Fact Check | ಸರ್ದಾರ್ ವಲ್ಲಭಭಾಯಿ ಪಟೇಲ್ ಏಕತಾ ಪ್ರತಿಮೆ ಬಿರುಕು ಬಿಟ್ಟಿದೆ ಎಂಬುದು ಸುಳ್ಳು

” ನೋಡಿ ಇದು ಮೋದಿ ಸರ್ಕಾರದ ಬೃಹತ್‌ ಸಾಧನೆ ಎಂದು ಹೇಳಿಕೊಳ್ಳುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಏಕತಾ ಪ್ರತಿಮೆ. ಈಗ ಈ ಪ್ರತಿಮೆಯ ಪಾದಗಳಲ್ಲಿ ಬಿರುಕು ಬಿಟ್ಟಿದೆ. ಯಾವಾಗ ಬೇಕಾದರೂ ಈ ಪ್ರತಿಮೆ ಧರೆಗೆ ಉರುಳಬಹುದು. ಮೋದಿ ಸರ್ಕಾರದ ಕಳಪೆ ಕಾಮಗಾರಿಗೆ ಇದಕ್ಕಿಂತ ಮತ್ತೊಂದು ಉತ್ತಮ ಉದಾಹರಣೆ ಸಿಗಲಾರದು. ಇವರ ರಾಜಕೀಯ ಲಾಭಕ್ಕಾಗಿ ಈಗ ದೇಶದ ಮಹಾನ್‌ ನಾಯಕನ ಪ್ರತಿಮೆ ನೆಲಕಚ್ಚುವ ಹಂತಕ್ಕೆ ಬಂದಿದೆ.” ಎಂದು ಫೋಟೊವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ವೈರಲ್‌ ಫೋಟೋದಲ್ಲಿ ಕೂಡ ಏಕತಾ ಪ್ರತಿಮೆಯ ಕಾಲುಗಳಲ್ಲಿ ಬಿರುಕು ಬಿಟ್ಟಿರುವಂತೆ ಕಾಣುತ್ತಿದೆ. ಹೀಗಾಗಿ ಈ ಪೋಸ್ಟ್‌ ನೋಡಿದ ಹಲವು ಮಂದಿ ಇದು ನಿಜವಿರಬಹುದು ಎಂದು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಂಡು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ. ಇದರಲ್ಲಿ ಕಾಂಗ್ರೆಸ್‌ ಅನ್ನು ಬೆಂಬಲಿಸುವ ಕೆಲವು ಖಾತೆಗಳು ಈ ಸುದ್ದಿಯನ್ನು ಹಂಚಿಕೊಂಡು ಪೋಸ್ಟ್‌ಗಳನ್ನು ಡಿಲೀಟ್‌ ಕೂಡ ಮಾಡಿವೆ. ಹೀಗೆ ಸಾರ್ವಜನಿಕರ ಗೊಂದಲಕ್ಕೆ ಕಾರಣವಾಗಿರುವ ವೈರಲ್‌ ಫೋಟೋವಿನ ಅಸಲಿಯತ್ತು ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್‌ ಆಗಿರುವ ಫೋಟೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್‌ ಫೋಟೋವನ್ನು ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲನೆ ನಡೆಸಿದೆವು. ಈ ವೇಳೆ ನಮಗೆ 1 ನವೆಂಬರ್‌ 2018ರಲ್ಲಿ ದಿ ಲಾಸ್‌ ಏಂಜಲೀಸ್‌ ಟೈಮ್ಸ್‌ ಹಾಗೂ 29 ಅಕ್ಟೋಬರ್‌ 2018ರಲ್ಲಿ ವಾಷಿಂಗ್ಟನ್‌ ಪೋಸ್ಟ್‌ ಪ್ರಕಟಿಸಿದ ವರದಿಗಳು ಕಂಡು ಬಂದವು. ಈ ವರದಿಗಳಲ್ಲಿ ಕಂಡುಬಂದ ಫೋಟೋಗಳಲ್ಲಿ ಏಕತಾ ಪ್ರತಿಮೆಯ ಉದ್ಘಾಟನೆಯ ಒಂದು ವಾರಕ್ಕೆ ಮೊದಲು ಭಾರತೀಯ ಕಾರ್ಮಿಕರು ಪ್ರತಿಮೆಯ ಪಾದದ ಬಳಿ ಕಾರ್ಯ ನಿರ್ವಹಿಸುವುದನ್ನು ಕಾಣಬಹುದಾಗಿದೆ. ಹಾಗಾಗಿ ಈ ವೈರಲ್‌ ಫೋಟೋ 6 ವರ್ಷ ಹಿಂದಿನದ್ದು ಎಂದು ತಿಳಿದು ಬಂದಿದೆ.

ಈ ಬಗ್ಗೆ ಇನ್ನಷ್ಟು ಹುಡುಕಾಟವನ್ನು ನಡೆಸಿದಾಗ 9 ಸೆಪ್ಟೆಂಬರ್‌ 2024 ರಂದು PIB (ಪ್ರೆಸ್‌ ಇನ್‌ಫರ್‌ಮೇಷನ್‌ ಬ್ಯೂರೋ) ತನ್ನ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡ ಪೋಸ್ಟ್‌ವೊಂದು ಕಂಡು ಬಂದಿದೆ. ಅದರಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಫೋಟೋವನ್ನು ಹಂಚಿಕೊಳ್ಳುವ ಮೂಲಕ, ” ವಿಶ್ವದ ಅತಿ ಎತ್ತರದ ಪ್ರತಿಮೆ, ಏಕತೆಯ ಪ್ರತಿಮೆಯಲ್ಲಿ ಬಿರುಕುಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿವೆ ಮತ್ತು ಅದು ಯಾವಾಗ ಬೇಕಾದರೂ ಬೀಳಬಹುದು ಎಂದು ಹೇಳಲಾಗುತ್ತಿದೆ. ಆದರೆ ಈ ಫೋಟೋವನ್ನು 2018 ರಲ್ಲಿ ಏಕತೆಯ ಪ್ರತಿಮೆಯ ನಿರ್ಮಾಣದ ಸಮಯದಲ್ಲಿ ತೆಗೆದುಕೊಳ್ಳಲಾಗಿದೆ. ಹಾಗಾಗಿ ವೈರಲ್‌ ಫೋಟೋ ಕುರಿತು ಈಗಿನ ಮಾಹಿತಿ ಸುಳ್ಳಾಗಿದೆ” ಎಂದು ಸ್ಪಷ್ಟ ಪಡಿಸಿದೆ. 

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವಂತೆ ಜಗತ್ತಿನ ಅತೀ ಎತ್ತರದ ಏಕತಾ ಪ್ರತಿಮೆಯಲ್ಲಿ ಬಿರುಕು ಕಾಣಿಸಿದೆ, ಯಾವಗ ಬೇಕಾದರು ಕುಸಿಯಬಹುದು ಎಂಬುದು ಸುಳ್ಳು. ವೈರಲ್‌ ವಿಡಿಯೋ 6 ವರ್ಷ ಹಿಂದಿನದ್ದು. ಹಾಗಾಗಿ ಇಂತಹ  ಸುದ್ದಿಗಳು ನಿಮಗೆ ಕಂಡು ಬಂದರೆ ಆ ಕುರಿತು ಪರಿಶೀಲನೆಯನ್ನು ನಡೆಸುವುದು ಉತ್ತಮ.


ಇದನ್ನೂ ಓದಿ : Fact Check | ಮಣಿಪುರದಲ್ಲಿ ಭಾರತೀಯ ಸೇನಾ ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಲಾಗಿದೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *