕೊಂಡ ವ್ಯಕ್ತಿಯ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, CJI ಚಂದ್ರಚೂಡ್ ಅವರ ಪತ್ನಿ ಕಲ್ಪನಾ ದಾಸ್‌ರವರನ್ನು ಪಶ್ಚಿಮ ಬಂಗಾಳದ ಡಾ. SP ದಾಸ್‌ರವರ ಸೊಸೆ ಎಂದು ಸಂಬಂಧವನ್ನು ಸೃಷ್ಠಿಸಿ ನ್ಯಾಯಾಂಗ ವ್ಯವಸ್ಥೆಯನ್ನು ಅವಮಾನಿಸುವ ಸಲುವಾಗಿ ಸುಳ್ಳು ಸುದ್ದಿಯನ್ನು ಹಂಚಿಕೊಳ್ಳಲಾಗುತ್ತಿದೆ.


ಇದನ್ನು ಓದಿದ್ದೀರಾ?


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *