Fact Check | ಮಣಿಪುರದಲ್ಲಿ ಭಾರತೀಯ ಸೇನಾ ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಲಾಗಿದೆ ಎಂಬುದು ಸುಳ್ಳು

ಭಾರತೀಯ ಸೇನಾ ಹೆಲಿಕಾಪ್ಟರ್ ಅನ್ನು ಅಲ್ಲಿನ ಸ್ವಾತಂತ್ರ್ಯ ಹೋರಾಟಗಾರರು ಎಂದು ಬಿಂಬಿಸಿಕೊಳ್ಳುತ್ತಿರುವ ಬಂಡುಕೋರರು ಹೊಡೆದುರುಳಿಸಿದ್ದಾರೆ. ಇದು ಭಾರತದ ಸೇನೆಗೆ ಬಹುದೊಡ್ಡ ಆಘಾತವನ್ನು ಉಂಟು ಮಾಡಿದೆ. ಭಾರತದಲ್ಲೇ ಇದ್ದು ಭಾರತಕ್ಕೆ ದ್ರೋಹ ಬಗೆಯುವ ಈ ಜನರಿಗೆ ಏನು ಹೇಳಬೇಕು ತೋಚುತ್ತಿಲ್ಲ.” ಎಂದು ವಿಡಿಯೋವೊಂದನ್ನು ಹಲವರು ಹಂಚಿಕೊಂಡರೆ, ಇನ್ನೂ ಕೆಲವರು ಮಣಿಪುರದ ಮುಕ್ತಿಜೋಧಾ ಸಂಘಟನೆ ಭಾರತದ ಸೇನಾ ಹೆಲಿಕಾಪ್ಟರ್‌ ಅನ್ನು ಹೊಡೆದುರುಳಿಸಿದೆ ಎಂದು ಹಂಚಿಕೊಳ್ಳುತ್ತಿದ್ದಾರೆ.

ಇದೇ ರೀತಿಯ ವಿಡಿಯೋವನ್ನು ಸಾಕಷ್ಟು ಮಂದಿ ಮಣಿಪುರಕ್ಕೆ ಸಂಬಂಧ ಕಲ್ಪಸಿ ಹಂಚಿಕೊಳ್ಳುತ್ತಿದ್ದು ಸಾಕಷ್ಟು ಮಂದಿ ಮೇತಿ ಬುಡಕಟ್ಟು ಜನರು ಭಾರತದ ಸೇನಾ ಹೆಲಿಕಾಪ್ಟರ್‌ ಅನ್ನು ಹೊಡೆದುರುಳಿಸಿದ್ದಾರೆ ಎಂದು ಹಂಚಿಕೊಳ್ಳುತ್ತಿದ್ದಾರೆ. ಈ ವಿಡಿಯೋ ನೋಡಿದ ಜನ ಸಾಮಾನ್ಯರು ಮಣಿಪುರದ ಜನರ ವಿರುದ್ಧ ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದು, ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ಗಳನ್ನು ಕೂಡ ಶೇರ್‌ ಮಾಡುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ವಿಡಿಯೋವಿನ ಅಸಲಿಯತ್ತು ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ರೀತಿ ಮಣಿಪುರದಲ್ಲಿ ಭಾರತೀಯ ಹೆಲಿಕಾಪ್ಟರ್‌ ಅನ್ನು ನಿಜವಾಗಿಯೂ ಹೊಡೆದುರುಳಿಸಲಾಯಿತೆ ಎಂದು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಪರಿಶೀಲನೆಯನ್ನು ನಡೆಸಲು ಮುಂದಾಯಿತು. ಇದಕ್ಕಾಗಿ ವೈರಲ್‌ ವಿಡಿಯೋಗೆ ಸಂಬಂಧಿಸಿದಂತೆ ವಿಡಿಯೋವಿನ ವಿವಿಧ ಕೀ ಫ್ರೇಮ್‌ಗಳನ್ನು ಬಳಸಿ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲನೆಯನ್ನು ನಡೆಸಲಾಯಿತು. ಈ ವೇಳೆ 06 ಸೆಪ್ಟೆಂಬರ್ 2024 ರಂದು ಪ್ರಕಟವಾದ ಹಲವಾರು YouTube ವೀಡಿಯೊಗಳು ನಮಗೆ ಕಂಡು ಬಂದಿವೆ.

ಈ ಹಲವು ವಿಡಿಯೋಗಳಲ್ಲಿ ConflictLive ಎಂಬ ಯೂಟ್ಯುಬ್‌ ಚಾನಲ್‌ ಹಂಚಿಕೊಂಡ ವಿಡಿಯೋದಲ್ಲಿ ಈ ಘಟನೆ  KIA ಮ್ಯಾನ್ಮಾರ್ ಮಿಲಿಟರಿ ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಿದೆ ಎಂದು ಶೀರ್ಷಿಕೆಯನ್ನು ನೀಡಲಾಗಿದೆ. ಮತ್ತೊಂದು ಯುಟ್ಯೂಬ್‌ ಚಾನಲ್‌ ಆದ Inside The Front Line ನಲ್ಲಿ KIA ಮ್ಯಾನ್ಮಾರ್ ಮಿಲಿಟರಿ ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಿತು, ಬಹುಶಃ ಮಿಲ್ Mi-17 ಅನ್ನು ಹೊಡೆದಿದೆ. ವೈಂಗ್ಮಾವ್, ಶಾನ್. ಹೆಲಿಕಾಪ್ಟರ್ ಅನ್ನು ನಾಶಮಾಡಲು ಈ ಗುಂಪು ಅಪರೂಪದ ಚೈನೀಸ್ FN-6 (Feinu-6) ಮ್ಯಾನ್-ಪೋರ್ಟಬಲ್ ಏರ್-ಡೆಫೆನ್ಸ್‌ ಸಿಸ್ಟಮ್ ಅನ್ನು ಬಳಸಿತು, ಬಹುಶಃ ಯುನೈಟೆಡ್ ವಾ ಸ್ಟೇಟ್ ಆರ್ಮಿ (UWSA) ನಿಂದ ಪಡೆಯಲಾಗಿದೆ ಎಂದು ತನ್ನ ಡಿಸ್ಕ್ರಿಪ್ಷನ್‌ನಲ್ಲಿ ಉಲ್ಲೇಖವನ್ನು ಮಾಡಿದೆ.

ಈ ಎರಡೂ ಯೂಟ್ಯುಬ್‌ ಚಾನಲ್‌ಗಳ ಆಧಾರದ ಮೇಲೆ ನಾವು ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ಬಿಗ್ ಬ್ರೇಕಿಂಗ್ ವೈರ್ ಮತ್ತು ರೆಸೋನೆಂಟ್ ನ್ಯೂಸ್‌ನಂತಹ ಎಕ್ಸ್ ಹ್ಯಾಂಡಲ್‌ಗಳ ಪೋಸ್ಟ್‌ಗಳು ಕಂಡು ಬಂದವು. ಇವುಗಳಲ್ಲಿ ಕೂಡ ವೈರಲ್‌ ವಿಡಿಯೋ ಕ್ಲಿಪ್‌ ಅನ್ನು ಹಂಚಿಕೊಳ್ಳಲಾಗಿತ್ತು. ಇವುಗಳಲ್ಲಿನ ಮಾಹಿತಿಯ ಪ್ರಕಾರ ಇದು ಕಚಿನ್ ಇಂಡಿಪೆಂಡೆನ್ಸ್ ಆರ್ಮಿ (ಕೆಐಎ) ಮ್ಯಾನ್ಮಾರ್ ಮಿಲಿಟರಿ ಜುಂಟಾ ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಿದೆ ಎಂದು ಉಲ್ಲೇಖಿಸಲಾಗಿದೆ. ಆದರೆ ಈ ಘಟನೆಯು ನಿಖರವಾಗಿ ಯಾವಾಗ ನಡೆಯಿತು ಎಂಬುದು ಸ್ಪಷ್ಟವಾಗಿಲ್ಲ ಎಂದು ಅನುರಣನ ನ್ಯೂಸ್ ಉಲ್ಲೇಖಿಸಿದೆ. ವೀಡಿಯೋವನ್ನು 6 ಸೆಪ್ಟೆಂಬರ್ 2024 ರಂದು ಪ್ರಕಟಿಸಲಾಗಿದೆ. ಈ ಪೋಸ್ಟ್‌ ಮೂಲಕ ವೈರಲ್‌ ವಿಡಿಯೋಗೂ ಭಾರತಕ್ಕೂ ಯಾವುದೇ ರೀತಿಯಾದ ಸಂಬಂಧವಿಲ್ಲ ಎಂಬುದು ಸಾಭೀತಾಗಿದೆ.

ಇನ್ನು ಈ ಬಗ್ಗೆ ಮಾಹಿತಿ ತಿಳಿಯದೆ ಸಾಕಷ್ಟು ಮಂದಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು, ಹಲವರು ಇದನ್ನು ಭಾರತದ ಮಣಿಪುರದಲ್ಲೇ ನಡೆದಿದೆ ಎಂದು ಭಾವಿಸಿದ್ದರು, ಬಳಿಕ ಈ ಬಗ್ಗೆ ಎಕ್ಸ್‌ ಪೋಸ್ಟ್‌ ಮಾಡಿದ PIB ಮಣಿಪುರದಲ್ಲಿ ಭಾರತೀಯ ಫೈಟರ್ ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿದಾಡುತ್ತಿದೆ. ಇದು ಸಂಪೂರ್ಣವಾಗಿ ಸುಳ್ಳಿನಿಂದ ಕೂಡಿದೆ ಎಂದು ಪೋಸ್ಟ್‌ ಮಾಡಿ ಮಾಹಿತಿ ನೀಡಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಮ್ಯಾನ್ಮಾರ್‌ನಿಂದ ಸಂಬಂಧವಿಲ್ಲದ ವೀಡಿಯೊವನ್ನು ಮಣಿಪುರದಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಂದ ಹೊಡೆದುರುಳಿಸಿದ ಭಾರತೀಯ ಹೆಲಿಕಾಪ್ಟರ್ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಇಂತಹ ವಿಡಿಯೋಗಳು ಕಂಡು ಬಂದರೆ ಇವುಗಳನ್ನು ನಂಬುವ ಮೊದಲು ಅಥವಾ ಯಾರಿಗಾದರೂ ಹಂಚಿಕೊಳ್ಳುವ ಮೊದಲು ಒಮ್ಮೆ ಪರಿಶೀಲನೆಯನ್ನು ನಡೆಸಿ. ಇಲ್ಲದಿದ್ದರೆ ಸುಳ್ಳು ಸುದ್ದಿಗಳು ಹರಡುವ ಸಾಧ್ಯತೆ ಇದೆ.


ಇದನ್ನೂ ಓದಿ : Fact Check | ಮೀಸಲಾತಿ ಕುರಿತ ರಾಹುಲ್‌ ಗಾಂಧಿ ಹೇಳಿಕೆಯನ್ನು ತಿರುಚಿದ ಬಿಜೆಪಿ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *